ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ 3 ಸಾವಿರ ಕೋಟಿ ರೂ. ಆದಾಯ ನಿರೀಕ್ಷೆ, ಸಿದ್ದರಾಮಯ್ಯ ಆರ್ಥಿಕ ಹೊಂದಾಣಿಕೆ ಲೆಕ್ಕಾಚಾರ ಏನು?
Siddaramaiah economics ಒಂದು ಕಡೆ ಪಂಚ ಗ್ಯಾರಂಟಿ ಯೋಜನೆ ಜಾರಿ,ಮತ್ತೊಂದೆಡೆ ಕಡಿಮೆಯಾದ ಆದಾಯ, ಆರ್ಥಿಕ ಲೆಕ್ಕಾಚಾರದಡಿ ಸಿಎಂ ಸಿದ್ದರಾಮಯ್ಯ ತೈಲೋತ್ಪನ್ನಗಳ ಬೆಲೆ ಏರಿಸಿರುವ ಚರ್ಚೆಗಳು ನಡೆದಿವೆ.ವರದಿ: ಎಚ್.ಮಾರುತಿ,ಬೆಂಗಳೂರು
ಬೆಂಗಳೂರು: ಐದು ಗ್ಯಾರಂಟಿಗಳ ವೆಚ್ಚ ಮತ್ತು ಇತರ ಅಭಿವೃದ್ದಿ ಯೋಜನೆಗಳನ್ನು ಕೈಗೊಳ್ಳಲು ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದೆ. ಇದರಿಂದ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 3.50 ರೂ ಮತ್ತು ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 3.00 ರೂ ಹೆಚ್ಚಳವಾಗಿದೆ. ಈ ತೆರಿಗೆ ಹೆಚ್ಚಳದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಈ ವರ್ಷದಲ್ಲಿ ಸುಮಾರು 2,500-2,800 ಕೋಟಿ ರೂ.ಗಳ ಆದಾಯ ನಿರೀಕ್ಷಿಸಿದೆ.
ಲೋಕಸಭಾ ಚುನಾವಣೆ ಮುಗಿದ ನಂತರ ರಾಜ್ಯ ಸರ್ಕಾರ ಇಂಧನ ಬೆಲೆ ಹೆಚ್ಚಳದ ನಿರ್ಧಾರ ಕೈಗೊಂಡಿದೆ. ಲೋಕಸಭಾ ಚುನಾವಣೆಯಲ್ಲಿ 28 ರಲ್ಲಿ ಕಾಂಗ್ರೆಸ್ 9 ಸ್ಥಾನಗಳನ್ನು ಮಾತ್ರ ಗಳಿಸಲು ಶಕ್ತವಾಗಿತ್ತು. ಐದು ಗ್ಯಾರಂಟಿಗಳ ಬೆಂಬಲದಿಂದ ಕನಿಷ್ಠ 13-15 ಸ್ಥಾನಗಳನ್ನು ಕಾಂಗ್ರೆಸ್ ನಿರೀಕ್ಷಿಸಿತ್ತು. ಆದರೆ ಫಲಿತಾಂಶ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ನಿರಾಶೆಯನ್ನುಂಟು ಮಾಡಿತ್ತು.
ಹಣಕಾಸು ಇಲಾಖೆಯ ಜವಬ್ಧಾರಿಯನ್ನೂ ಹೊತ್ತಿರುವ ಸಿಎಂ ಸಿದ್ದರಾಮಯ್ಯ ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದ ಆದಾಯ ಸಂಗ್ರಹ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದರು. ಆದಾಯ ಸಂಗ್ರಹಕ್ಕೆ ಅನ್ಯ ಮಾರ್ಗಗಳಿಲ್ಲದ ಕಾರಣಕ್ಕೆ ಇಂಧನ ಬೆಲೆ ಹೆಚ್ಚಳದ ನಿರ್ಧಾರಕ್ಕೆ ಬರಲಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.
2024-25ನೇ ಸಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ 52,009 ಕೋಟಿ ರೂಪಾಯಿ ತೆಗೆದಿರಿಸಿದೆ. ಕಳೆದ ವರ್ಷ ಈ ಯೋಜನೆಗಳಿಗೆ 37,325 ಕೋಟಿ ರೂ. ವೆಚ್ಚ ಮಾಡಿತ್ತು. ಗ್ಯಾರಂಟಿಗಳ ಜಾರಿಗೆ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಹರಸಾಹಸ ಪಡುತ್ತಿದೆ. ಜೊತೆಗೆ ಇತರ ಅಭಿವೃದ್ದಿ ಯೋಜನೆಗಳಿಗೂ ಅನುದಾನದ ಅವಶ್ಯಕತೆ ಇದೆ.
