‘ಅವ್ನ ಜತೆಗೇನು ಮಾತು, ಅವ್ರನ್ನ ಅಣ್ಣ ಅಂತ ಕರೀ, ಈ ಅನುಮಾನವೇ ಆ ವ್ಯಕ್ತಿ ಜತೆಗಿನ ಬ್ರೇಕಪ್‌ಗೆ ಕಾರಣವಾಯ್ತು’; ತನಿಷಾ ಕುಪ್ಪಂಡ
ಬಿಗ್‌ಬಾಸ್ ಬಳಿಕ ಹೊಸ ಬದುಕು ಸಿಕ್ಕ ಖುಷಿಯಲ್ಲಿರುವ ತನಿಷಾ ಕುಪ್ಪಂಡ, ಅದಕ್ಕೂ ಮೊದಲು ಅನುಭವಿಸಿದ ಯಾತನೆ, ನೋವು ಒಂದೆರಡಲ್ಲ. ಪ್ರೀತಿಯ ವಿಚಾರದಲ್ಲೂ ಅನುಮಾನ ಎಂಬುದು ತನಿಷಾ ಅವರ ಮನಸ್ಸನ್ನು ಕೆಡಿಸಿತ್ತು. ಅಂದಿನ ಆ ಬ್ರೇಕಪ್ ನಿರ್ಧಾರದ ಬಗ್ಗೆ ಮಾತನಾಡಿದ್ದಾರವರು.
Tanisha Kuppanda Love Break up: ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ತಮ್ಮ ಮಾತು, ನೇರ ನಡೆ ನುಡಿಯ ಮೂಲಕವೇ ಹೆಚ್ಚು ಸುದ್ದಿ ಮಾಡಿದವರು ತನಿಷಾ ಕುಪ್ಪಂಡ. ಬಿಗ್‌ಬಾಸ್‌ಗೂ ಮೊದಲು ಕಟು ಟೀಕೆಗಳನ್ನೇ ಎದುರಿಸುತ್ತಿದ್ದ ತನಿಷಾ, ಬಿಗ್‌ಬಾಸ್‌ನ 100 ದಿನಗಳು ಮುಗಿದ ಬಳಿಕ ಹೊಸ ಹುಟ್ಟಿನ ಜತೆಗೆ ಆಗಮಿಸಿದ್ದರು. ಸ್ವತಃ ತನಿಷಾ ಅವರೇ, ನನಗಿದು ಮರು ಹುಟ್ಟು ಎಂದು ಹೇಳಿ ಸಂಭ್ರಮಿಸಿದ್ದರು. ಈ ಹಿಂದೆ ಟ್ರೋಲ್ ಮಾಡಿ ಗಹಗಹಿಸಿ ನಕ್ಕವರೆಲ್ಲರಿಗೂ ಪರೋಕ್ಷವಾಗಿಯೇ ಗುನ್ನ ಕೊಟ್ಟಿದ್ದರು. ಈ ನಡುವೆ ಇದೇ ನಟಿ, ತಮ್ಮ ಜೀವನದ ಏರಿಳಿತದ ಬಗ್ಗೆ ಮಾತನಾಡಿದ್ದಾರೆ. ಲವ್ ಬ್ರೇಕಪ್ ಬಗ್ಗೆ ತುಟಿ ಬಿಚ್ಚಿದ್ದಾರೆ.
ಕನ್ನಡ ಪಿಚ್ಚರ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ. ಹೀಗಿದೆ ಅವರ ಮಾತು. "ಎಲ್ಲರ ಲೈಫ್‌ನಲ್ಲೂ ಲವ್ ಅನ್ನೋದು ಇರುತ್ತೆ. ಕಾಲೇಜ್‌ನಲ್ಲಿ ಯಾವುದೇ ಕಾರಣಕ್ಕೂ ಲವ್ ಬೇಡ ಅಂದಿದ್ದಳು ಅಮ್ಮ. ಅದು ನನ್ನ ತಲೆಯಲ್ಲಿತ್ತು. ಕಾಲೇಜು ಮುಗಿದ ಮೇಲೆ ಒಬ್ಬ ವ್ಯಕ್ತಿಯ ಪರಿಚಯ ಆಗುತ್ತೆ. ಅವರೂ ಸಹ ಇಂಡಸ್ಟ್ರಿಯವರೇ. ಒಂದೋ ಎರಡು ಸಿನಿಮಾ ಮಾಡಿದ್ದಾರೆ. ಈಗ ಅವರು ಇಂಡಸ್ಟ್ರಿಯಲ್ಲಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆ ಟೈಮ್‌ನಲ್ಲಿ ನಾನೂ ಸ್ಟ್ರಗಲ್ ಮಾಡ್ತಿದ್ದೆ. ಅವರೂ ಹಾಗೇ ಇದ್ದರು. ಇಬ್ಬರದ್ದು ಚೆನ್ನಾಗಿ ಹೋಗುತ್ತಿತ್ತು. ಕಂಫರ್ಟ್‌ಬಲ್ ಆಗಿದ್ದರು. ಆದರೆ, ಅದೇ ವ್ಯಕ್ತಿ ನಮ್ಮ ಕಂಫರ್ಟ್ ಝೋನ್‌ನಲ್ಲಿ ಇಲ್ಲದೇ ಇದ್ದಾಗ ನೋವಾಗುತ್ತೆ"
ಆತನ ಅನುಮಾನವೇ ಲವ್ ಬ್ರೇಕ್‌ಗೆ ಕಾರಣ..
