Kantara Chapter 1: ಕುಂದಾಪುರದಲ್ಲಿ ಕಾಂತಾರ ಸಡಗರ; 600 ಕಾರ್ಪೆಂಟರ್‌ಗಳಿಂದ 40 ಸಾವಿರ ಚದರಡಿಯ ಶೂಟಿಂಗ್ ಸೆಟ್ ನಿರ್ಮಾಣ
Kantara Chapter 1: ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಚಾಪ್ಟರ್ 1ರ ಶೂಟಿಂಗ್‌ಗಾಗಿ ಕುಂದಾಪುರದಲ್ಲಿ ಬೃಹತ್ ಶೂಟಿಂಗ್ ಸೆಟ್ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಬೆಂಗಳೂರು, ಮುಂಬೈ, ಹೈದರಾಬಾದ್‌ನಿಂದ ಸುಮಾರು 600 ಕಾರ್ಪೆಂಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಚಾಪ್ಟರ್ 1ರ ಶೂಟಿಂಗ್‌ಗಾಗಿ ಕುಂದಾಪುರದಲ್ಲಿ ಬೃಹತ್ ಶೂಟಿಂಗ್ ಸೆಟ್ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಬೆಂಗಳೂರು, ಮುಂಬೈ, ಹೈದರಾಬಾದ್‌ನಿಂದ ಸುಮಾರು 600 ಕಾರ್ಪೆಂಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆಯಂತೆ. ಇದೇ ಸಮಯದಲ್ಲಿ ಸ್ಟಂಟ್ ಕೋ ಆರ್ಟಿನೇಟರ್‌ಗಳನ್ನೂ ಚಿತ್ರತಂಡ ತನ್ನ ಬಳಗಕ್ಕೆ ಸೇರಿಸಿಕೊಳ್ಳುತ್ತಿದೆ. ಇದೇ ಸಮಯದಲ್ಲಿ ಈಗಾಗಲೇ ಕಾಂತಾರ ಚಾಪ್ಟರ್ 1ರಲ್ಲಿ ನಟಿಸಲು ಆಯ್ಕೆಯಾದ ಕಲಾವಿದರಿಗೆ ತೀವ್ರವಾದ ತರಬೇತಿ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಕುಂದಾಪುರದಲ್ಲಿ ಕಾಂತಾರ ಶೂಟಿಂಗ್
ಕಾಂತಾರ ಚಾಪ್ಟರ್ 1ರ ಶೂಟಿಂಗ್‌ಗಾಗಿ ಕುಂದಾಪುರದಲ್ಲಿ ಬೃಹತ್ ಶೂಟಿಂಗ್ ಸೆಟ್ ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕುಂದಾಪುರದಲ್ಲಿ ಕಾಂತಾರ ಶೂಟಿಂಗ್ ಸಡಗರ ಹೆಚ್ಚಲಿದೆ. ಈಗಾಗಲೇ ಕಾಂತಾರ ಚಾಪ್ಟರ್ 1ರ ಸಣ್ಣ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿತ್ತು. ಇದಾದ ಬಳಿಕ ಕಾಂತಾರ ಸಿನಿಮಾಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ಚಿತ್ರತಂಡ ಬಿಝಿಯಾಗಿತ್ತು.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾದ ಪ್ರೀ ಪೊಡಕ್ಷನ್ ಕೆಲಸಗಳು ಮುಗಿದಿವೆ. ಇದೀಗ 20 ದಿನದ ಶೂಟಿಂಗ್ ಶೆಡ್ಯೂಲ್ ಆರಂಭಿಸುತ್ತಿದ್ದಾರೆ ಶೆಟ್ರು. ಈ ಶೂಟಿಂಗ್‌ಗಾಗಿ ಕುಂದಾಪುರದಲ್ಲಿ ಬೃಹತ್ ಸೆಟ್ ಹಾಕಲಾಗುತ್ತದೆ. ಇದಕ್ಕಾಗಿ ಆರುನೂರಕ್ಕೂ ಹೆಚ್ಚು ಕಾರ್ಪೆಂಟರ್‌ಗಳನ್ನು ಕರೆಸಲಾಗಿದೆ. ಇದೇ ಶೂಟಿಂಗ್ ಸೆಟ್‌ನಲ್ಲಿ 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.
ಕಾಂತಾರ ಕಲಾವಿದರಿಗೆ ತರಬೇತಿ
ಕಾಂತಾರ ಸಿನಿಮಾಕ್ಕೆ ಕೆಲವು ದಿನಗಳ ಹಿಂದೆ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಈ ಕಲಾವಿದರಿಗೆ ಕಠಿಣ ತರಬೇತಿ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಕಾಂತಾರ ಸಿನಿಮಾಕ್ಕೆ ಕೆಲಸ ಮಾಡಿದವರೇ ಚಾಪ್ಟರ್ 1ಕ್ಕೆ ಕೆಲಸ ಮಾಡಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಇರಲಿದೆ. ಕ್ಯಾಮೆರಾಮೆನ್ ಆಗಿ ಅರವಿಂದ್ ಕಶ್ಯಪ್ ಕೆಲಸ ಮಾಡಲಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಹೀರೋಯಿನ್, ವಿಲನ್ ಸೇರಿದಂತೆ ಇತರೆ ಪಾತ್ರದಾರಿಗಳ ವಿವರ ದೊರಕಿಲ್ಲ.
