ಸ್ಯಾಂಡಲ್‌ವುಡ್‌ನಲ್ಲೂ ಲೈಂಗಿಕ ದೌರ್ಜನ್ಯದ ಸದ್ದು, ಸೆ. 16ಕ್ಕೆ ಮಹತ್ವದ ಸಭೆ ಕರೆದ ಚಲನಚಿತ್ರ ವಾಣಿಜ್ಯ ಮಂಡಳಿ-karnataka film chamber of commerce to meet with sandalwood women artists on 16 on sexual assault kfcc mrt ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸ್ಯಾಂಡಲ್‌ವುಡ್‌ನಲ್ಲೂ ಲೈಂಗಿಕ ದೌರ್ಜನ್ಯದ ಸದ್ದು, ಸೆ. 16ಕ್ಕೆ ಮಹತ್ವದ ಸಭೆ ಕರೆದ ಚಲನಚಿತ್ರ ವಾಣಿಜ್ಯ ಮಂಡಳಿ

ಸ್ಯಾಂಡಲ್‌ವುಡ್‌ನಲ್ಲೂ ಲೈಂಗಿಕ ದೌರ್ಜನ್ಯದ ಸದ್ದು, ಸೆ. 16ಕ್ಕೆ ಮಹತ್ವದ ಸಭೆ ಕರೆದ ಚಲನಚಿತ್ರ ವಾಣಿಜ್ಯ ಮಂಡಳಿ

ಸೆಪ್ಟೆಂಬರ್‌ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಕರೆದಿದೆ. ಈ ಸಭೆಯಲ್ಲಿ ಸ್ಯಾಂಡಲ್‌ವುಡ್‌ನ ಹಿರಿಯ ನಟ-ನಟಿಯರು, ನಿರ್ಮಾಪಕರು ಹಾಗೂ ನಿರ್ದೇಶಕರು ಭಾಗವಹಿಸಲಿದ್ದಾರೆ. ಚಿತ್ರರಂಗದಲ್ಲಿ ಕಲಾವಿದೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಚರ್ಚೆ ನಡೆಯಲಿದೆ. ವರದಿ: (ಎಚ್. ಮಾರುತಿ)

ಸೆ. 16ಕ್ಕೆ ಮಹತ್ವದ ಸಭೆ ಕರೆದ ಚಲನಚಿತ್ರ ವಾಣಿಜ್ಯ ಮಂಡಳಿ
ಸೆ. 16ಕ್ಕೆ ಮಹತ್ವದ ಸಭೆ ಕರೆದ ಚಲನಚಿತ್ರ ವಾಣಿಜ್ಯ ಮಂಡಳಿ (KFCC/FB)

ಕನ್ನಡ ಚಲನಚಿತ್ರ ರಂಗದಲ್ಲಿ ಕಲಾವಿದೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ಅಧ್ಯಯನ ಮಾಡಿ ವರದಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯನ್ನು ಆಯೋಜಿಸಿದೆ. ಈ ಸಭೆಯಲ್ಲಿ ಸ್ಯಾಂಡಲ್‌ವುಡ್‌ನ ಹಿರಿಯ ನಟ-ನಟಿಯರು, ನಿರ್ಮಾಪಕರು ಹಾಗೂ ನಿರ್ದೇಶಕರು ಭಾಗವಹಿಸಲಿದ್ದಾರೆ. ಚಿತ್ರರಂಗದಲ್ಲಿ ಕಲಾವಿದೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಸೆಪ್ಟೆಂಬರ್‌ 13ರೊಳಗೆ ಸಭೆ ನಡೆಸಿ ಚರ್ಚಿಸಬೇಕು. ಚಿತ್ರೋದ್ಯಮದ ಹಿರಿಯರ ಸಮ್ಮುಖದಲ್ಲಿ ಸಭೆ ನಡೆಸಬೇಕು ಮತ್ತು ಈ ಸಭೆ ಕಲಾವಿದೆಯರ ಸಮ್ಮುಖದಲ್ಲಿ ನಡೆಯಬೇಕು ಎಂದು ಮಹಿಳಾ ಆಯೋಗವು ವಾಣಿಜ್ಯ ಮಂಡಳಿಗೆ ಪತ್ರ ಬರೆದಿತ್ತು.

ಈ ಪತ್ರದ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿ ಸಭೆಯನ್ನು ಆಯೋಜಿಸಿದೆ. ಸಭೆಗೆ ಪೂರ್ವಭಾವಿಯಾಗಿ ಪದಾಧಿಕಾರಿಗಳು ಆಂತರಿಕ ಸಭೆ ನಡೆಸಿದ್ದಾರೆ. ಗೌರಿ-ಗಣೇಶ ಹಬ್ಬ ಮತ್ತು ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭಗಳ ಕಾರಣದಿಂದಾಗಿ ಕಲಾವಿದರು ಬ್ಯುಸಿಯಾಗಿದ್ದಾರೆ. ಆದ್ದರಿಂದ ಈ ತಿಂಗಳ 16ರಂದು ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಕಲಾವಿದೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಆಗ್ರಹಿಸಿ ಫೀಲ್ಡ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ನಿಯೋಗ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಈ ಸಭೆಗೆ ಚಿತ್ರರಂಗದ ಪ್ರಮುಖರು, ನಟ ನಟಿಯರು ನಿರ್ಮಾಪಕರು ನಿರ್ದೇಶಕರು ಸೇರಿದಂತೆ ಎಲ್ಲರನ್ನೂ ಆಹ್ವಾನಿಸಿ ಚರ್ಚೆ ನಡೆಸುತ್ತೇವೆ. ಮುಂದೆ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮಂಡಳಿಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ಸಮಿತಿ ರಚನೆಗೆ ಕಲಾವಿದೆಯರ ಆಗ್ರಹ

ಮಲಯಾಳಂ ಚಿತ್ರರಂಗದಲ್ಲಿ ಕಲಾವಿದೆಯರ ಮೇಲಿನ ದೌರ್ಜನ್ಯ ಕುರಿತ ಅಧ್ಯಯನಕ್ಕೆ ಕೇರಳ ಸರ್ಕಾರ ಹೇಮಾ ಸಮಿತಿ ರಚಿಸಿತ್ತು. ಈ ಸಮಿತಿ ನೀಡಿರುವ ವರದಿ ಚಿತ್ರರಂಗದಲ್ಲಿ ಕೋಲಾಹಲ ಸೃಷ್ಟಿಸಿದೆ. ಹೆಸರಾಂತ ನಟರು, ನಿರ್ದೇಶಕರು, ನಿರ್ಮಾಪಕರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿ ಬಂದಿವೆ. ಇದೇ ಮಾದರಿಯಲ್ಲಿ ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚಿಸಬೇಕೆಂದು ಕಲಾವಿದೆಯರು ಆಗ್ರಹಪಡಿಸುತ್ತಿದ್ದಾರೆ.

ನಿನ್ನೆ ಗುರುವಾರ ನಾಯಕ ನಟ ಚೇತನ್ ಅಹಿಂಸಾ ನೇತೃತ್ವದಲ್ಲಿ ಫೈರ್ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಿಯೋಗ ರಚಿಸಲು ಒತ್ತಾಯಿಸಿತ್ತು. ಈ ಮನವಿ ಪತ್ರಕ್ಕೆ ಮಹಿಳಾ ಮತ್ತು ಪುರುಷ ಕಲಾವಿದರು ಸೇರಿ 156 ಮಂದಿ ಸಹಿ ಮಾಡಿದ್ದರು. ನಟಿ ಸಂಜನಾ ಅವರು ಪ್ರತ್ಯೇಕವಾಗಿ ಭೇಟಿ ಮಾಡಿ ಸಮಿತಿ ರಚಿಸಲು ಮನವಿ ಸಲ್ಲಿಸಿದ್ದರು. ಫೈರ್ ಸಂಸ್ಥೆಯನ್ನು ಚೇತನ್ 2017ರಲ್ಲಿ ಹುಟ್ಟು ಹಾಕಿದ್ದರು. ಸಮಿತಿಯನ್ನು ರಚಿಸುವ ಪ್ರಕ್ರಿಯೆಯನ್ನು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಮತ್ತು ಬಿಜೆಪಿ ನಾಯಕಿ ಸಿ ಮಂಜುಳಾ ಅವರೂ ಬೆಂಬಲಿಸಿದ್ದಾರೆ.

mysore-dasara_Entry_Point