ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆಯುವ ಕಾರ್ಯ ಬಹುತೇಕ ಪೂರ್ಣ; ದಾಖಲೆ ನಿರ್ಮಿಸಿದ ತುಂಗಾ
ಬಂಗಳೂರು ನಮ್ಮ ಮೆಟ್ರೋದ ಗುಲಾಬಿ ಮಾರ್ಗದಲ್ಲಿ ಕೆಲಸ ಮಾಡುತ್ತಿರುವ ತುಂಗಾ ಸುರಂಗ ಕೊರೆಯುವ ಯಂತ್ರವು, ಕೆಜಿ ಹಳ್ಳಿ ಮತ್ತು ನಾಗವಾರ ನಡುವೆ 308 ಮೀಟರ್ ಸುರಂಗ ಕೊರೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆಯುವ ಕಾರ್ಯ ಬಹುತೇಕ ಅಂತಿಮ ಹಂತ ತಲುಪಿದೆ. ತುಂಗಾ ಟಿಬಿಎಂ (ಸುರಂಗ ಕೊರೆಯುವ ಯಂತ್ರ) ಸೆಪ್ಟೆಂಬರ್ 4ರ ಬುಧವಾರದಂದು ಕೊರೆಯುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮತ್ತೊಂದು ಕಡೆ ಕೊರೆಯುತ್ತಿರುವ ಭದ್ರಾ ಟಿಬಿಎಂ ಅಕ್ಟೋಬರ್ ವೇಳೆಗೆ ಹೊರಬರಲಿದ್ದು, ಅಲ್ಲಿಗೆ ಗುಲಾಬಿ ಮಾರ್ಗದ ಸುರಂಗ ಕೊರೆಯುವ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ. ಇದೇ ವರ್ಷದ ಫೆಬ್ರುವರಿ 3ರಂದು ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ ಕೊರೆಯುವ ಕಾಮಗಾರಿಯನ್ನು ತುಂಗಾ ಆರಂಭಿಸಿತ್ತು. ನಾಗವಾರ ನಿಲ್ದಾಣದ ಸೌತ್ ಕಟ್ ಮತ್ತು ಕವರ್ ಶಾಫ್ಟ್‌ನಲ್ಲಿ ಪೂರ್ಣಗೊಳಿಸಿದೆ. ಒಟ್ಟು 20,992 ಮೀಟರ್ ಸುರಂಗ ಮಾರ್ಗದಲ್ಲಿ ಶೇ.98ರಷ್ಟು ಅಂದರೆ 20,582.7 ಮೀಟರ್‌ನಷ್ಟು ಸುರಂಗ ಮಾರ್ಗ ಕೊರೆಯುವುದು ಪೂರ್ಣಗೊಂಡಿದೆ.
ನಮ್ಮ ಮೆಟ್ರೋದ ಗುಲಾಬಿ ಮಾರ್ಗದಲ್ಲಿ ಕೆಲಸ ಮಾಡುತ್ತಿರುವ ತುಂಗಾ ಕೆಜಿ ಹಳ್ಳಿ ಮತ್ತು ನಾಗವಾರ ನಡುವೆ 308 ಮೀಟರ್ ಸುರಂಗ ಕೊರೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಈ ಹಿಂದೆ ಮೇ 2022ರಲ್ಲಿ ಕಂಟೋನ್ಮೆಂಟ್ ಮತ್ತು ಪಾಟರಿ ಟೌನ್ ನಡುವೆ 273 ಮೀಟರ್ ಸುರಂಗ ಕೊರೆಯುವ ಮೂಲಕ ದಾಖಲೆ ನಿರ್ಮಿಸಿತ್ತು.
