MUDA Case; ಮುಡಾ ಕೇಸ್‌ನಲ್ಲಿ ಸಿಎಂ ವಿಚಾರಣೆ ಅನುಮತಿಗೆ ತಾತ್ಕಾಲಿಕ ತಡೆ; 29 ರ ತನಕ ರಾಜ್ಯಪಾಲರ ಆದೇಶ ತಡೆ ಹಿಡಿದ ಕರ್ನಾಟಕ ಹೈಕೋರ್ಟ್‌
ಕನ್ನಡ ಸುದ್ದಿ  /  ಕರ್ನಾಟಕ  /  Muda Case; ಮುಡಾ ಕೇಸ್‌ನಲ್ಲಿ ಸಿಎಂ ವಿಚಾರಣೆ ಅನುಮತಿಗೆ ತಾತ್ಕಾಲಿಕ ತಡೆ; 29 ರ ತನಕ ರಾಜ್ಯಪಾಲರ ಆದೇಶ ತಡೆ ಹಿಡಿದ ಕರ್ನಾಟಕ ಹೈಕೋರ್ಟ್‌

MUDA Case; ಮುಡಾ ಕೇಸ್‌ನಲ್ಲಿ ಸಿಎಂ ವಿಚಾರಣೆ ಅನುಮತಿಗೆ ತಾತ್ಕಾಲಿಕ ತಡೆ; 29 ರ ತನಕ ರಾಜ್ಯಪಾಲರ ಆದೇಶ ತಡೆ ಹಿಡಿದ ಕರ್ನಾಟಕ ಹೈಕೋರ್ಟ್‌

Karnataka High Court; ಮುಡಾ ಕೇಸ್‌ಗೆ ಸಂಬಂಧಿಸಿ ನಾಳೆಗೆ (ಆಗಸ್ಟ್ 20) ನಿಗದಿಯಾಗಿದ್ದಜನಪ್ರತಿನಿಧಿಗಳ ಕೋರ್ಟ್‌ನ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡುವಂತೆ ಕರ್ನಾಟಕ ಹೈಕೋರ್ಟ್‌ ಸೂಚಿಸಿದೆ. ಇದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನೂ ಆಗಸ್ಟ್‌ 29ಕ್ಕೆ ಮುಂದೂಡಿದೆ.

ಸಿಎಂ ಸಿದ್ದರಾಮಯ್ಯ ವಿಚಾರಣೆಗಾಗಿ ರಾಜ್ಯಪಾಲರು ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಆಗಸ್ಟ್ 29ರ ತನಕ ತಡೆಹಿಡಿದಿದೆ.
ಸಿಎಂ ಸಿದ್ದರಾಮಯ್ಯ ವಿಚಾರಣೆಗಾಗಿ ರಾಜ್ಯಪಾಲರು ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಆಗಸ್ಟ್ 29ರ ತನಕ ತಡೆಹಿಡಿದಿದೆ.

ಬೆಂಗಳೂರು: ಬಹಳ ಸಂಕಷ್ಟಕ್ಕೆ ಈಡುಮಾಡಿದ್ದ ರಾಜ್ಯಪಾಲರ ಕ್ರಮದಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಇಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಇತ್ತು. ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದ ಕರ್ನಾಟಕ ಹೈಕೋರ್ಟ್ ಪೀಠ, ಅಲ್ಲಿ ತನಕ ರಾಜ್ಯಪಾಲರ ಆದೇಶ ಜಾರಿಗೊಳಿಸದಂತೆ ಪರೋಕ್ಷವಾಗಿ ಸೂಚನೆ ನೀಡಿದೆ.

ಮೈಸೂರು ನಗರಾಭಿವೃದ್ಧಿ ಸೈಟು ಹಂಚಿಕೆ ಅಕ್ರಮದ ಮುಡಾ ಕೇಸ್‌ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ನೀಡಿದ್ದ ಅನುಮತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್, ಆಗಸ್ಟ್ 29ಕ್ಕೆ ಮುಂದೂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ವಕೀಲರು ಇಂದು (ಆಗಸ್ಟ್​ 19) ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಆಗಸ್ಟ್ 29ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ. ಜನಪ್ರತಿನಿಧಿಗಳ ಕೋರ್ಟ್​ನ ಆದೇಶವನ್ನು ಆ.29ಕ್ಕೆ ಮುಂದೂಡುವಂತೆ ಸೂಚಿಸಿದೆ.

ಕರ್ನಾಟಕ ಹೈಕೋರ್ಟ್‌ನಲ್ಲಿ ಅಪರಾಹ್ನ ನಡೆದುದೇನು?

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಅವರು ಮುಖ್ಯಮಂತ್ರಿಯವರ ಪ್ರಾಸಿಕ್ಯೂಷನ್​ಗೆ ನೀಡಿದ್ದ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಇಂದು (ಆಗಸ್ಟ್ 19) ಕರ್ನಾಟಕ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಕೀಲ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಅವರ ವಾದ ಪ್ರತಿವಾದಗಳನ್ನು ಆಲಿಸಿತು. ಬಳಿಕ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿತು.

ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ: "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದುದು. ಶಾಸನಬದ್ಧ ಆದೇಶಗಳನ್ನು ಉಲ್ಲಂಘಿಸಿ ಈ ಅನುಮತಿ ನೀಡಲಾಗಿದೆ. ಸಚಿವ ಸಂಪುಟದ ಸಲಹೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಮುಖ್ಯಮಂತ್ರಿಯವರ ವಿಚಾರಣೆಗೆ ಅನುಮತಿ ನೀಡಲು ಸಕಾರಣ ವಿವರಿಸಿಲ್ಲ. ಅವರ ಈ ನಡೆ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಕೂಡಿದೆ" ಎಂದು ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿದರು.

ಇದಕ್ಕೆ ನ್ಯಾಯಪೀಠ, ಈ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಪಾತ್ರ ಇಲ್ಲವೇ ಎಂದು ಪ್ರಶ್ನಿಸಿತು.

ಇದಕ್ಕೆ ಸಿದ್ದರಾಮಯ್ಯ ಅವರ ಪರ ವಕೀಲ ಸಿಂಘ್ವಿ, "ನಿವೇಶನಗಳ ಮರು ಹಂಚಿಕೆ ಪ್ರಕ್ರಿಯೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿರುವಂಥದ್ದು. ಇದರಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ದಾಖಲೆಗಳು ಕಂಡುಬಂದಿಲ್ಲ. ಈ ಪ್ರಾಸಿಕ್ಯೂ‍ಷನ್‌ನಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ 218ರ ಪ್ರಕಾರ ಅನುಮತಿ ನೀಡಿರುವುದು ಕಂಡುಬಂದಿದೆ. ಇದರಂತೆ ಆದರೆ ನಿರ್ದಿಷ್ಟ ಅಪರಾಧ ನಡೆದಿರಬೇಕು. ಮಾತ್ರವಲ್ಲದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಧಿಕೃತ ಕರ್ತವ್ಯ ನಿರ್ವಹಿಸುವಾಗ ಲೋಪ ಎಸಗಿರಬೇಕು. ಮುಖ್ಯಮಂತ್ರಿಯವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿರುವುದು ಅಬ್ರಾಹಂ ಅವರು ನೀಡಿದ ಅರ್ಜಿಗೆ ಸಂಬಂಧಿಸಿದ್ದು. ಈ ಕುರಿತ ಸಚಿವ ಸಂಪುಟ ತೆಗೆದುಕೊಂಡ ನಿರ್ಣಯವನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಇನ್ನಿಬ್ಬರು ನೀಡಿರುವ ಮನವಿಗೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್‌ನಲ್ಲಿ ಉಲ್ಲೇಖಿಸಿಲ್ಲ. ಆದರೆ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂದರ್ಭದಲ್ಲಿ ಇತರೆ ಇಬ್ಬರು ದೂರುದಾರರಿಗೆ ಅನುಮತಿ ನೀಡಲಾಗಿದೆ. ಅಬ್ರಾಹಂ ದೂರು ಸಲ್ಲಿಸಿದ ದಿನವೇ ರಾಜ್ಯಪಾಲರು ಶೋಕಾಸ್ ನೋಟಿಸ್ ಕಳುಹಿಸಿದ್ದಾರೆ. ಆದರೆ, ರಾಜ್ಯಪಾಲರ ಮುಂದೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸುಮಾರು 12 ಅರ್ಜಿಗಳು ಬಾಕಿಯಿವೆ ಎಂಬುದನ್ನು ಗಮನಿಸಬೇಕು" ಎಂದು ಸಿಂಘ್ವಿ ನಾಯಪೀಠಕ್ಕೆ ವಿವರಿಸಿದರು.

ಮಂಗಳವಾರದ ಜನಪ್ರತಿನಿಧಿಗಳ ಕೋರ್ಟ್‌ ವಿಚಾರಣೆ ಮುಂದಕ್ಕೆ

ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಸ್ನೇಹಮಯಿ ಕೃಷ್ಣ ಹಾಗೂ ಟಿಜೆ ಅಬ್ರಹಾಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಬೇಕಾ ಅಥವಾ ಬೇಡವೇ ಎಂಬುದನ್ನು ನಾಳೆ (ಆಗಸ್ಟ್‌ 20) ನಿರ್ಧಾರವಾಗಬೇಕಾಗಿತ್ತು. ಈಗ ಜನಪ್ರತಿನಿಧಿಗಳ ಕೋರ್ಟ್‌ನ ಆದೇಶವನ್ನು ಆಗಸ್ಟ್ 29ಕ್ಕೆ ಮುಂದೂಡುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿರುವ ಕಾರಣ, ಸಿಎಂ ವಿಚಾರಣೆಗೆ ರಾಜ್ಯಪಾಲರು ನೀಡಿದ ಆದೇಶ ಜಾರಿಗೊಳ್ಳದಂತೆ ತಡೆದಂತಾಗಿದೆ.

Whats_app_banner