ಕನ್ನಡ ಸುದ್ದಿ  /  ಮನರಂಜನೆ  /  ಸೀತಾರಾಮ ನಟಿ ವೈಷ್ಣವಿ ಗೌಡಗೆ ಟ್ರಾಫಿಕ್‌ ಫೈನ್‌; ಅಮೃತಧಾರೆ ಜೀವನ್‌ ಸೇರಿದಂತೆ ಹೆಲ್ಮೆಟ್‌ ಧರಿಸದೆ ನಟಿಸಿರೋ ಕಲಾವಿದರನ್ನು ಎಚ್ಚರಿಸಿ

ಸೀತಾರಾಮ ನಟಿ ವೈಷ್ಣವಿ ಗೌಡಗೆ ಟ್ರಾಫಿಕ್‌ ಫೈನ್‌; ಅಮೃತಧಾರೆ ಜೀವನ್‌ ಸೇರಿದಂತೆ ಹೆಲ್ಮೆಟ್‌ ಧರಿಸದೆ ನಟಿಸಿರೋ ಕಲಾವಿದರನ್ನು ಎಚ್ಚರಿಸಿ

ಸೀರಿಯಲ್‌ ದೃಶ್ಯವೊಂದರಲ್ಲಿ ಸ್ಕೂಟರ್‌ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಹೆಲ್ಮೆಟ್‌ ಧರಿಸದೆ ಇರುವ ಕಾರಣಕ್ಕೆ ಸೀತಾರಾಮ ಸೀರಿಯಲ್‌ ನಟಿ ವೈಷ್ಣವಿ ಗೌಡರ ಮೇಲೆ ದಂಡ ವಿಧಿಸಲಾಗಿದೆ. ಇದೇ ರೀತಿ ಇತರೆ ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ದ್ವಿಚಕ್ರವಾಹನ ಸವಾರಿ ಸಂದರ್ಭದಲ್ಲಿ ಹೆಲ್ಮೆಟ್‌ ಧರಿಸದೆ ಶೂಟಿಂಗ್‌ನಲ್ಲಿ ಭಾಗಿಯಾಗುವವರ ವಿರುದ್ಧವೂ ಕ್ರಮ ಜರುಗಿಸಬೇಕಿದೆ.

ಸೀತಾರಾಮ ನಟಿ ವೈಷ್ಣವಿ ಗೌಡರಿಗೆ ಟ್ರಾಫಿಕ್‌ ಫೈನ್‌
ಸೀತಾರಾಮ ನಟಿ ವೈಷ್ಣವಿ ಗೌಡರಿಗೆ ಟ್ರಾಫಿಕ್‌ ಫೈನ್‌

ಬೆಂಗಳೂರು: ಕಿರುತೆರೆ ಧಾರಾವಾಹಿಗಳನ್ನು ಮತ್ತು ಹಿರಿತೆರೆ ಸಿನಿಮಾಗಳನ್ನು, ಒಟಿಟಿ ಸರಣಿಗಳನ್ನು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ವೀಕ್ಷಿಸುತ್ತಾರೆ. ಈ ಸಿನಿಮಾ, ಸೀರಿಯಲ್‌, ಸರಣಿಗಳಲ್ಲಿ ನಟಿಸುವ ಕೆಲವು ಕಲಾವಿದರು ಬೈಕ್‌ ಅಥವಾ ಸ್ಕೂಟರ್‌ ರೈಡ್‌ ಮಾಡುವಾಗ "ತಮ್ಮ ಮುಖ ಕಾಣಲಿ" ಎಂಬ ಉದ್ದೇಶದಿಂದ ಹೆಲ್ಮೆಟ್‌ ಧರಿಸಿರುವುದಿಲ್ಲ. ಇದೇ ರೀತಿ ಕಾರಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಸೀಟ್‌ ಬೆಲ್ಟ್‌ ಧರಿಸುವುದಿಲ್ಲ. ಕೆಲವು ನಟಿಯರು ಮೇಕಪ್‌ ಹಾಳಾಗುತ್ತದೆ ಎಂದು ಹೆಲ್ಮೆಟ್‌ ಧರಿಸುವುದಿಲ್ಲ. ಈ ರೀತಿಯ ಕಂಟೆಂಟ್‌ಗಳನ್ನು ಸಾಕಷ್ಟು ಜನರು ವೀಕ್ಷಿಸುವುದರಿಂದ ವೀಕ್ಷಕರಿಗೆ ತಪ್ಪು ಸಂದೇಶ ರವಾನಿಸಿದಂತೆ ಆಗುತ್ತದೆ. ಇದೇ ಕಾರಣಕ್ಕೆ ಹಲವು ಸೀರಿಯಲ್‌, ಸಿನಿಮಾ ನಟಿ ನಟರ ಮೇಲೆ ಟ್ರಾಫಿಕ್‌ ಪೊಲೀಸರು ಕೇಸ್‌/ಫೈನ್‌ ಹಾಕಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಟಿ ವೈಷ್ಣವಿ ಗೌಡರಿಗೆ ದಂಡ

ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಯಾಗಿರುವ ಸೀತಾ ರಾಮದ ನಟಿ ವೈಷ್ಣವಿ ಗೌಡರಿಗೆ ಟ್ರಾಫಿಕ್‌ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ವರದಿಯಾಗಿದೆ. ಸೀರಿಯಲ್‌ನಲ್ಲಿ ಸ್ನೇಹಿತೆ ಜತೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಇವರು ಫೈನ್‌ ಕಟ್ಟಬೇಕಿದೆ. ಜಯಪ್ರಕಾಶ್‌ ಎಕ್ಕೂರು ಎಂಬ ಸಾಮಾಜಿಕ ಹೋರಾಟಗಾರರು ಸೀರಿಯಲ್‌ ನೋಡಿ ಮಂಗಳೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಇದಾದ ಬಳಿಕ ಈ ದೂರನ್ನು ಮಂಗಳೂರು ಪೂರ್ವ ಸಂಚಾರ ಠಾಣೆಗೆ ವರ್ಗಾಯಿಸಲಾಗಿತ್ತು. ಝೀ ಕನ್ನಡ ವಾಹಿನಿ ಮತ್ತು ನಟಿ ವೈಷ್ಣವಿ ಗೌಡರಿಗೆ ಮಂಗಳೂರು ಪೂರ್ವ ಸಂಚಾರ ಠಾಣೆ ಪೊಲೀಸರು ನೋಟಿಸ್‌ ನೋಡಿದ್ದಾರೆ. ಶೂಟಿಂಗ್‌ ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ನಡೆದಿರುವುದರಿಂದ ರಾಜಾಜಿನಗರ ಪೊಲೀಸ್‌ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ. ನಟಿ ವೈಷ್ಣವಿ ಗೌಡರಿಗೆ ಹೆಲ್ಮೆಟ್‌ ರಹಿತವಾಗಿ ಹಿಂಬದಿ ಸವಾರಿ ಮಾಡಿರುವ ಕಾರಣ 500 ರೂಪಾಯಿ ದಂಡ ವಿಧಿಸಲಾಗಿದೆ. ಸ್ಕೂಟ್‌ ಮಾಲಕಿ ಸವಿತಾ ಎಂಬವರಿಗೂ 500 ರೂಪಾಯಿ ದಂಡ ವಿಧಿಸಲಾಗಿದೆ.

ಸೀರಿಯಲ್‌ಗಳಲ್ಲಿ ಹೆಲ್ಮೆಟ್‌ ಇಲ್ಲದೆ ಚಾಲನೆ

ಝೀ ಕನ್ನಡ ವಾಹಿನಿ ಅಥವಾ ಇತರೆ ಚಾನೆಲ್‌ಗಳಲ್ಲಿನ ಸೀರಿಯಲ್‌ಗಳಲ್ಲಿ ಈ ರೀತಿ ಹೆಲ್ಮೆಟ್‌ ರಹಿತವಾಗಿ ಚಾಲನೆ ಮಾಡುವ ಕಲಾವಿದರನ್ನು ಕಾಣಬಹುದು. ಸೀರಿಯಲ್‌ ಪ್ರೇಕ್ಷಕರಿಗೆ ಕಲಾವಿದರ ಮುಖ ದರ್ಶನವಾಗಲಿ ಎನ್ನುವ ಕಾರಣಕ್ಕೆ ಈ ರೀತಿ ಮಾಡುತ್ತಿರಬಹುದು. ಅಮೃತಧಾರೆ ಧಾರಾವಾಹಿಯಲ್ಲಿ ಬಹುತೇಕ ಸಂದರ್ಭಗಳಲ್ಲಿ ಪಾರ್ಥ ಹೆಲ್ಮೆಟ್‌ ಧರಿಸಿರುತ್ತಾರೆ. ಇದೇ ಸೀರಿಯಲ್‌ನಲ್ಲಿ ಇತ್ತೀಚೆಗೆ ಉದ್ಯೋಗ ಕಳೆದುಕೊಂಡ ಜೀವನ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿದ್ದರು. ಆದರೆ, ಇವರು ದ್ವಿಚಕ್ರವಾಹನದಲ್ಲಿ ಹೆಲ್ಮೆಟ್‌ ಬದಲು ಟೋಪಿ ಹಾಕಿಕೊಂಡು ರೈಡ್‌ ಮಾಡಿದ್ದರು. ಇದೇ ರೀತಿ ಕನ್ನಡದ ಹಲವು ಸೀರಿಯಲ್‌ಗಳಲ್ಲಿ ನಟ-ನಟಿಯರು ಹೆಲ್ಮೆಟ್‌ ರಹಿತ ಚಾಲನೆ ಮಾಡಿದ್ದಾರೆ. ಯಾರಾದರೂ ದೂರು ನೀಡಿದರೆ ಇವರೆಲ್ಲರೂ ಫೈನ್‌ ಕಟ್ಟಬೇಕಾಗುತ್ತದೆ.

