ಇದು ಬಿಜೆಪಿ ಷಡ್ಯಂತ್ರ, ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ; ಬೇಗನೆ ದೋಷಮುಕ್ತರಾಗುತ್ತಾರೆ ಎಂದ ಡಿಕೆ ಶಿವಕುಮಾರ್
ಕನ್ನಡ ಸುದ್ದಿ  /  ಕರ್ನಾಟಕ  /  ಇದು ಬಿಜೆಪಿ ಷಡ್ಯಂತ್ರ, ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ; ಬೇಗನೆ ದೋಷಮುಕ್ತರಾಗುತ್ತಾರೆ ಎಂದ ಡಿಕೆ ಶಿವಕುಮಾರ್

ಇದು ಬಿಜೆಪಿ ಷಡ್ಯಂತ್ರ, ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ; ಬೇಗನೆ ದೋಷಮುಕ್ತರಾಗುತ್ತಾರೆ ಎಂದ ಡಿಕೆ ಶಿವಕುಮಾರ್

ಬಿಜೆಪಿಯವರು ನನ್ನ ಮೇಲೆ ಷಡ್ಯಂತ್ರ ರೂಪಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಷಡ್ಯಂತ್ರ ರೂಪಿಸುತ್ತಿದ್ದಾರೆ. ಸಿಎಂ ಯಾವುದೇ ತಪ್ಪು ಮಾಡಿಲ್ಲ.ಹಗರಣದಲ್ಲಿ ಭಾಗಿಯಾಗಿಲ್ಲ. ತನಿಖೆ ನಡೆದರೂ ಅವರು ದೋಷಮುಕ್ತರಾಗುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಳಿಸಿದ್ದಾರೆ.

ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ; ಬೇಗನೆ ದೋಷಮುಕ್ತರಾಗುತ್ತಾರೆ ಎಂದ ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ; ಬೇಗನೆ ದೋಷಮುಕ್ತರಾಗುತ್ತಾರೆ ಎಂದ ಡಿಕೆ ಶಿವಕುಮಾರ್ (ANI File)

ಬೆಂಗಳೂರು: ನಮ್ಮ ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ. ಅವರು ಯಾವುದೇ ಹಗರಣದಲ್ಲೂ ಭಾಗಿಯಾಗಿಲ್ಲ. ಅವರ ವಿರುದ್ಧ ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಯಾವುದೇ ತನಿಖೆ ನಡೆದರೂ ಅವರು ದೋಷಮುಕ್ತರಾಗುತ್ತಾರೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿಗಳ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬಗ್ಗೆ ಡಿಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ತಾಜ್ ವೆಸ್ಟೆಂಡ್ ಹೋಟೆಲ್ ಬಳಿ ಮಾತನಾಡಿದ ಅವರು, ಬಿಜೆಪಿಯವರು ನನ್ನ ಮೇಲೆ ಹೇಗೆ ಷಡ್ಯಂತ್ರ ರೂಪಿಸಿ ಕೇಸ್ ದಾಖಲಿಸಿ, ಜೈಲಿಗೆ ಹಾಕಿದರೋ ಅದೇ ರೀತಿ ನಮ್ಮ ಮುಖ್ಯಮಂತ್ರಿಗಳ ವಿರುದ್ಧವೂ ಷಡ್ಯಂತ್ರ ರೂಪಿಸುತ್ತಿದ್ದಾರೆ. ಭಗವಂತನ ಕೃಪೆಯಿಂದ ನಾನು ಜೈಲಿಗೆ ಹೋದ ಪ್ರಕರಣ ಕೂಡ ವಜಾಗೊಂಡಿದೆ ಎಂದರು.

ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ. ನಾವೆಲ್ಲರೂ ಮುಖ್ಯಮಂತ್ರಿಗಳ ಜತೆಗೆ ನಿಲ್ಲುತ್ತೇವೆ. ಹೋರಾಟ ಮುಂದುವರಿಸುತ್ತೇವೆ. ಅವರು ಮಾಡಿರುವ ಕೆಲಸ, ರಾಜ್ಯದ ಜನರಿಗೆ ನೀಡಿರುವ ಯೋಜನೆಯನ್ನು ಬಿಜೆಪಿಯವರಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ. ನಮಗೆ ಈ ನೆಲದ ಕಾನೂನಿನ ಮೇಲೆ ಗೌರವವಿದೆ. ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದು ತಿಳಿಸಿದರು.

ತೀರ್ಪಿನ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ

ಸಿಎಂ ಹಾಗೂ ಸರ್ಕಾರಕ್ಕೆ ಇದು ಹಿನ್ನಡೆಯೇ ಎಂದು ಕೇಳಿದಾಗ, ಇಲ್ಲಿ ಹಿನ್ನಡೆಯಾಗುವ ವಿಚಾರ ಏನಿದೆ? ತನಿಖೆ ನಡೆಯಬೇಕು ಎಂದು ಕೋರ್ಟ್ ಆದೇಶ ನೀಡಿರುವುದಾಗಿ ಮಾಧ್ಯಮಗಳು ಹೇಳುತ್ತಿವೆ. ಈ ತೀರ್ಪಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರ ಮಾತನಾಡುತ್ತೇನೆ. ನ್ಯಾಯಾಲಯದ ತೀರ್ಪು ಏನಿದೆ ಎಂದು ನಾನು ನೋಡಿಲ್ಲ. ಮಾಧ್ಯಮಗಳಿಂದ ವಿಚಾರ ತಿಳಿಯುತ್ತಿದೆ. ಸಂಪೂರ್ಣ ಮಾಹಿತಿ ಪಡೆದ ನಂತರ ಪ್ರತಿಕ್ರಿಯೆ ನೀಡುತ್ತೇನೆ, ಎಂದು ತಿಳಿಸಿದರು.

ನಿವೇಶನಗಳ ಹಂಚಿಕೆಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದು, ತನ್ನ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌ ತೀರ್ಪಿನ ಬಳಿಕ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ತೀರ್ಪು ಗಮನಿಸಿರುವೆ. ಯಾವುದೇ ತನಿಖೆಗೆ ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. ಕಾನೂನು ಅಡಿ ಅಂತಹ ತನಿಖೆಗೆ ಅವಕಾಶ ಇದೆಯೋ ಇಲ್ಲವೋ ಎಂಬ ಬಗ್ಗೆ ತಜ್ಞರ ಜೊತೆ ಸಮಾಲೋಚಿಸುತ್ತೇನೆ. ಕಾನೂನು ತಜ್ಞರ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.

ರಾಜಭವನದ ದುರ್ಬಳಕೆ ಮೂಲಕ ವಿರೋಧ ಪಕ್ಷಗಳು ಸರ್ಕಾರವನ್ನು ಹಣಿಯುವ ಸಂಚನ್ನು ನರೇಂದ್ರಮೋದಿ ನೇತೃತ್ವದ ಬಿಜೆಪಿ ದೇಶಾದ್ಯಂತ ನಡೆಸುತ್ತಿದೆ ಎಂದೂ ಟೀಕಾಪ್ರಹಾರ ಮುಂದುವರೆಸಿದರು. ಹೈಕೋರ್ಟ್ ಆದೇಶದ ಅಂಶಗಳನ್ನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ಆದೇಶ ಪ್ರತಿ ಪಡೆದು ಓದಿದ ಬಳಿಕ‌ ವಿಸ್ತೃತವಾದ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.

Whats_app_banner