Darshan Puneeth Fan war: ಹೊಸಪೇಟೆಯಲ್ಲಿ ದರ್ಶನ್‌ ಮೇಲೆ ಚಪ್ಪಲಿ ಎಸೆತ...ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದ ಅಭಿಮಾನಿಗಳು
ಕನ್ನಡ ಸುದ್ದಿ  /  ಮನರಂಜನೆ  /  Darshan Puneeth Fan War: ಹೊಸಪೇಟೆಯಲ್ಲಿ ದರ್ಶನ್‌ ಮೇಲೆ ಚಪ್ಪಲಿ ಎಸೆತ...ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದ ಅಭಿಮಾನಿಗಳು

Darshan Puneeth Fan war: ಹೊಸಪೇಟೆಯಲ್ಲಿ ದರ್ಶನ್‌ ಮೇಲೆ ಚಪ್ಪಲಿ ಎಸೆತ...ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದ ಅಭಿಮಾನಿಗಳು

ವೇದಿಕೆಯಲ್ಲಿ ದರ್ಶನ್‌, ರಚಿತಾ ರಾಮ್‌ ಹಾಗೂ ಚಿತ್ರತಂಡದ ಅನೇಕ ಸದಸ್ಯರು ಹಾಜರಿದ್ದರು. ನೂಕು ನುಗ್ಗಲನ್ನು ಕಂಟ್ರೋಲ್‌ ಮಾಡಲು ಪೊಲೀಸರು ಕೂಡಾ ವೇದಿಕೆ ಮೇಲೆ ಜಮಾಯಿಸಿದ್ದರು. ಆದರೆ ಯಾರೋ ಕಿಡಿಗೇಡಿ, ವೇದಿಕೆ ಮೇಲಿದ್ದ ದರ್ಶನ್‌ ಮೇಲೆ ಚಪ್ಪಲಿ ಎಸೆದಿದ್ದಾನೆ.

ವೇದಿಕೆಯಲ್ಲಿ ದರ್ಶನ್‌ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ
ವೇದಿಕೆಯಲ್ಲಿ ದರ್ಶನ್‌ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ

ದರ್ಶನ್‌ ಹಾಗೂ ರಚಿತಾ ರಾಮ್‌ ಅಭಿನಯದ 'ಕ್ರಾಂತಿ' ಸಿನಿಮಾ ಮುಂದಿನ ವರ್ಷ ಜನವರಿ 26 ರಂದು ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ. ದರ್ಶನ್‌ , ರಚಿತಾ ರಾಮ್‌ ಹಾಗೂ ಚಿತ್ರತಂಡ ವಿವಿಧ ವಾಹಿನಿಗಳ ಇಂಟರ್‌ವ್ಯೂನಲ್ಲಿ ಭಾಗವಹಿಸುತ್ತಿದ್ದಾರೆ. 'ರಾಬರ್ಟ್‌' ನಂತರ ದರ್ಶನ್‌ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕೂಡಾ ಕಾಯುತ್ತಿದ್ದಾರೆ. ಈ ನಡುವೆ ನಿನ್ನೆ ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದರ್ಶನ್‌ಗೆ ಅವಮಾನ ಮಾಡಲಾಗಿದೆ.

