‘ಗೀತಾಳ ಗಂಡನಾಗಿ ಕೇಳ್ತಿದ್ದೇನೆ, ಇಷ್ಟು ದಿನ ನೀವೇನು ಕಿಸಿದಿದ್ದೀರಿ ಹೇಳಿ?’ ಕುಮಾರ ಬಂಗಾರಪ್ಪಗೆ ಮಾತಲ್ಲೆ ಟಾಂಗ್ ಕೊಟ್ಟ ಶಿವರಾಜ್‌ಕುಮಾರ್
ಶಿವಮೊಗ್ಗ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ನಟ ಶಿವರಾಜ್‌ಕುಮಾರ್, ಕುಮಾರ ಬಂಗಾರಪ್ಪ ವಿರುದ್ಧ ಹರಿಹಾಯ್ದಿದ್ದಾರೆ. ಖಾರವಾಗಿಯೇ ಪ್ರತಿಕ್ರಿಯೆ ನೀಡಿರುವ ಶಿವಣ್ಣ, ಗೀತಾಗೆ ನಾನೇ ಗ್ಯಾರಂಟಿ ಎಂದೂ ಹೇಳಿದ್ದಾರೆ.
Shivarajkumar on Kumar Bangarappa: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ಬಿರುಸು ಪಡೆದುಕೊಂಡಿದೆ. ಮೊದಲ ಹಂತದ ಚುನಾವಣೆಯ ಬಳಿಕ ಎರಡನೇ ಹಂತದ ಚುನಾವಣೆಯ ಪ್ರಚಾರ ಕೆಲಸವೂ ಜೋರಾಗಿಯೇ ನಡೆಯುತ್ತಿವೆ. ಅದರಲ್ಲೂ ಹಲವು ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ, ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಗೀತಾ ಶಿವರಾಜ್‌ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅವರ ಪರವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ ಶಿವಣ್ಣ. ಈ ನಡುವೆ ಕುಮಾರ ಬಂಗಾರಪ್ಪ ವಿರುದ್ಧ ಪ್ರಚಾರದ ವೇಳೆಯೇ ಸಿಡಿದೆದ್ದಿದ್ದಾರೆ.
ಪ್ರಚಾರದ ಸಮಯದಲ್ಲಿ ಈ ವರೆಗೂ ನಟ ಶಿವಣ್ಣ ಯಾರ ವಿರುದ್ಧವೂ ಮಾತನಾಡಿರಲಿಲ್ಲ. ಆದರೆ, ಶುಕ್ರವಾರ ಮಾತ್ರ ಅವರ ಆಕ್ರೋಶದ ಕಟ್ಟೆಯೊಡೆದಿತ್ತು. ಅದಕ್ಕೆ ಕಾರಣ; ಕೆಲ ದಿನಗಳ ಹಿಂದಷ್ಟೇ ಕುಮಾರ ಬಂಗಾರಪ್ಪ ನೀಡಿದ್ದ ಹೇಳಿಕೆ. ಇನ್ನೇನು ಚುನಾವಣೆ ಮುಗೀತಿದ್ದಂತೆ, ಗೀತಾ ಶಿವರಾಜ್‌ಕುಮಾರ್ ಮನೆ ಖಾಲಿ ಮಾಡಿಕೊಂಡು ಹೋಗಲಿದ್ದಾರೆ ಎಂದಿದ್ದರು. ಕುಮಾರ್ ಅವರ ಈ ಮಾತು ಶಿವಣ್ಣನ ಗಮನಕ್ಕೂ ಬಂದಿತ್ತು. ಅದಕ್ಕೆ ಉತ್ತರ ಎಂಬಂತೆ, ತಮ್ಮೊಳಗಿನ ಬೇಸರವನ್ನು ಹೊರಹಾಕಿದ್ದಾರೆ. "ಆಕ್ಟ್ ಮಾಡೋವಾಗ ಮಾಡಿದ್ದರೆ, ಸೂಪರ್‌ಸ್ಟಾರ್ ಆಗಿರುತ್ತಿದ್ರು, ಇಲ್ಲಿ ಬಂದು ಏನೂ ಮಾಡೋಕಾಗಿಲ್ಲ" ಎಂದು ಟಾಂಗ್ ಕೊಟ್ಟಿದ್ದಾರೆ.
ಮಾತಾಡೋವಾಗ ನೂರು ಸಲ ವಿಚಾರಿಸಬೇಕು..
