Darshan: ಜೈಲಲ್ಲಿ ದರ್ಶನ್‌ ಡ್ರೆಸ್‌ ಹೇಗಿರಬೇಕು, ವಿಶೇಷ ಆತಿಥ್ಯ ಅವಕಾಶವುಂಟೆ; ಹಿರಿಯ ಅಧಿಕಾರಿಗಳು ಹೇಳೋದೇನು?-bangalore news what is darshan dress code in jail premises special privileges and other facility experts opinion kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Darshan: ಜೈಲಲ್ಲಿ ದರ್ಶನ್‌ ಡ್ರೆಸ್‌ ಹೇಗಿರಬೇಕು, ವಿಶೇಷ ಆತಿಥ್ಯ ಅವಕಾಶವುಂಟೆ; ಹಿರಿಯ ಅಧಿಕಾರಿಗಳು ಹೇಳೋದೇನು?

Darshan: ಜೈಲಲ್ಲಿ ದರ್ಶನ್‌ ಡ್ರೆಸ್‌ ಹೇಗಿರಬೇಕು, ವಿಶೇಷ ಆತಿಥ್ಯ ಅವಕಾಶವುಂಟೆ; ಹಿರಿಯ ಅಧಿಕಾರಿಗಳು ಹೇಳೋದೇನು?

Darshan Dress in Jail ಕೊಲೆ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿರುವ ನಟ ದರ್ಶನ್‌ ಡ್ರೆಸ್‌ ಹೇಗಿರಬೇಕು. ಅವರಿಗೆ ಏನೆಲ್ಲಾ ಸೌಲಭ್ಯಗಳು ಜೈಲಲ್ಲಿ ಸಿಗಲಿವೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ದರ್ಶನ್‌ ತೂಗದೀಪ್‌ ಪ್ರಕರಣದ ಕುರಿತಾದ ಹಲವಾರು ಪ್ರಶ್ನೆಗಳಿಗೆ ಹಿರಿಯ ಅಧಿಕಾರಿಗಳ ಉತ್ತರ ಇಲ್ಲಿದೆ.
ದರ್ಶನ್‌ ತೂಗದೀಪ್‌ ಪ್ರಕರಣದ ಕುರಿತಾದ ಹಲವಾರು ಪ್ರಶ್ನೆಗಳಿಗೆ ಹಿರಿಯ ಅಧಿಕಾರಿಗಳ ಉತ್ತರ ಇಲ್ಲಿದೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ತೂಗುದೀಪ ಅಲ್ಲಿಯೂ ಐಷರಾಮಿಯಾಗಿಯೇ ಇರುವ ಕುರಿತು ಫೋಟೋಗಳು ವೈರಲ್‌ ಆಗಿವೆ. ಇದರ ನಡುವೆಯೇ ಜೈಲಿನಲ್ಲಿ ಇರುವ ವಿಚಾರಣಾಧೀನ ಕೈದಿ ಹಾಗೂ ಸಾಮಾನ್ಯ ಕೈದಿ ಹೇಗಿರುತ್ತದೆ. ಅವರ ಜೀವನ ಕ್ರಮ ಹೇಗಿರಲಿದೆ ಎನ್ನುವ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಜೈಲಿನಲ್ಲಿ ವಿಚಾರಣೆ ಹಂತದಲ್ಲಿರುವ ಕೈದಿಗಳ ಪಟ್ಟಿಯಲ್ಲಿರುವ ದರ್ಶನ್‌ ಸಹಿತ ಯಾವುದೇ ಕೈದಿಗೆ ನಿಗದಿತ ಡ್ರೆಸ್‌ ಕೋಡ್‌ ಇರುವುದಿಲ್ಲ. ಆದರೆ ಐಷಾರಾಮಿ ವ್ಯವಸ್ಥೆಗೆ ಯಾರಿಗೂ ಅವಕಾಶ ಇರುವುದಿಲ್ಲ. ನಿಗದಿತ ಸ್ಥಳಗಳೊಳಗೆ ಇರಬೇಕು ಎನ್ನುವ ಕಟ್ಟುನಿಟ್ಟಿನ ಕ್ರಮ ಅನುಸರಿಸಲೇಬೇಕು.ಸಿಗರೇಟು. ಗುಟ್ಕಾ ಸಂಪೂರ್ಣ ನಿಷಿದ್ಧವೇ. ಹೀಗಿದ್ದರೂ ಅದು ಕೈದಿಗಳಿಗೆ ಹೇಗೆ ಸಿಗುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಈ ಕುರಿತಂತೆ ಪೊಲೀಸ್‌ ಇಲಾಖೆಯಲ್ಲಿ ಮೂರು ದಶಕಕ್ಕೂ ಹೆಚ್ಚು ಕೆಲಸ ಮಾಡಿ ಅನುಭವವಿವರು, ಇಂತಹ ಕೊಲೆ ಪ್ರಕರಣಗಳನ್ನು ಬೇಧಿಸಿ ಸೂಕ್ತ ಸಾಕ್ಷ್ಯಗಳ ಮೂಲಕ ಕೊಲೆ ಆರೋಪಿಗಳಿಗೆ ಸೂಕ್ತ ಶಿಕ್ಷೆ ಆಗುವಂತೆ ನೋಡಿಕೊಂಡ ಬಸವರಾಜ ಮಾಲಗತ್ತಿ ಅವರು ಇಲ್ಲಿ ಮಾತನಾಡಿದ್ದಾರೆ. ಇತರೆ ಅಧಿಕಾರಿಗಳೂ ಎಚ್‌ಟಿ ಕನ್ನಡದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ವಿಚಾರಣಾಧೀನ ಕೈದಿಗಳಿಗೂ ಸಾಮಾನ್ಯ ಕೈದಿಗಳಿಗೂ ಏನು ವ್ಯತ್ಯಾಸ?