'ಕ್ರಾಂತಿ' ಚಿತ್ರದ ಮೊದಲ ಹಾಡು ಕೆಲವು ದಿನಗಳ ಹಿಂದೆ ತೆರೆ ಕಂಡಿತ್ತು. ಭಾನುವಾರ ಬಳ್ಳಾರಿಯ ಹೊಸಪೇಟೆಯಲ್ಲಿ ಸಿನಿಮಾದ ಎರಡನೇ ಹಾಡು ಬಿಡುಗಡೆ ಮಾಡಲು ಸಿದ್ದತೆ ನಡೆದಿತ್ತು. ಹೊಸಪೇಟೆಯ ಡ್ಯಾಮ್‌ ರಸ್ತೆಯಲ್ಲಿರುವ ವಾಲ್ಮೀಕಿ ಸರ್ಕಲ್‌ನಲ್ಲಿ ಬೊಂಬೆ ಬೊಂಬೆ..ಹಾಡಿನ ಬಿಡುಗಡೆಗೆ ರೆಡಿ ಮಾಡಲಾಗಿತ್ತು. ಆದರೆ ಕಾರ್ಯಕ್ರಮ ಶುರುವಾಗುವ ಮುನ್ನವೇ ಸ್ಥಳದಲ್ಲಿ ದರ್ಶನ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ನಡುವೆ ಜಗಳ ಶುರುವಾಗಿತ್ತು. ವೇದಿಕೆ ಸುತ್ತಮುತ್ತ ಹಾಕಿದ್ದ ಕ್ರಾಂತಿ ಪೋಸ್ಟರ್‌ಗಳನ್ನು ಪುನೀತ್‌ ಅಭಿಮಾನಿಗಳು ಹರಿದುಹಾಕಿದ್ದರು. ಅಲ್ಲಿ ನೆರೆದಿದ್ದ ಅಪ್ಪು ಅಭಿಮಾನಿಗಳು ಅವರ ಕಟೌಟ್‌ ಹಿಡಿದು ಪುನೀತ್‌ಗೆ ಜೈಕಾರ ಹಾಕುತ್ತಿದ್ದರು. ಅದೇ ವೇಳೆ ದರ್ಶನ್‌, ಪುನೀತ್‌ ರಾಜ್‌ಕುಮಾರ್‌ ಅವರ ಪುತ್ಥಳಿಗೆ ಮಾಲಾಪರ್ಣೆ ಮಾಡಿ ನಂತರ ವೇದಿಕೆ ಏರಿದರು.

ವೇದಿಕೆಯಲ್ಲಿ ದರ್ಶನ್‌, ರಚಿತಾ ರಾಮ್‌ ಹಾಗೂ ಚಿತ್ರತಂಡದ ಅನೇಕ ಸದಸ್ಯರು ಹಾಜರಿದ್ದರು. ನೂಕು ನುಗ್ಗಲನ್ನು ಕಂಟ್ರೋಲ್‌ ಮಾಡಲು ಪೊಲೀಸರು ಕೂಡಾ ವೇದಿಕೆ ಮೇಲೆ ಜಮಾಯಿಸಿದ್ದರು. ಆದರೆ ಯಾರೋ ಕಿಡಿಗೇಡಿ, ವೇದಿಕೆ ಮೇಲಿದ್ದ ದರ್ಶನ್‌ ಮೇಲೆ ಚಪ್ಪಲಿ ಎಸೆದಿದ್ದಾನೆ. ತಮ್ಮ ಮೇಲೆ ಚಪ್ಪಲಿ ಬಿದ್ದ ನಂತರವೂ ದರ್ಶನ್‌ ತಾಳ್ಮೆ ಕಳೆದುಕೊಳ್ಳಲಿಲ್ಲ. ಈ ವಿಡಿಯೋ ಈಗ ಬಹಳ ವೈರಲ್‌ ಆಗುತ್ತಿದೆ. ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ದರ್ಶನ್‌ ಅಭಿಮಾನಿಗಳು ಈಗ ಅವರ ಮೇಲೆ ಚಪ್ಪಲಿ ಎಸೆದ ವಿಚಾರದಲ್ಲಿ ಮತ್ತಷ್ಟು ಡಿಸ್ಟರ್ಬ್‌ ಆಗಿದ್ದಾರೆ. ಇದನ್ನು ನಾವು ಎಂದಿಗೂ ಮರೆಯುವುದಿಲ್ಲ. ಖಂಡಿತ ಪ್ರತಿಕಾರ ತೀರಿಸಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಫ್ಯಾನ್ಸ್‌ ವಾರ್‌?

ಕಳೆದ ಕೆಲವು ದಿನಗಳಿಂದ ಪುನೀತ್‌ ಹಾಗೂ ದರ್ಶನ್‌ ಅಭಿಮಾನಿಗಳ ನಡುವೆ ಫ್ಯಾನ್‌ ವಾರ್‌ ತಾರಕಕ್ಕೆ ಏರಿದೆ. 'ಕ್ರಾಂತಿ' ಸಿನಿಮಾಗೆ ಸಂಬಂಧಿಸಿದಂತೆ ಚಾನೆಲ್‌ವೊಂದಕ್ಕೆ ನಟ ದರ್ಶನ್ ಸಂದರ್ಶನ ನೀಡಿದ್ದರು. ಈ ವೇಳೆ ತಮ್ಮ ಅಭಿಮಾನಿಗಳ ಬಗ್ಗೆ ಅವರು ಮಾತನಾಡಿದ್ದರು. ''ಜನರು ನನಗೆ ಸಾಕಷ್ಟು ಪ್ರೀತಿ ನೀಡಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರ ವಿಚಾರದಲ್ಲೇ ನೋಡಬಹುದು. ಅವರು ನಿಧನರಾದ ನಂತರ ಅವರಿಗೆಷ್ಟು ಅಭಿಮಾನಿಗಳು ಇದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ನಾನು ಬದುಕಿರುವಾಗಲೇ ಜನರ ಪ್ರೀತಿ ನೋಡಿದ್ದೇನೆ. ನನಗೆ ಅದು ಸಾಕು'' ಎಂದು ದರ್ಶನ್ ಹೇಳಿದ್ದರು. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪುನೀತ್‌ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ದರ್ಶನ್, ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಆದರೆ ''ದರ್ಶನ್, ಏನೂ ತಪ್ಪು ಮಾಡದೆ ಏಕೆ ಕ್ಷಮೆ ಕೇಳಬೇಕು. ಅವರು ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ ಬಹಳ ಗೌರವ ಇರುವ ಮನುಷ್ಯ. ಪುನೀತ್‌ ನಿಧನರಾದ ನಂತರ ದರ್ಶನ್ ಬಹಳ ನೋವಿನಲ್ಲಿದ್ದರು. 11 ದಿನಗಳ ಕಾಲ ಅವರು ಯಾವ ಚಿತ್ರೀಕರಣದಲ್ಲಿ ಕೂಡಾ ಭಾಗವಹಿಸಿರಲಿಲ್ಲ. ಡಾ. ರಾಜ್‌ಕುಮಾರ್‌ ಬ್ಯಾನರ್‌ನಲ್ಲಿ ದರ್ಶನ್ ಕೆಲಸ ಮಾಡಿದ್ದಾರೆ. ಅಪ್ಪು ಇಲ್ಲದ ನೋವಿಗೆ ದರ್ಶನ್‌ ಹುಟ್ಟುಹಬ್ಬ ಕೂಡಾ ಆಚರಿಸಿಕೊಳ್ಳಲಿಲ್ಲ'' ಅಂತದ್ದರಲ್ಲಿ ಅವರು ಪುನೀತ್‌ ಬಗ್ಗೆ ಎಂದಿಗೂ ತಪ್ಪು ಮಾತನಾಡುವುದಿಲ್ಲ'' ಎಂದು ದರ್ಶನ್ ಅಭಿಮಾನಿಗಳು ವಾದಿಸಿದ್ದರು. ಅಲ್ಲಿಂದ ಶುರುವಾದ ಈ ವಿವಾದ ಈಗ ಇಲ್ಲಿವರೆಗೂ ಬಂದು ನಿಂತಿದೆ. ಭಾನುವಾರ ನಡೆದ ಘಟನೆ ಬಗ್ಗೆ ದರ್ಶನ್‌ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

Whats_app_banner