Bangalore Rains: ಬೆಂಗಳೂರಿನಲ್ಲಿ ಇನ್ನೂ 2 ದಿನ ಮಳೆ, ಇಂದು ಆರೆಂಜ್ ಅಲರ್ಟ್; ಯಾವ ಪ್ರದೇಶದಲ್ಲಿ ಎಷ್ಟು ಮಳೆಯಾಗಿದೆ
Bangalore Weather Updates: ಬೆಂಗಳೂರು ನಗರದಲ್ಲಿ ಎರಡು ದಿನ ಉತ್ತಮ ಮಳೆಯಾಗಿದ್ದರೆ, ಇನ್ನೂ ಎರಡು ದಿನ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬುಧವಾರ ಬೆಂಗಳೂರು ನಗರದಲ್ಲಿ ಆರೆಂಜ್ ಅಲರ್ಟ್ ಕೂಡ ಇದೆ.
ಬೆಂಗಳೂರು: ವಾಯುಭಾರತ ಕುಸಿತದಿಂದ ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆ ಇರಲಿದೆ. ಆದರೆ ಮಳೆಯ ತೀವ್ರತೆ ಕಡಿಮೆಯಾಗಲಿದೆ. ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರದೇಶ ಕೇಂದ್ರವು ದೈನಂದಿನ ವರದಿಯಲ್ಲಿ ಮಾಹಿತಿ ನೀಡಿದೆ. ಬುಧವಾರ ಬೆಳಗಿನ ಜಾವದವರೆಗೂ ಬೆಂಗಳೂರು ಕೆಲವು ಪ್ರದೇಶಗಳಲ್ಲಿ ಮಳೆಯಾದ ವರದಿಯಾಗಿದೆ. ಚೌಡೇಶ್ವರಿ ಹಾಗೂ ಎಚ್‌ಎಎಲ್ ವಿಮಾನ ನಿಲ್ದಾಣದ ಪ್ರದೇಶದಲ್ಲಿಯೇ ಹೆಚ್ಚಿನ ಮಳೆಯಾದ ವರದಿಯಾಗಿದೆ. ಸೋಮವಾರ ಹಾಗೂ ಮಂಗಳವಾರ ಉತ್ತಮ ಮಳೆಯಾಗಿದ್ದರಿಂದ ಕೆಲವು ಭಾಗಗಳಲ್ಲಿ ರಸ್ತೆಗಳಿಗೆ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಮಳೆ ಮುನ್ಸೂಚನೆ ಹೇಗಿದೆ
ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವೇ ಕಂಡು ಬರಲಿದೆ. ಕೆಲವೊಮ್ಮೆ ಸಾಧಾರಣ ಮಳೆಯಾಗಲಿದ್ದು, ಹಲವು ಭಾಗಗಳಲ್ಲಿ ಹಗುರ ಮಳೆಯೂ ಆಗಬಹುದು. ಬುಧವಾರ ಹಾಗೂ ಗುರುವಾರ ಎರಡೂ ದಿನವೂ ಮಳೆಯಾಗಲಿದೆ. ಬುಧವಾರದಂದು ಕೆಲವು ಪ್ರದೇಶದಲ್ಲಿ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಅನ್ನು ಘೋಷಿಸಲಾಗಿದೆ. ಆದರೆ ಹಿಂದಿನ ಮೂರ್ನಾಲ್ಕು ದಿನಕ್ಕೆ ಹೋಲಿಸಿದರೆ ಮಳೆ ಪ್ರಮಾಣ ಬಹುತೇಕ ತಗ್ಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಕರ್ನಾಟಕದ ಸುತ್ತಲೂ ಅಂದರೆ ತಮಿಳುನಾಡು, ಆಂಧ್ರಪ್ರದೇಶ, ಪಾಂಡಿಚೇರಿ ಭಾಗದಲ್ಲಿ ಚಂಡಮಾರುತದ ವಾತಾವರಣವಿದೆ. ವಾಯು ಭಾರ ಕುಸಿತದ ಪರಿಣಾಮವಾಗಿ ಮಳೆ ಕಂಡು ಬಂದಿದೆ. ಚಂಡಮಾರುತ ಕ್ಷೀಣಿಸಿರುವುದರಿಂದ ಮಳೆಯ ಪ್ರಮಾಣವೂ ಬೆಂಗಳೂರಿನಲ್ಲಿ ತಗ್ಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಭಾಗಗಳಲ್ಲೂ ಕೂಡ ಎರಡು ದಿನಗಳ ಕಾಲ ಹಗುರ ದಿಂದ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.