ಹಿಂದೆಯೂ ಇಂತಹ ಹಲವು ಕೊಲೆ ಪ್ರಕರಣಗಳು ಆಗಿವೆ. ದರ್ಶನ್‌ ಪ್ರಕರಣ ನಿಜಕ್ಕೂ ಗಂಭೀರವಾದದ್ದೇ. ಕೊಲೆ ಮಾಡಿದ ರೀತಿ, ನಡೆದುಕೊಂಡ ರೀತಿಯೂ ಮುಖ್ಯವಾಗುತ್ತದೆ. ಈಗಾಗಲೇ ದರ್ಶನ್‌ ಜೈಲು ಸೇರಿದ್ದಾರೆ. ಈಗ ಅವರು ವಿಚಾರಣಾಧೀನ ಕೈದಿ. ಇನ್ನೂ ಅಪರಾಧ ಸಾಬೀತಾಗಿ ಶಿಕ್ಷೆ ಪ್ರಕಟವಾದರೆ ಅವರು ಘೋಷಿತ ಕೈದಿಯಾಗಲಿದ್ದಾರೆ. ಸಾಮಾನ್ಯ ಕೈದಿಗೆ ಜೈಲಿನ ಬಿಳಿ ಬಣ್ಣದ ಅಂಗಿ, ಪ್ಯಾಂಟ್‌ ಇಲ್ಲವೇ ಚಡ್ಡಿ. ಟೋಪಿಯಂತಹ ಡ್ರೆಸ್‌ ಕೋಡ್‌ ಇರುತ್ತದೆ. ಆತ ಅದನ್ನು ಕಡ್ಡಾಯವಾಗಿ ಧರಿಸಲೇಬೇಕು. ಆದರೆ ವಿಚಾರಣಾಧೀನ ಕೈದಿಗೆ ನಿಗದಿತ ಡ್ರೆಸ್‌ ಇರೋಲ್ಲ. ಮನೆಯವರು ತಂದುಕೊಟ್ಟ ಡ್ರೆಸ್‌ ಬಳಸಹುದು.

ವಿಚಾರಣಾಧೀನ ಕೈದಿಗಳಿಗೆ ಏನೆಲ್ಲಾ ಸವಲತ್ತು ಸಿಗುತ್ತದೆ?

ವಿಚಾರಣಾಧೀನ ಕೈದಿಗೆ ಸಾಮಾನ್ಯ ಕೊಠಡಿ ನೀಡಲಾಗುತ್ತದೆ. ಅಲ್ಲೇನು ವಿಐಪಿ ರೀತಿಯ ವ್ಯವಸ್ಥೆ ಇರೋಲ್ಲ. ಇರುವುದರಲ್ಲಿಯೇ ರಕ್ಷಣೆ ಕಾರಣಕ್ಕೆ ಕೆಲ ಪ್ರಮುಖರಿಗೆ ಪ್ರತ್ಯೇಕ ಕೊಠಡಿ ಇದ್ದರೂ ಊಟ, ಉಪಚಾರ, ದಿನಚರಿ ಎಲ್ಲವೂ ಎಲ್ಲರಂತೆಯೇ ಇರಲಿದೆ. ಅನಾರೋಗ್ಯಪೀಡಿತರಾದರೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಕೋರ್ಟ್‌ ಮಾನ್ಯ ಮಾಡಿದರೆ ಮನೆ ಊಟ ನಿಯಮಿತವಾಗಿ ಕೊಡಬಹುದು. ಕೆಲವೊಮ್ಮೆ ಪರಿಚಯಸ್ಥರು, ಮನೆಯವರು ಊಟ ತಂದು ಕೊಡಲು ಅವಕಾಶವಿದ್ದು. ಇದಕ್ಕೆಲ್ಲಾ ಪೂರ್ವಾನುಮತಿ ಕಡ್ಡಾಯ.

