Salaar day 10: ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ ಸಲಾರ್‌; 10 ದಿನದಲ್ಲಿ 625 ಕೋಟಿ ರೂ ಬಾಚಿಕೊಂಡ ಪ್ರಭಾಸ್‌ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  Salaar Day 10: ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ ಸಲಾರ್‌; 10 ದಿನದಲ್ಲಿ 625 ಕೋಟಿ ರೂ ಬಾಚಿಕೊಂಡ ಪ್ರಭಾಸ್‌ ಸಿನಿಮಾ

Salaar day 10: ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ ಸಲಾರ್‌; 10 ದಿನದಲ್ಲಿ 625 ಕೋಟಿ ರೂ ಬಾಚಿಕೊಂಡ ಪ್ರಭಾಸ್‌ ಸಿನಿಮಾ

Salaar worldwide box office collection day 10: ಪ್ರಭಾಸ್‌ ಮತ್ತು ಪೃಥ್ವಿರಾಜ್‌ ಸುಕುಮಾರನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ ಪಾರ್ಟ್‌ 1 ಸೀಸ್‌ಫೈರ್‌ ಸಿನಿಮಾವು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಹತ್ತನೇ ದಿನ ಸಲಾರ್‌ ಗಳಿಕೆ 600 ಕೋಟಿ ರೂ. ದಾಟಿದೆ.

ಸಲಾರ್‌ ಬಾಕ್ಸ್‌ ಆಫೀಸ್‌ ವರದಿ
ಸಲಾರ್‌ ಬಾಕ್ಸ್‌ ಆಫೀಸ್‌ ವರದಿ

ಸಲಾರ್‌ ಪಾರ್ಟ್‌ 1 ಸೀಸ್‌ಫೈರ್‌ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಭರ್ತಿ ಹತ್ತು ದಿನಗಳಾಗಿವೆ. ಕರ್ನಾಟಕದ ಹೆಮ್ಮೆಯ ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ತೆಲುಗು ನಟ ಪ್ರಭಾಸ್‌ ಮತ್ತು ಮಲಯಾಳಂನ ಪೃಥ್ವಿರಾಜ್‌ ಸುಕುಮಾರನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೋಮವಾರ ಚಿತ್ರತಂಡವು ಸಲಾರ್‌ ಸಿನಿಮಾದ ಬಾಕ್ಸ್‌ ಆಫೀಸ್‌ ವರದಿಯನ್ನು ಪ್ರಕಟಿಸಿದೆ. ಜಾಗತಿಕವಾಗಿ ಸಲಾರ್‌ ಸಿನಿಮಾವು 600 ಕೋಟಿ ಕ್ಲಬ್‌ಗೆ ಸೇರಿದೆ ಎಂದು ಚಿತ್ರತಂಡ ತಿಳಿಸಿದೆ. ಸಲಾರ್‌ ಸಿನಿಮಾವು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಕಳೆದ ವರ್ಷ ಡಿಸೆಂಬರ್‌ 22ರಂದು ಬಿಡುಗಡೆಯಾಗಿತ್ತು.

ಸಲಾರ್‌ ಜಾಗತಿಕ ಬಾಕ್ಸ್‌ ಆಫೀಸ್‌ ಕಲೆಕ್ಷನ್‌- ದಿನ 10

ಸಲಾರ್‌ ಚಿತ್ರದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಕುರಿತು ಚಿತ್ರತಂಡ ಎಕ್ಸ್‌ನಲ್ಲಿ ಹೀಗೆಂದು ಟ್ವೀಟ್‌ ಮಾಡಿದೆ. "ಖಾನ್ಸರ್‌... ಐ ಆಮ್‌ ಸಾರಿ, ನಿಲ್ಲಿಸಲಾಗದು. ಸಲಾರ್‌ಸೀಸ್‌ಫೈರ್‌ ಸಿನಿಮಾವು ಜಾಗತಿಕವಾಗಿ 625 ಕೋಟಿ ರೂಪಾಯಿ ಗಳಿಕೆ ಮಾಡಿದೆ" ಎಂಬ ಮಾಹಿತಿ ನೀಡಿದೆ. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್‌ನ ವಿಜಯ್‌ ಕಿರಗಂದೂರು ಅವರು ನಿರ್ಮಾಣ ಮಾಡಿದ್ದಾರೆ. ಸಲಾರ್‌ ಸಿನಿಮಾದಲ್ಲಿ ಶೃತಿ ಹಾಸನ್‌, ಈಶ್ವರಿ ರಾವ್‌, ಶ್ರಿಯಾ ರೆಡ್ಡಿ, ಟೀನು ಆನಂದ್‌ ಮತ್ತು ಜಗಪತಿ ಬಾಬು ಕೂಡ ನಟಿಸಿದ್ದಾರೆ.

ಸಲಾರ್‌ ಸಿನಿಮಾ ಬಿಡುಗಡೆಯಾದ ಬಳಿಕದ ಏಳನೇ ದಿನವೇ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಸಲಾರ್‌ 500 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. "500 ಕೋಟಿ ರೂಪಾಯಿ ಜಿಬಿಒಸಿ ವರ್ಲ್‌ವೈಡ್‌" ಎಂದು ಸಲಾರ್‌ ಚಿತ್ರ ತಂಡ ಟ್ವೀಟ್‌ ಮಾಡಿತ್ತು. ಮೊದಲ ದಿನ ಸಲಾರ್‌ ಸಿನಿಮಾವು 90.7 ಕೋಟಿ ರೂಪಾಯಿ, ಎರಡನೇ ದಿನ 56.35 ಕೋಟಿ ಗಳಿಕೆ ಮಾಡಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಮೂರನೇ ದಿನ ಸಲಾರ್‌ ಸಿನಿಮಾವು 62.89 ಕೋಟಿ ರೂಪಾಯಿ ಸಂಗ್ರಹಿಸಿತ್ತು.

