Max Movie: ‘ಮ್ಯಾಕ್ಸ್’ ಎಫೆಕ್ಟ್; ಸ್ಯಾಂಡಲ್‌ ವುಡ್‌ನ 6 ಚಿತ್ರಗಳ ಬಿಡುಗಡೆ ಮುಂದಕ್ಕೆ, ಯಾವ್ಯಾವ ಚಿತ್ರಗಳಿವೆ ಪಟ್ಟಿಯಲ್ಲಿ
ಕನ್ನಡ ಸುದ್ದಿ  /  ಮನರಂಜನೆ  /  Max Movie: ‘ಮ್ಯಾಕ್ಸ್’ ಎಫೆಕ್ಟ್; ಸ್ಯಾಂಡಲ್‌ ವುಡ್‌ನ 6 ಚಿತ್ರಗಳ ಬಿಡುಗಡೆ ಮುಂದಕ್ಕೆ, ಯಾವ್ಯಾವ ಚಿತ್ರಗಳಿವೆ ಪಟ್ಟಿಯಲ್ಲಿ

Max Movie: ‘ಮ್ಯಾಕ್ಸ್’ ಎಫೆಕ್ಟ್; ಸ್ಯಾಂಡಲ್‌ ವುಡ್‌ನ 6 ಚಿತ್ರಗಳ ಬಿಡುಗಡೆ ಮುಂದಕ್ಕೆ, ಯಾವ್ಯಾವ ಚಿತ್ರಗಳಿವೆ ಪಟ್ಟಿಯಲ್ಲಿ

Max Movie: ಕನ್ನಡ ಚಿತ್ರರಂಗದಲ್ಲಿ ಸಿನೆಮಾಗಳ ಬಿಡುಗಡೆ ದಿನಾಂಕದಲ್ಲಿ ವ್ಯತ್ಯಾಸಗಳು ಆಗಿವೆ. ಭಾರೀ ಬಜೆಟ್‌ನ ಮ್ಯಾಕ್ಸ್‌ ಹಾಗೂ UI ಚಿತ್ರಗಳ ಬಿಡುಗಡೆ ಭರಾಟೆಯಲ್ಲಿ ಆರು ಕನ್ನಡ ಚಿತ್ರಗಳು ತಮ್ಮ ಬಿಡುಗಡೆ ದಿನಾಂಕ ಬದಲಿಸಲಿವೆ.ವರದಿ: ಚೇತನ್‌ ನಾಡಿಗೇರ್‌. ಬೆಂಗಳೂರು

ಬಹುನಿರೀಕ್ಷಿತ ಮ್ಯಾಕ್ಸ್‌ ಚಿತ್ರದ ಬಿಡುಗಡೆ ಪ್ರಕಟಣೆ ಹೊರ ಬೀಳುತ್ತಿದ್ದಂತೆ ಕನ್ನಡದ ಆರು ಚಿತ್ರಗಳ ಬಿಡುಗಡೆ ಮುಂದೆ ಹೋಗಿದೆ.
ಬಹುನಿರೀಕ್ಷಿತ ಮ್ಯಾಕ್ಸ್‌ ಚಿತ್ರದ ಬಿಡುಗಡೆ ಪ್ರಕಟಣೆ ಹೊರ ಬೀಳುತ್ತಿದ್ದಂತೆ ಕನ್ನಡದ ಆರು ಚಿತ್ರಗಳ ಬಿಡುಗಡೆ ಮುಂದೆ ಹೋಗಿದೆ.

