Bagalkote Crime: 2000 ರೂ ಕಳವು ಆರೋಪ; ಮನನೊಂದ 14 ವರ್ಷದ ಬಾಲಕಿ ಆತ್ಮಹತ್ಯೆ, ಪೊಲೀಸರಿಗೆ ತಿಳಿಸದೇ ಶವಸಂಸ್ಕಾರ-bagalkot news searched over rs 2000 theft in school 14 year old karnataka girl kills self headmaster teacher booked smu ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bagalkote Crime: 2000 ರೂ ಕಳವು ಆರೋಪ; ಮನನೊಂದ 14 ವರ್ಷದ ಬಾಲಕಿ ಆತ್ಮಹತ್ಯೆ, ಪೊಲೀಸರಿಗೆ ತಿಳಿಸದೇ ಶವಸಂಸ್ಕಾರ

Bagalkote Crime: 2000 ರೂ ಕಳವು ಆರೋಪ; ಮನನೊಂದ 14 ವರ್ಷದ ಬಾಲಕಿ ಆತ್ಮಹತ್ಯೆ, ಪೊಲೀಸರಿಗೆ ತಿಳಿಸದೇ ಶವಸಂಸ್ಕಾರ

ಬಾಗಲಕೋಟೆಯ ಕಂದಾಪುರದಲ್ಲಿ 14 ವರ್ಷದ ಬಾಲಕಿಯೊಬ್ಬಳು ತನ್ನ ಮೇಲೆ ಬಂದ ಕಳವು ಆರೋಪದಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಆತ್ಮಹತ್ಯೆ ವಿಚಾರ ಪೊಲೀಸರಿಗೆ ತಿಳಿಸದೇ ಶವ ಸಂಸ್ಕಾರ ಮಾಡಿರುವುದು ಗಮನಸೆಳೆದಿದೆ. (ವರದಿ- ಸಮೀವುಲ್ಲಾ, ವಿಜಯಪುರ)

2000 ರೂ ಕಳವು ಆರೋಪ ಕೇಳಿಬಂದ ಕಾರಣ ಮನನೊಂದ 14 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. (ಸಾಂಕೇತಿಕ ಚಿತ್ರ)
2000 ರೂ ಕಳವು ಆರೋಪ ಕೇಳಿಬಂದ ಕಾರಣ ಮನನೊಂದ 14 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. (ಸಾಂಕೇತಿಕ ಚಿತ್ರ)

ಬಾಗಲಕೋಟೆ: ಕದಾಂಪುರದ ಸರ್ಕಾರಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತ ಬಾಲಕಿಯನ್ನು ದಿವ್ಯಾ ಬಾರಕೇರ ಎಂದು ಗುರುತಿಸಲಾಗಿದೆ. ಆಕೆಗೆ 14 ವರ್ಷ. ಈ ದುರಂತ ರಾಜ್ಯದ ಗಮನಸೆಳೆದಿದ್ದು, ಮರುಗುವಂತೆ ಮಾಡಿದೆ.

ಶಾಲೆಯಲ್ಲಿ ಶಿಕ್ಷಕಿಯೊಬ್ಬರ ಬ್ಯಾಗ್‌ನಿಂದ 2000 ರೂಪಾಯಿ ಕಳವು ಆರೋಪ ತನ್ನ ಮೇಲೆ ಬಂದ ಕಾರಣ ಮನನೊಂದ ಬಾಲಕಿ ಈ ಅತಿರೇಕದ ಕೃತ್ಯವೆಸಗಿದ್ದಾಳೆ. ಮಾರ್ಚ್ 16 ರಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಪಾಲಕರು ಮಾರನೇ ದಿನ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕದಾಂಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 2000 ರೂಪಾಯಿ ಕಳವು ಪ್ರಕರಣ

ಪರ್ಸ್‌ನಿಂದ 2000 ರೂಪಾಯಿ ಕಳುವಾಗಿದೆ ಎಂದು ಕದಾಂಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ, ತನ್ನ ವಿದ್ಯಾರ್ಥಿಗಳ ಎಲ್ಲರ ಬ್ಯಾಗ್ ಪರಿಶೀಲಿಸಿದ್ದರು. ಅಲ್ಲದೆ ದೇವರ ಹೆಸರಿನಲ್ಲಿ ಪ್ರಮಾಣ ಕೂಡ ಮಾಡಿಸಿದ್ದರು. ಈ ಘಟನೆಯಿಂದ ನಾಲ್ವರು ಮಕ್ಕಳು ತೀರಾ ವಿಚಲಿತರಾಗಿದ್ದರು.

