ಓಣಂ ಹಬ್ಬಕ್ಕೆ ಉಚಿತ ಹೂ ಕಳುಹಿಸಿದ ಬಿಗ್‌ಬಾಸ್ಕೆಟ್ ವಿರುದ್ಧ ಬೆಂಗಳೂರು ಮಹಿಳೆ ವಾಗ್ದಾಳಿ; ಬೇರೆ ಹಬ್ಬಕ್ಕೆ ಯಾಕಿಲ್ಲ?
ಓಣಂ ಹಬ್ಬದಂದು ಉಚಿತ ಹೂವುಗಳನ್ನು ಕಳುಹಿಸಿದ್ದಕ್ಕಾಗಿ ಬೆಂಗಳೂರಿನ ಮಹಿಳೆಯೊಬ್ಬರು ಆನ್‌ಲೈನ್ ಸ್ಟೋರ್ ಬಿಗ್‌ಬಾಸ್ಕೆಟ್ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದಾರೆ. ಬೇರೆ ಹಬ್ಬದ ದಿನ ಇಲ್ಲದ ಗಿಫ್ಟ್ ಓಣಂ ಹಬ್ಬಕ್ಕೆ ಮಾತ್ರ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಓಣಂ ಹಬ್ಬದಂದು ತನ್ನ ಆರ್ಡರ್ ಜೊತೆಗೆ ಉಚಿತ ಹೂವುಗಳನ್ನು ಕಳುಹಿಸಿದ್ದಕ್ಕಾಗಿ ಮಹಿಳೆಯೊಬ್ಬರು ಬಿಗ್‌ಬಾಸ್ಕೆಟ್ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ ಮಹಿಳೆ ಬಿಗ್ ಬಾಸ್ಕೆಟ್ ಆನ್‌ಲೈನ್ ತಾಣದ ಮೂಲಕ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಅವರ ಆರ್ಡರ್ ಜೊತೆಗೆ ಉಚಿತ ಉಡುಗೊರೆಯಾಗಿ ಚೆಂಡು ಹೂಗಳನ್ನು ಕಳುಹಿಸಿ ಕೊಡಲಾಗಿದೆ. ಓಣಂ ಹಬ್ಬದ ನಿಮಿತ್ತ ಈ ಉಡುಗೊರೆ ಕಳುಹಿಸಲಾಗಿತ್ತು. ತನ್ನ ಆರ್ಡರ್ ಜೊತೆಗೆ ಈ ಹೂಗಳನ್ನು ಕಳುಹಿಸಿದ್ದು ಏಕೆ ಎಂದು ಸುಷ್ಮಾ ಅಯ್ಯಂಗಾರ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ಬಿಸಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಉಚಿತವಾಗಿ ಹೂ ಕಳುಹಿಸಿದರೆ ಅದು ಕೂಡಾ ಸಮಸ್ಯೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ. ಆದರೆ ಸುಷ್ಮಾ ಅವರ ವಾದ ಬೇರೆಯೇ ಇದೆ.
ಓಣಂ ಹಬ್ಬವನ್ನು ಕೇರಳದಲ್ಲಿ ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಇದರ ಆಚರಣೆ ಇಲ್ಲ. ಹೀಗಾಗಿ ಅಯ್ಯಂಗಾರ್ ಕರ್ನಾಟಕದವರಾಗಿದ್ದು, ಅವರಿಗೆ ಓಣಂ ಆಚರಣೆ ಬೇಕಿಲ್ಲ. ಅಲ್ಲದೆ ಸುಷ್ಮಾ ಅಯ್ಯಂಗಾರ್ ಅವರು ಕನ್ನಡ ಪರ ಚಳವಳಿಯಲ್ಲಿ ಗುರುತಿಸಿಕೊಂಡಿದ್ದು, ಇನ್ನೊಂದು ರಾಜ್ಯದ ಸಂಭ್ರಮ ತಮಗೆ ಬೇಕಿಲ್ಲ ಎಂಬ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಗ್‌ಬಾಸ್ಕೆಟ್ ಕಳುಹಿಸಿರುವ ಉಚಿತ ಹೂಗಳ ಫೋಟೋವನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಅವರು, “ಬಿಗ್‌ಬಾಸ್ಕೆಟ್ ಪ್ರಕಾರ ನಾವು ಓಣಂ ಆಚರಿಸಬೇಕು! ನಮಗೆ ಓಣಂ ಇಷ್ಟವೋ ಅಥವಾ ಇಲ್ಲವೋ ಎಂಬುದು ನಮಗೆ ಬಿಟ್ಟದ್ದಲ್ಲ. ಅದನ್ನು ಅವರೇ ನಿರ್ಣಯಿಸುತ್ತಾರೆ. ಅವರು ಬಂದು ಇದನ್ನು ಬಲವಂತವಾಗಿ ಕೊಟ್ಟು ಹೋಗುತ್ತಾರೆ. ವರಮಹಾಲಕ್ಷ್ಮೀ, ದಸರಾ, ದೀಪಾವಳಿ ಸೇರಿದಂತೆ ಇತರ ಹಬ್ಬಗಳಿಗೆ ನೀವು ಇದೇ ರೀತಿ ಮಾಡುತ್ತೀರಾ? ಓಣಂಗೆ ಮಾತ್ರ ಏಕೆ ಉಚಿತವಾಗಿ ನೀಡಬೇಕು? ಇದು ಮತಾಂತರಕ್ಕಿಂತಲೂ ಕೆಟ್ಟದು!” ಎಂದು ಸುಷ್ಮಾ ಬರೆದಿದ್ದಾರೆ.
