ದರ್ಶನ್ ನಮ್ಮ ಆಪ್ತರು, ಜೈಲಲ್ಲಿ ಹಣ ಕೊಟ್ಟರೆ ಎಲ್ಲವೂ ಸಿಗುತ್ತದೆ, ಒಬ್ಬ ವ್ಯಕ್ತಿಯನ್ನು ಏಕೆ ಗುರಿ ಮಾಡುವಿರಿ? ಸುಮಲತಾ ಅಂಬರೀಶ್ ಪ್ರಶ್ನೆ
Actor Darshan Case: ಕನ್ನಡ ನಟ ದರ್ಶನ್ ಜೈಲಲ್ಲಿ ನಟೋರಿಯಸ್ ರೌಡಿಗಳ ರಾಜಾತಿಥ್ಯ ಪಡೆಯುತ್ತಿರುವ ಕುರಿತಾದ ಪ್ರಶ್ನೆಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಜೈಲಲ್ಲಿ ಇದೆಲ್ಲ ಮಾಮೂಲು ಎಂದಿದ್ದಾರೆ.
ಬೆಂಗಳೂರು: ಕನ್ನಡ ನಟ ದರ್ಶನ್ ಜೈಲಲ್ಲಿ ನಟೋರಿಯಸ್ ರೌಡಿಗಳ ಜತೆ ಒಂದು ಕೈನಲ್ಲಿ ಸಿಗರೇಟು ಇನ್ನೊಂದು ಕೈಯಲ್ಲಿ ಚಾಯ್ ಹಿಡಿದುಕೊಂಡು ಮಾತನಾಡುತ್ತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ಮಾಧ್ಯಮದ ಪ್ರಶ್ನೆಗಳಿಗೆ ಸಂಸದೆ ಸುಮಲತಾ ಉತ್ತರಿಸಿದ್ದಾರೆ. "ಇದೆಲ್ಲ ಜೈಲಲ್ಲಿ ಸಾಮಾನ್ಯವಾಗಿ ನಡೆಯುವ ಸಂಗತಿ" ಎಂದು ಅವರು ಹೇಳಿದ್ದಾರೆ. "ನಟ ದರ್ಶನ್ ನಮಗೆ ಆಪ್ತರು. ಅವರ ಕುರಿತು ಏನು ಮಾತನಾಡಿದರೂ ವಿವಾದದ ಸುದ್ದಿಯಾಗುತ್ತದೆ. ಆದರೆ, ಜೈಲಿನ ಕುರಿತು ಎಲ್ಲರಿಗೂ ಗೊತ್ತು. ಅಲ್ಲಿ ಈ ರೀತಿ ನಡೆಯುವುದು ಇದೇ ಮೊದಲಲ್ಲ. ಈ ಹಿಂದೆಯೂ ನಡೆಯುತ್ತದೆ. ಅಲ್ಲಿ ಹೀಗೆಲ್ಲ ನಡೆಯುವುದು ಮಾಮೂಲು ಎಂಬಾಂತಾಗಿದೆ" ಎಂದು ಮಾಜಿ ಸಂಸದೆ ಸುಮಲತಾ ಹೇಳಿದ್ದಾರೆ.
"ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ನಡೆಯುತ್ತಿರುವ ಇಂತಹ ಘಟನೆಗಳ ಕುರಿತು ಐಪಿಎಸ್ ಅಧಿಕಾರಿ ರೂಪಾ ಈ ಹಿಂದೆಯೇ ಪ್ರಶ್ನೆ ಮಾಡಿದ್ದರು. ಅವರು ಅಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಬಯಲು ಮಾಡಿದ್ದರು. ಆ ಸಂದರ್ಭದಲ್ಲಿ ಮಾಧ್ಯಮಗಳು ಏಕೆ ಪ್ರಶ್ನಿಸಲಿಲ್ಲ. ಈಗ ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡುವುದು ಏಕೆ" ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಪ್ರಶ್ನಿಸಿದ್ದಾರೆ.
