ಇವರಿಗೆ ಹೆದರಬೇಡ ತಾಳಿ ಕಟ್ಟು, ಕುಸುಮಾ ಎದುರೇ ತಾಂಡವ್ ಮೇಲೆ ಅಧಿಕಾರ ಚಲಾಯಿಸಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್ 19ರ ಎಪಿಸೋಡ್‌ನಲ್ಲಿ ಮಗನ ನಂಬಿಕೆದ್ರೋಹ ನೆನೆದು ಕುಸುಮಾ ಕಣ್ಣೀರಿಡುತ್ತಾಳೆ. ತನ್ನ ಮುಂದೆಯೇ ತಾಳಿ ಕಟ್ಟುವಂತೆ ಕೇಳಿದ ಶ್ರೇಷ್ಠಾಗೆ ಬಾರಿಸುವ ಕುಸುಮಾ ಮಗನ ಕುತ್ತಿಗೆ ಹಿಡಿದು ಮನೆಗೆ ಎಳೆದೊಯ್ಯುತ್ತಾಳೆ.
Bhagyalakshmi Serial: ಕೊನೆಗೂ ಕುಸುಮಾ ಹಾಗೂ ಪೂಜಾ, ತಾಂಡವ್ ಎರಡನೇ ಮದುವೆ ಆಗುವುದನ್ನು ತಪ್ಪಿಸುತ್ತಾರೆ. ಮದುವೆ ಮನೆಗೆ ಅಮ್ಮ ಬಂದಿದ್ದನ್ನು ನೋಡಿ ತಾಂಡವ್ ಶಾಕ್ ಆಗುತ್ತಾನೆ. ಅಮ್ಮನಿಗೆ ಹೆದರಿ ನಡುಗುತ್ತಾನೆ. ಮಂಟಪದ ಬಳಿ ಬರುವ ಕುಸುಮಾ ಮಗನ ಕೆನ್ನೆಗೆ ಬಾರಿಸಿ ನೀನು ಮಾಡುತ್ತಿರುವ ಕೆಲಸವೇನು? ಎಂದು ಪ್ರಶ್ನಿಸುತ್ತಾಳೆ.
ಮಗನ ನಂಬಿಕೆ ದ್ರೋಹ ನೆನೆದು ಕಣ್ಣೀರಿಟ್ಟ ಕುಸುಮಾ
ಅಮ್ಮನಿಗೆ ಹೆದರುವ ತಾಂಡವ್, ಅವಳ ಪ್ರಶ್ನೆಗೆ ಉತ್ತರ ನೀಡಲಾಗದೆ ತಡಬಡಾಯಿಸುತ್ತಾನೆ. ತಪ್ಪು ನಿನ್ನದಲ್ಲ, ನಿನ್ನನ್ನು ನಂಬಿದ್ದು ನನ್ನ ತಪ್ಪು. ಊರಿನವರೆಲ್ಲಾ ನಿನ್ನ ಮಗ ಸರಿ ಇಲ್ಲ ಎಂದಾಗ ನಾನು ಅದನ್ನು ನಂಬಲಿಲ್ಲ. ಬದಲಿಗೆ ನಿನ್ನ ಪರವಾಗಿ ವಾದಿಸಿದೆ, ಅವರ ಜೊತೆ ಜಗಳ ಮಾಡುತ್ತಿದ್ದೆ. ನನ್ನ ಮಗ ಶ್ರೀ ರಾಮಚಂದ್ರ ಎಂದು ನಂಬಿದ್ದೆ. ಆದರೆ ನೀನು ಮಾಡುತ್ತಿರುವುದೇನು? ನನ್ನನ್ನು ನಂಬಿಸಿ ಮೋಸ ಮಾಡಿಬಿಟ್ಟೆ. ನಿನ್ನನ್ನು ನಂಬಿದ್ದಕ್ಕೆ ನನಗೆ ತಕ್ಕ ಶಾಸ್ತಿಯಾಗಿದೆ ಎಂದು ಕುಸುಮಾ ತನ್ನ ಹಣೆ ಚೆಚ್ಚಿಕೊಳ್ಳುತ್ತಾಳೆ. ಅಮ್ಮ ದಯವಿಟ್ಟು ಹಾಗೆಲ್ಲಾ ಮಾಡಬೇಡ ನಿನಗೆ ನೋವಾಗುತ್ತೆ ಎಂದು ತಾಂಡವ್ ಮನವಿ ಮಾಡುತ್ತಾನೆ. ನೀವು ಕೊಟ್ಟಿರುವ ಈ ನೋವಿಗಿಂತ ಇದು ದೊಡ್ಡದಲ್ಲ ಬಿಡು ಎಂದು ಕುಸುಮಾ ಕಣ್ಣೀರಿಡುತ್ತಾಳೆ.