Max Movie: ಐದು ದಿನಗಳ ಅಂತರದಲ್ಲಿ ‘UI’ ಮತ್ತು ‘ಮ್ಯಾಕ್ಸ್’ ಚಿತ್ರಗಳು ಬಿಡುಗಡೆ ಆಗುತ್ತಿರುವುದರಿಂದ ತಮ್ಮ ನಡುವೆ ಯಾವುದೇ ಕ್ಲಾಶ್‍ ಇಲ್ಲ, ಎಂದು ಉಪೇಂದ್ರ ಮತ್ತು ಸುದೀಪ್‍ ಇಬ್ಬರೂ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು. ಇದರಿಂದ ಉಪೇಂದ್ರ ಅವರ ಸಿನಿಮಾಗೆ ಯಾವುದೇ ಸಮಸ್ಯೆ ಆಗುವುದಿಲ್ಲ, ಆ ಚಿತ್ರದ ಬಗ್ಗೆ ನಾವು ಹೆದರಬೇಕು ಎಂದು ಸುದೀಪ್‍ ಹೇಳಿದ್ದರು. ಈಗ ‘ಮ್ಯಾಕ್ಸ್’ ಚಿತ್ರದ ಬಿಡುಗಡೆಗೆ ಹೆದರಿ ಆರು ಕನ್ನಡ ಚಿತ್ರಗಳು ಮುಂದೂಡಲ್ಪಟ್ಟಿವೆ.

ಹೌದು, ಡಿ. 27ರಂದು ಬಿಡುಗಡೆ ಮಾಡಬೇಕು ಎಂದು ಕೆಲವು ಚಿತ್ರತಂಡಗಳು ತಯಾರಿ ನಡೆಸಿದ್ದವು. ಆದರೆ, ಈಗಿನ ಬೆಳವಣಿಗೆಯಿಂದ ರಿಸ್ಕ್ ಬೇಡ ಎಂಬ ಕಾರಣಕ್ಕೆ, ಆ ಚಿತ್ರಗಳು ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿವೆ.

ಡಿ. 27ರಂದು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುತ್ತಿರುವ ಕುರಿತು ರಾಜವರ್ಧನ್‍ ಅಭಿನಯದ ‘ಗಜರಾಮ, ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’, ಜೆಪಿ ಅಭಿನಯದ ‘ಭಗೀರಥ’, ಗುರುನಂದನ್ ಅಭಿನಯದ ‘ರಾಜು ಜೇಮ್ಸ್ ಬಾಂಡ್‍’ ಚಿತ್ರತಂಡಗಳು ಒಂದೆರಡು ತಿಂಗಳುಗಳ ಹಿಂದೆ ಅಧಿಕೃತವಾಗಿ ಘೋಷಿಸಿದ್ದವು. ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗುವುದರ ಜೊತೆಗೆ, ಆ ದಿನದಂದು ಚಿತ್ರ ಬಿಡುಗಡೆ ಮಾಡುವುದಕ್ಕೆ ಆ ತಂಡಗಳು ಸಿದ್ಧತೆ ನಡೆಸಿದ್ದವು. ಇದಲ್ಲದೆ, ಶರಣ್‍ ಅಭಿನಯದ ‘ಛೂ ಮಂತರ್’ ಮತ್ತು ಪ್ರಜ್ವಲ್ ಅಭಿನಯದ ‘ರಾಕ್ಷಸ’ ಚಿತ್ರಗಳು ಸಹ ಅಂದು ಚಿತ್ರ ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿದ್ದವು. ಆದರೆ, ಬಿಡುಗಡೆ ದಿನಾಂಕವನ್ನು ಘೋಷಿಸಿರಲಿಲ್ಲ. ಹೀಗಿರುವಾಗಲೇ, ‘ಮ್ಯಾಕ್ಸ್’ ಬಿಡುಗಡೆ ಘೋಷಣೆಯಾಗಿದೆ.

