ಸಮಂತಾ ನಾಗ ಚೈತನ್ಯ ಡಿವೋರ್ಸ್ ವಿಚಾರದಲ್ಲಿ ಕೊಂಡಾ ಸುರೇಖಾ ಅಸಭ್ಯ ಹೇಳಿಕೆ; ತೆಲಂಗಾಣ ಸಚಿವೆ ವಿರುದ್ದ ಮಾನಹಾನಿ ನೋಟಿಸ್
ಸಮಂತಾ, ನಾಗ ಚೈತನ್ಯಗೆ ಡಿವೋರ್ಸ್ ಕೊಡಲು ಬಿಆರ್‌ಎಸ್ ನಾಯಕ ಕೆಟಿ ರಾಮಾರಾವ್ ಕಾರಣ ಎಂದು ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ ಹೇಳಿಕೆ ನೀಡಿದ್ದಾರೆ. ವಿವಾದಾತ್ಮಕ ಹೇಳಿಕೆಯಿಂದ ಸಮಂತಾ ಅಭಿಮಾನಿಗಳು ಗರಂ ಆಗಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಕೂಡಾ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಟಿಆರ್, ಸುರೇಖಾಗೆ ಮಾನಹಾನಿ ನೋಟಿಸ್ ಕಳಿಸಿದ್ದಾರೆ.
ಪ್ರೀತಿಸಿ ಮದುವೆ ಆಗಿದ್ದ ಟಾಲಿವುಡ್ ಜೋಡಿ ಸಮಂತಾ ಹಾಗೂ ನಾಗಚೈತನ್ಯ 2021 ರಲ್ಲಿ ಡಿವೋರ್ಸ್ ಅನೌನ್ಸ್ ಮಾಡಿದ್ದರು. ಇಬ್ಬರ ವಿಚ್ಛೇದನಕ್ಕೆ ಏನು ಕಾರಣ ಎಂದು ತಿಳಿಯದಿದ್ದರೂ ಕೆಲವರು ಸಮಂತಾ ಕಡೆ ಬೆರಳು ಮಾಡಿದ್ದರು. ಸ್ಯಾಮ್ ಅಭಿಮಾನಿಗಳು ನಾಗಚೈತನ್ಯದ್ದೇ ತಪ್ಪು ಎಂದಿದ್ದರು. ಇವರ ಡಿವೋರ್ಸ್ ಆಗಿ 2 ವರ್ಷಗಳು ಕಳೆದಿವೆ. ನಾಗಚೈತನ್ಯ ಎರಡನೇ ಮದುವೆಗೆ ರೆಡಿ ಆಗುತ್ತಿದ್ದಾರೆ. ಆದರೆ ಇವರ ಡಿವೋರ್ಸ್ ಬಗ್ಗೆ ತೆಲಂಗಾಣ ಸಚಿವೆಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೆಟಿಆರ್ ವಿರುದ್ದ ಕೊಂಡಾ ಸುರೇಖಾ ಆರೋಪ
ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ ಸಮಂತಾ ಮಾವ ಅಕ್ಕಿನೇನಿ ನಾಗಾರ್ಜುನ ಬಗ್ಗೆ ಅಸಭ್ಯವಾಗಿ ಮಾತನಾಡಿ ಎಲ್ಲೆಡೆ ಆಕ್ರೋಶ ವ್ಯಕ್ತವಾದ ನಂತರ ಸಮಂತಾ ಬಳಿ ಕ್ಷಮೆ ಕೇಳಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಒಡೆತನದ ಮಾದಾಪುರದಲ್ಲಿದ್ದ ಎನ್ ಕನ್ವೆಷನ್ ಸೆಂಟರನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಜಾಗದಲ್ಲಿ ಕಟ್ಟಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆಗ ಸರ್ಕಾರ ಆ ಕಟ್ಟಡವನ್ನು ಒಡೆಯಲು ಸೂಚಿಸಿದ್ದರಿಂದ ನಾಗಾರ್ಜುನ ಬಿಆರ್‌ಎಸ್ ನಾಯಕ ಕೆಟಿ ರಾಮಾರಾವ್ ಅವರ ಬಳಿ ಕನ್ವೆಷನ್ ಸೆಂಟರನ್ನು ಒಡೆಯದಂತೆ ಮನವಿ ಮಾಡಿದ್ದರು. ಕೆಟಿಆರ್ ಮೊದಲಿನಿಂದಲೂ ಅನೇಕ ಚಿತ್ರನಟಿಯರಿಗೆ ಹಿಂಸೆ ನೀಡಿದ್ದಾರೆ. ಅವರಿಂದ ಎಷ್ಟೋ ನಟಿಯರು ಚಿತ್ರರಂಗ ಬಿಟ್ಟಿದ್ದಾರೆ.