“ಯಾಕ್ರಿ ಅವರ ಬಗ್ಗೆ ಮಾತನಾಡಬೇಕು. ಮಾತನಾಡುವಂತದ್ದೂ ಅವರೇನು ಮಾಡಿದ್ದಾರೆ. ಮೊದಲೇನದಾಗಿ ಕೆಲಸ ಮಾಡಬೇಕಾದ್ರೆ ಒಳ್ಳೇ ಮನಸ್ಸುಬೇಕು. ಯಾರು ಎಲ್ಲಿ ಬೇಕಾದರೂ ಆಕ್ಟ್ ಮಾಡಬಹುದು. ಇಲ್ಲಿ ಬಂದು ಏನು ಮಾಡಬೇಕಾಗಿಲ್ಲ. ಮಾಡಬೇಕಾದ ಕಡೆ ಮಾಡಿದ್ರೆ ಇಷ್ಟೊತ್ತಿಗೆ ಸೂಪರ್‌ಸ್ಟಾರ್ ಆಗುತ್ತಿದ್ರು. ರಾಜ್‌ಕುಮಾರ್ ಫ್ಯಾಮಿಲಿಯನ್ನು ಯಾಕೆ ಇಷ್ಟು ಇಷ್ಟ ಪಡುತ್ತಾರೆ ಹೇಳಿ? ನಾನೇ ಇರಬಹುದು. ರಾಘುನೇ ಇರಬಹುದು, ಅಪ್ಪುನೇ ಇರಬಹುದು.. ಯಾಕೆ ಇಷ್ಟ ಪಡ್ತಾರೆ? ಮಾತಾಡೋವಾಗ ನೂರು ಸಲ ವಿಚಾರ ಮಾಡಬೇಕು. ಸುಮ್ಮನೆ ಮಾತಾಡೋದಲ್ಲ” ಎಂದು ಕುಮಾರ ಬಂಗಾರಪ್ಪಗೆ ಚಾಟಿ ಬೀಸಿದ್ದಾರೆ ಶಿವಣ್ಣ.
ಗೀತಾಳ ಗಂಡನಾಗಿ ಮಾತನಾಡ್ತಿದ್ದೇನೆ..
“ಈಗ ಯಾವ ಕ್ಷೇತ್ರದಲ್ಲಿ ಕಾಂಪಿಟೇಷನ್ ಎಲ್ಲಿ ಇಲ್ಲ ಹೇಳಿ? ಸಿನಿಮಾದಲ್ಲಿ ಇಲ್ವಾ, ಕ್ರೀಡೆಯಲ್ಲಿ ಇಲ್ವಾ? ರಾಜಕೀಯದಲ್ಲಿ ಇಲ್ವಾ? ಒಬ್ಬರು ಗೆಲ್ತಾರೆ, ಒಬ್ಬರು ಸೋಲ್ತಾರೆ. ಅದು ನ್ಯಾಯ ಅಲ್ವಾ? ನೀವು ನಿಲ್ಲಬೇಕಾದ್ರೆ, ನೀವೇನು ಕಿಸಿಯುತ್ತೀರ ಅಂತ ಹೇಳಬೇಕೇ ಹೊರತು, ಇನ್ನೊಬ್ರು ಏನು ಕಿಸಿದ್ರು ಅನ್ನೋದು ಬೇಕಾಗಿಲ್ಲ. ನಾನಿಲ್ಲಿ ಒಬ್ಬ ಮಾಮೂಲಿ ವ್ಯಕ್ತಿಯಾಗಿ ಮಾತನಾಡ್ತಿದ್ದೇನೆ ಹೊರತು, ಶಿವರಾಜ್‌ಕುಮಾರ್ ಆಗಿ ಮಾತಾಡುತ್ತಿಲ್ಲ. ಹಾಗೇ ಅಂದುಕೊಳ್ಳಬೇಡಿ. ಇವತ್ತು ಯಾರ್‍ಯಾರು ಕೇಳಿಸಿಕೊಳ್ಳುತ್ತಾರೋ ಕೇಳಿಸಿಕೊಳ್ಳಲಿ. ನಾನಿಲ್ಲಿ ಗೀತಾಳ ಗಂಡನಾಗಿ ಮಾತಾಡ್ತಿದ್ದೇನೆ. ಬಾಯಿ ಇದೆ ಅಂತ ಏನೇನೋ ಮಾತನಾಡ್ಬಾರ್ದು. ನಮಗೂ ಬಾಯಿದೆ. ನಮಗೆ ನಮ್ಮ ತಂದೆ ಆ ಥರ ಹೇಳಿಕೊಟ್ಟಿಲ್ಲ. ನಾವು ಆ ಸಂಸ್ಕಾರದಲ್ಲಿ ಬೆಳೆದಿಲ್ಲ” ಎಂದಿದ್ದಾರೆ.