"ಪ್ರೀತಿ ಅಂದ ಮೇಲೆ ಅಲ್ಲಿ ಪೊಸೆಸಿವ್ ಇದ್ದೇ ಇರುತ್ತೆ. ಅದೂ ಅವರಲ್ಲೂ ಇತ್ತು. ದಿನ ಕಳೆದಂತೆ ಒಂದಷ್ಟು ನಿರ್ಬಂಧಗಳನ್ನು ಹೇರಲು ಶುರು ಮಾಡಿದ್ರು. ಅದು ನನ್ನ ಕೆರಿಯರ್‌ಗೂ ಸಮಸ್ಯೆ ಆಯ್ತು. ನಾನು ನನ್ನ ವೃತ್ತಿಗೆ ಯಾವತ್ತೂ ಮೋಸ ಮಾಡಲ್ಲ. ಕೆರಿಯರ್‌ಗಾಗಿ ನಾನು ಶ್ರಮ ಹಾಕ್ತಿನಿ. ಅಪ್ಪ ಅಮ್ಮನ ಎದುರು ಹಾಕಿಕೊಂಡು ನಾನು ಸಿನಿಮಾ ಕ್ಷೇತ್ರಕ್ಕೆ ಬಂದರೆ, ಇನ್ಮೇಲೆ ನೀವು ಸಿನಿಮಾದಲ್ಲಿ ನಟಿಸೋದು ಬೇಡ ಅಂದ್ರು. ಸರಿ ಎಂದು ಅವರ ಮಾತಂತೆ ಸಿನಿಮಾ ಬಿಟ್ಟು ಸೀರಿಯಲ್ ಶುರು ಮಾಡಿದೆ. ಒಂದಾದ ಮೇಲೊಂದು ಅವಕಾಶಗಳು ಸಿಕ್ಕವು. ಅಲ್ಲಿ ಚೆನ್ನಾಗಿ ಹೋಗ್ತಿದೆ ಎನ್ನುತ್ತಿರುವಾಗ, ನಾವು ಒಳ್ಳೆ ಮನೆತನಕ್ಕೆ ಸೇರಿದವರು, ಹೀಗೆ ನೀವು ಸೀರಿಯಲ್ ಮಾಡಿದ್ರೆ ಸರಿ ಅನಿಸಲ್ಲ ಅನ್ನೋ ಮಾತುಗಳು ಆ ವ್ಯಕ್ತಿಯಿಂದ ಬಂದವು"
"ಆಗ ನನಗೆ ನೀವೇ ಇಂಪಾರ್ಟೆಂಟ್ ಅಂತ ಹೇಳಿ, ಸೀರಿಯಲ್‌ನಲ್ಲಿ ಅವಕಾಶಗಳಿದ್ದರೂ ಅವನ್ನೂ ಬಿಟ್ಟೆ. ಸೀರಿಯಲ್ ಬಿಟ್ಟ ಮೇಲೂ ಒಂದೇ ಚಾನೆಲ್‌ನಿಂದ ಸೀರಿಯಲ್ ಅವಕಾಶಗಳು ಬಂದವು. ಅದಕ್ಕೂ ಮೊದಲು ನಾನು, ಯಾರಾದ್ರೂ ಕಾಲ್ ಮಾಡಿ ಅವಕಾಶ ಕೊಡಲಿ ಎಂದು ಕಾಯುತ್ತಿದ್ದೆ. ಆದರೆ, ಆಮೇಲೆ ಸಾಕಷ್ಟು ಕಾಲ್‌ಗಳು ಬರಲು ಶುರುವಾದವು. ಆವತ್ತು ಮೊದಲ ಸಲ ನಾನು, ಇಲ್ಲ ನಾನು ಸೀರಿಯಲ್‌ಗಳನ್ನು ಬಿಟ್ಟಿದ್ದೇನೆ ಎಂದು ಹೇಳಿದೆ. ಎಂಟತ್ತು ಆಫರ್ ರಿಜೆಕ್ಟ್ ಮಾಡಿದೆ. ಇದಕ್ಕಾಗಿಯೇ ಇಷ್ಟು ಕಾಯುತ್ತಿದ್ದೆ. ಈಗ ಇದನ್ನೇ ಬಿಡ್ತಿದ್ದೀನಲ್ಲ ಎಂದು ಬೇಸರ ಆಗಿದ್ದೂ ಇದೆ. ಕೊನೆಗೆ ಅವನೇ ಇಂಪಾರ್ಟೆಂಟ್ ಅಲ್ವಾ? ಅಂತ ನನಗೆ ನಾನೇ ಪ್ರಶ್ನೆ ಹಾಕಿಕೊಂಡೆ"
ಪೋನ್ ಚೆಕ್ ಮಾಡೋದು ನಡೀತಿತ್ತು..