ವಿಚಾರಣಾಧೀನ ಕೈದಿಗಳಿಗೆ ಉಡುಪಿನ ನಿಯಮಗಳು ಏನು? ವೈರಲ್‌ ಆದ ಚಿತ್ರದಲ್ಲಿ ದರ್ಶನ್‌ ಮತ್ತು ಇತರರು ಕಲರ್‌ ಕಲರ್‌ ಬಟ್ಟೆಯಲ್ಲಿದ್ದರು ಎನ್ನುವ ಪ್ರಶ್ನೆ ಎಲ್ಲೆಡೆ ಇದೆ. ವಿಚಾರಣಾಧೀನ ಕೈದಿಗಳಿಗೆ ಯಾವುದೇ ನಿಗದಿತ ಉಡುಪು ಇರುವುದಿಲ್ಲ. ಅವರ ಶಿಕ್ಷೆ ಪ್ರಕಟವಾಗದ ಕಾರಣಕ್ಕೆ ಮನೆಯವರು ತಂದು ಕೊಡುವ ಡ್ರೆಸ್‌ ಬಳಸಬಹುದು. ಹಾಗೆಂದು ಹೇಗೆ ಬೇಕು ಹಾಗೆ ಡ್ರೆಸ್‌ ಹಾಕಲು ಆಗುವುದಿಲ್ಲ. ದರ್ಶನ್‌ ಕೂಡ ಟೀ ಶರ್ಟ್‌ ಹಾಗೂ ನೈಟ್‌ ಪ್ಯಾಂಟ್‌ ಧರಿಸಿದ್ದರು.

ಕೈದಿಗಳಿಗೆ ಗ್ಲಾಸ್‌, ಬಟ್ಟಲು ಇತ್ಯಾದಿಗಳಿಗೆ ಸಂಬಂಧಪಟ್ಟ ನಿಯಮಗಳಿವೆಯೇ, ದರ್ಶನ್‌ ಮತ್ತು ಇತರರ ಕೈಯಲ್ಲಿ ಚಂದದ ಕಪ್‌ ಕೂಡ ಇದೆ.

ಆ ರೀತಿ ಏನು ಇಲ್ಲ. ಅಲ್ಲಿ ನೀಡುವ ತಟ್ಟೆ, ಲೋಟವನ್ನೇ ಬಳಸಬೇಕು. ಯಾರಾದರೂ ಊಟ ತಂದಾಗ ಈ ರೀತಿಯ ಬಟ್ಟಲು ತಂದಿರಬಹುದು. ಅದನ್ನು ಬಳಸಿರಬಹುದಷ್ಟೇ. ಆ ರೀತಿಯ ವಸ್ತುಗಳ ನಿತ್ಯ ಬಳಕೆಗೆ ಅವಕಾಶ ಇರುವುದಿಲ್ಲ. ಇದನ್ನೆಲ್ಲಾ ಜೈಲಿನ ಅಧಿಕಾರಿಗಳು ನಿಯಂತ್ರಿಸುತ್ತಾರೆ.

