ಮೊದಲು ಬೆಂಗಳೂರು ಬಿಟ್ಟು ತೊಲಗಿ; ಉದ್ಯಾನ ನಗರಿ ಖಾಲಿ ಹೊಡೆಯುತ್ತೆ ಎಂದ ಉತ್ತರ ಭಾರತ ಮಹಿಳೆ ವಿರುದ್ಧ ಕನ್ನಡಿಗರ ಒಕ್ಕೊರಲ ಧ್ವನಿ
ಟ್ರಾವೆಲ್ ವ್ಲಾಗರ್ ಎಂದು ಹೇಳಿಕೊಳ್ಳುವ ಸುಗಂಧ್ ಶರ್ಮಾ ಎಂಬ ಮಹಿಳೆ, ಉತ್ತರ ಭಾರತೀಯರು ಇಲ್ಲದಿದ್ದರೆ ಬೆಂಗಳೂರು ನಗರ ಖಾಲಿಯಾಗಿ ಕಾಣಲಿದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಕನ್ನಡ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಕುರಿತು ಉತ್ತರ ಭಾರತೀಯರು ಹಾಗೂ ಕನ್ನಡಿಗರ ನಡುವಿನ ಸೋಷಿಯಲ್ ಮೀಡಿಯಾ ವಾಕ್ಸಮರ ಹೊಸದೇನಲ್ಲ. ಇದಕ್ಕೆ ಈಗ ಮತ್ತೊಂದು ಸೇರ್ಪಡೆಯಾಗಿದೆ. ಕರ್ನಾಟಕದ ರಾಜಧಾನಿ ಹಾಗೂ ಉದ್ಯಾನ ನಗರಿ ಬೆಂಗಳೂರನ್ನು ಉತ್ತರ ಭಾರತೀಯರು ನಿರ್ಮಿಸಿದ್ದಾರೆ. ಅಲ್ಲದೆ ವಲಸಿಗರು ಇಲ್ಲದೆ ಸಿಲಿಕಾನ್ ಸಿಟಿ ಇರಲು ಸಾಧ್ಯವಿಲ್ಲ ಎಂದು ಹೇಳಿಕೊಂಡ ಮಹಿಳೆಗೆ ಕನ್ನಡಿಗರು ಸರಿಯಾಗಿ ಪಾಠ ಕಲಿಸಿದ್ದರೆ. ಇನ್‌ಸ್ಟಾಗ್ರಾಮ್ ಇನ್‌ಫ್ಲ್ಯುಯೆನ್ಸರ್ ಒಬ್ಬರ ಪೋಸ್ಟ್‌ಗೆ ಕನ್ನಡ ಸೆಲೆಬ್ರಿಟಿಗಳು ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ. ಆದಷ್ಟು ಬೇಗ ಬೆಂಗಳೂರಿನಿಂದ ತೊಲಗಿ ಎಂದು ಕನ್ನಡಿಗರು ಕೇಳಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ.
ಜಾಗತಿಕ ಟೆಕ್ ರಾಜಧಾನಿಯಾಗಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಭಾರತದ ವಿವಿಧ ಮೂಲೆಗಳ ಜನರ ವಾಸಿಸುತ್ತಿದ್ದಾರೆ. ಅಲ್ಲದೆ ಹಲವು ವಿದೇಶಿಗರು ಕೂಡಾ ಇದ್ದಾರೆ. ಹೀಗಾಗಿ ಭಾರತದವರೇ ಆದ ಮಹಿಳೆಯು, ಉದ್ಯಾನ ನಗರಿಯನ್ನು ದೂಷಿಸಿರುವುದು ಕನ್ನಡಿಗರಿಗೆ ಇಷ್ಟವಾಗಿಲ್ಲ. ನಗರವನ್ನು ದೂಷಿಸುವ ಮೂಲಕ ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿಯನ್ನು ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.
ಟ್ರಾವೆಲ್ ವ್ಲಾಗರ್ ಎಂದು ತನ್ನನ್ನು ತಾನೆ ಹೇಳಿಕೊಂಡಿರುವ ಸುಗಂಧ್ ಶರ್ಮಾ, ಒಂದು ವೇಳೆ ಉತ್ತರ ಭಾರತೀಯರು ಬೆಂಗಳೂರು ನಗರವನ್ನು ತೊರೆದರೆ, ಗಾರ್ಡನ್ ಸಿಟಿ ಖಾಲಿ ಖಾಲಿಯಾಗಿ ಕಾಣುತ್ತದೆ. ಇಲ್ಲಿನ ಹಲವು ಪ್ರದೇಶಗಳ ಜನರು ಹಣ ಗಳಿಸಲು ಸಾಧ್ಯವಿಲ್ಲ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
ಪಬ್ ಖಾಲಿ, ನಗರವೂ ಖಾಲಿ ಖಾಲಿ
“ಬೆಂಗಳೂರಿನಲ್ಲಿರುವ ಉತ್ತರ ಭಾರತೀಯರು ಏನಾದರೂ ನಗರವನ್ನು ತೊರೆದು ಹೋದರೆ ಏನಾಗುತ್ತದೆ ಎಂಬುದನ್ನು ಊಹಿಸಿ. ಇಲ್ಲಿನ ಪಿಜಿಗಳು ಖಾಲಿಯಾಗುತ್ತವೆ. ಮಾಲೀಕರು ಹಣ ಗಳಿಸಲು ಸಾಧ್ಯವಾಗುವುದಿಲ್ಲ. ಕೋರಮಂಗಲದ ಪಬ್‌ಗಳಲ್ಲಿ ಪಂಜಾಬಿ ಸಂಗೀತಕ್ಕೆ ನೃತ್ಯ ಮಾಡಲು ಯಾರೂ ಇರುವುದಿಲ್ಲ, ಎಲ್ಲಾ ಖಾಲಿ ಹೊಡೆಯುತ್ತವೆ” ಎಂದು ಅತಿರೇಕದ ಮಾತುಗಳನ್ನಾಡಿದ್ದಾರೆ.
