ಬಿಜೆಪಿ ಪಾದಯಾತ್ರೆಗೆ ಪಕ್ಷದೊಳಗೆ ಭಿನ್ನರಾಗ; ಹಿರಿಯ ಶಾಸಕರು, ಸಂಸದರ ಗೈರು, ವಿಜಯೇಂದ್ರಗೆ ಮುಂದುವರಿದ ಅಸಹಕಾರ-bengaluru news divide within bjp padayatra sr mla mps absence grabbed attn continued disobedience to by vijayendra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬಿಜೆಪಿ ಪಾದಯಾತ್ರೆಗೆ ಪಕ್ಷದೊಳಗೆ ಭಿನ್ನರಾಗ; ಹಿರಿಯ ಶಾಸಕರು, ಸಂಸದರ ಗೈರು, ವಿಜಯೇಂದ್ರಗೆ ಮುಂದುವರಿದ ಅಸಹಕಾರ

ಬಿಜೆಪಿ ಪಾದಯಾತ್ರೆಗೆ ಪಕ್ಷದೊಳಗೆ ಭಿನ್ನರಾಗ; ಹಿರಿಯ ಶಾಸಕರು, ಸಂಸದರ ಗೈರು, ವಿಜಯೇಂದ್ರಗೆ ಮುಂದುವರಿದ ಅಸಹಕಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಆಗ್ರಹಿಸಿದ ಬಿಜೆಪಿ ಪಾದಯಾತ್ರೆಗೆ ಪಕ್ಷದೊಳಗೆ ಭಿನ್ನರಾಗ ವ್ಯಕ್ತವಾಗಿದೆ. ಹಿರಿಯ ಶಾಸಕರು, ಸಂಸದರ ಗೈರು ಎದ್ದುಕಾಣುತ್ತಿದೆ. ಪಕ್ಷದ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರಗೆ ಅಸಹಕಾರ ಮುಂದುವರಿದಿದ್ದು, ಒಟ್ಟಾರೆ ವಿದ್ಯಮಾನದ ಚಿತ್ರಣ ಹೀಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು).

ಬಿಜೆಪಿ ಪಾದಯಾತ್ರೆಗೆ ಪಕ್ಷದೊಳಗೆ ಭಿನ್ನರಾಗ ವ್ಯಕ್ತವಾಗಿದೆ. ಹಿರಿಯ ಶಾಸಕರು, ಸಂಸದರ ಗೈರು; ವಿಜಯೇಂದ್ರಗೆ ಅಸಹಕಾರ ಮುಂದುವರಿದಿರುವುದು ಕಂಡುಬಂದಿದೆ.
ಬಿಜೆಪಿ ಪಾದಯಾತ್ರೆಗೆ ಪಕ್ಷದೊಳಗೆ ಭಿನ್ನರಾಗ ವ್ಯಕ್ತವಾಗಿದೆ. ಹಿರಿಯ ಶಾಸಕರು, ಸಂಸದರ ಗೈರು; ವಿಜಯೇಂದ್ರಗೆ ಅಸಹಕಾರ ಮುಂದುವರಿದಿರುವುದು ಕಂಡುಬಂದಿದೆ.

ಬೆಂಗಳೂರು: ಮೈಸೂರು ಮುಡಾ ಮತ್ತು ವಾಲ್ಮೀಕಿ ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನಿಂದ ಮೈಸೂರುವರೆಗೆ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಎರಡನೆಯ ದಿನವನ್ನು ಮುಗಿಸಿದೆ.

ತನ್ನ ಮಿತ್ರ ಪಕ್ಷ ಜೆಡಿಎಸ್‌ ಮನವೊಲಿಸಿ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಮನವೊಲಿಸುವಲ್ಲಿ ಸಫಲವಾಗಿದೆಯಾದರೂ ತನ್ನದೇ ಪಕ್ಷದ ಮುಖಂಡರು ಮತ್ತು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಹೈಕಮಾಂಡ್‌, ಕರ್ನಾಟಕ ಬಿಜೆಪಿ ವರಿಷ್ಠರು ಸೋತಿರುವುದು ಎದ್ದು ಕಾಣುತ್ತಿದೆ. ಪಾಯಾತ್ರೆಯಲ್ಲಿ ವಿಧಾನಸಭಾ ಶಾಸಕರು, ವಿಧಾನಪರಿಷತ್‌ ಸದಸ್ಯರು ಮತ್ತು ಸಂಸತ್‌ ಸದಸ್ಯರ ಅನುಪಸ್ಥಿತಿ ಎದ್ದು ಕಾಣಿಸುತ್ತಿದೆ. ಶನಿವಾರ ಪಾದಯಾತ್ರೆಯಲ್ಲಿ ಬಾಗವಹಿಸದೇ ಇರುವ ಬಹುತೇಕ ಶಾಸಕರು ಮತ್ತು ಮುಖಂಡರು ಬಿ.ವೈ.ವಿಜಯೇಂದ್ರ ಅವರ ವಿರೋಧಿಗಳು ಎನ್ನುವುದು ಸಹಜವಾಗಿ ಗಮನಸೆಳೆಯುವ ವಿಷಯ.

