Hassan Scandal: ಬಂಧನ ಭೀತಿ, ಜಾಮೀನಿಗಾಗಿ ನ್ಯಾಯಾಲಯಕ್ಕೆ ಮೊರೆ ಹೋದ ಎಚ್‌ಡಿ ರೇವಣ್ಣ
ಹಾಸನ ಜಿಲ್ಲೆಯ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣದಡಿ ದಾ ಖಲಾಗಿರುವ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಜಾಮೀನಿ ಮೊರೆ ಹೋಗಿದ್ದಾರೆ. ಬಂಧನ ಭೀತಿಯ ಕಾರಣದಿಂದ ಎಚ್.ಡಿ.ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ ಸೆಷನ್ಸ್ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ರೇವಣ್ಣ ಪರವಾಗಿ ಅವರ ವಕೀಲರು ಸಲ್ಲಿಸಿರುವ ಅರ್ಜಿ ಸಲ್ಲಿಕೆಯಾಗಿದ್ದು. ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ. ಈಗಾಗಲೇ ಹೊಳೆ ನರಸೀಪುರ ಠಾಣೆಯಲ್ಲಿ ದಾಖಲಾಗಿರುವ ದೂರು ಆಧರಿಸಿ ತನಿಖೆ ಶುರುವಾಗಿದ್ದು. ಎಚ್.ಡಿ.ರೇವಣ್ಣ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿಗೊಳಿಸಲಾಗಿದೆ. ಆದರೆ ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ.
ಗೃಹ ಸಚಿವರ ಹೇಳಿಕೆ
ರೇವಣ್ಣ ಅವರ ವಿರುದ್ದ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಈಗಾಗಲೇ ನೊಟೀಸ್ ಜಾರಿಗೊಳಿಸಿದ್ದೇವೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಇದರೊಟ್ಟಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೂ ಕೂಡ ರೇವಣ್ಣ ಅವರು ವಿಚಾರಣೆಗೆ ಹಾಜರಾಗಬೇಕು. ಇಲ್ಲದೇ ಇದ್ದರೆ ಕಾನೂನು ರೀತಿಯಲ್ಲಿ ಬಂಧನದ ಕ್ರಮವೂ ಆಗಲಿದೆ ಎಂದು ಹೇಳಿದ್ದರು.
ಈ ಹೇಳಿಕೆ ಬಳಿಕ ರೇವಣ್ಣ ಅವರು ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಮೊರೆ ಹೋಗಿದ್ದಾರೆ.
ಎರಡು ದಿನದ ಹಿಂದೆ ಇದೇ ಪ್ರಕರಣವಾಗಿ ಮಾತನಾಡಿದ್ದ ಎಚ್.ಡಿ.ರೇವಣ್ಣ, ಪ್ರಕರಣಗಳು ದಾಖಲಾಗಿವೆ. ಕಾನೂನು ರೀತಿಯಲ್ಲಿಯೇ ಇವುಗಳನ್ನೆಲ್ಲಾ ಎದುರಿಸುತ್ತೇವೆ. ಇದಕ್ಕೆಲ್ಲಾ ಹೆದರುವ ಪ್ರಶ್ನೆಯೇ ಇಲ್ಲ. ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಬೇಕು ಎನ್ನುವ ಉದ್ದೇಶದಿಂದ ಇಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸೂಕ್ತ ಉತ್ತರ ನೀಡುತ್ತೇವೆ ಎಂದು ಹೇಳಿದ್ದರು.
ಪ್ರಕರಣದಲ್ಲಿ ಏನಿದೆ
ರೇವಣ್ಣ ಅವರ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದ ಮಹಿಳೆ ಮೂರು ದಿನದ ಹಿಂದೆ ಪೊಲೀಸರಿಗೆ ದೂರು ನೀಡಿದ್ದು. ದೂರಿನಂತೆ ಪ್ರಕರಣವನ್ನೂ ದಾಖಲಿಸಿಕೊಳ್ಳಲಾಗಿದೆ. ಹೊಳೆ ನರಸೀಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಎಚ್.ಡಿ ರೇವಣ್ಣ ಹೆಸರಿದ್ದರೆ, ಎರಡನೇ ಆರೋಪಿಯಾಗಿ ಪ್ರಜ್ವಲ್ ರೇವಣ್ಣ ಹೆಸರನ್ನು ಉಲ್ಲೇಖಿಸಲಾಗಿದೆ.
ದಶಕದ ಹಿಂದೆಯೇ ನಮ್ಮ ಪತಿಗೆ ಮಾಜಿ ಸಚಿವರಾದ ಹೆಚ್ ಡಿ ರೇವಣ್ಣ ಹಾಸನ ಡೈರಿಯಲ್ಲಿ ಕೆಲಸ ಕೊಡಿಸಿದ್ದರು. ಇದಾದ ಬಳಿಕ ನನಗೆ 2015ರಲ್ಲಿ ಹೊಳೆ ನರಸೀಪುರದ ಹಾಸ್ಟೇಲ್ ಒಂದರಲ್ಲಿ ಅಡುಗೆ ಕೆಲಸಕ್ಕೆ ರೇವಣ್ಣ ಅವರೇ ಹೇಳಿ ಸೇರಿಸಿದ್ದರು. ಅಲ್ಲಿಂದ ಸ್ವಲ್ಪ ದಿನದಲ್ಲಿಯೇ ರೇವಣ್ಣ ಅವರು ನನಗೆ ತಮ್ಮ ಮನೆಗೆ ಅಡುಗೆ ಕೆಲಸಕ್ಕೆ ಬರುವಂತೆ ತಿಳಿಸಿದ್ದರು. ಆಯಿತೆಂದು ಅವರ ಮನೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದೆ.ಅಡುಗೆ ಕೆಲಸಕ್ಕೆ ಹೋಗುವಾಗ ಅವರ ಪತ್ನಿ ಭವಾನಿ ಅವರು ಮನೆಯಲ್ಲಿ ಇಲ್ಲದ್ದನ್ನೇ ಗಮನಿಸಿಕೊಂಡು ನನ್ನನ್ನು ಮುಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಕೊಠಡಿಯಲ್ಲಿದ್ದಾಗ ಹಣ್ಣು ನೀಡುವ ನೆಪದಲ್ಲಿ ಸೀರೆ ಹಿಡಿದು ಎಳೆದಾಡಿರುವುದು ಹಲವು ಬಾರಿ ನಡೆದಿದೆ. ಇದೇ ವೇಳೆ ಅಡುಗೆ ಮನೆಗೆ ಬಂದು ಪ್ರಜ್ವಲ್ ಸಹ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಹಲವು ಬಾರಿ ನನ್ನ ಮಗಳಿಗೂ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತನೆ ಕೂಡ ಮಾಡಿದ್ದಾರೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 354A (ಲೈಂಗಿಕ ಕಿರುಕುಳ ಆರೋಪ), 354D (ಮಹಿಳೆಗೆ ಮುಜುಗರ ಆಗುವಂತೆ ಮಾಡುವುದು), 506 (ಬೆದರಿಕೆ), 509 (ಮಹಿಳೆ ಮಾನಕ್ಕೆ ಹಾನಿ) ಅಡಿ ಹೊಳೆನರಸೀಪುರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.