ಬೆಂಗಳೂರಿನಲ್ಲಿರುವ ವಲಸಿಗರು ನಗರದಿಂದ ಹಿಂತಿರುಗಲು ಆರಂಭಿಸಿದರೆ ಬೆಂಗಳೂರು ಡಲ್ ಹೊಡೆಯುತ್ತದೆ. ನಗರ ತನ್ನ ಮೋಡಿಯನ್ನು ಕಳೆದುಕೊಳ್ಳುತ್ತದೆ ಎಂದು ಶರ್ಮಾ ಹೇಳಿದ್ದಾರೆ. “ವಲಸಿಗರು ಹಿಂತಿರುಗಿದರೆ ಬೆಂಗಳೂರಿನ ಮೋಡಿ ಸಂಪೂರ್ಣವಾಗಿ ಕಳೆದುಹೋಗುತ್ತದೆ. ನಮ್ಮನ್ನು ಹೊರಹೋಗುವಂತೆ ಹೇಳುವ ಮೊದಲು ಕನ್ನಡಿಗರು ಅದನ್ನು ಅರ್ಥಮಾಡಿಕೊಳ್ಳಬೇಕು,” ಎಂದು ಅವರು ಹೇಳಿದ್ದಾರೆ.
ಮೊದಲು ನೀವು ಬೆಂಗಳೂರಿಂದ ನಡೀರಿ, ಅಷ್ಟು ಸಾಕು
ಮಹಿಳೆಯ ರೀಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಕಾಮೆಂಟ್ ಮಾಡಿದ್ದಾರೆ. ಕನ್ನಡದ ಟಾಪ್ ಸೆಲೆಬ್ರಿಟಿಗಳು ಕಾಮೆಂಟ್ ವಿಭಾಗದಲ್ಲಿ ಪ್ರತಿಕ್ರಿಯಿಸಿದ್ದಾರೆ. ನಟಿ ಚೈತ್ರಾ ಆಚಾರ್, “ನೀವು ಮೊದಲು ಪ್ರಯೋಗ ರೀತಿಯಲ್ಲಿ ಬೆಂಗಳೂರಿನಿಂದ ಹೊರಟು ನೋಡಿ. ಬೆಂಗಳೂರು ಖಾಲಿಯಾಗುವುದನ್ನು ನೋಡೋಣ. ನಾವು ಆ ಖಾಲಿತನದೊಂದಿಗೆ, ಡಾನ್ಸರ್‌ಗಳಿಲ್ಲದ ಪಬ್‌ನೊಂದಿಗೆ ಬದುಕಲು ಸಿದ್ಧರಿದ್ದೇವೆ. ನಮ್ಮಿಂದ ನಿಜಕ್ಕೂ ಅದು ಸಾಧ್ಯ. ಉಳಿದ ಉತ್ತರ ಭಾರತೀಯರ ವಿಷಯ ಬಿಟ್ಟುಬಿಡಿ. ಮೊದಲು ನೀವೇ ಬೆಂಗಳೂರು ತೊರೆದು ನೋಡಿ ಮೇಡಂ, ಸದ್ಯಕ್ಕೆ ಅಷ್ಟೇ ಸಾಕು.” ಎಂದು ಕಾಮೆಂಟ್ ಮಾಡಿದ್ದಾರೆ.
ಸಂಗೀತ ನಿರ್ದೇಶಕ ಹಾಗೂ ಬಿಗ್‌ಬಾಸ್ ವಿನ್ನರ್ ಚಂದನ್ ಶೆಟ್ಟಿ ಪ್ರತಿಕ್ರಿಯಿಸಿ, ದಯವಿಟ್ಟು ಬೆಂಗಳೂರು ಬಿಟ್ಟು ಹೋಗಿ ಎಂದು ಕಾಮೆಂಟ್ ಮಾಡಿದ್ದಾರೆ. ನಟಿ ವರ್ಷಾ ಬೊಳ್ಳಮ್ಮ ಕೂಡ “ದಯವಿಟ್ಟು ಬೆಂಗಳೂರಿನಿಂದ ಹೊರಟುಹೋಗಿ” ಎಂದು ಬರೆದಿದ್ದಾರೆ.
ನಿಮ್ಮಿಂದ ಬೆಂಗಳೂರು ಬಿಡಲು ಸಾಧ್ಯವೇ ಇಲ್ಲ
ನಟಿ ಹಾಗೂ ನಿರೂಪಕಿ ಅನುಪಮಾ ಗೌಡ, “ನೀವು ಬೆಂಗಳೂರು ಬಿಟ್ಟು ಹೋಗೋದೆ ಇಲ್ಲ ಎಂದು ನಮಗಿತ್ತು. ನಿಮಗೆ ಎಲ್ಲಕ್ಕಿಂತ ಹೆಚ್ಚಾಗಿ ಬೆಂಗಳೂರು ಬೇಕು. ಒಂದು ವೇಳೆ ನೀವು ಬೆಂಗಳೂರನ್ನು ತೊರೆಯುವುದರಿಂದ ನಮ್ಮ ಊರಿಗೆ ಏನೂ ಸಮಸ್ಯೆ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮಿಂದ ಬೆಂಗಳೂರು ತೊರೆಯಲು ಸಾಧ್ಯವೇ ಇಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ,” ಎಂದು ಹೇಳಿದ್ದಾರೆ.