ಅವಳ ತವರು ಮನೆಯೇ ಈ ಊರಲ್ವಾ? ಇನ್ಯಾಕೆ ಮನೆ
“ನೀವು ಏನು ಮಾಡಿದ್ದೀರೋ ಅದನ್ನ ಮಾತಾಡಿ. ಇವತ್ತು ಅವ್ರು ಮಾತನಾಡಿದ್ದನ್ನು ನೋಡಿ ನನಗೆ ತುಂಬ ಹರ್ಟ್ ಆಯ್ತು. ಹಾಗಾಗಿಯೇ ಇಷ್ಟೆಲ್ಲ ಮಾತನಾಡಬೇಕಾಯ್ತು. ಇಲ್ಲಾಂದ್ರೆ ನಾನು ಮಾತನಾಡೋನಲ್ಲ. ಮಾತೆತ್ತಿದರೇ ಅವರಿಗೆ ಮನೆಯಿಲ್ಲ ಅನ್ನೋದೇನಕ್ಕೆ? ಮನೆ ಇದ್ರೆ ಮಾತ್ರ ಕೆಲಸ ಮಾಡೋಕಾಗುತ್ತಾ? ಅಷ್ಟಕ್ಕೂ ನಾವು ಮನೆ ಮಾಡಬೇಕಿರೋದು ನಿಮ್ಮಗಳ ಹೃದಯದಲ್ಲಿ. ಮನೆ ಮಾಡಿಕೊಂಡು, ಎಸಿ ಇಟ್ಕೊಂಡು, 20 ಗಾಡಿ ಇಟ್ಕೊಂಡು, ಸೆಕ್ಯೂಟಿರಿ ಇಟ್ಕೊಂಡ್ರೆ ಏನು ಪ್ರಯೋಜನ ಹೇಳಿ?” ಎಂದು ಕುಮಾರ ಬಂಗಾರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.
ಗೀತಾಗೆ ನಾನೇ ಗ್ಯಾರಂಟಿ
“ಮನೆ ಇಲ್ಲ ಅಂತಾರೆ, ತವರು ಮನೆ ಇದೇ ಅಂದಮೇಲೆ ಇನ್ನೇನು ಬೇಕು. ಮಾತನಾಡಬೇಕಾದರೆ ಯೋಚಿಸಬೇಕು, ಸೆನ್ಸ್ ಇರಬೇಕು. ನಾವೇನಾದ್ರೂ ಅವರ ಬಗ್ಗೆ ಮಾತನಾಡಿದ್ದೇವಾ? ಇಲ್ಲವಲ್ಲ. ಅದು ನಮಗೆ ಬೇಕಾಗಿಲ್ಲ. ಹಾಗಾಗಿ ಒಂದು ಅವಕಾಶ ಗೀತಾಗೆ ಕೊಡಿ, ಕಾಂಗ್ರೆಸ್‌ನವ್ರು ಈಗ ನಿಮಗೆ ಎಲ್ಲ ಭಾಗ್ಯ ಕೊಟ್ಟಿದ್ದಾರೆ. ಅದು ಅಷ್ಟೇ ಚೆನ್ನಾಗಿ ರೀಚ್ ಆಗಿದೆ. ಅದಕ್ಕೆ ಎಲ್ಲರೂ ಕೃತಜ್ಞತೆ ಹೇಳಲೇಬೇಕು. ಈಗ ನಾನು ಒಂದು ಗ್ಯಾರಂಟಿ ಕೊಡ್ತಿನಿ. ಗೀತಾಗೆ ನಾನೇ ಗ್ಯಾರಂಟಿ. ವಿಶ್ವಾಸ ಇಡಿ, ಒಂದು ಬಾರಿ ವೋಟ್ ಹಾಕಿ. ಖಂಡಿತ ಅವರು ನಿಮ್ಮ ಧ್ವನಿಯಾಗಿರುತ್ತಾರೆ” ಎಂದಿದ್ದಾರೆ ಶಿವಣ್ಣ.
ವಿಭಾಗ