ಭಾರತದಲ್ಲೂ ಸಲಾರ್‌ ಗಳಿಕೆ ಉತ್ತಮವಾಗಿಯೇ ಮುಂದುವರೆದಿದೆ. ಮೊದಲ ಕೆಲವು ದಿನಗಳಿಗೆ ಹೋಲಿಸಿದರೆ ಹೊಂಬಾಳೆ ಫಿಲ್ಮ್ಸ್‌ ಸಲಾರ್‌ ಸಿನಿಮಾದ ಟಿಕೆಟ್‌ ದರ ತಗ್ಗಿಸಿದೆ. ಅಂದರೆ, ಪ್ರಮುಖ ಮಲ್ಟಿಫ್ಲೆಕ್ಸ್‌ ಸರಣಿಗಳಲ್ಲಿ ಟಿಕೆಟ್‌ ದರ ಕಡಿಮೆಯಾಗಿದೆ. ಹೀಗಾಗಿ, ಆದಾಯ ಸಂಗ್ರಹ ತುಸು ಕಡಿಮೆಯಾದಂತೆ ಭಾಸವಾಗಬಹುದು. ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಗಮನಾರ್ಹವಾಗಿ ತಗ್ಗಿಲ್ಲ.

ಜೈಲರ್‌ ಹಿಂದಿಕ್ಕಿದ ಸಲಾರ್‌

ಜೈಲರ್‌ ಸಿನಿಮಾವು ವಿಶ್ವಾದ್ಯಾಂತ 600 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೀಗ ತನ್ನ ಹತ್ತನೇ ದಿನದ ಗಳಿಕೆಯಲ್ಲಿ ಸಲಾರ್‌ ಸಿನಿಮಾವು ರಜನಿಕಾಂತ್‌ ನಟನೆಯ ಜೈಲರ್‌ ಸಿನಿಮಾವನ್ನು ಹಿಂದಿಕ್ಕಿದೆ.

ಸಲಾರ್‌ ಪಾರ್ಟ್‌ 1 ಕೇಸ್‌ಫೈರ್‌ ಸಿನಿಮಾವು ಡಿಸೆಂಬರ್‌ 22ರಂದು ಭಾರತ ಮತ್ತು ವಿಶ್ವದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ತೆಲುಗು ನಟ ಪ್ರಭಾಸ್‌ ಮತ್ತು ಮಲಯಾಳಂ ನಟ ಪೃಥ್ವಿರಾಜ್‌ ಸುಕುಮಾರನ್‌ ಈ ಸಿನಿಮಾದಲ್ಲಿ ಆತ್ಮೀಯ ಗೆಳೆಯರಾಗಿ ನಟಿಸಿದ್ದಾರೆ. ಶೃತಿ ಹಾಸನ್‌, ಜಗಪತಿ ಬಾಬು, ಈಶ್ವರಿ ರಾವ್‌ ಮತ್ತು ಶ್ರೀಯಾ ರೆಡ್ಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕೆಜಿಎಫ್‌ ಮೂಲಕ ಜನಪ್ರಿಯತೆ ಪಡೆದಿರುವ ಕರ್ನಾಟಕದ ಪ್ರಶಾಂತ್‌ ನೀಲ್‌ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಖಾನ್ಸರ್‌ ಎಂಬ ಕಾಲ್ಪನಿಕ ಊರಿನಲ್ಲಿ ಅಧಿಕಾರಕ್ಕೆ ನಡೆಯುವ ಹೋರಾಟ, ಇಬ್ಬರು ಆತ್ಮೀಯ ಸ್ನೇಹಿತರ ಒಡನಾಟದ ಕಥೆ ಹೊಂದಿತ್ತು.

ಇದೀಗ ಕರ್ನಾಟಕದಲ್ಲಿ ಸಲಾರ್‌ಗಿಂತ ಹೆಚ್ಚು ದರ್ಶನ್‌ ಅಭಿನಯದ ಕಾಟೇರ ಸಿನಿಮಾವೂ ಸದ್ದು ಮಾಡುತ್ತಿದೆ. ಡಿಸೆಂಬರ್‌ 29ರಂದು ಬಿಡುಗಡೆಯಾದ ಕಾಟೇರ ಸಿನಿಮಾವು ಮೊದಲು ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈಗ ತಮಿಳುನಾಡು ಸೇರಿದಂತೆ ಇತರೆ ಕಡೆಗಳಲ್ಲಿಯೂ ನಿಧಾನವಾಗಿ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿಯೇ ಈ ಚಿತ್ರ 60 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿ ದಾಖಲೆ ಸೃಷ್ಟಿಸಿದೆ. ಕರ್ನಾಟಕದಲ್ಲಿ ಕಾಟೇರ ಸಿನಿಮಾದ ಕುರಿತು ಸಕಾರಾತ್ಮಕ ಅಭಿಪ್ರಾಯಗಳು, ವಿಮರ್ಶೆಗಳು ಕೇಳಿಬರುತ್ತಿವೆ. ಮುಂದಿನ ದಿನಗಳಲ್ಲಿಯೂ ಕಾಟೇರ ಬಾಕ್ಸ್‌ ಆಫೀಸ್‌ ಗಳಿಕೆ ಮುಂದುವರೆಯುವ ಸೂಚನೆ ಇದಾಗಿದೆ.

Whats_app_banner