ಸಮಂತಾ ಡಿವೋರ್ಸ್‌ಗೆ ಕೆಟಿಆರ್ ಕಾರಣ
ಕನ್ವೆಷನ್ ಸೆಂಟರ್ ವಿಚಾರದಲ್ಲಿ ಕೂಡಾ ಆಗಿದ್ದು ಅದೇ. ಕಟ್ಟಡ ಒಡೆಯಬಾರದು ಎಂದಾದರೆ ನಿಮ್ಮ ಸೊಸೆ ಸಮಂತಾರನ್ನು ನನ್ನ ಬಳಿ ಕಳಿಸಿ ಎಂದು ಕೆಟಿಆರ್ ಬೇಡಿಕೆ ಇಟ್ಟಿದ್ದರು. ಇದನ್ನು ನಾಗಾರ್ಜುನ, ಸಮಂತಾ ಬಳಿ ಹೇಳಿದಾಗ ಆಕೆ ನೋವಿನಿಂದ ಪತಿಗೆ ಡಿವೋರ್ಸ್ ನೀಡಿದ್ದರು. ಅಕ್ಕಿನೇನಿ ಕುಟುಂಬದಿಂದಲೇ ದೂರಾಗಿದ್ದರು. ಅವರಿಬ್ಬರ ಡಿವೋರ್ಸ್‌ಗೆ ಕೆಟಿ ರಾಮಾರಾವ್ ಹಾಗೂ ನಾಗಾರ್ಜುನ ಕಾರಣ ಎಂದು ಸುರೇಖಾ ವಿವಾದ ಸೃಷ್ಟಿಸಿದ್ದರು. ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.
ಸುರೇಖಾ ಹೇಳಿಕೆಗೆ ನಾಗಾರ್ಜುನ ಬೇಸರ
ಸುರೇಖಾ ಹೇಳಿಕೆಗೆ ನಾಗಾರ್ಜುನ ಬೇಸರ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಮಾನ್ಯ ಸಚಿವರಾದ ಶ್ರೀಮತಿ ಕೊಂಡಾ ಸುರೇಖಾ ಅವರ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ರಾಜಕೀಯದಿಂದ ದೂರ ಉಳಿದಿರುವ ಸಿನಿಮಾ ತಾರೆಯರ ಬದುಕನ್ನು ವಿರೋಧಿಗಳ ಟೀಕೆಗೆ ಬಳಸಿಕೊಳ್ಳಬೇಡಿ. ದಯವಿಟ್ಟು ಇತರ ಜನರ ಗೌಪ್ಯತೆಯನ್ನು ಗೌರವಿಸಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮಹಿಳೆಯಾಗಿ, ನಮ್ಮ ಕುಟುಂಬದ ವಿರುದ್ಧ ನಿಮ್ಮ ಕಾಮೆಂಟ್‌ಗಳು ಮತ್ತು ಆರೋಪಗಳು ಸಂಪೂರ್ಣವಾಗಿ ಅಪ್ರಸ್ತುತ ಮತ್ತು ಸುಳ್ಳು. ನಿಮ್ಮ ಕಾಮೆಂಟ್‌ಗಳನ್ನು ತಕ್ಷಣವೇ ಹಿಂಪಡೆಯಲು ನಾನು ವಿನಂತಿಸುತ್ತೇನೆ ಎಂದು ನಾಗಾರ್ಜುನ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಚಿವೆ ವಿರುದ್ಧ ಮಾನಹಾನಿ ನೋಟಿಸ್
ಸಮಂತಾ ಕೂಡಾ ಸುರೇಖಾ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸುರೇಖಾ ಕೆಟಿಆರ್, ಮಹಿಳೆಯರ ಬಗ್ಗೆ ಯಾವ ರೀತಿ ಭಾವನೆ ಹೊಂದಿದ್ದಾರೆ ಎಂದು ತಿಳಿಸುವುದು ನನ್ನ ಉದ್ದೇಶವಾಗಿದ್ದು, ನಿಮ್ಮ ಬಗ್ಗೆ ಮಾತನಾಡುವ ಉದ್ದೇಶ ನನಗೆ ಇರಲಿಲ್ಲ. ಸ್ವಂತ ಶಕ್ತಿಯಿಂದ ನೀವು ಬೆಳೆದಿರುವುದು ಎಲ್ಲರಿಗೂ ಆದರ್ಶ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಂದೆಡೆ ಕೆಟಿ ರಾಮಾರಾವ್, ಕೊಂಡಾ ಸುರೇಖಾ ವಿರುದ್ಧ ಮಾನಹಾನಿ ನೋಟಿಸ್ ಕಳಿಸಿದ್ದಾರೆ.