ಸುರಂಗ ಕೊರೆಯುವ ಕಾರ್ಯಕ್ಕೆ ಬಿಎಂಆರ್‌ಸಿಎಲ್ 9 ಯಂತ್ರಗಳನ್ನು ನಿಯೋಜಿಸುತ್ತು. ಇದರಲ್ಲಿ 8 ಯಂತ್ರಗಳಾದ ವರದ, ಅವನಿ, ಊರ್ಜ್ವಾ, ವಿಂಧ್ಯಾ, ಲವಿ, ವಮಿಕ ಮತ್ತು ರುದ್ರ ಯಂತ್ರಗಳು ಈಗಾಗಲೇ ಕೆಲಸ ಮುಗಿಸಿವೆ. ಭದ್ರಾ ಟಿಬಿಎಂ ಯಂತ್ರ ಕೆಜಿ ಹಳ್ಳಿ ಮತ್ತು ನಾಗವಾರ ನಡುವೆ ಕೊನೆಯ ಹಂತದ 624 ಮೀಟರ್ ಸುರಂಗವನ್ನು ಕೊರೆಯುತ್ತಿದೆ. ಅದರಲ್ಲಿ ಇನ್ನು ಕೇವಲ 410 ಮೀಟರ್ ಮಾತ್ರ ಬಾಕಿ ಉಳಿದು ಕೊಂಡಿದೆ.
ಹಂತ-2ರ ಯೋಜನೆಯಡಿಯಲ್ಲಿ ರೀಚ್-6 ಮಾರ್ಗ ಇದಾಗಿದ್ದು, ಕಾಳೇನ ಅಗ್ರಹಾರದಿಂದ ನಾಗವಾರವರೆಗೆ 21.76 ಕಿ.ಮೀನ ಈ ಮಾರ್ಗದಲ್ಲಿ 13.76 ಕಿ.ಮೀ. ಉದ್ದದ ಸುರಂಗ ಮಾರ್ಗ ಇರಲಿದೆ. ಎರಡು ಪಥಗಳು ಸೇರಿ 20.992 ಕಿಮೀ ನಿರ್ಮಾಣವಾಗಲಿದೆ. ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆಪಿ ನಗರ 4ನೇ ಹಂತ, ಜಯದೇವ ಆಸ್ಪತ್ರೆ, ಸ್ವಾಗತ್ ರೋಡ್ ಕ್ರಾಸ್, ಡೇರಿ ಸರ್ಕಲ್, ಮೈಕೊ ಇಂಡಸ್ಟ್ರೀಸ್, ಲ್ಯಾಂಗ್ ಫೋರ್ಡ್ ಟೌನ್, ವೆಲ್ಲಾರ, ಎಂಜಿ ರಸ್ತೆ, ಶಿವಾಜಿನಗರ, ಕಂಟೋನ್ಮಂಟ್, ಪಾಟರಿ ಟೌನ್, ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್ ಕಾಲೇಜು ಮತ್ತು ನಾಗವಾರದಲ್ಲಿ ಮೆಟ್ರೊ ನಿಲ್ದಾಣಗಳು ನಿರ್ಮಾಣವಾಗುತ್ತಿವೆ. ಅಕ್ಟೋಬರ್ ಅಂತ್ಯಕ್ಕೆ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಳ್ಳಲಿದೆ. 2025ರ ನವಂಬರ್ ಡಿಸೆಂಬರ್ ಅಂತ್ಯಕ್ಕೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣ-ಐಟಿಪಿಎಲ್ ಕ್ಯಾಂಪಸ್‌ಗೆ ವಾಕ್ ವೇ ಮೂಲಕ ನೇರ ಪ್ರವೇಶ ಕಲ್ಪಿಸುವ ಒಪ್ಪಂದಕ್ಕೆ ಸಹಿ
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮತ್ತು ಮಾಹಿತಿ ತಂತ್ರಜ್ಞಾನ ಪಾರ್ಕ್ ಲಿಮಿಟೆಡ್ ನಡುವೆ ವಾಕ್ ವೇ ಒದಗಿಸುವ ಒಪ್ಪಂದಕ್ಕೆ ಬಿಎಂಆರ್‌ಸಿಎಲ್ ಪರವಾಗಿ ಕಲ್ಪನಾ ಕಟಾರಿಯಾ ಐಆರ್‌ಎಸ್ ಕಾರ್ಯನಿರ್ವಾಹಕ ನಿರ್ದೇಶಕರು (ಸಂಪರ್ಕ ಮತ್ತು ಆಸ್ತಿ ನಿರ್ವಹಣೆ) ಮತ್ತು ಐಟಿಪಿಎಲ್ ಪರವಾಗಿ ರವಿಭೂಷಣ ವಾಧವ್ಕರ್ (ನಗರ ಮುಖ್ಯಸ್ಥರು) ಬುಧವಾರ ಸಹಿ ಹಾಕಿದ್ದಾರೆ. ಇದು 30 ವರ್ಷಗಳ ಅವಧಿಯಾಗಿದ್ದು, ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣದದಿಂದ ಕಾನ್ಕೋರ್ಸ್ ಮಟ್ಟದಿಂದ ಐಟಿಪಿಎಲ್ ಆವರಣಕ್ಕೆ ಪಾದಚಾರಿ ಮೇಲ್ಸೇತುವೆ ಮೂಲಕ ನೇರಪ್ರವೇಶವನ್ನು ನಿಗಮವು ನಿರ್ಮಿಸಲಿದ್ದು, ಇದಕ್ಕಾಗಿ ಐಟಿಪಿಎಲ್ ರೂ. 10 ಕೋಟಿ ನೀಡಿದೆ.