"ಸಿನಿಮಾ ಇಂಡಸ್ಟ್ರಿ ಬಿಟ್ಟು ಕಂಪನಿಗೂ ಹೋಗಿ ಏಳೆಂಟು ತಿಂಗಳು ಕೆಲಸ ಮಾಡಿದೆ. ಆದರೆ ನನಗೆ ಅಲ್ಲಿ ಇರಲು ಆಗಲಿಲ್ಲ. ಆ ಸಮಯಕ್ಕೆ ನನಗೆ ಟೈಫಡ್ ಆಯ್ತು. ಅದೇ ನೆಪದಲ್ಲಿ ಆ ಕೆಲಸವನ್ನೂ ಬಿಟ್ಟೆ. ಆದರೆ ನನ್ನ ಗಮನ ಮಾತ್ರ ಬಣ್ಣದ ಲೋಕದ ಮೇಲೆಯೇ ಇತ್ತು. ಹೇಗೋ ಹೇಳಿ ನನ್ನ ಬಾಯ್‌ಫ್ರೆಂಡ್‌ಗೆ ಮತ್ತೆ ಮನದಟ್ಟು ಮಾಡಿದೆ. ಸೀರಿಯಲ್‌ನಲ್ಲಿಯೇ ಮಾಡ್ತಿನಿ ಎಂದೆ. ಓಕೆ ಅನ್ನೋ ಮಾತೂ ಬಂತು. "ಪ್ರೀತಿ ಎಂದರೇನು" ಸೀರಿಯಲ್ ಮೂಲಕ ಕಂಬ್ಯಾಕ್ ಮಾಡಿದೆ. ಅಲ್ಲಿ ಅತ್ತಿಗೆ ಪಾತ್ರ ಮಾಡಿದೆ. ಹೀಗೆ ಸಾಗುತ್ತಿದ್ದಾಗಲೇ, ಸೆಟ್‌ನಲ್ಲಿ ಅವರಿಗೆ ಅಣ್ಣ ಅಂತ ಕರೀ, ಇವರ ಜತೆ ಮಾತನಾಡೋದು ಏನು? ಲೇಟ್ ಯಾಕೆ? ಫೋನ್ ಚೆಕ್ ಮಾಡೋದು.. ಇವೆಲ್ಲವೂ ನಡೆಯಲು ಶುರುವಾದವು"
ಸಾಕು ನಿನ್ನ ಸಹವಾಸ ಎಂದು ಬ್ರೇಕಪ್ ಮಾಡ್ಕೊಂಡೆ...
"ಹೀಗೆ ಮೂರು ನಾಲ್ಕು ವರ್ಷ ಕೆಲಸ ಮಾಡಿದ ಮೇಲೂ ಕೋಪ, ಅನುಮಾನ, ಜಗಳ ಮುಂದುವರಿಯುತ್ತಲೇ ಹೋಯ್ತು. ಆ ಸಮಯದಲ್ಲಿ ನನ್ನ ಸಹೋದ್ಯೋಗಿಯೊಬ್ಬನ ಮೇಲೆ ಅನುಮಾನ ಪಟ್ಟರು. ಆ ವ್ಯಕ್ತಿ ಬಹುಅಂಗಾಂಗ ವೈಫಲ್ಯದಿಂದ ಹಾಸಿಗೆ ಹಿಡಿದರು. ಕೋಮಾಕ್ಕೂ ಹೋದರು. ಅವರನ್ನು ಆ ಸಮಯದಲ್ಲಿ ನೋಡಲು ಹೋದರೂ ಜಗಳ ಆಗುತ್ತೆ. ಕೊನೆಗೆ ಆ ಹುಡುಗನ ಸಾವಾಗುತ್ತೆ. ಇದೆಲ್ಲವನ್ನು ನೋಡಿ ನಾನೇ ಒಂದು ನಿರ್ಧಾರಕ್ಕೆ ಬಂದೆ. ಇದ್ಯಾಕೋ ಸರಿ ಹೋಗಲ್ಲ. ಮುಂದೆ ಹೋದರೂ ಚೆನ್ನಾಗಿರಲ್ಲ. ಈ ಪ್ರೀತಿ ಬಂಧನ ಆಗೋದು ಬೇಡ ಎಂದು ನಿರ್ಧರಿಸಿದೆ. ಆರು ವರ್ಷದ ಸಂಬಂಧವನ್ನು ಕಡಿದುಕೊಂಡೆ. ಆತ ಕನ್ವಿನ್ಸ್ ಮಾಡಲು ಪ್ರಯತ್ನ ಪಟ್ಟ. ಸಮಯ ಮಿಂಚಿ ಹೋಗಿತ್ತು. ಬ್ರೇಕ್‌ಪ್ ನಂತರ ನನ್ನ ಲೈಫ್ ತುಂಬ ಚೆನ್ನಾಗಿ ಆಯ್ತು" ಎಂದಿದ್ದಾರೆ ತನಿಷಾ.
ವಿಭಾಗ