ಕನ್ನಡ ಸುದ್ದಿ  /  ಕರ್ನಾಟಕ  /  ಪೋಕ್ಸೋ ಕೇಸ್‌; ಯಾವುದೇ ಕ್ಷಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಂಧನ ಸಾಧ್ಯತೆ, ಇಂದು ಜಾಮೀನು ಅರ್ಜಿ ವಿಚಾರಣೆ

ಪೋಕ್ಸೋ ಕೇಸ್‌; ಯಾವುದೇ ಕ್ಷಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಂಧನ ಸಾಧ್ಯತೆ, ಇಂದು ಜಾಮೀನು ಅರ್ಜಿ ವಿಚಾರಣೆ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅರೆಸ್ಟ್‌ ವಾರೆಂಟ್ ಜಾರಿಯಾದ ಬೆನ್ನಿಗೆ ದೆಹಲಿಯಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಈ ಪೋಕ್ಸೋ, ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಯಾವುದೇ ಕ್ಷಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಂಧನ ಸಾಧ್ಯತೆ ಇದೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. (ವರದಿ- ಎಚ್ ಮಾರುತಿ, ಬೆಂಗಳೂರು)

ಪೋಕ್ಸೋ ಕೇಸ್‌; ಯಾವುದೇ ಕ್ಷಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಂಧನ ಸಾಧ್ಯತೆ, ಇಂದು ಜಾಮೀನು ಅರ್ಜಿ ವಿಚಾರಣೆ. (ಸಾಂಕೇತಿಕ ಚಿತ್ರ)
ಪೋಕ್ಸೋ ಕೇಸ್‌; ಯಾವುದೇ ಕ್ಷಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಂಧನ ಸಾಧ್ಯತೆ, ಇಂದು ಜಾಮೀನು ಅರ್ಜಿ ವಿಚಾರಣೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸುತ್ತಿದ್ದಂತೆ ಅತ್ತ ದೆಹಲಿಯಲ್ಲಿದ್ದ ಅವರು ಅಜ್ಞಾತ ಸ್ಥಳ ಸೇರಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಈ ವಾರಂಟ್‌ ಹೊರಡಿಸಿದೆ. ಹಿರಿಯ ಬಿಜೆಪಿ ಮುಖಂಡರೂ ಆಗಿರುವ ಅವರು ಮಂಗಳವಾರ ದೆಹಲಿಗೆ ಆಗಮಿಸಿದ್ದರು. ಈ ಮಧ್ಯೆ ಅವರು ಹೈಕೋರ್ಟ್‌ ನಲ್ಲಿ ಈ ಪ್ರಕರಣದ ಎಫ್‌ ಐ ಆರ್‌ ರದ್ದುಗೊಳಿಸುವಂತೆ ಮತ್ತು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇಂದು ಈ ಅರ್ಜಿಗಳ ವಿಚಾರಣೆ ನಡೆಯಲಿದೆ.

ದೆಹಲಿಯಲ್ಲಿ ಅವರು ತಮ್ಮ ಪುತ್ರ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಪಂಡಿತ್‌ ಪಂತ್‌ ಮಾರ್ಗದ ನಿವಾಸದಲ್ಲಿ ತಂಗಿದ್ದರು. ಬೆಂಗಳೂರಿನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಅವರು ಬುಧವಾರ ಮಧ್ಯಾಹ್ನವೇ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ಕೆಲಸದವರನ್ನು ಹೊರತುಪಡಿಸಿದರೆ ಬೇರೆ ಯಾರೂ ಮನೆಯಲ್ಲಿರಲಿಲ್ಲ. ಗುರುವಾರ ದಿನವಿಡೀ ಮಾಧ್ಯಮ ಪ್ರತಿನಿಧಿಗಳು ಈ ಮನೆಯ ಮುಂದೆ ಕಾಯ್ದುಕೊಂಡು ಬರಿಗೈಯಲ್ಲಿ ಹಿಂತಿರುಗಿದ್ದಾರೆ.

ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಈ ವಾರಂಟ್‌ ಹೊರಡಿಸಿದ್ದು ಯಡಿಯೂರಪ್ಪ ಅವರ ಬಂಧನ ಅನಿವಾರ್ಯ ಎಂದು ಕಾನೂನು ಪಂಡಿತರು ಅಭಿಪ್ರಾಯಪಡುತ್ತಾರೆ. ಪೊಲೀಸರು, ಯಡಿಯೂರಪ್ಪ ಅವರು ಬೆಂಗಳೂರಿಗೆ ಹಿಂತಿರುಗುವರೆಗೆ ಕಾಯುವರೇ ಅಥವಾ ದೆಹಲಿಗೆ ತೆರಳಿ ಹುಡುಕಾಟ ನಡೆಸಲಿದ್ದಾರೆಯೇ ಎನ್ನುವುದು ಖಚಿತವಾಗಿಲ್ಲ.

ಈ ಪ್ರಕರಣದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅಶೋಕ್‌ ನಾಯಕ್‌ ಅವರು ಆರೋಪಿ ಯಡಿಯೂರಪ್ಪ ಅವರು ತನಿಖೆ ನಡೆಸುತ್ತಿರುವ ಸಿಐಡಿ ನೋಟಿಸ್‌ ನೀಡಿದರೂ ವಿಚಾರಣೆಗೆ ಹಾಜರಾಗುತ್ತಿಲ್ಲ. ಆದ್ದರಿಂದ ಇವರನ್ನು ಬಂಧಿಸಲು ನಿರ್ದೇಶನ ನೀಡಬೇಕು ಎಂದು ವಾದಿಸಿದ್ದರು.

ಇವರ ವಾದವನ್ನು ಮಾನ್ಯ ಮಾಡಿದ ಬೆಂಗಳೂರಿನ 51ನೇ ಸಿವಿಲ್‌ ಮತ್ತು ಹೆಚ್ಚುವರಿ ಸೆಷನ್ಸ್‌ ಮತ್ತು ಪೋಕ್ಸೋ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯ-1ರ ನ್ಯಾಯಾಧೀಶ ಎಂ.ರಮೇಶ್‌ ಬಂಧನ ವಾರೆಂಟ್ ಹೊರಡಿಸಲು ಆದೇಶ ನೀಡಿದ್ದಾರೆ.

ಯಡಿಯೂರಪ್ಪ ಅವರು ಬುಧವಾರ ಬೆಳಗ್ಗೆ 10.30 ಕ್ಕೆ ಸಿಐಡಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಹಾಜರಾಗಿರಲಿಲ್ಲ. ಜೂನ್‌ 12 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ಆದರೆ ಯಡಿಯೂರಪ್ಪ ಅವರು ಜೂನ್‌ 17ರಂದು ಹಾಜರಾಗುವುದಾಗಿ ತಿಳಿಸಿದ್ದರು.

ಏನಿದು ಪೋಕ್ಸೊ ಪ್ರಕರಣ?