ಆದಾಯದಲ್ಲಿ ಕುಂಠಿತ
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾರ್ಚ್ 14 ರಿಂದ ಜೂನ್ 4 ರವರೆಗೆ ಮೂರು ತಿಂಗಳು ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಆರ್ಥಿಕ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ತೆರಿಗೆ ಸಂಗ್ರಹ ಕುಂಠಿತಗೊಂಡಿತ್ತು. ಈ ವಾರದ ಆರಂಭದಲ್ಲಿ ಹಣಕಾಸು ಇಲಾಖೆಯ ಪರಿಶಿಲನಾ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಆದಾಯ ಸಂಗ್ರಹಕ್ಕೆ ಪರ್ಯಾಯ ಮೂಲಗಳನ್ನು ಹುಡುಕಲು ತಾಕೀತು ಮಾಡಿದ್ದರು ಮತ್ತು ತೆರಿಗೆ ಸಂಗ್ರಹದ ಗುರಿಯನ್ನು ತಲುಪಬೇಕು ಎಂದು ಸೂಚಿಸಿದ್ದರು.
ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ 1,20,373 ಕೋಟಿ ರೂಗಳನ್ನು ನಿಗಧಿಪಡಿಸಲಾಗಿತ್ತು. ಇದರಲ್ಲಿ ಶೇ.43ರಷ್ಟು ಹಣ ಐದು ಗ್ಯಾರಂಟಿಗಳಪಾಲಾಗುತ್ತದೆ. ಈ ಹಿಂದೆ ನವೆಂಬರ್ 2021 ರಲ್ಲಿ ಇಂಧನ ಬೆಲೆ ಪರಿಷ್ಕರಣೆ ಮಾಡಲಾಗಿತ್ತು. ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೋವಿಡ್-19 ಹಿನ್ನಲೆಯಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ ಗೆ 13.30 ರೂ. ಮತ್ತು ಡೀಸೆಲ್ ಬೆಲೆಯನ್ ಪ್ರತಿ ಲೀಟರ್ ಗೆ 19.40 ರೂ. ಇಳಿಸಿತ್ತು.
ನಿರಂತರ ತೆರಿಗೆ ಹೆಚ್ಚಳ
ಸಾರ್ವಜನಿಕರ ಮೇಲೆ ಕಾಂಗ್ರೆಸ್ ಸರಕಾರ ಮಾಡಿದ ಮೊದಲ ಗದಾಪ್ರಹಾರ ಇದೇ ಮೊದಲಲ್ಲ. ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಆಸ್ತಿಗಳ ಮೇಲಿನ ಮಾರ್ಗಸೂಚಿ ದರವನ್ನು ರಾಜ್ಯಾದ್ಯಂತ ಶೇ.25-30ರಷ್ಟು ಹೆಚ್ಚಳ ಮಾಡಿತ್ತು. ಈ ಮೂಲಕ ಹೆಚ್ಚುವರಿಯಾಗಿ 2000 ಕೋಟಿ ರೂ.ಗಳ ಆದಾಯ ಸಂಗ್ರಹವಾಗಿತ್ತು. ದೇಶೀಯ ಮದ್ಯದ ಮೇಲೂ ರಾಜ್ಯ ಸರ್ಕಾರ ಹೆಚ್ಚುವರಿ ತೆರಿಗೆ ವಿಧಿಸಿತ್ತು. ವಾಣಿಜ್ಯ ವಾಹನಗಳ ನೋಂದಣಿ ಮೇಲೂ ಶೇ.3ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿತ್ತು.
ಐದು ಗ್ಯಾರಂಟಿಗಳು ಶ್ರೀಸಾಮಾನ್ಯರಿಗೆ ಅನುಕೂಲ ಮತ್ತು ಸಹಾಯಕ ಮತ್ತು ಅನಿವಾರ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ರಾಜ್ಯ ಸರ್ಕಾರದ ನಡೆ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಂಡ ಹಾಗಿದೆ ಎನ್ನಬಹುದು, ಇಲ್ಲವೇ ಉಳ್ಳವರಿಗೂ ಉಚಿತ ಕೊಡುಗೆಗಳನ್ನು ಘೋಷಿಸಿ ಬಡ, ಮಧ್ಯಮ ವರ್ಗದ ಜನರ ಮೇಲೆ ವೃಥಾ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಆರ್ಥಿಕವಾಗಿ ಬೀಳುವ ಹೊಡೆತ ತಪ್ಪಿಸಲು ಪ್ರಯತ್ನಿಸುತ್ತಿದೆ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ.
(ವರದಿ: ಎಚ್.ಮಾರುತಿ, ಬೆಂಗಳೂರು)