"ಪಂಜುರ್ಲಿ, ಗುಳಿಗ ದೈವದ ಮೂಲ ಕಥೆಯನ್ನು ಕಾಂತಾರ ಚಾಪ್ಟರ್ 1 ಸಿನಿಮಾ ಹೊಂದಿರಲಿದೆ. ಹೀಗಾಗಿ ಈ ಚಿತ್ರದಲ್ಲಿ ಪುರಾತನ ವಿಷಯಗಳು ಇರಲಿವೆ" ಎಂದು ಚಿತ್ರತಂಡದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಉಳಿದಂತೆ ಕಾಂತಾರದ ಯಾವುದೇ ಅಪ್‌ಡೇಟ್ ಚಿತ್ರತಂಡದ ಕಡೆಯಿಂದ ಬಂದಿಲ್ಲ. ಚಿತ್ರದ ಸ್ಟೋರಿ, ಪಾತ್ರಗಳ ಕುರಿತು ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸುತ್ತಿದೆ ಚಿತ್ರತಂಡ.
ಕಾಂತಾರ ಸಿನಿಮಾಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲವೂ ಎಲ್ಲರಲ್ಲಿದೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಸಾಯಿ ಪಲ್ಲವಿ, ಆಲಿಯಾ ಭಟ್, ಸಪ್ತಮಿ ಗೌಡ, ರುಕ್ಮಿಣಿ ವಸಂತ್‌ರಲ್ಲಿ ಯಾರಾದರೂ ಒಬ್ಬರನ್ನು ಕಾಂತಾರಕ್ಕೆ ಹೀರೋಯಿನ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದೆಯಂತೆ. ಇವರಲ್ಲಿ ರುಕ್ಮಿಣಿ ವಸಂತ್ ಈ ಸಿನಿಮಾಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರುಕ್ಮಿಣಿ ವಸಂತ್ ಅವರು ಕಾಂತಾರ ಸಿನಿಮಾಕ್ಕಾಗಿ ಲುಕ್ ಟೆಸ್ಟ್‌ನಲ್ಲಿ ಪಾಲ್ಗೊಂಡಿದ್ದರು. ನಾನು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದು ಸಪ್ತಮಿ ಗೌಡ ಇತ್ತೀಚೆಗೆ ಮಾಹಿತಿ ನೀಡಿದ್ದರು.
ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್ 1ರ ಫಸ್ಟ್‌ಲುಕ್ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ತ್ರಿಶೂಲಧಾರಿ ಸನ್ಯಾಸಿಯೊಬ್ಬರು ರಕ್ತಸಿಕ್ತವಾಗಿರುವಂತೆ ರಿಷಬ್ ಶೆಟ್ಟಿ ಘೋರವಾಗಿ ಈ ಫಸ್ಟ್‌ಲುಕ್‌ನಲ್ಲಿ ಕಾಣಿಸಿದ್ದಾರೆ. ಇದು ಪರಶುರಾಮನ ಸೃಷ್ಟಿಯ ತುಳುನಾಡಿನ ಸುಳಿವು ಆಗಿರಬಹುದು ಎನ್ನಲಾಗುತ್ತಿದೆ. ಗುಳಿಗ ದೈವದ ಮೂಲದ ಕಥೆಯೂ ಆಗಿರಬಹುದು.
ಕಾಂತಾರ ಚಾಪ್ಟರ್ 1 ಕಥೆ ಏನಿರಬಹುದು ಎಂದು ಎಲ್ಲೂ ಚಿತ್ರತಂಡ ಬಾಯಿಬಿಟ್ಟಿಲ್ಲ. ಈ ಕುರಿತು ರಹಸ್ಯ ಕಾಪಾಡಿಕೊಳ್ಳಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಈಗಾಗಲೇ ತಿಳಿಸಿದಂತೆ ನಾವು ಈಗ ನೋಡಿರುವುದು ಕಾಂತಾರದ ಎರಡನೇ ಭಾಗ. ಇನ್ನು ಶೂಟಿಂಗ್ ಆಗಬೇಕಿರುವುದು ಕಾಂತಾರದ ಮೊದಲ ಭಾಗ ಎಂದು ರಿಷಬ್ ಶೆಟ್ಟಿ ಮಾಹಿತಿ ನೀಡಿದ್ದರು. ಇದೀಗ ಕುಂದಾಪುರದಲ್ಲಿ ಕಾಂತಾರ ಶೂಟಿಂಗ್‌ಗೆ ಬೃಹತ್ ಸೆಟ್ ಹಾಕಿ 20 ದಿನದ ಶೂಟಿಂಗ್ ಕೆಲಸ ಆರಂಭಿಸುತ್ತಿದ್ದಾರೆ.