ಹಾಗೆ ನೋಡಿದರೆ, ಕ್ರಿಸ್ಮಸ್‍ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಮೊದಲು ಘೋಷಿಸಿದ್ದು ದರ್ಶನ್ ಅಭಿನಯದ ‘ದಿ ಡೆವಿಲ್‍’ ಚಿತ್ರತಂಡ. ಹಾಗೆಯೇ, ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್‍’ ಚಿತ್ರವನ್ನೂ ಡಿಸೆಂಬರ್‍ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಪ್ರೇಮ್‍ ಹೇಳಿಕೊಂಡಿದ್ದರು. ಆದರೆ, ಎರಡೂ ಚಿತ್ರಗಳ ಚಿತ್ರೀಕರಣ ಅಂದುಕೊಂಡಂತೆ ಮುಗಿಯದ ಕಾರಣ, ಎರಡೂ ಚಿತ್ರಗಳು ಮುಂದಕ್ಕೆ ಹೋಗಿವೆ. ಡಿಸೆಂಬರ್ ಅಂತ್ಯದಲ್ಲಿ ಖಾಲಿ ಇದ್ದ ಕಾರಣ, ಡಿ. 20 ‘UI’ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತು.

‘UI’ ಚಿತ್ರ ಡಿ. 20ರಂದು ಬಿಡುಗಡೆಯಾಗುತ್ತಿರುವುದರಿಂದ, ಡಿ. 27ರಂದು ಖಾಲಿ ಇದೆ ಎಂಬ ಕಾರಣಕ್ಕೆ ‘ಗಜರಾಮ’, ‘ರುದ್ರ ಗರುಡ ಪುರಾಣ’, ‘ಭಗೀರಥ’, ‘ರಾಜು ಜೇಮ್ಸ್ ಬಾಂಡ್‍’ ಚಿತ್ರಗಳನ್ನು ಆ ದಿನ ಬಿಡುಗಡೆ ಮಾಡಲು ಆ ಚಿತ್ರತಂಡಗಳು ಘೋಷಿಸಿದವು. ಕೊನೆಗೆ ಡಿ. 25ಕ್ಕೆ ‘ಮ್ಯಾಕ್ಸ್’ ಘೋಷಣೆ ಮಾಡುವ ಮೂಲಕ ಎಲ್ಲರ ಯೋಚನೆಗಳು ಸಹ ತಲೆ ಕೆಳಗಾಗಿವೆ. ಡಿ. 20ರಂದು ‘UI’ ಬರುವುದರಿಂದ, ಹಲವು ಪ್ರಮುಖ ಚಿತ್ರಮಂದಿರಗಳು ಅದರ ಪಾಲಾಗಿರುತ್ತವೆ. ಇನ್ನು, ಡಿ. 25ಕ್ಕೆ ‘ಮ್ಯಾಕ್ಸ್’ ಬಂದರೆ ಅದಕ್ಕೂ ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳು ಸಿಗುತ್ತಿವೆ. ಹೀಗಿರುವಾಗ, ತಮಗೆ ಚಿತ್ರಮಂದಿರಗಳ ಸಮಸ್ಯೆ ಎದುರಾಗುತ್ತವೆ ಎಂಬ ಕಾರಣಕ್ಕೆ, ಆರೂ ಚಿತ್ರಗಳು ಮುಂದಕ್ಕೆ ಹೋಗಿವೆ.

ಈ ಪೈಕಿ, ‘ಛೂ ಮಂತರ್’ ಚಿತ್ರವನ್ನು ಜನವರಿ 10ಕ್ಕೆ ಮುಂದೂಡಲಾಗಿದೆ. ‘ರುದ್ರ ಗರುಡ ಪುರಾಣ’ ಚಿತ್ರವನ್ನು ಜನವರಿ 24ಕ್ಕೆ ಮುಂದೂಡಲಾಗಿದೆ. ಮಿಕ್ಕ ಚಿತ್ರಗಳ ಹೊಸ ಬಿಡುಗಡೆ ದಿನಾಂಕಗಳು ಇನ್ನಷ್ಟೇ ಘೋಷಣೆಯಾಗಬೇಕಿವೆ.

ವರದಿ: ಚೇತನ್‌ ನಾಡಿಗೇರ್‌, ಬೆಂಗಳೂರು

Whats_app_banner