ಮಳೆ ಎಲ್ಲೆಲ್ಲಿ ಆಗಿದೆ
ಬೆಂಗಳೂರಿನ ಹಲವು ಭಾಗದಲ್ಲಿ ಮಂಗಳವಾರವೂ ಉತ್ತಮ ಮಳೆಯಾಗಿದೆ. ಕೆಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಿದ್ದರೆ, ಬಹಳಷ್ಟು ಕಡೆ ತುಂತುರು ಮಳೆಯಾಗಿದೆ.
ಜಿಕೆವಿಕೆಯಲ್ಲಿ ಅತ್ಯಧಿಕ ಹತ್ತು ಸೆ.ಮೀ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಘಟಕದ ಕ್ಯಾಂಪಸ್ ನಲ್ಲ ಒಂಬತ್ತು ಸೆ.ಮೀ, ಹೆಸರಘಟ್ಟಲ್ಲಿ ಏಳು ಸೆ.ಮೀ ಮಳೆಯಾಗಿದೆ.
ಇದರಲ್ಲಿ ಚೌಡೇಶ್ವರಿ 89.50 ಮಿ.ಮೀ ಮಳೆಯಾಗಿರುವುದು ಅತ್ಯಧಿಕ. ಅದೇ ರೀತಿ ಎಚ್‌ಎಎಲ್ ವಿಮಾನ ನಿಲ್ದಾಣ ಭಾಗದಲ್ಲಿ 88 ಮಿ.ಮೀ ಮಳೆ ಸುರಿದಿದೆ.
ವಿದ್ಯಾರಣ್ಯಪುರ ಭಾಗದಲ್ಲಿ 80.50 ಮಿ.ಮೀ. ಜಕ್ಕೂರು ಪ್ರದೇಶದಲ್ಲಿ 75.50 ಮಿ.ಮೀ, ಜಕ್ಕೂರು 2 ಭಾಗದಲ್ಲಿ 73 ಮಿ.ಮೀ, ಮಾರತಹಳ್ಳಿ ಭಾಗದಲ್ಲಿ 71.50 ಮಿ.ಮೀ,
ರಾಜಮಹಲ್ ಬಡಾವಣೆಯ ಭಾಗದಲ್ಲಿ 68.50 ಮಿ.ಮೀ, ಹೊರಮಾವು ಭಾಗದಲ್ಲಿ 67.50 ಮಿ. ಮೀ, ದೊಡ್ಡೇನೆಕ್ಕುಂದಿ ಭಾಗದಲ್ಲಿ 67 ಮಿ.ಮೀ, ಪುಲಕೇಶಿನಗರ ಭಾಗದಲ್ಲಿ 62.50 ಮಿ.ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹವಾಮಾನ ಹೇಗೆ
ಬೆಂಗಳೂರಿನಲ್ಲಿ ಒಂದು ಕಡೆ ಮಳೆಯಾಗುತ್ತಿದ್ದರೆ, ಉಷ್ಣಾಂಶದಲ್ಲೂ ಕುಸಿತ ಕಂಡು ಬಂದು ಚಳಿಯ ವಾತಾವರಣದ ಅನುಭವವಾಗುತ್ತಿದೆ. ಗರಿಷ್ಠ ಉಷ್ಣಾಂಶ ಹಲವು ಭಾಗದಲ್ಲಿ ಕುಸಿತವಾಗಿದೆ. ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಉಷ್ಣಾಂಶವು 25.3 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶವು 19.9 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ.
ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಉಷ್ಣಾಂಶವು 25.3 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶವು 20 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ
ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶವು 25.4 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶವು 20.2 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ.
ಬೆಂಗಳೂರಿನ ಜಿಕೆವಿಕೆ ಭಾಗದಲ್ಲಿ ಗರಿಷ್ಠ ಉಷ್ಣಾಂಶವು 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶವು 20.2 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ.