ಬೆಂಗಳೂರು: ಬಸವನಗುಡಿ ಕಡಲೆಕಾಯಿ ಪರಿಷೆ ಪರಿಷೆಗೆ ಸಂಜೆ ಭೇಟಿ ಕೊಡೋದನ್ನು ಮರೆಯಬೇಡಿ; ನಾಳೆಯೇ ಕೊನೇ ದಿನ
ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆ ಶುರುವಾಗಿದ್ದು, ಜಗಮಗಿಸುವ ದೀಪಾಲಂಕಾರ, ಜಾತ್ರೆಯ ವಾತಾವರಣ, ಸಂಭ್ರಮ ಸಡಗರ ನೋಡಬೇಕಾದರೆ ಇಂದೇ ಸಂಜೆ ಭೇಟಿ ಕೊಡಿ. ನಾಳೆ ಕೊನೇ ದಿನವಾಗಿದ್ದು, ಪರಿಷೆಯಲ್ಲಿ ಹಸಿ ಕಡಲೆಕಾಯಿ ಪರಿಷೆ, ಬೇಯಿಸಿದ ಶೇಂಗಾ ಖರೀದಿಸಿ ತಿನ್ನೋದನ್ನು ಮರೆಯಬೇಡಿ. ಪರಿಷೆಯಲ್ಲಿ ಏನುಂಟು, ಏನಿಲ್ಲ ಇಲ್ಲಿದೆ ವಿವರ. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ನಗರ ಕೂಡಾ ಒಂದಾಗಿದ್ದರೂ ಹಲವಾರು ಸಂಪ್ರದಾಯಗಳನ್ನು ಉಳಿಸಿಕೊಳ್ಳುತ್ತಾ ಬಂದಿದೆ. ಅದರಲ್ಲಿ ಕಡಲೆಕಾಯಿ ಪರಿಷೆ ಮತ್ತು ಕರಗ ಪ್ರಮುಖವಾದವು. ಜತೆಗೆ ಅಲ್ಲಲ್ಲಿ ಊರ ಹಬ್ಬಗಳು ನಡೆಯುತ್ತಲೇ ಇರುತ್ತವೆ. ಬಸವನಗುಡಿ ಕಡಲೆಕಾಯಿ ಪರಿಷೆಇಂದಿನಿಂದ ಆರಂಭವಾಗಲಿದೆ. ಈಗಾಗಲೇ ಎರಡು ದಿನಗಳ ಮೊದಲೇ ಪರಿಷೆ ಆರಂಭವಾಗಿದ್ದು ಕಡಲೆಕಾಯಿ ಮಾರಾಟ ಜೋರಾಗಿದೆ. ವಾರಾಂತ್ಯದ ರಜೆ ಇದ್ದು ಶನಿವಾರ ಭಾನುವಾರ ಸಾರ್ವಜನಿಕರು ಲಗ್ಗೆ ಇಟ್ಟ ದೃಶ್ಯಗಳು ಕಂಡುಬಂದವು.
ಮೈಸೂರು, ತುಮಕೂರು, ಮಂಡ್ಯ, ಕನಕಪುರ, ಮಾಗಡಿ, ಚಿಕ್ಕಬಳ್ಳಾಪುರ, ಕೋಲಾರ, ದೊಡ್ಡಬಳ್ಳಾಪುರ ರಾಮನಗರ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಿಂದಲೂ ಆಗಮಿಸಿದ್ದಾರೆ. ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆ ಎಂದು ಜನಜನಿತವಾಗಿದ್ದರೂ ಮೂಲತಃ ಸಂಕೇನಹಳ್ಳಿ ಯಲ್ಲಿ ನಡೆಯುವ ಪರಿಷೆ ಇದಾಗಿದೆ. ಈ ಬಾರಿಯ ಬಸವನಗುಡಿಯ ಕಡಲೆಕಾಯಿ ಪರಿಷೆಗೆ 10ಕ್ಕೂ ಹೆಚ್ಚಿನ ಬಗೆಯ ಬಗೆಯ ಕಡಲೆಕಾಯಿ ಬಂದಿವೆ. ನಾಟಿ, ಫಾರಂ, ಬೋಂಡಾ ಹಾಗೂ ಬಾದಮಿ ಕಡಲೆಕಾಯಿ ಪ್ರಮುಖ ಆಕರ್ಷಣೆಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಲೆಕಾಯಿ ಬಲೆ ಕೊಂಚ ಏರಿಕೆಯಾಗಿದೆ. ಸೇರು ಕಡಲೆಕಾಯಿ 50- 70 ರೂ.ವರೆಗೆ ಮಾರಾಟವಾಗುತ್ತಿದೆ.
ಕಡಲೆಕಾಯಿ ಪರಿಷೆ ಪರಿಷೆ ನಡೆಯುವುದೇಕೆ
ಪುರಾತನ ಕಾಲದಲ್ಲಿ ರೈತರು ಬಸವನಗುಡಿಯಲ್ಲಿ ಕಡಲೆಕಾಯಿ ಬೆಳೆಯುತ್ತಿದ್ದರು. ಸಮೃದ್ಧ ಬೆಳೆ ಬೆಳೆದು ಕಟಾವಿಗೆ ಸಿದ್ಧವಾದ ಸಂದರ್ಭದಲ್ಲೇ ಎತ್ತುಗಳು ನುಗ್ಗಿ ಬೆಳೆ ನಾಶಪಡಿಸುತ್ತಿದ್ದವು. ಇದರಿಂದ, ರೈತರಿಗೆ ಅಪಾರ ನಷ್ಟವಾಗುತ್ತಿತ್ತು. ಪರಿಹಾರ ಕಂಡುಕೊಳ್ಳಲು ರೈತರು ನಂದಿ ದೇವ (ಬಸವಣ್ಣ)ನ ಮೊರೆ ಹೋದರು. ಆಗ ರೈತರು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸಲು ಆರಂಭಿಸಿದರು. ಪ್ರತಿವರ್ಷ ಕಾರ್ತಿಕ ಮಾಸದ ಕಡೆಯ ಸೋಮವಾರ ಬಸವನಿಗೆ ಕಡಲೆಕಾಯಿ ಅರ್ಪಿಸಲು ಆರಂಭಿಸಿದರು. ಹೀಗೆ ಇದೇ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬರುತ್ತಿತ್ತು. ಇದೇ ಸಂದರ್ಭದಲ್ಲಿ ಬಸವನಗುಡಿಯಲ್ಲಿ ನಂದಿ ವಿಗ್ರಹವೊಂದು ದೊರಕಿತು. ಈ ಸ್ಥಳದಲ್ಲಿ ನಾಡಪ್ರಭು ಕೆಂಪೇಗೌಡರು 16ನೇ ಶತಮಾನದಲ್ಲಿ ನಂದಿಯ ವಿಗ್ರಹದ ಸುತ್ತಲೂ ದೇವಾಲಯವನ್ನು ನಿರ್ಮಿಸಿದರು. ಇದೇ ಇಂದಿನ ಬಸವನಗುಡಿ ಅಥವಾ ಬಿಗ್ ಬುಲ್ ಟೆಂಪಲ್ ಎಂದು ಹೆಸರಾಗಿದೆ. ದೇವಾಲಯ ನಿರ್ಮಾಣವಾದ ಬಳಿಕ ರೈತರು ಬಸವಣ್ಣನಿಗೆ ಕಡಲೆಕಾಯಿ ಅರ್ಪಿಸಲು ಆರಂಭಿಸಿದರು.
ಕಾರ್ತಿಕ ಮಾಸದಲ್ಲೇ ಪರಿಷೆ ಯಾಕೆ
ಕಾರ್ತಿಕ ಮಾಸದಲ್ಲಿ ಶಿವನ ಆರಾಧನೆ ನಡೆಯುತ್ತದೆ. ಈ ಮಾಸದ ಸೋಮವಾರದಂದು ಶಿವನಿಗೆ ವಿಶೇಷ ಪೂಜೆಗಳು ನೆರವೇರುತ್ತವೆ. ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯುತ್ತದೆ. ಕಾರ್ತಿಕ ಮಾಸದ ಸೋಮವಾರ ಶಿವನ ನೆಚ್ಚಿನ ದಿನವೂ ಹೌದು, ಶಿವನ ವಾಹನ ನಂದಿಗೂ ಪ್ರಿಯವಾದ ದಿನವೂ ಹೌದು. ಹೀಗಾಗಿ ಕಾರ್ತಿಕ ಮಾಸದಲ್ಲಿ ಸೋಮವಾರ ಕಡಲೆಕಾಯಿ ಪರಿಷೆ ನಡೆಯುತ್ತದೆ.
ಸಮೀಪದ ಬ್ಯುಗಲ್ ರಾಕ್ ಮತ್ತು ನರಸಿಂಹ ಸ್ವಾಮಿ ಉದ್ಯಾನದಲ್ಲಿ ಇಂದು ನಾಳೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೀವು ಒಂದೆರಡು ಬಗೆಯ ಕಡಲೆಕಾಯಿ ತಿಂದಿರಬಹುದು. ಈ ಪರಿಷೆಯಲ್ಲಿ ನಿಮಗೆ ಹತ್ತಾರು ಬಗೆಯ ಕಡಲೆಕಾಯಿ ರುಚಿ ನೋಡಬಹುದು. ಕಡ್ಲೆಕಾಯಿಯಲ್ಲಿ ಎಷ್ಟೊಂದು ಬಗೆಯ ತಳಿಗಳಿವೆ, ಎಷ್ಟೊಂದು ವಿವಿಧ ರುಚಿಗಳಿವೆ ಎಂಬುದನ್ನು ಅರಿಯಲು ಈ ಪರಿಷೆಗೆ ಭೇಟಿ ನೀಡಲೇಬೇಕು. ಇನ್ನೆರಡು ದಿನ ಬೆಂಗಳೂರು ನಗರದ ವಿವಿಧ ಮಾಲ್, ಅಥವಾ ಮಲ್ಟಿಪ್ಲೆಕ್ಸ್, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಬಿಡಿ. ಅಲ್ಲಿಯೇ ಇರುತ್ತವೆ. ಕಡಲೆಕಾಯಿ ಪರಿಷೆಯ ಸೊಗಡು ಸವಿಯಿರಿ. ಮಿಸ್ ಮಾಡಿದ್ರೆ ಮತ್ತೆ ಒಂದು ವರ್ಷ ಕಾಯಬೇಕಾದೀತು.
(ವರದಿ- ಎಚ್.ಮಾರುತಿ, ಬೆಂಗಳೂರು)