Black Pepper Diseases: ಕೃಷಿಕನಿಗೆ ಆಘಾತ ನೀಡಿದ ಕಾಳುಮೆಣಸು ಬಳ್ಳಿಯನ್ನೇ ಕೊಲ್ಲುವ ಸೊರಗು ರೋಗ!
ಕನ್ನಡ ಸುದ್ದಿ  /  ಕರ್ನಾಟಕ  /  Black Pepper Diseases: ಕೃಷಿಕನಿಗೆ ಆಘಾತ ನೀಡಿದ ಕಾಳುಮೆಣಸು ಬಳ್ಳಿಯನ್ನೇ ಕೊಲ್ಲುವ ಸೊರಗು ರೋಗ!

Black Pepper Diseases: ಕೃಷಿಕನಿಗೆ ಆಘಾತ ನೀಡಿದ ಕಾಳುಮೆಣಸು ಬಳ್ಳಿಯನ್ನೇ ಕೊಲ್ಲುವ ಸೊರಗು ರೋಗ!

Black Pepper Diseases: ಕಾಳು ಮೆಣಸಿಗೆ ದಕ್ಕಿದ ಬೆಲೆಯಿಂದಾಗಿ ರೈತರು ಚೇತರಿಸಿಕೊಳ್ಳುತ್ತಿರುವಾಗಲೇ ಈ ವರ್ಷ ಅನಿಯಮಿತ ಮಳೆಯಿಂದ ಮತ್ತೆ ಸಂಕಷ್ಟಕ್ಕೀಡಾಗಿದ್ದಾನೆ. ಕಾಳುಮೆಣಸಿನ ಬಳ್ಳಿಗೆ ಸೊರಗು ರೋಗ ಇದಕ್ಕೆ ಕಾರಣ. (ವಿಶೇಷ ವರದಿ: ಹರೀಶ ಮಾಂಬಾಡಿ)

ಕೃಷಿಕನಿಗೆ ಆಘಾತ ನೀಡಿದ ಕಾಳುಮೆಣಸು ಬಳ್ಳಿಯನ್ನೇ ಕೊಲ್ಲುವ ಸೊರಗು ರೋಗ!
ಕೃಷಿಕನಿಗೆ ಆಘಾತ ನೀಡಿದ ಕಾಳುಮೆಣಸು ಬಳ್ಳಿಯನ್ನೇ ಕೊಲ್ಲುವ ಸೊರಗು ರೋಗ!

ಮಂಗಳೂರು: ಹಿಂದೆಲ್ಲ ಅಡಕೆ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಸಂದರ್ಭ ರೈತರಿಗೆ ನೆರವಾಗುತ್ತಿದ್ದದ್ದು ಕರಿಚಿನ್ನ ಎಂದೇ ಹೇಳಲಾಗುವ ಕಾಳುಮೆಣಸು. ಅಡಕೆ ಮರ, ತೆಂಗಿನ ಮರಕ್ಕೆ ಕಾಳುಮೆಣಸಿನ ಬಳ್ಳಿಗಳು ಹಬ್ಬಿಕೊಂಡು ಹೇರಳ ಫಸಲು ನೀಡುತ್ತಿದ್ದ ಪರಿಣಾಮ, ಬೆಳೆಗಾರನೂ ಚೇತರಿಸಿಕೊಳ್ಳುತ್ತಿದ್ದ. ಆರ್ಥಿಕ ಸಂಕಷ್ಟದಿಂದ ಪಾರಾಗುತ್ತಿದ್ದ. ಕಾಳು ಮೆಣಸಿಗೆ ದಕ್ಕಿದ ಬೆಲೆಯಿಂದ ಒಂದಷ್ಟು ಚೇತರಿಸಿಕೊಳ್ಳುತ್ತಿರುವಾಗ ಈ ವರ್ಷ ಅನಿಯಮಿತ ಮಳೆಯಿಂದಾಗಿ ಸಂಕಷ್ಟಕ್ಕೀಡಾಗಿದ್ದಾನೆ. ಕಾಳುಮೆಣಸಿನ ಬಳ್ಳಿಗೆ ಸೊರಗು ರೋಗ ಇದಕ್ಕೆ ಕಾರಣ. ದಕ್ಷಿಣ ಕನ್ನಡ ಜಿಲ್ಲೆ, ಮಲೆನಾಡಿನಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದು, ವಿಶೇಷವಾಗಿ ಬೆಳ್ತಂಗಡಿ, ಸುಳ್ಯ, ಬಂಟ್ವಾಳ ತಾಲೂಕುಗಳಲ್ಲಿ ಕಾಳುಮೆಣಸು ಬೆಳೆಯುವ ಜಾಗಗಳಲ್ಲಿ ಈ ಸಮಸ್ಯೆ ತಲೆದೋರಿದೆ. ಸುಳ್ಯ ತಾಲೂಕಿನಲ್ಲಂತೂ ಸೊರಗು ರೋಗ ವಿಪರೀತವಾಗಿದೆ.

ಶೇ.50ಕ್ಕೂ ಅಧಿಕ ಕೃಷಿ ರೋಗಕ್ಕೆ ನಾಶ

ಈ ವರ್ಷದ ಮಳೆಗೆ ಕಪ್ಪು ಚಿನ್ನ ಖ್ಯಾತಿಯ ಕಾಳುಮೆಣಸು ಕೃಷಿಗೆ ಸೊರಗು ರೋಗ ವ್ಯಾಪಕವಾಗಿ ಬಾದಿಸಿದ್ದು, ಈಗಾಗಲೇ ಶೇ.50ಕ್ಕೂ ಅಧಿಕ ಕೃಷಿ ರೋಗ ಬಾಧೆಯಿಂದ ನಾಶವಾಗಿದ್ದು, ಕೃಷಿಕರು ಆತಂಕಕ್ಕೀಡಾಗಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಅಡಿಕೆ, ತೆಂಗು ಕೃಷಿಯೊಂದಿಗೆ ಮಿಶ್ರ ಬೆಳೆಯಾಗಿ ಕಾಳುಮೆಣಸು ಕೃಷಿ ಬೆಳೆಯಲಾಗುತ್ತದೆ. ಅಡಿಕೆ, ತೆಂಗು ಮತ್ತಿತರ ಮರಕ್ಕೆ ಕಾಳುಮೆಣಸು ಬಳ್ಳಿ ಹಬ್ಬಿಸಲಾಗುತ್ತದೆ. ಪ್ರಸ್ತುತ ಕಾಳುಮೆಣಸು ಬೆಳೆಗೆ ಉತ್ತಮ ಧಾರಣೆ ಸಿಗುತ್ತಿದೆ. ಆದರೆ, ಕೆಲ ವರ್ಷಗಳಿಂದ ಕಾಳುಮೆಣಸು ಕೃಷಿಯಲ್ಲೂ ರೋಗಬಾಧೆ ಕಾಣಿಸಿಕೊಂಡು ಕೃಷಿಕರಿಗೆ ನಿರೀಕ್ಷಿತ ಆದಾಯ ಪಡೆಯಲು ಸಾಧ್ಯವಾಗುತ್ತಿಲ್ಲ.

ಸೊರಗು ರೋಗ ಬಂದರೆ ಏನಾಗುತ್ತದೆ?

ಈ ರೋಗ ಮುಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಬಾಸುತ್ತದೆ. ಎಲೆಗಳ ಮೇಲೆ ಕಪ್ಪು ಚುಕ್ಕೆಗಳು ಕಂಡುಬಂದು, ಬಳಿಕ ಎಲೆಗಳಲ್ಲಿ ನಾರಿನಂಥ ಬಾಚು ಭಾಗ ಕಾಣುತ್ತದೆ. ಬಳಿಕ ಇದು ವ್ಯಾಪಿಸಿ ಎಲೆಗಳು ಉದುರಲು ಆರಂಭಿಸುತ್ತದೆ. ಬಳಿಕ ಬಳ್ಳಿಗಳೂ ನಾಶವಾಗುತ್ತದೆ. ಮುಖ್ಯ ಕಾಂಡದ ನೆಲಮಟ್ಟ ಅಥವಾ ಕುತ್ತಿಗೆ ಭಾಗದಲ್ಲಿ ರೋಗ ಬಾಸಿದಲ್ಲಿ ಪೂರ್ತಿ ಬಳ್ಳಿ ಸೊರಗಿ ಒಣಗುತ್ತದೆ.

ಮಳೆಗಾಲದಲ್ಲಿ ಬಳ್ಳಿ ಹಾಗೂ ಎಲೆಗಳಲ್ಲಿ ಶಿಲೀಂದ್ರದ ಬೀಜಾಣುಗಳು ಸುಲಭವಾಗಿ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತವೆ. ಮೊದಲು ಕಾಳುಮೆಣಸಿನ ಬಳ್ಳಿಯ ಬೇರುಗಳನ್ನು ಆಕ್ರಮಿಸುವುದರಿಂದ ಬೇರುಗಳು ಸಾಯುತ್ತದೆ. ನಂತರ ಬಳ್ಳಿ ಹಾಗೂ ಎಲೆಗಳನ್ನು ಆಕ್ರಮಿಸುತ್ತದೆ. ಬೇರುಗಳಿಗೆ ರೋಗ ಬಾಸಿದ ಮರುಕ್ಷಣದಲ್ಲೇ ಕಾಳುಮೆಣಸಿನ ಎಲೆಗಳು, ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ಉದುರಲು, ತುಂಡಾಗಿ ಬೀಳಲು ಆರಂಭಿಸುತ್ತದೆ. ಬಳಿಕ ಇಡೀ ಬಳ್ಳಿ ಕಪ್ಪು ಬಣ್ಣಕ್ಕೆ ಸೊರಗಿ ಕ್ರಮೇಣ ಕಾಳುಮೆಣಸು ಬಳ್ಳಿ ಸಾಯುತ್ತದೆ.

ನಿಯಂತ್ರಣಕ್ಕೇ ಸಿಗ್ತಿಲ್ಲ

ಈ ರೋಗ ಮಳೆಗಾಲದಲ್ಲೂ ಹಾಗೂ ಬಳಿಕವೂ ಕಾಣಿಸಿಕೊಳ್ಳುತ್ತದೆ. ಈ ರೋಗ ಕಾಣಿಸಿಕೊಂಡಲ್ಲಿ ನಿಯಂತ್ರಣ ತ್ರಾಸದಾಯಕ. ಮಳೆಗಾಲದಲ್ಲಂತೂ ನಿಯಂತ್ರಣ ಇನ್ನೂ ಕಷ್ಟ. ಔಷಧ ಸಿಂಪಡನೆಯಿಂದಲೂ ನಿಯಂತ್ರಣ ಕಷ್ಟವಾಗುತ್ತದೆ. ಉತ್ತಮ ರೀತಿಯಲ್ಲಿ ಬೆಳೆದಿದ್ದ ಬಳ್ಳಿಗಳಲ್ಲೂ ರೋಗ ಬಾಧೆ ಕಾಣಿಸುತ್ತಿದೆ ಎಂದು ಕೃಷಿಕರು ತಿಳಿಸಿದ್ದಾರೆ. ಪ್ರಸ್ತುತ ಸಮಯದಲ್ಲಿ ಕೆಲ ವಾರಗಳ ಹಿಂದೆ ಸುರಿದ ನಿರಂತರ ಮಳೆಯಿಂದ ಸುಳ್ಯ ಸೇರಿದಂತೆ ಹಲವೆಡೆ ಕಾಳುಮೆಣಸು ಬೆಳೆಗಳ ಎಲೆಗಳು, ಬಳ್ಳಿಗಳು ಸೊರಗಿ ಉದುರಿ, ಸಾಯುತ್ತಿದ್ದು, ಶೇ.50ಕ್ಕೂ ಆ ಕೃಷಿ ನಾಶ ಹಲವೆಡೆ ಆಗಿದ್ದರೆ ಕೆಲವೆಡೆ ಕೃಷಿ ಸಂಪೂರ್ಣ ನಾಶಗೊಂಡಿದೆ. ತೋಟದಲ್ಲಿ ಕಾಳುಮೆಣಸು ಬಳ್ಳಿಗಳು ಕಪ್ಪಾಗಿ ಕರಟಿದಂತಾಗಿ ಸಾಯುತ್ತಿದ್ದು, ವ್ಯಾಪಾಕವಾಗಿ ಸಾಯುತ್ತಿದೆ ಎನ್ನುತ್ತಾರೆ ಕೃಷಿಕರು. ಪರಿಣಾಮ ಉತ್ತಮ ಧಾರಣೆ ಬಂದರೂ ಕಾಳು ಮೆಣಸು ಫಸಲು ಇಲ್ಲದೇ ಕೃಷಿಕರಿಗೆ ಪ್ರಯೋಜನ ಇಲ್ಲದಂತಾಗಲಿದೆ.

ಗಮನಕ್ಕೇ ಬರುವಾಗ ತಡವಾಗುತ್ತದೆ

ಕಾಳುಮೆಣಸು ಗಿಡಕ್ಕೆ ಬಾಸುವ ಸೊರಗು ರೋಗ ನಿಯಂತ್ರಣಕ್ಕೆ ಔಷಧ ಸಿಂಪಡನೆಯಿಂದ ಸಾಧ್ಯವಿದೆಯಾದರೂ, ಈ ರೋಗ ಹೆಚ್ಚಾಗಿ ಮೊದಲಿಗೆ ಬೇರಿನ ಮೂಲಕ ಆಕ್ರಮಿಸಿಕೊಳ್ಳುವುದರಿಂದ ತಕ್ಷಣಕ್ಕೆ ಇದು ಗಮನಕ್ಕೆ ಬಾರದೇ ಇದ್ದು, ಎಲೆಗಳು ಬಾಡಿದಂತಾಗಿ ಉದುರಲು ಆರಂಭಗೊಂಡಾಗಲೇ ಗಮನಕ್ಕೆ ಬರುವ ಸಮಯಕ್ಕೆ ಔಷಧ ಸಿಂಪಡಿಸಿದರೂ ನಿಯಂತ್ರಣ ಬರುವುದಿಲ್ಲ ಎನ್ನುತ್ತಾರೆ ಕೃಷಿಕರು.

Whats_app_banner