ಹಲವು ಕಲಾವಿದರ ಮೇಲೆ ಕ್ರಮ

ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಹಲವು ಕಲಾವಿದರು ಶೂಟಿಂಗ್‌ ಸಂದರ್ಭದಲ್ಲಿ ಹೆಲ್ಮೆಟ್‌ ಧರಿಸದೆ ಇರುವುದಕ್ಕೆ ಫೈನ್‌ ಕಟ್ಟಿದ್ದಾರೆ. ರಶ್ಮಿ ರಾಕೆಟ್‌ ಚಿತ್ರದಲ್ಲಿ ಹೆಲ್ಮೆಟ್‌ ರಹಿತವಾಗಿ ಬುಲೆಟ್‌ ರೈಡ್‌ ಮಾಡಿದ ತಾಪ್ಸಿ ಪನ್ನು ಕೂಡ ಫೈನ್‌ ಕಟ್ಟಿದ್ದರು. ಅಮಿತಾಬ್‌ ಬಚ್ಚನ್‌ ಮತ್ತು ಅನುಷ್ಕಾ ಶರ್ಮಾ ಕೂಡ ಇದೇ ರೀತಿ ಹೆಲ್ಮೆಟ್‌ ಧರಿಸದೆ ರೈಡ್‌ ಮಾಡಿರುವುದು ಚರ್ಚೆಗೀಡಾಗಿತ್ತು. ಕೆಲವೊಂದು ಸಂದರ್ಭಗಳಲ್ಲಿ ಸಿನಿಮಾ ನಟ-ನಟಿಯರು ನಿಜವಾಗಿಯೂ ವಾಹನ ಓಡಿಸುತ್ತ ಇರುವುದಿಲ್ಲ. ಬೇರೊಂದು ವಾಹನದ ಮೇಲೆ ಟ್ರಾಲಿಯಂತೆ ಬೈಕ್‌ನಲ್ಲಿ ಕುಳಿತುಕೊಂಡಿರುತ್ತಾರೆ. ಆದರೆ, ಪ್ರೇಕ್ಷಕರಿಗೆ ಇವರು ನಿಜವಾಗಿಯೂ ರೈಡ್‌ ಮಾಡುವಂತೆ ಕಾಣಿಸುವುದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ಬಹುತೇಕ ಹಾಲಿವುಡ್‌ ಸಿನಿಮಾಗಳಲ್ಲಿ ದ್ವಿಚಕ್ರವಾಹನಗಳಲ್ಲಿ ಪ್ರಯಾಣಿಸುವ ನಟರು ನಟಿಯರು ಹೆಲ್ಮೆಟ್‌ ಧರಿಸಿರುತ್ತಾರೆ.

ಹೆಲ್ಮೆಟ್‌ ಧರಿಸುವುದು ಕಡ್ಡಾಯ

ಮೋಟರ್‌ ವೆಹಿಕಲ್‌ ಆಕ್ಟ್‌ 1988ರ ಸೆಕ್ಷನ್‌ 129ರ ಅನ್ವಯ ಎಲ್ಲಾ ಮೋಟಾರ್‌ ಸೈಕಲ್‌ ರೈಡರ್‌ಗಳು ಹೆಲ್ಮೆಟ್‌ ಧರಿಸುವುದು ಕಡ್ಡಾಯ. ಸಿನಿಮಾ, ಸೀರಿಯಲ್‌ ಶೂಟಿಂಗ್‌ನಲ್ಲಿಯಾಗಲಿ, ನಿಜವಾದ ಜೀವನದಲ್ಲಿಯಾಗಲಿ ಸೆಲೆಬ್ರಿಟಿಗಳು ಹೆಲ್ಮೆಟ್‌ ಧರಿಸಿ ಎಲ್ಲರಿಗೂ ರೋಲ್‌ ಮಾಡೆಲ್‌ ಆಗಿರಬೇಕು. ಬೈಕ್‌ ಸವಾರಿಯ ರೀಲ್ಸ್‌ ಮಾಡುವವರಿಗೂ ಇದು ಅನ್ವಯ ಎಂದು ಟ್ರಾಫಿಕ್‌ ಅಧಿಕಾರಿಗಳು ಹೇಳಿದ್ದಾರೆ. ಏನೇ ಆಗಲಿ, ಇನ್ಮುಂದೆ ಸೀರಿಯಲ್‌, ಸಿನಿಮಾ ನೋಡುತ್ತಿರುವಾಗ ಯಾರಾದರೂ ಕಲಾವಿದರು ಹೆಲ್ಮೆಟ್‌ ಇಲ್ಲದೆ ದ್ವಿಚಕ್ರವಾಹನ ರೈಡ್‌ ಅಥವಾ ಹಿಂಬದಿ ಸವಾರಿ ಮಾಡುತ್ತಿದ್ದರೆ ಕೇಸ್‌ ಹಾಕಬಹುದು.

IPL_Entry_Point