Darshan Photo Viral: ಜೈಲಲ್ಲಿ ದರ್ಶನ್‌ ಮೋಜಿನ ಪ್ರಕರಣ, ಕಠಿಣ ಕ್ರಮಕ್ಕೆ ಸೂಚಿಸಿದ ಸಿಎಂ, ಜೈಲಿಗೆ ದೌಡಾಯಿಸಿದ ಸಚಿವ ಪರಮೇಶ್ವರ್‌-bangalore news darshan photo viral government serious home minister parameshwar visits parappana agrahara jail kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Darshan Photo Viral: ಜೈಲಲ್ಲಿ ದರ್ಶನ್‌ ಮೋಜಿನ ಪ್ರಕರಣ, ಕಠಿಣ ಕ್ರಮಕ್ಕೆ ಸೂಚಿಸಿದ ಸಿಎಂ, ಜೈಲಿಗೆ ದೌಡಾಯಿಸಿದ ಸಚಿವ ಪರಮೇಶ್ವರ್‌

Darshan Photo Viral: ಜೈಲಲ್ಲಿ ದರ್ಶನ್‌ ಮೋಜಿನ ಪ್ರಕರಣ, ಕಠಿಣ ಕ್ರಮಕ್ಕೆ ಸೂಚಿಸಿದ ಸಿಎಂ, ಜೈಲಿಗೆ ದೌಡಾಯಿಸಿದ ಸಚಿವ ಪರಮೇಶ್ವರ್‌

Bangalore Jail ಬೆಂಗಳೂರಿನ ಜೈಲಿನಲ್ಲಿ ದರ್ಶನ್‌ ಮೋಜಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರವು ಅಧಿಕಾರಿ, ಸಿಬ್ಬಂದಿ ಅಮಾನತುಗೊಳಿಸಿದ್ದು, ದರ್ಶನ್‌ ಸ್ಥಳಾಂತರಿಸುವ ಯೋಚನೆ ನಡೆಸಿದೆ.

ಬೆಂಗಳೂರಿನ ಜೈಲಿನಲ್ಲಿ ದರ್ಶನ್‌ ಇರುವ ಫೋಟೋ ವೈರಲ್‌ ಆಗಿದೆ.
ಬೆಂಗಳೂರಿನ ಜೈಲಿನಲ್ಲಿ ದರ್ಶನ್‌ ಇರುವ ಫೋಟೋ ವೈರಲ್‌ ಆಗಿದೆ.

ಬೆಳಗಾವಿ/ ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವ ದರ್ಶನ್‌ ತೂಗುದೀಪ ಅವರ ಚಟುವಟಿಕೆಗಳ ಫೋಟೋಗಳು ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತಿರುವ ಸರ್ಕಾರ, ಕಠಿಣ ಕ್ರಮಗಳಿಗೆ ಮುಂದಾಗಿದೆ. ನಿರ್ಲಕ್ಷ್ಯ ವಹಿಸಿದ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತುಪಡಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿಗೆ ದೌಡಾಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದೂ ಅಲ್ಲದೇ ಹಿರಿಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಸಿಎಂ ಸೂಚನೆ

ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಪರಿಗಣನೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಚಿತಪಡಿಸಿದರು.

ಅವರು ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದರ್ಶನ್‌ ವಿಚಾರದಲ್ಲಿ ಅಧಿಕಾರಿಗಳಿಂದ ಲೋಪ ಉಂಟಾಗಿದ್ದು, ಈಗಾಗಲೇ ಸಂಬಂಧಪಟ್ಟಂತೆ 7 ಮಂದಿಯನ್ನು ಅಮಾನತು ಮಾಡಲಾಗಿದೆ. ಇನ್ನೂ ಕೆಲವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳ ಮಟ್ಟದಲ್ಲಿ ನಡೆದಿರುವ ಲೋಪ ಇದಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಗೃಹ ಸಚಿವರಿಗೆ ಸೂಚಿಸಿದ್ದು, ಅವರ ವರದಿ ಆಧಾರದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ದರ್ಶನ ಬೇರೆ ಜೈಲಿಗೆ ಸ್ಥಳಾಂತರ ಮಾಡಬೇಕಾ ಬೇಡವೇ ಎಂಬ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ: ಗೃಹ ಸಚಿವ ಪರಮೇಶ್ವರ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್‌ಗೆ ವಿಶೇಷ ಸತ್ಕಾರ ನೀಡಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.‌ ಜಿ.ಪರಮೇಶ್ವರ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕೈದಿಗಳ ದೈನಂದಿನ ಚಟುವಟಿಕೆ ಮೇಲೆ ನಿಗಾವಹಿಸದಿರುವುದು, ಪ್ರಮುಖ‌ ಪ್ರಕರಣಗಳ ಆರೋಪಿಗಳ ಭೇಟಿ ಮಾಡಿ ಹೋದ ನಂತರ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸದಿರುವುದಕ್ಕೆ ಜೈಲಿನ ಚೀಫ್ ಸೂಪರಿಂಟ್‌ಡೆಂಡ್, ಸೂಪರಿಡೆಂಟ್ ಹಾಗೂ ಮತ್ತಿತರ ಜೈಲು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಾದ ಬಳಿಕ ನಟ ದರ್ಶನನನ್ನು ಬಂಧಿಸಿರುವುದು ಹಾಗೂ ಪ್ರಕರಣದ ಸ್ವರೂಪ ಏನೆಂಬುದು ಎಲ್ಲವೂ ಗೊತ್ತಿದೆ. ಆದಾಗ್ಯೂ ನಿಯಮಗಳನ್ನು ಮೀರಿ ಆರೋಪಿಗಳಿಗೆ ಟೀ, ಸಿಗರೇಟ್ ಮತ್ತಿತರ ಸವಲತ್ತುಗಳನ್ನು ಪೂರೈಕೆಯಾಗಿದೆ.‌ ದಿನದ 24 ಗಂಟೆಯೂ ವಾರ್ಡರ್‌ಗಳು ಕರ್ತವ್ಯದಲ್ಲಿರುತ್ತಾರೆ. ಘಟನೆ ಎಲ್ಲರ ಕಣ್ತಪ್ಪಿ ನಡೆಯಲು ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಯಾವ ವಸ್ತುಗಳು ಪತ್ತೆಯಾಗಿಲ್ಲ. ಜೈಲಿನಲ್ಲಿ ಮೊಬೈಲ್ ಬಳಕೆಯಾಗುತ್ತಿದೆ ಎಂಬುದು ಕಂಡು ಬಂದಿದೆ. ಹೈಫ್ರಿಕ್ವೆನ್ಸಿ ಜಾಮರ್, ಅತ್ಯುತ್ತಮ ಗುಣಮಟ್ಟದ ಮೆಟಲ್ ಡಿಟೆಕ್ಟರ್ ಯಂತ್ರ, ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇಷ್ಟೆಲ್ಲ ಬಂದೋಬಸ್ತ್,‌ ಪರಿಶೀಲನೆ ನಡುವೆಯೂ ಕಾರಾಗೃಹದೊಳಗೆ ಸಿಗರೇಟ್, ಮೊಬೈಲ್ ತಲುಪಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲ ಬಂದೀಖಾನೆಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ‌ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಕಾರಾಗೃಹ ಮತ್ತು ಸುಧಾರಣಾ‌ ಸೇವೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಸೂಚನೆ ನೀಡಿದರು‌.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪರಮೇಶ್ವರ ಅವರು, ಈಗಾಗಲೇ ಏಳು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಚೀಫ್ ಸೂಪರಿಂಡೆಂಟ್ ಶೇಷಮೂರ್ತಿ, ಸೂಪರಿಂಟ್‌ಡೆಂಟ್ ಮಲ್ಲಿಕಾರ್ಜುನ್ ಸ್ವಾಮಿ ಬಂಧಿಖಾನೆಯ ಜವಾಬ್ಧಾರಿ ಹೊತ್ತ ಹಿರಿಯ ಅಧಿಕಾರಿಗಳು.‌ ಪರಿಶೀಲನೆ ವೇಳೆ ಈ ಇಬ್ಬರು ಅಧಿಕಾರಿಗಳ ವೈಫಲ್ಯ, ನಿರ್ಲಕ್ಷ್ಯತನ ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.

ಯಾರು ಸಿಗರೇಟ್ ತಂದುಕೊಟ್ಟರು, ಟೀ ತಂದಕೊಟ್ಟವರು ಮತ್ತು ಖುರ್ಚಿ ಹಾಕಿದವರು ಯಾರು ಎಂಬುದರ ಕುರಿತು ಸಹ ತನಿಖೆ ನಡೆಯಲಿದೆ. ಪ್ರಾಥಮಿಕ ತನಿಖೆಯ ಬಂಧಿಖಾನೆ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗೆ ಸೂಚನೆ‌ ನೀಡಿದ್ದೇನೆ. ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದ ತಂಡ ತನಿಖೆ ನಡೆಸಿ, ವರದಿ ನೀಡಲಿದೆ. ತನಿಖೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು‌ ಎಂದು ಖಡಕ್‌ ಎಚ್ಚರಿಕೆ ನೀಡಿದರು ಡಾ.ಪರಮೇಶ್ವರ್‌.

ಎಲ್ಲ ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೆಚ್ಚಿನ ಸಿಸಿ ಕ್ಯಾಮೆರಾಗಳ ಅಗತ್ಯವಿದ್ದರೆ ಅಳವಡಿಸಲಾಗುವುದು. ಮಾನಿಟರಿಂಗ್ ಮಾಡುವ ಸಂದರ್ಭದಲ್ಲಿ ನಿರ್ಲಕ್ಷ್ಯವಹಿಸಲಾಗಿದೆ.‌ ಆರೋಪಿಗಳನ್ನು ಬೇರೆ ಬಂಧಿಖಾನೆಗೆ ಶಿಫ್ಟ್ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ವಿಐಪಿ ಆರೋಪಿಗಳ ಟ್ರೀಟ್ಮೆಂಟ್‌ಗೆ ರೌಡಿಶೀಟರ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಸೇರಿದಂತೆ ಯಾವುದೇ ರೀತಿಯ ತಪ್ಪು ಕಂಡು ಬಂದರು ಕ್ರಮ ಜರುಗಲಿದೆ. ವರಧಿ ಆಧರಿಸಿ ಅಧಿಕಾರಿಗಳನ್ನು ಅಮಾನತು ಅಥವಾ ಸೇವೆಯಿಂದ ವಜಾಗೊಳಿಸಲಾಗುವುದು.‌ ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿರುವ ವರದಿಯನ್ನು ಪಡೆಯಲಾಗುವುದು ಎನ್ನುವುದು ಗೃಹ ಸಚಿವರು ನೀಡಿದ ಸ್ಪಷ್ಟನೆ.