ವಿನಾಕಾರಣ ಸಂದೇಹ ಪಟ್ಟಿದ್ದಾರೆ ಎಂದು ಮನನೊಂದುಕೊಂಡಿದ್ದರು. ಈ ಪೈಕಿ ದಿವ್ಯಾ ಬಾರಕೇರ ಬಹಳ‍ಷ್ಟು ಮಾನಸಿಕ ಕಿರಿಕಿರಿ ಅನುಭವಿಸಿದ್ದು, ಮನೆಗೆ ಹೋದಾಗ ಖಿನ್ನತೆಗೊಳಗಾಗಿದ್ದರು. ಮನೆಯಲ್ಲಿಯೇ ಮಾರ್ಚ್ 16ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರನೇ ದಿನ ದೂರು ದಾಖಲಿಸಿದ ಪಾಲಕರು, ಎರಡು ಕೇಸ್ ದಾಖಲು

ದಿವ್ಯಾ ಬಾರಕೇರ ಆತ್ಮಹತ್ಯೆ ಮಾಡಿಕೊಂಡ ವಿಚಾರವನ್ನು ಪೊಲೀಸರಿಗೆ ತಿಳಿಸದೇ ಪಾಲಕರು, ಶವ ಸಂಸ್ಕಾರ ನೆರವೇರಿಸಿದ್ದಾರೆ. ಇನ್ನೊಬ್ಬ ಮಗಳು ಶಾಲೆಯಲ್ಲಿ ನಡೆದ ಘಟನೆಯನ್ನು ಪಾಲಕರಿಗೆ ತಿಳಿಸಿದ ಬಳಿಕ, ಮಾರನೇ ದಿನ (ಮಾರ್ಚ್ 17) ಮಧ್ಯಾಹ್ನ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ ಮತ್ತು ಮುಖ್ಯ ಶಿಕ್ಷಕ ಕೆ.ಎಚ್.ಮುಜಾವರ್ ವಿರುದ್ಧ ಕೇಸ್ ದಾಖಲಿಸಿದರು.

ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿರುವ ದಿವ್ಯಾ ಬಾರ್ಕರ್ ತಂದೆ ಶಿವಪ್ಪ ಬಾರಕೇರ, ಹಣ ಕಳವು ಮಾಡಿದ್ದನ್ನು ಒಪ್ಪಿಕೊಂಡು ಹಣ ಹಿಂದಿರುಗಿಸುವಂತೆ ಒತ್ತಡ ಹೇರಿದ್ದರು. ಇಲ್ಲದೇ ಇದ್ದರೆ ಟಿಸಿ ಕೊಟ್ಟು ಮನೆಗೆ ಕಳುಹಿಸುತ್ತೇವೆ ಎಂದು ಬೆದರಿಸಿದ್ದರು. ಇದರಿಂದ ಆಗಿರುವ ಮಾನಸಿಕ ಆಘಾತ, ಭಯದಿಂದಾಗಿ ಮಗಳು ದಿವ್ಯಾ ಸಾವಿಗೆ ಶರಣಾದಳು ಎಂದು ಹೇಳಿದ್ದಾರೆ.

ಬಾಲಕಿಯ ಆತ್ಮಹತ್ಯೆ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಈಗಾಗಲೇ ತನಿಖೆ ಚುರುಕುಗೊಳಿಸಿದೆ. ಪ್ರಥಮ ಹಂತವಾಗಿ ಈ ವಿಷಯವಾಗಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಬಾಲಕಿಯ ತಂದೆ ಕೊಟ್ಟಿರುವ ದೂರು ಪ್ರಕಾರ ಒಂದು ಕೇಸ್ ದಾಖಲಾಗಿದೆ. ಇದರಲ್ಲಿ ಶಿಕ್ಷಕಿ ಮತ್ತು ಮುಖ್ಯಶಿಕ್ಷಕರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಅದೇ ರೀತಿ, ಆತ್ಮಹತ್ಯೆ ವಿಚಾರ ಮುಚ್ಚಿಟ್ಟ ಕಾರಣ ಪಾಲಕರ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಇದರಲ್ಲಿ ಬಾಲಕಿಯ ತಂದೆ, ತಾಯಿ ಹಾಗೂ ಚಿಕ್ಕಪ್ಪ ಹಾಗೂ ಘಟನೆ ನಡೆದ ಸಂದರ್ಭದಲ್ಲಿ ಅಲ್ಲಿದ್ದ ಅನೇಕರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.

ನ್ಯಾಯ ಒದಗಿಸಲು ಆಯೋಗ ಬದ್ಧ

ಈ ಪ್ರಕರಣವನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಸ್ಥಳಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿಗಳು ಭೇಟಿ ನೀಡಿ ಸಮಗ್ರವಾಗಿ ವರದಿ ನೀಡಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವುದು ಹಾಗೂ ವರದಿಯಲ್ಲಿ ಲೋಪ ಬಂದರೆ ಸತ್ಯಶೋಧನಾ ಸಮಿತಿ ಸಹ ರಚನೆ ಮಾಡಿ ವರದಿ ಸಿದ್ಧಪಡಿಸಲಾಗುವುದು, ಆತ್ಮಹತ್ಯೆ ಮಾಡಿಕೊಂಡ ಬಾಲಕಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಯೋಗ ಬದ್ಧವಾಗಿದೆ ಎಂದು ‘ಹಿಂದುಸ್ತಾನ್ ಟೈಮ್ಸ್’ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ತಿಳಿಸಿದ್ದಾರೆ.

(ವರದಿ- ಸಮೀವುಲ್ಲಾ, ವಿಜಯಪುರ)

ಗಮನಿಸಿ, ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರ ಅಲ್ಲ…

ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point