ಪಶ್ಚಿಮಘಟ್ಟದಲ್ಲಿ ಭೂಪರಿವರ್ತನೆಯನ್ನು ತಾತ್ಕಾಲಿಕ ತಡೆ ಹಿಡಿಯಲು ಕರ್ನಾಟಕ ಸರ್ಕಾರದ ಸಿದ್ಧತೆ, ಸಚಿವ ಸಂಪುಟ ಸಭೆಯಲ್ಲಿ ಶೀಘ್ರ ಚರ್ಚೆ
Western Ghats Protection; ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮಘಟ್ಟದಲ್ಲಿ ಭೂಪರಿವರ್ತನೆಗೆ ತಾತ್ಕಾಲಿಕ ತಡೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಕಸ್ತೂರಿ ರಂಗನ್ ವರದಿ ಕುರಿತಂತೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.
ಬೆಂಗಳೂರು: ಪಶ್ಚಿಮ ಘಟ್ಟದ (Western Ghats) ಪರಿಸರ ಸೂಕ್ಷ್ಮ ಪ್ರದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ (Karnataka Govt) ಮಹತ್ವದ ಕ್ರಮ ತೆಗೆದುಕೊಂಡಿದ್ದು, ಆ ಪ್ರದೇಶದ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು “ತಾತ್ಕಾಲಿಕ”ವಾಗಿ ತಡೆ ಹಿಡಿಯುವ ನಿರ್ಧಾರವನ್ನು ಪ್ರಕಟಿಸಿದೆ. ಅಲ್ಲದೆ, ಪರಿಸರ ಸೂಕ್ಷ್ಮ ಪ್ರದೇಶ ರಕ್ಷಿಸುವ ಸಲುವಾಗಿ ಒಂದು ಮಾಸ್ಟರ್ ಪ್ಲಾಸ್ ರೂಪಿಸುವ ತೀರ್ಮಾನ ತೆಗೆದುಕೊಂಡಿದೆ.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ ಖಂಡ್ರೆ ಅವರು ಇಲಾಖೆಯ ಅಧಿಕಾರಿಗಳ ಜೊತೆಗೆ ಸಮಾಲೋಚನೆ ಸಭೆ ನಡೆಸಿದ ವೇಳೆ, ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದು ಒಳ್ಳೆಯದು ಎಂದು ಹೇಳಿದರು. ಹಲವು ನದಿಗಳ ಮೂಲ, ಜೀವ ವೈವಿಧ್ಯ ಹೊಂದಿರುವ ಪಶ್ಚಿಮ ಘಟ್ಟ ಪ್ರದೇಶ ಸಂರಕ್ಷಿಸುವುದಕ್ಕಾಗಿ ಕರ್ನಾಟಕದಲ್ಲಿರುವ ಈ ಭಾಗದ ಭೂ ಉಪಯೋಗ ಕುರಿತು ಹೊಸ ನಿಯಮಾವಳಿ ರೂಪಿಸುವ ತನಕ ಎಲ್ಲ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದನ್ನು ಉಲ್ಲೇಖಿಸಿದರು. ಇದನ್ನು ಆಧರಿಸಿ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಸ್ತೂರಿ ರಂಗನ್ ವರದಿ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ
ಕರ್ನಾಟಕದ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಈ ಕುರಿತು ಕಳುಹಿಸಿದ ಟಿಪ್ಪಣಿಯಲ್ಲಿ ಸಚಿವ ಖಂಡ್ರೆ, ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಮತ್ತೊಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದ ಕಸ್ತೂರಿ ರಂಗನ್ ವರದಿಯ ಕುರಿತು ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾಗಿ ಸಚಿವರ ಕಚೇರಿ ಮೂಲಗಳು ತಿಳಿಸಿವೆ.