ನನ್ನ ಮಗಳಿಗೆ ಯಡಿಯೂರಪ್ಪ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 53 ವರ್ಷದ ಮಹಿಳೆಯೊಬ್ಬರು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಮಾರ್ಚ್‌ 14 ರಂದು ದೂರು ಸಲ್ಲಿಸಿದ್ದರು. ಈ ದೂರಿನನ್ವಯ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ-2021) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅವರೊಂದಿಗೆ ನಮ್ಮ ಕಷ್ಟ ಹೇಳಿಕೊಂಡಾಗ ಅವರು ನನ್ನ ಮಗಳನ್ನು ಮತ್ತೊಂದು ಕೊಠಡಿಗೆ ಕರೆದೊಯ್ದರು. ಯಡಿಯೂರಪ್ಪ ಅವರು ನನ್ನ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದರು. ನನ್ನ ಮಗಳು ಭಯಭೀತಳಾಗಿ ಹೊರಬರಲು ಪ್ರಯತಿಸಿದರೂ ಕೊಠಡಿಯ ಲಾಕ್‌ ಮಾಡಿದ್ದರಿಂದ ಸಾಧ್ಯವಾಗಲಿಲ್ಲ. ನಂತರ ಯಡುಯೂರಪ್ಪ ಅವರನ್ನು ಪ್ರಶ್ನಿಸಿದಾಗ ಅತ್ಯಾಚಾರ ಆಗಿದೆಯೇ ಇಲ್ಲವೇ ಎಂದು ಪರೀಕ್ಷಿಸಲು ಹೀಗೆ ಮಾಡಿದ್ದೇನೆ. ಈ ವಿಷಯವನ್ನು ಯಾರಲ್ಲಿಯೂ ಹೇಳಬಾರದು ಎಂದು ವಿವರಿಸಿದ್ದಾರೆ. ಅಲ್ಲದೆ ಯಡಿಯೂರಪ್ಪ ಅವರು 2 ಲಕ್ಷ ರೂ.ನಗದು ನೀಡಿದ್ದಾರೆ. ಈ ದೃಶ್ಯವನ್ನು ಮಹಿಳೆಯು ತನ್ನ ಮೊಬೈಲ್‌ ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಅವರ ಸಹಾಯಕನೊಬ್ಬ ಈ ದೃಶ್ಯವನ್ನು ಡಿಲಿಟ್‌ ಮಾಡಿಸಿದ್ದಾರೆ. ಈ ಮಹಿಳೆಯಿಂದ ಸಿಐಡಿ ಪೊಲೀಸರು 35 ಸಾವಿರ ರೂ ನಗದು, ಕ್ಯಾಷ್‌ ಬ್ಯಾಗ್‌ ಮತ್ತು ಎರಡು ಮೊಬೈಲ್‌ ಗಳನ್ನು ಜಪ್ತಿ ಮಾಡಿದ್ದಾರೆ.

ಇದೇ ವರ್ಷದ ಫೆಬ್ರವರಿ 2 ರಂದು ಈ ಘಟನೆ ನಡೆದಿದ್ದು, ಮಾರ್ಚ್‌ 14 ರಂದು ಈ ಮಹಿಳೆ ದೂರು ಸಲ್ಲಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಇದುವೆರಗೂ ಯಾವುದೇ ಪ್ರಗತಿ ಆಗಿಲ್ಲ. ಆರೋಪಿಯನ್ನು ಬಂಧಿಸಿಲ್ಲ. ಸಾಕ್ಷ್ಯಗಳನ್ನು ಸಂಗ್ರಹಿಸಿಲ್ಲ, ಸ್ಥಳ ಪರಿಶೀಲನೆ ನಡೆದಿಲ್ಲ. ಆದ್ದರಿಂದ ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕೆಂದು ಅರ್ಜಿದಾರರ ಪರ ವಕೀಲರು ಕೋರಿದ್ದಾರೆ.

ಈ ಮಧ್ಯೆ ದೂರುದಾರ ಮಹಿಳೆ ಮೇ 26 ರಂದು ಮೃತಪಟ್ಟಿದ್ದು ಅವರ ಸಹೋದರ ದೂರು ಸಲ್ಲಿಸಿದ್ದು ತ್ವರಿತ ವಿಚಾರಣೆಗೆ ಆಗ್ರಹಪಡಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಸಹೋದರ ಜೂನ್‌ 10 ರಂದು ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿ ವಿಚಾರಣೆಗೆ ಆಗ್ರಹಪಡಿಸಿದ್ದರು.

(ವರದಿ- ಎಚ್ ಮಾರುತಿ, ಬೆಂಗಳೂರು)