ಬಿಎಂಆರ್‌ಸಿಎಲ್ ಈ ಪಾದಚಾರಿ ಮೇಲ್ಸೇತುವೆಯ ನಿರ್ಮಾಣ ಮತ್ತು ನಿರ್ವಹಣೆಯನ್ನು ಮಾಡಲಿದ್ದು, ಇದರ ವೆಚ್ಚವನ್ನು ಐಟಿಪಿಎಲ್ ಭರಿಸಲಿದೆ. ಇದು ಐಟಿಪಿಎಲ್‌ನ ಪ್ರಸ್ತುತ ಸುಮಾರು 50 ಸಾವಿರ ಉದ್ಯೋಗಿಗಳಿಗೆ ಮತ್ತು 2025ರ ವೇಳೆಗೆ ಈ ಕ್ಯಾಂಪಸ್‌ನಲ್ಲಿ ಕೆಲಸ ಮಾಡುವ ಸುಮಾರು 60 ಸಾವಿರ ಉದ್ಯೋಗಿಗಳಿಗೆ ಮೆಟ್ರೋ ನಿಲ್ದಾಣದಿಂದ ರಸ್ತೆ ದಾಟದೆ ನೇರವಾಗಿ ತಮ್ಮ ಕಚೇರಿಯನ್ನು ಪ್ರವೇಶಿಸಲು ಸಹಾಯಕವಾಗಲಿದೆ. ರೀಚ್-1 ವಿಸ್ತರಣೆಯು ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ಮೆಟ್ರೊ ಮಾರ್ಗದಲ್ಲಿ ಇದು ಮೊದಲ ಒಪ್ಪಂದವಾಗಿದೆ.
ಮೆಟ್ರೋ ನಿಲ್ದಾಣಗಳ ಸಮೀಪವಿರುವ ಇತರ ಕಾರ್ಪೊರೇಟ್ ಕಂಪನಿಗಳು ಅವರ ಉದ್ಯೋಗಿಗಳ ಅನುಕೂಲಕ್ಕಾಗಿ ಮೆಟ್ರೋ ಕಾರಿಡಾರ್‌ನ ಉದ್ದಕ್ಕೂ ನವೀನ ಹಣಕಾಸು ಮೂಲಕ ಅಥವಾ ಮೆಟ್ರೋ ನಿಲ್ದಾಣಗಳಿಂದ ನೇರ ಸಂಪರ್ಕಕ್ಕಾಗಿ ಮುಂದೆ ಬರುವಂತೆ ಕಲ್ಪನಾ ಕಟಾರಿಯಾ ಮನವಿ ಮಾಡಿಕೊಂಡರು. ರವಿಭೂಷಣ ಮಾತನಾಡಿ, ಮೆಟ್ರೋ ಮಾರ್ಗವು ನಾಗರಿಕರಿಗೆ ಆರಾಮದಾಯಕ ಮತ್ತು ಕೈಗೆಟುಕುವ ಪ್ರಯಾಣವನ್ನು ನೀಡುವಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಮಹತ್ತರವಾದ ಪರಿಣಾಮವನ್ನು ಬೀರಿದೆ. ಮೆಟ್ರೋ ಯೋಜನೆ ಪೂರ್ಣಗೊಂಡ ನಂತರ ಬೆಂಗಳೂರು ನಗರವು ಪ್ರಮುಖ ವಾಣಿಜ್ಯ ತಾಣವಾಗಲಿದೆ ಎಂದರು.