ಕರ್ನಾಟಕ, ಕೇರಳ ಸೇರಿ ಪಶ್ಚಿಮಘಟ್ಟದ ಹಲವೆಡೆ, ಭೂಕುಸಿತ, ಗುಡ್ಡ ಕುಸಿತ ಸಂಭವಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಚಿವ ಖಂಡ್ರೆ, ಕೊಡಗಿನ ಭೂಕುಸಿತ ಪ್ರಕರಣಗಳ ಅಧ್ಯಯನದಲ್ಲಿ ಅರಣ್ಯ ಒತ್ತುವರಿ ಮತ್ತು ಮಾನವ ಅಭಿವೃದ್ಧಿ ಚಟುವಟಿಕೆಗಳೇ ಅನಾಹುತಳಿಗೆ ಪ್ರಾಥಮಿಕ ಕಾರಣ ಎಂಬ ಉಲ್ಲೇಖವಿದೆ. ಆದ್ದರಿಂದ ಪಶ್ಚಿಮಘಟ್ಟ ಭಾಗದಲ್ಲಿ ಸಂಭಾವ್ಯ ದುರಂತ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಘಟ್ಟ ಪ್ರದೇಶಗಳಲ್ಲಿ ಭೂಪರಿವರ್ತನೆ ಮತ್ತು ಕಟ್ಟಡ ನಿರ್ಮಾಣಕ್ಕೆ ನಿರ್ದಿಷ್ಟ, ಪ್ರತ್ಯೇಕ ನಿಯಮಗಳನ್ನು ರೂಪಿಸಿದ್ದಾರೆ. ಇದೇ ರೀತಿ, ಪಶ್ಚಿಮ ಘಟ್ಟ ವ್ಯಾಪ್ತಿಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಭೂ-ಉಪಯೋಗದ ರೀತಿ ಮತ್ತು ಭೂ ಪರಿವರ್ತನೆಯೂ ಸೇರಿ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆ, ನಗರಾಭಿವೃದ್ದಿ ಇಲಾಖೆ, ಪೌರಾಢಳಿತ ಇಲಾಖೆ, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಮನ್ವಯದಲ್ಲಿ ಭೂ ಉಪಯೋಗ ಸ್ವರೂಪ ಕುರಿತಂತೆ ಹೊಸ ಪ್ರಾದೇಶಿಕ ನಿಯಂತ್ರಣ ಮತ್ತು ಮಾಸ್ಟರ್ ಯೋಜನೆ ರೂಪಿಸಲಾಗುತ್ತದೆ. ಅಲ್ಲಿವರೆಗೆ ಪಶ್ಚಿಮ ಘಟ್ಟ ವ್ಯಾಪ್ತಿಯ ಎಲ್ಲ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಡೆಹಿಡಿಯಲು ತಜ್ಞರು ಶಿಫಾರಸು ಮಾಡಿದ್ದು, ಅದರಂತೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
ಸಾರ್ವಜನಿಕ ಮಹತ್ವದ ಯೋಜನೆಗೆ ಮಾತ್ರ ಸಮ್ಮತಿ
ಅತ್ಯಂತ ಅಗತ್ಯದ್ದು ಎಂಬುದು ದೃಢಪಟ್ಟ ಸಾರ್ವಜನಿಕ ಮಹತ್ವದ ಪ್ರಕರಣಗಳಲ್ಲಿ ಮಾತ್ರ ಯೋಜನೆಗೆ ಪರಿಸರ ಸಮ್ಮತಿ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ತಜ್ಞರ ಸಮಿತಿಯ ಉನ್ನತಾಧಿಕಾರ ಸಮಿತಿ ಸಭೆಯ ಅನುಮೋದನೆ ನಂತರವಷ್ಟೇ ನೀಡುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಭೂ ಉಪಯೋಗ ಕುರಿತಂತೆ ಹೊಸ ನಿಯಮಾವಳಿ ರೂಪಿಸಲು ಪ್ರಸ್ತಾವನೆಯನ್ನು ಕಡತದಲ್ಲಿ ಮಂಡಿಸುವಂತೆಯೂ ಅವರು ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಕಳುಹಿಸಿದ ಟಿಪ್ಪಣಿಯಲ್ಲಿ ತಿಳಿಸಿದ್ದಾಗಿ ಅವರ ಕಚೇರಿ ಮೂಲಗಳು ತಿಳಿಸಿವೆ.