ಪೂಜಾ ಕೂಡಾ ಭಾವನನ್ನು ಪ್ರಶ್ನಿಸುತ್ತಾಳೆ. 16 ವರ್ಷಗಳಿಂದ ನಿಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ನೀವು ಅವಳನ್ನು ಎಷ್ಟೇ ಅವಮಾನ ಮಾಡಿದರೂ, ಎಷ್ಟು ನಿರ್ಲಕ್ಷಿಸಿದರೂ ಇಂದಲ್ಲಾ ನಾಳೆ ಗಂಡ ಸರಿ ಆಗಬಹುದು ಎಂದು ಜೀವನ ಸಾಗಿಸುತ್ತಾ ಬರುತ್ತಿರುವ ನನ್ನ ಅಕ್ಕನಿಗೆ ನೀವು ಈ ರೀತಿ ದ್ರೋಹ ಮಾಡಿದ್ದು ಸರಿನಾ? ಅಕ್ಕನನ್ನು ಬಿಡಿ, ಮಕ್ಕಳನ್ನು ನೋಡಿಯಾದರೂ ನಿಮಗೆ ಕರುಣೆ ಬರಲಿಲ್ಲವಾ? ಅಪ್ಪ ಅಮ್ಮ ಒಂದಾಗಬೇಕು ಎಂದು ಪ್ರತಿದಿನ ಮಕ್ಕಳು ಪ್ರಾರ್ಥನೆ ಮಾಡುತ್ತಿದ್ದಾರೆ, ಈ ಮನೆಹಾಳು ಶ್ರೇಷ್ಠಾಗಾಗಿ ನೀವು ಅಕ್ಕ, ಮಕ್ಕಳನ್ನೇ ದೂರ ಮಾಡುತ್ತಿದ್ದೀರಾ ಎಂದು ಪೂಜಾ ಕೇಳುತ್ತಾಳೆ. ಆಗಲೂ ತಾಂಡವ್ ತಲೆ ತಗ್ಗಿಸಿ ನಿಲ್ಲುತ್ತಾನೆ.
ಮದುವೆ ಮನೆಯಿಂದ ತಾಂಡವ್‌ನನ್ನು ಎಳೆದೊಯ್ದ ಕುಸುಮಾ
ಈ ಮಾತುಗಳನ್ನೆಲ್ಲಾ ಕೇಳಿ ಶ್ರೇಷ್ಠಾ, ನಾವಿಬ್ಬರೂ ಒಬ್ಬರಿಗೊಬ್ಬರು ಲವ್ ಮಾಡಿ ಮದುವೆ ಆಗುತ್ತಿದ್ದೇವೆ. ನಿನ್ನ ಮಗನಿಗೆ ಹೆಂಡತಿ ಕಂಡರೆ ಇಷ್ಟವಿಲ್ಲ. ಅವನು ಒಂಟಿಯಾಗಿರುವಾಗ ನಾನು ಬಹಳ ಪ್ರೀತಿ ಕೊಟ್ಟಿದ್ದೇನೆ ಎಂದು ತಾಂಡವ್ ಬಳಿ ಬಂದು ಅವನ ಕೈ ಹಿಡಿದು, ನೀನು ಇವರಿಗೆಲ್ಲಾ ಹೆದರಬೇಡ ತಾಳಿ ಕಟ್ಟು, ನಾವು ಮದುವೆ ಆದರೆ ಎಲ್ಲವೂ ಸರಿ ಆಗುತ್ತದೆ ಎನ್ನುತ್ತಾಳೆ. ತನ್ನ ಎದುರಿಗೇ ಮಗನ ಕೈ ಹಿಡಿದ ಶ್ರೇಷ್ಠಾಳ ಕೈ ಬಿಡಿಸುವ ಕುಸುಮಾ, ಆಕೆಯ ಕೆನ್ನೆಗೆ ಬಾರಿಸುತ್ತಾಳೆ. ಪೂಜಾ ಕೂಡಾ ಶ್ರೇಷ್ಠಾಗೆ ಕಪಾಳಮೋಕ್ಷ ಮಾಡುತ್ತಾಳೆ. ತಾಂಡವ್, ಭಾಗ್ಯಾ ಗಂಡ ಎಂದು ತಿಳಿದ ಯಶೋಧಾ, ಶ್ರೀವರ ನೀವು ವಿದ್ಯಾವಂತರು, ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಇರುವವರು, ಆದರೂ ನಿಮಗೆ ಈ ರೀತಿ ಮಾಡಲು ಹೇಗೆ ಮನಸ್ಸು ಬಂತು? ಈಗಿನ ಕಾಲದಲ್ಲಿ ಅತ್ತೆ ಮನೆಯಲ್ಲಿ ಹೊಂದಿಕೊಂಡು ಹೋಗುವ ಸೊಸೆ ಸಿಗುವುದು ಕಷ್ಟ, ಅಂತದ್ದರಲ್ಲಿ ನಿನಗೆ ಭಾಗ್ಯಾಳಂಥ ಹೆಂಡತಿ ಸಿಕ್ಕಿರುವುದು ಪುಣ್ಯ ಎಂದು ಬುದ್ಧಿ ಹೇಳುತ್ತಾರೆ.
ಕುಸುಮಾ ಬರುವುದು ಸ್ವಲ್ಪ ತಡವಾದರೂ ಈ ಮದುವೆ ನಡೆದುಬಿಡುತ್ತಿತ್ತು, ಮತ್ತೊಬ್ಬರ ಸಂಸಾರ ಹಾಡು ಮಾಡಿಬಿಡುತ್ತಿದ್ದೆಯಲ್ಲೇ ಪಾಪಿ ಎಂದು ಯಶೋಧಾ-ಶ್ರೀವರ ಮಗಳಿಗೆ ಬೈಯ್ಯುತ್ತಾರೆ. ಈ ಮದುವೆ ಆಗಲು ನಾನು ಬಿಡುವುದಿಲ್ಲ ಎಂದು ಕುಸುಮಾ ಹೇಳುತ್ತಾಳೆ. ತಾಂಡವ್ ಬಳಿ ಬಂದು ನಿನಗೆ ಇನ್ನೊಂದು ಮದುವೆ ಬೇಕಾ ಎಂದು ಕೇಳುತ್ತಾಳೆ. ತಾಂಡವ್ ಬೇಡ ಎಂದು ತಲೆ ಆಡಿಸುತ್ತಾನೆ. ಮದುವೆ ಬೇಕು ಎಂದಿದ್ದರೆ ಇಲ್ಲೇ ನಿನ್ನನ್ನು ಹೂತು ಹಾಕುತ್ತಿದ್ದೆ ನಡಿ ಮನೆಗೆ ಎಂದು ಕುತ್ತಿಗೆ ಹಿಡಿದು ಎಳೆದೊಯ್ಯುತ್ತಾಳೆ.
ತಾಂಡವ್ ಎರಡನೇ ಮದುವೆ ವಿಚಾರ ಭಾಗ್ಯಾಗೆ ಗೊತ್ತಾಗುವುದಾ? ಶ್ರೇಷ್ಠಾಳನ್ನು ಬಿಟ್ಟು ತಾಂಡವ್ ಮನೆಗೆ ವಾಪಸ್ ಆಗಲಿದ್ದಾನಾ ಅನ್ನೋದು ಕೆಲವೇ ದಿನಗಳಲ್ಲಿ ತಿಳಿಯಲಿದೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