Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ
ಕನ್ನಡ ಸುದ್ದಿ  /  ಕರ್ನಾಟಕ  /  Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

ಕೆಎಸ್‌ಆರ್‌ಟಿಸಿ ಬಸ್‌ ಒಂದು ವೇಗದಲ್ಲಿ ಫ್ಲೈ ಓವರ್‌ ಮೇಲೆ ಹಾರಿದ್ದು ಭಾರೀ ಅನಾಹುತ ತಪ್ಪಿದೆ

ಕೆಎಸ್‌ಆರ್‌ಟಿಸಿ ಬಸ್‌ ಅಪಘಾತ
ಕೆಎಸ್‌ಆರ್‌ಟಿಸಿ ಬಸ್‌ ಅಪಘಾತ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ವೊಂದು ಅಪಘಾತಕ್ಕೀಡಾಗಿದೆ. ಸಿನಿಮೀಯ ಸ್ಟಂಟ್ ರೀತಿಯಲ್ಲಿ ನಡೆದಿರುವ ಈ ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ನೆಲಮಂಗಲ ತಾಲೂಕಿನ ಅಡಕಮಾರನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಮೇಲೆ ಈ ದುರಂತ ಸಂಭವಿಸಿದೆ.

ಬೆಂಗಳೂರು - ಸೋಮವಾರಪೇಟೆ ಬಸ್ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮೇಲ್ಸೇತುವೆ ಮೇಲಿನ ಡಿವೈಡರ್‌ಗೆ ಡಿಕ್ಕಿ ಹೊಡೆದು ಎದುರಿನ ರಸ್ತೆಗೆ ಹಾರಿ ನಿಂತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕ ಹಾಗೂ ನಿರ್ವಾಹಕ ಸೇರಿ 6 ಮಂದಿ ಗಾಯಗೊಂಡಿದ್ದಾರೆ.

ಒಂದು ಬದಿಯ ಸುಮಾರು 4 ಅಡಿ ಎತ್ತರದ ರಸ್ತೆ ವಿಭಜಕವನ್ನು ದಾಟಿ ಎದುರು ರಸ್ತೆಯ ಡಿವೈಡರ್ ಮೇಲೆ ಬಸ್ ಬಂದು ನಿಂತಿದೆ. ಬಸ್‌ನ ಚಕ್ರಗಳ ಯಾವುದೇ ಆಧಾರವಿಲ್ಲದೇ ನಿಂತಿವೆ.

ಅಕಸ್ಮಾತ್ ಬಸ್ ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದರೆ ಬಸ್ ನಲ್ಲಿರುವ ಪ್ರಯಾಣಿಕರು ಮತ್ತು ಕೆಳಗಿನ ರಸ್ತೆಯಲ್ಲಿದ್ದ ಸಾರ್ವಜನಿಕರ ಜೀವಕ್ಕೆ ಕುತ್ತು ಬರುವ ಸಾಧ್ಯತೆಗಳಿದ್ದವು.

ಡಿವೈಡರ್‌ಗೆ ಬಸ್ ಡಿಕ್ಕಿ ಹೊಡೆದು ನಿಂತಿದ್ದರಿಂದ ಹೆದ್ದಾರಿಯಲ್ಲಿ ಕೆಲ ಸಮಯ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಕ್ರೇನ್ ಮೂಲಕ ಬಸ್ ಅನ್ನು ತೆರವುಗೊಳಿಸಿದ್ದಾರೆ.ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ ಗ್ರಾಮ ಲೆಕ್ಕಿಗನ ಬಂಧನ:

ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು 10,000 ರೂಪಾಯಿ ಲಂಚ ಪಡೆಯುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಕಸಬಾ ಹೋಬಳಿಯ ಮೈಲನಹಳ್ಳಿ ಕಂದಾಯ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಎಸ್. ಶಿವಕುಮಾರ್ ಅವರನ್ನು ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬೆಂಗಳೂರಿನ ಉಲ್ಲಾಳ ಸಮೀಪದ ಜ್ಞಾನಭಾರತಿ ಬಡಾವಣೆಯ ರೇವಣ್ಣ ಅವರ ಮಕ್ಕಳು ತಮ್ಮ ತಂದೆ ಬರೆದಿದ್ದ ವಿಲ್ ಪ್ರಕಾರ ಜಮೀನಿನ ಖಾತೆ ಬದಲಾವಣೆಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಖಾತೆ ಬದಲಾವಣೆ ಮಾಡಿಕೊಡಲು ಗ್ರಾಮ ಲೆಕ್ಕಾಧಿಕಾರಿ 25,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ರೇವಣ್ಣ ಅವರ ಪುತ್ರ ಮಂಜುನಾಥ್ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ರೂ. 5,000 ಲಂಚದ ಹಣವನ್ನು ಫೋನ್ ಪೇ ಮೂಲಕ ಪಡೆದಿದ್ದ ಆರೋಪಿ, ಎರಡನೇ ಕಂತಿನ 1 5,000 ಹಣವನ್ನು ನೆಲಮಂಗಲದ ತನ್ನ ಖಾಸಗಿ ಕಚೇರಿಗೆ ತಂದುಕೊಡುವಂತೆ ಸೂಚಿಸಿದ್ದರು. ಅಲ್ಲಿಗೆ ಹೋಗಿ ಮಂಜುನಾಥ್ ಲಂಚದ ಹಣ ನೀಡುವಾಗ ಲೋಕಾಯುಕ್ತ ಪೊಲೀಸರು ಆರೋಪಿ ಶಿವಕುಮಾರ್ ನನ್ನು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್‌ ಪಿ ಪವನ್ ನೆಟ್ಟೂರು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಎಸ್. ನಂದಕುಮಾರ್ ಅವರ ತಂಡ ಈ ಕಾರ್ಯಾಚರಣೆ ನಡೆಸಿದೆ.

ವರದಿ: ಎಚ್. ಮಾರುತಿ, ಬೆಂಗಳೂರು

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

Whats_app_banner