"ಜೈಲಲ್ಲಿ ಒಂದಿಷ್ಟು ಹಣ ಖರ್ಚು ಮಾಡಿದರೆ ಎಲ್ಲವೂ ಸಿಗುತ್ತದೆ. ಇದು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಲ್ಲಿ ಮಾತ್ರವಲ್ಲ. ಎಲ್ಲಾ ಜೈಲಲ್ಲೂ ಇದು ನಡೆಯುತ್ತದೆ. ಅಮೆರಿಕದ ಜೈಲುಗಳಲ್ಲಿ ಡ್ರಗ್ಸ್, ಮೊಬೈಲ್, ಸಿಗರೇಟು ಎಲ್ಲವೂ ಸಿಗುತ್ತದೆ. ಹಾಗಂತ, ಈ ರೀತಿ ನಡೆಯುವುದು ಸರಿ ಎಂದು ಹೇಳುತ್ತಿಲ್ಲ. ಇದು ವ್ಯವಸ್ಥೆಯ ಭ್ರಷ್ಟಾಚಾರ. ಆದರೆ, ಮಾಧ್ಯಮಗಳು ಸದ್ಯ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ ಪ್ರಶ್ನೆ ಮಾಡ್ತಾ ಇದ್ದೀರಿ. ಜೈಲು ವ್ಯವಸ್ಥೆಯನ್ನು ಸಚಿವಾಲಯವು ಸರಿಮಾಡಬೇಕು" ಎಂದು ಸುಮಲತಾ ಪ್ರತಿಕ್ರಿಯೆ ನೀಡಿದರು.
ಇದೇ ಸಂದರ್ಭದಲ್ಲಿ ನಟೋರಿಯಸ್ ರೌಡಿಗಳ ಜತೆ ನಟ ದರ್ಶನ್ ಒಡನಾಟದ ಕುರಿತು ಸುಮಲತಾ ಅವರನ್ನು ಮಾಧ್ಯಮಗಳು ಪ್ರಶ್ನಿಸಿವೆ. "ಜೈಲಲ್ಲಿ ಒಳ್ಳೆಯವರು ಇರುತ್ತಾರ? ಜೈಲಲ್ಲಿ ಸಾಮಾನ್ಯವಾಗಿ ಅಪರಾಧ ಮಾಡಿ ಹೋದವರೇ ಇರುತ್ತಾರೆ. ಜೈಲಲ್ಲಿ ದರ್ಶನ್ ಯಾರ ಜತೆಯೂ ಮಾತನಾಡಬಾರದೇ?" ಎಂದು ಸುಮಲತಾ ಪ್ರಶ್ನಿಸಿದ್ದಾರೆ.
ಜೈಲಿನಲ್ಲಿರುವ ದರ್ಶನ್ ನಟೋರಿಯಸ್ ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಮುಂತಾದವರ ಜತೆ ಕುಳಿತ ಫೋಟೋ ವೈರಲ್ ಆಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ದರ್ಶನ್ ವಿರುದ್ಧ ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಸಂದರ್ಭದಲ್ಲಿ ದರ್ಶನ್‌ಗೆ ವಿಡಿಯೋ ಕಾಲ್ ಮಾಡಿರುವ ವಿಚಾರವೂ ಸಾಕಷ್ಟು ಸದ್ದು ಮಾಡುತ್ತಿದೆ. ದರ್ಶನ್‌ರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲಾಗುವುದೇ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಎದ್ದಿದೆ.
ಜೈಲಿನಲ್ಲಿ ರಾಜಾತಿಥ್ಯ ಪಡೆದ ವಿಚಾರಕ್ಕೆ ಸಂಬಂಧಪಟ್ಟಂತೆ ಜೈಲಿನಲ್ಲಿಯೇ ದರ್ಶನ್ ವಿಚಾರಣೆಯನ್ನು ಪೊಲೀಸರು ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಅನುಮತಿ ಪಡೆಯಲು ಪೊಲೀಸರು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಎಲ್ಲಾದರೂ ವಿಚಾರಣೆಗೆ ದರ್ಶನ್ ಸಹಕಾರ ನೀಡದೆ ಇದ್ದರೆ ತಮ್ಮ ವಶಕ್ಕೆ ಪಡೆಯುವ ಕುರಿತು ಕೂಡ ಆಲೋಚಿಸುತ್ತಿದ್ದಾರೆ ಎನ್ನಲಾಗಿದೆ.