ದರ್ಶನ್‌ ಜೈಲು ಸೇರ್ತಿದ್ದಂತೆ, ‘ಖೈದಿ ನಂ 6106’ ಹಿಂದೆ ಬಿದ್ದ ನಿರ್ಮಾಪಕರು! ಅಡಕತ್ತರಿಯಲ್ಲಿ ‘ಡಿ ಗ್ಯಾಂಗ್‌’
ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌ ಜೈಲು ಸೇರ್ತಿದ್ದಂತೆ, ‘ಖೈದಿ ನಂ 6106’ ಹಿಂದೆ ಬಿದ್ದ ನಿರ್ಮಾಪಕರು! ಅಡಕತ್ತರಿಯಲ್ಲಿ ‘ಡಿ ಗ್ಯಾಂಗ್‌’

ದರ್ಶನ್‌ ಜೈಲು ಸೇರ್ತಿದ್ದಂತೆ, ‘ಖೈದಿ ನಂ 6106’ ಹಿಂದೆ ಬಿದ್ದ ನಿರ್ಮಾಪಕರು! ಅಡಕತ್ತರಿಯಲ್ಲಿ ‘ಡಿ ಗ್ಯಾಂಗ್‌’

ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ನಟ ದರ್ಶನ್‌ ಸೇರಿ 17 ಮಂದಿ ಜೈಲು ಸೇರಿದ್ದಾರೆ. ಈ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಪ್ರಕರಣದ ವೇಳೆ ಸದ್ದು ಮಾಡಿದ ಕೆಲವು ಪದಗಳೀಗ ಸಿನಿಮಾ ಶೀರ್ಷಿಕೆಯಾಗುತ್ತಿವೆ. ಫಿಲಂ ಚೇಂಬರ್‌ನಲ್ಲಿ ಅರ್ಜಿಯೂ ಸಲ್ಲಿಕೆಯಾಗಿವೆ.

ದರ್ಶನ್‌ ಜೈಲು ಸೇರ್ತಿದ್ದಂತೆ, ‘ಖೈದಿ ನಂ 6106’ ಹಿಂದೆ ಬಿದ್ದ ನಿರ್ಮಾಪಕರು! ಅಡಕತ್ತರಿಯಲ್ಲಿ ‘ಡಿ ಗ್ಯಾಂಗ್‌’
ದರ್ಶನ್‌ ಜೈಲು ಸೇರ್ತಿದ್ದಂತೆ, ‘ಖೈದಿ ನಂ 6106’ ಹಿಂದೆ ಬಿದ್ದ ನಿರ್ಮಾಪಕರು! ಅಡಕತ್ತರಿಯಲ್ಲಿ ‘ಡಿ ಗ್ಯಾಂಗ್‌’

Darshan Thoogudeepa: ತಮ್ಮ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ದರ್ಶನ್‌ ಸೇರಿ ಡಿ ಗ್ಯಾಂಗ್‌ನ 17 ಮಂದಿಯನ್ನು ಬಂಧಿಸಿ, ವಿಚಾರಣೆ ಮುಂದುವರಿಸಿದ್ದಾರೆ. ಹೈ ಪ್ರೊಫೈಲ್‌ ಕೇಸ್‌ ಆಗಿರುವುದರಿಂದ ಪೊಲೀಸರೂ ಅಷ್ಟೇ ಸೂಕ್ಷ್ಮವಾಗಿ ಈ ಕೇಸ್‌ನ ತನಿಖೆ ನಡೆಸುತ್ತಿದ್ದು, ಸೂಕ್ತ ಸಾಕ್ಷ್ಯಗಳನ್ನೂ ಕಲೆಹಾಕುತ್ತಿದ್ದಾರೆ. ಈ ನಡುವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದರ್ಶನ್‌ ಕೊಲೆ ಪ್ರಕರಣದ ಸುತ್ತ ಗಿರಕಿ ಹೊಡೆದ ಶೀರ್ಷಿಕೆಗಳನ್ನು ನೋಂದಣಿ ಮಾಡಿಸಲು ಮುಗಿಬಿದ್ದಿದ್ದಾರೆ.

ಹೌದು, ನಟ ದರ್ಶನ್‌ ಜೈಲು ಸೇರುತ್ತಿದ್ದಂತೆ ಅವರನ್ನೇ ಸುತ್ತುವರಿದ ಕೇಸ್‌ಗೆ ಸಂಬಂಧಿಸಿದ ವಿಷಯಗಳನ್ನೇ ಇಟ್ಟುಕೊಂಡು ಸಿನಿಮಾಗಳ ಶೀರ್ಷಿಕೆ ಮಾಡಿಸಲು ಒಂದಷ್ಟು ಸಿನಿಮಾ ನಿರ್ಮಾಣ ಸಂಸ್ಥೆಗಳು ಮುಂದಾಗಿವೆ. ಆ ಪೈಕಿ ಇತ್ತೀಚೆಗೆ ಹೆಚ್ಚು ಗಮನ ಸೆಳೆದಿದ್ದು ನಟ ದರ್ಶನ್‌ ಅವರ ಕೈದಿ ನಂಬರ್! ಸದ್ಯ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್‌ ಅವರಿಗೆ 6106 ಖೈದಿ ನಂಬರ್‌ ನೀಡಲಾಗಿದೆ. ಈ ನಂಬರ್‌ ಮಾಧ್ಯಮಗಳ ಮೂಲಕ ಹೊರಬೀಳುತ್ತಿದ್ದಂತೆ, ಅದನ್ನೇ ತಮ್ಮ ಸಿನಿಮಾಕ್ಕೆ ಶೀರ್ಷಿಕೆಯಾಗಿಸಲು ಮುಂದಾಗಿದ್ದಾರೆ.