ವಿಜಯೇಂದ್ರಗೆ ವಿರೋಧ ಯಾರಿಂದ, ಯಾರು ಸೈಲೆಂಟ್‌

ಪಾದಯಾತ್ರೆ ಆರಂಭವಾದ ಶನಿವಾರ ಪಕ್ಷದ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಅವರು ಭ್ರಷ್ಟ ವ್ಯಕ್ತಿಯನ್ನು ಪಕ್ಷದ ಅಧ್ಯಕ್ಷನನ್ನಾಗಿ ಒಪ್ಪಿಕೊಳ್ಳುವುದೇ ಇಲ್ಲ ಎಂದು ಗುಡುಗಿದ್ದರು. ಬಿ.ಎಸ್.ಯಡಿಯೂರಪ್ಪ ಕುಟುಂಬದ ಕಡು ವಿರೋಧಿಯಾಗಿರುವ ಯತ್ನಾಳ, ಹೈಕಮಾಂಡ್‌ ಹೇಳಿದರೂ ಅವರ ಹಿಂದೆ ಹೆಜ್ಜೆ ಹಾಕುವುದಿಲ್ಲ ಎಂದು ಗುಡುಗಿದ್ದರು. ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ, ಎಸ್.ಟಿ.ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ ಅವರೂ ಪಾದಯಾತ್ರೆಗೆ ಗೈರು ಹಾಜರಾಗಿದ್ದಾರೆ.

ಇನ್ನು ಬಿಜೆಪಿ ಆಯೋಜಿಸಿರುವ ಈ ಪಾದಯಾತ್ರೆಯಲ್ಲಿ ವಿಜಯೇಂದ್ರ ಅವರ ಬೆಂಬಲಿಗರೇ ಎದ್ದು ಕಾಣುತ್ತಿದ್ದಾರೆ. ಪಾದಯಾತ್ರೆಯ ಉಸ್ತುವಾರಿ, ಸಿದ್ದತೆ ,ಊಟ, ವಸತಿ ಎಲ್ಲದರ ಉಸ್ತುವಾರಿಯನ್ನು ವಿಜಯೇಂದ್ರ ಬೆಂಬಲಿಗರೇ ಹೊತ್ತಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್‌, ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ, ಅನೇಕ ಮಾಜಿ ಸಚಿವರ ಉಪಸ್ಥಿತಿ ಇದ್ದೂ ಇಲ್ಲದಂತಿದೆ.

ಬಿಜೆಪಿ - ಜೆಡಿಎಸ್ ರಾಜ್ಯಾಧ್ಯಕ್ಷರ ಜಂಟಿ ಪಾದಯಾತ್ರೆ

ಇಡೀ ಪಾದಯಾತ್ರೆಯ ಹೈಲೈಟ್‌ ಎಂದರೆ ಎರಡೂ ಪಕ್ಷಗಳ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಮತ್ತು ನಿಖಿಲ್‌ ಕುಮಾರಸ್ವಾಮಿ. ಇವರಿಬ್ಬರ ಜೊತೆ ಹೆಜ್ಜೆ ಹಾಕಲು, ಸೆಲ್ಫಿ ಕ್ಲಿಕ್ಕಿಸಲು ಕಾರ್ಯಕರ್ತರು ಹಾತೊರೆಯುತ್ತಿರುವುದು ಎದ್ದು ಕಾಣುತ್ತಿತ್ತು.