ಸುಷ್ಮಾ ಪೋಸ್ಟ್ ಹೀಗಿದೆ
ಸುಷ್ಮಾ ಅವರ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧದ ಅಲೆ ಎಬ್ಬಿಸಿದೆ. ರಾಜ್ಯದಲ್ಲಿ ಕನ್ನಡ ಪರ ಚಳವಳಿ ತೀವ್ರಗೊಳ್ಳುತ್ತಿರುವ ಸಮಯದಲ್ಲಿ ಎಕ್ಸ್‌ನಲ್ಲಿ ಮಾಡಿದ ಈ ಪೋಸ್ಟ್ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಹಲವರು ಕಾಮೆಂಟ್ ಮಾಡಿದ್ದಾರೆ.
ನಿಜವಾದ ಹೋರಾಟ ದುರ್ಬಲವಾಗುತ್ತಿದೆ
“ಈ ರೀತಿಯ ವಿಷಯಗಳಿಗೆ ಹೋರಾಡುವ ಮೂಲಕ, ನೀವು ನಿಮ್ಮ ಸರಿಯಾದ ಹೋರಾಟವನ್ನು ದುರ್ಬಲಗೊಳಿಸುತ್ತಿದ್ದೀರಿ. ಬೆಂಗಳೂರಿನ ಪರಿಸರ ವ್ಯವಸ್ಥೆಯು ಇಲ್ಲಿನ ಕೆಲವು ಸ್ಥಳೀಯ ಹಬ್ಬಗಳನ್ನು ಉತ್ತೇಜಿಸುವುದಕ್ಕಿಂತ ಹೆಚ್ಚಾಗಿ ಓಣಂ ಅನ್ನು ಉತ್ತೇಜಿಸುತ್ತಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ,” ಎಂದು ಎಕ್ಸ್ ಬಳಕೆದಾರ ವಿನಯ್ ರಾಯ್ಕರ್ ಬರೆದಿದ್ದಾರೆ.
“ಕನ್ನಡಿಗರು ತರಕಾರಿಯನ್ನು ಮಾರಾಟಗಾರರಿಂದ ನೇರವಾಗಿ ಖರೀದಿಸಬೇಕು. ಇಂತಹ ಪ್ಲಾಟ್‌ಫಾರ್ಮ್‌ಗಳಿಂದ ಖರೀದಿಸಬಾರದು” ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. “ಎಲ್ಲಾ ವಿಷಯಗಳಲ್ಲಿ ಹುಳುಕು ಹುಡುಕಿ ದೊಡ್ಡದು ಮಾಡುವುದನ್ನು ಮೊದಲು ನಿಲ್ಲಿಸಿ. ಯುಗಾದಿಯಂದು ನನಗೆ ಉಚಿತ ಉಡುಗೊರೆಗಳು ಸಿಕ್ಕಿದ್ದವು. ನೀವು ಇಂತಹ ಕ್ಷುಲ್ಲಕ ತಂತ್ರಗಳ ಮೂಲಕ ನಮ್ಮ ಭಾಷೆ, ಸಂಸ್ಕೃತಿ ಮತ್ತು ಜನರ ವಿರುದ್ಧ ದ್ವೇಷವನ್ನು ಹುಟ್ಟುಹಾಕುತ್ತಿದ್ದೀರಿ. ಪ್ರತಿಯೊಬ್ಬರನ್ನು ಮತ್ತು ಅವರ ಸಂಸ್ಕೃತಿಯನ್ನು ಗೌರವಿಸೋಣ” ಎಂದು ಎಕ್ಸ್ ಬಳಕೆದಾರ ಒಬ್ಬರು ಬರೆದಿದ್ದಾರೆ.
ಹೂವುಗಳನ್ನು ಉಚಿತವಾಗಿ ಕಳುಹಿಸಿದರೆ ಯಾರಿಗಾದರೂ ಸಮಸ್ಯೆ ಇದೆಯೇ ಎಂದು ಹಲವಾರು ಎಕ್ಸ್ ಬಳಕೆದಾರರು ಆಶ್ಚರ್ಯಪಟ್ಟಿದ್ದಾರೆ.