ಸಿಗರೇಟು ಸೇದಲು ಅವಕಾಶವಿದೆಯೇ? ಅಲ್ಲಿ ನಡೆಯುತ್ತಿರುವ ತಂಬಾಕು, ಗುಟ್ಕಾ ವ್ಯವಹಾರದ ಕುರಿತು ಏನು ಹೇಳುವಿರಿ

ಆಗಾಗ ಪೊಲೀಸ್‌ ಇಲಾಖೆ ಜೈಲುಗಳಿಗೆ ದಾಳಿ ಮಾಡುವುದು ಸಹಜ. ಪ್ರಮುಖ ಜೈಲುಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಜೈಲುಗಳಲ್ಲಿ ಗಾಂಜಾ, ಸಿಗರೇಟ್‌ ವಸ್ತುಗಳ ಬಳಕೆಗೆ ಮಾಡುತ್ತಿದ್ದ ಮಾಹಿತಿ ಇದ್ದಾಗ ದಾಳಿ ಮಾಡಿ ವಶಪಡಿಸಿಕೊಂಡು ಉದಾಹರಣೆ ಇವೆ. ಯಾವುದಾದರೂ ರೂಪದಲ್ಲಿ ಇಂತಹ ವಸ್ತುಗಳು ಒಳ ಪ್ರವೇಶಿಸುತ್ತವೆ. ಇಂತಹ ವಸ್ತುಗಳ ಬಳಕೆಗೆ ಜೈಲಿನಲ್ಲಿ ಅವಕಾಶವೇ ಇಲ್ಲ. ತಂದುಕೊಟ್ಟವರ ವಿರುದ್ದ ಕ್ರಮಗಳು ಆಗುವುದು ಖಚಿತ.

ಜೈಲಿನಲ್ಲಿರುವ ಕೈದಿಗಳಿಗೆ ಹೊರಗಿನಿಂದ ವಸ್ತುಗಳನ್ನು ತಲುಪಿಸಲು ಇರುವ ನೇರ ಹಾದಿ, ಬೇರೆ ಹಾದಿಗಳು ಏನಿವೆ

ಮಾಧ್ಯಮಗಳಲ್ಲಿ ಗಮನಿಸಿದಂತೆ ಹಣ್ಣು, ತರಕಾರಿ ಇಲ್ಲವೇ ಕೈದಿಗಳಿಗೆ ಏನಾದರೂ ವಸ್ತು ಕೊಡುವಾಗ ಸಾಗಿಸುವ ಸಾಧ್ಯತೆ ಅಧಿಕ. ಜೈಲಿನ ಹೊರ ಭಾಗದಿಂದ ಇವುಗಳನ್ನು ಎಸೆಯಲಾಗುತ್ತದೆ ಎನ್ನುವ ದೂರುಗಳೂ ಇವೆ. ಮೊಬೈಲ್‌ ಕೂಡ ಕುಟುಂಬದ ಸಂಪರ್ಕ ಸಹಿತ ಇತರೆ ಕಾರಣಗಳಿಂದ ಅವರಿಗೆ ಸಿಗುವಾಗ ಇವುಗಳ ಕುರಿತೂ ಮಾಹಿತಿ ವಿನಿಯೋಗ ಆಗಿ ವಸ್ತು ತಲುಪಿಸುವ ನೆಪದಲ್ಲಿ ಮಾದಕ ವಸ್ತುಗಳು, ಸಿಗರೇಟ್‌, ಗುಟ್ಕಾ ಕೂಡ ಒಳ ಹೋಗಬಹುದು.

ನಿಮ್ಮ ಪ್ರಕಾರ ದರ್ಶನ್‌ ಪ್ರಕರಣ ಮುಂದೆ ಏನಾಗಬಹುದು ಎನ್ನುವ ಪ್ರಶ್ನೆಗೆ ಹಿರಿಯ ಅಧಿಕಾರಿಯೊಬ್ಬರು ಹೇಳೋದು ಹೀಗೆ.

ಇದು ಕ್ರಿಮಿನಲ್‌ ಪ್ರಕರಣ. ಹಿಂಸಾತ್ಮಕವಾಗಿ ಕೊಂದಿರುವುದರಿಂದ ಇದನ್ನು ವಿವಿಧ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಅದಕ್ಕೆ ಪೂರಕ ಸಾಕ್ಷಿಗಳನ್ನು ಒದಗಿಸಲಾಗುತ್ತದೆ. ಇದು ಜೀವಾವಧಿಗೆ ಒಳಗಾಗುವ ಪ್ರಕರಣ ಅಲ್ಲದೇ ಇದ್ದರೂ ಐದರಿಂದ ಏಳು ವರ್ಷವಂತೂ ಜೈಲು ಶಿಕ್ಷೆಗೆ ಪರಿಗಣನೆ ಆಗಬಹುದಾದ ಪ್ರಕರಣ. ಕಠಿಣ ಶಿಕ್ಷೆಯಂತೂ ದರ್ಶನ್‌ ಹಾಗೂ ಅವರ ಸಂಗಡಿಗರಿಗೆ ಆಗಲಿದೆ.