ವಿಜಯೇಂದ್ರ ಅವರ ಕಟ್ಟಾ ಬೆಂಬಲಿಗ ಹಾಸನ ಮಾಜಿ ಶಾಸಕ ಪ್ರೀತಂಗೌಡ ಅವರೂ ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸನದ ಬೀದಿ ಬೀದಿಗಳಲ್ಲಿ ನಮ್ಮ ಕುಟುಂಬದ ಪೆನ್‌ ಡ್ರೈವ್‌ ಗಳನ್ನು ಬೀದಿ ಬೀದಿಗಳಲ್ಲಿ ಹಂಚಿದ ಪ್ರೀತಂಗೌಡ ಭಾಗವಿಸುವ ಪಾದಯಾತ್ರೆಯಲ್ಲಿ ಭಾಗವಹಿಸಬೇಕೇ ಎಂದು ಜೆಡಿಎಸ್‌ ಮುಖಂಡ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದರು. ನಂತರ ಹೈಕಮಾಂಡ್‌ ಹೇಗೋ ಅವರನ್ನು ಸಮಾಧಾನಪಡಿಸಿ ಪಾದಯಾತ್ರೆಯಲ್ಲಿ ಭಾಗವಹಿಸಲು ಒಪ್ಪಿಸಿತ್ತು. ಭಾನುವಾರ ಪಾದಯಾತ್ರೆಯಲ್ಲಿ ಪ್ರೀತಂ ಗೌಡ ವಿಜಯೇಂದ್ರ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಂತೆ, ನಿಖಿಲ್‌ ಗೌಡ ವಿಜಯೇಂದ್ರ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ.

ಯತ್ನಾಳ್‌ ಮತ್ತು ಜಾರಕಿಹೊಳಿ ಕೂಡಲಸಂಗಮದಿಂದ ಬಳ್ಳಾರಿ ವರೆಗೆಪರ್ಯಾಯ ಪಾದಯಾತ್ರೆ ಹಮ್ಮಿಕೊಂಡಿದ್ದು ಹೈ ಕಮಾಂಡ್‌ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ. ವಿಜಯೇಂದ್ರ ಪಕ್ಷದ ಅಧ್ಯಕ್ಷರಾದ ದಿನದಿಂದಲೂ ಪಕ್ಷದ ಹಿರಿಯ ಮುಖಂಡರು ಮತ್ತು ಶಾಸಕರು ವಿಜಯೇಂದ್ರ ಅವರಿಂದ ಅಂತರವನ್ನು ಕಾಯ್ದುಕೊಂಡೇ ಬರುತ್ತಿದ್ದಾರೆ. ಕಿರಿಯ ಎಂಬ ಕಾರಣ, ಮೊದಲ ಬಾರಿ ಶಾಸಕ, ಭವಿಷ್ಯದ ಮುಖ್ಯಮಂತ್ರಿ, ವೀರಶೈವ ಸಮಾಜದ ಮುಖಂಡ ಮತ್ತು ಪಕ್ಷದ ಮೇಲೆ ಹಿಡಿತ ಸಾಧಿಸಬಹುದೆಂಬ ಆತಂಕದಿಂದ ಇವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ಈ ಪಾದಯಾತ್ರೆಯಿಂದ ಜೆಡಿಎಸ್‌ ಮುಖಂಡರಿಗೆ ಅಷ್ಟೇನೂ ಸಂತಸವನ್ನುಂಟು ಮಾಡಿಲ್ಲ. ಹಳೆಯ ಮೈಸೂರು ಭಾಗದಲ್ಲಿ ವಿಜಯೇಂದ್ರ ತಮ್ಮ ಧನಬಲದಿಂದ ಜನಬಲವನ್ನು ಸಂಪಾದಿಸಬಹುದು ಎಂಬ ಭಯವೂ ಇವರನ್ನು ಆವರಿಸಿದೆ. ಈ ಪಾದಯಾತ್ರೆಯಿಂದ ಕಾಂಗ್ರೆಸ್‌ ಸರ್ಕಾರಕ್ಕೆ ಹಿನ್ನೆಡೆ ಆಗಿರುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ರಾಜಕೀಯದ ಸಂಧ್ಯಾಕಾಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಜುಗರಕ್ಕೀಡಾಗಿರುವುದು ಅವರ ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಂದ ಎದ್ದು ಕಾಣುತ್ತಿದೆ.

(ವರದಿ- ಎಚ್.ಮಾರುತಿ, ಬೆಂಗಳೂರು)