‘ಖೈದಿ ನಂ 6106’ ಡಿಮಾಂಡ್‌

ಖೈದಿ ನಂಬರ್​ 6106 ಎಂಬ ಶೀರ್ಷಿಕೆ ನಮಗೆ ಬೇಕು ಎಂದು ಭದ್ರಾವತಿ ಮೂವೀ ಮೇಕರ್ಸ್​ ಸಂಸ್ಥೆಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ‌ ಅರ್ಜಿ ಸಲ್ಲಿಸಿದೆ. ಈ ನಡುವೆ ಈ ಅರ್ಜಿಯನ್ನು ಪರಿಶೀಲಿಸಿದ ಮಂಡಳಿ, ಸದ್ಯಕ್ಕೆ ಈ ಟೈಟಲ್‌ಅನ್ನು ಕೊಡಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದು, ಸದ್ಯಕ್ಕೆ ಹೋಲ್ಡ್‌ನಲ್ಲಿಟ್ಟಿದೆ. ಸದ್ಯಕ್ಕೆ ಪೆಂಡಿಂಗ್‌ ಇಡಲಾಗಿದೆ ಎಂದು ಮಂಡಳಿ ಅರ್ಜಿ ಮೇಲೆ ಬರೆದಿದೆ. ಈಗಾಗಲೇ ಭದ್ರಾವತಿ ಮೂವೀ ಮೇಕರ್ಸ್ ಸಂಸ್ಥೆ ಕನ್ನಡಲ್ಲಿ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು, ಇದು ನಾಲ್ಕನೇ ಚಿತ್ರ.

ಡಿ ಗ್ಯಾಂಗ್‌ಗೂ ಸಿಗದ ಸಮ್ಮತಿ

ನಟ ದರ್ಶನ್‌ ಮತ್ತವರ ಗ್ಯಾಂಗ್‌ ಕೊಲೆ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆ, ಸೋಷಿಯಲ್‌ ಮೀಡಿಯಾದಲ್ಲಿ ಈ ಕೃತ್ಯ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಡಿ ಗ್ಯಾಂಗ್‌ನ ಅಟ್ಟಹಾಸ ಎಂದೇ ಎಲ್ಲರೂ ಕರೆದಿದ್ದರು. ಆ ಸಮಯದಲ್ಲಿ ಮುನ್ನೆಲೆಗೆ ಬಂದ ಈ ಡಿ ಗ್ಯಾಂಗ್‌ ಶೀರ್ಷಿಕೆ ಹಿಂದೆ ನಿರ್ದೇಶಕ ರಾಕಿ ಸೊಮ್ಲಿ ಸಹ ಬೆನ್ನು ಬಿದ್ದಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿಗೂ ಅರ್ಜಿ ಸಲ್ಲಿಸಿದ್ದರು. ಆದರೆ, ಅವರಿಗೂ ಶೀರ್ಷಿಕೆ ಮಾತ್ರ ಚೇಂಬರ್‌ನಿಂದ ಸಿಕ್ಕಿರಲಿಲ್ಲ.

ವಾಣಿಜ್ಯ ಮಂಡಳಿಯ ದಿಟ್ಟ ನಿರ್ಧಾರ

ಕರ್ನಾಟಕದಲ್ಲಿ ಏನೇ ಪ್ರಮುಖ ಬೆಳವಣಿಗೆಗಳು ನಡೆದರೂ ಅದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿವೆ. ಘಟನೆ ನಡೆದ ಬಳಿಕ ಅದಕ್ಕೆ ಸಂಬಂಧಿಸಿದ ಶೀರ್ಷಿಕೆಗಳನ್ನೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡುವ ಸಂಪ್ರದಾಯ ನಡೆಯುತ್ತಲೇ ಬಂದಿದೆ. ಇದೀಗ ದರ್ಶನ್‌ ವಿಚಾರದಲ್ಲಿಯೂ ಅದೇ ಮುಂದುವರಿಯುತ್ತಿದೆ. ಸದ್ಯಕ್ಕೆ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ವಿಚಾರಣಾಧೀನ ಖೈದಿ ಆಗಿರುವುದರಿಂದ, ಈ ಹಂತದಲ್ಲಿ ಈ ಕೇಸ್‌ಗೆ ಸಂಬಂಧಿಸಿದ ಯಾವುದೇ ಶೀರ್ಷಿಕೆಗಳನ್ನು ನೀಡುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

Whats_app_banner