ಸಮಾಜವನ್ನು ಆವರಿಸಿದೆ ವಿಚಿತ್ರ ವೈರಲ್ ಫೀವರ್, ಒಂದಿಷ್ಟು ಮುನ್ನೆಚ್ಚರಿಕೆ ಇರಲಿ; ಕೌಸ್ತುಭಾ ಭಾರತೀಪುರಂ ಬರಹ
ಕಳೆದೊಂದು ತಿಂಗಳಿನಿಂದ ಎಲ್ಲೆಲ್ಲೂ ವೈರಲ್ ಫೀವರ್ ಹಾವಳಿ. ವಾರಗಟ್ಟಲೆ ಜನರನ್ನು ಹೈರಾಣು ಮಾಡುತ್ತಿದೆ ಈ ಜ್ವರ. ಆಂಟಿ ಬಯೋಟಿಕ್ ಮಾತ್ರೆಗಳಿಂದಲೂ ಗುಣವಾಗದ ಈ ವೈರಲ್ ಜ್ವರದ ಬಗ್ಗೆ ಒಂದಿಷ್ಟು ಮುನ್ನೆಚ್ಚರಿಕೆ ಅಂತು ಇರಲೇಬೇಕು. ವೈರಲ್ ಫೀವರ್ ಮುನ್ನೆಚ್ಚರಿಕೆ ಬಗ್ಗೆ ಕೌಸ್ತುಭಾ ಭಾರತೀಪುರಂ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು ಹೀಗೆ.
ಕಳೆದೊಂದು ತಿಂಗಳಿನಿಂದ ಎಲ್ಲೆಲ್ಲೂ ವೈರಲ್ ಫೀವರ್ ಹಾವಳಿ. ವಾರಗಟ್ಟಲೆ ಜನರನ್ನು ಹೈರಾಣು ಮಾಡುತ್ತಿದೆ ಈ ಜ್ವರ. ಆಂಟಿ ಬಯೋಟಿಕ್ ಮಾತ್ರೆಗಳಿಂದಲೂ ಗುಣವಾಗದ ಈ ವೈರಲ್ ಜ್ವರದ ಬಗ್ಗೆ ಒಂದಿಷ್ಟು ಮುನ್ನೆಚ್ಚರಿಕೆ ಅಂತು ಇರಲೇಬೇಕು. ವೈರಲ್ ಫೀವರ್ ಮುನ್ನೆಚ್ಚರಿಕೆ ಬಗ್ಗೆ ಕೌಸ್ತುಭಾ ಭಾರತೀಪುರಂ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು ಹೀಗೆ.
ಪ್ರತಿವರ್ಷ ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಪ್ರಮಾಣ ಏರಿಕೆಯಾಗುವುದು ಸಹಜ. ಡೆಂಗ್ಯೂ, ಚಿಕುನ್‌ಗುನ್ಯಾ, ಮಲೇರಿಯಾ ಬೆನ್ನಲ್ಲೇ ಇದೀಗ ವೈರಲ್ ಜ್ವರ ಸಮಾಜವನ್ನು ಆವರಿಸಿದೆ. ಸೂಚನೆ ಕೊಡದೇ ಬರುವ ಈ ಜ್ವರವು ವಾರನುಗಟ್ಟಲೇ ಮನುಷ್ಯರನ್ನು ಹೈರಾಣು ಮಾಡುತ್ತಿದೆ. ತಲೆಭಾರ, ಮೈಕೈ ನೋವು, ವಿಪರೀತ ಸುಸ್ತು ಇದರಿಂದ ಜನರು ಸೋತು ಹೋಗಿದ್ದಾರೆ. ಅಲ್ಲದೇ ವೈರಲ್ ಫೀವರ್ ಎಂಬುದು ಮನೆಮಂದಿಗೆಲ್ಲಾ ಹರಡುತ್ತಿದೆ.
ಈ ಜ್ವರ ಬಂದ ಮೇಲೆ ಕಷ್ಟ ಅನುಭವಿಸುವುದಕ್ಕಿಂತ ಜ್ವರ ಬರುವ ಮೊದಲೇ ಒಂದಿಷ್ಟು ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗುತ್ತದೆ. ಈ ಜ್ವರ ಬಂದಾಗ ಏನು ಮಾಡಬೇಕು, ರೋಗಲಕ್ಷಣಗಳೇನು, ಮುನ್ನೆಚ್ಚರಿಕೆ ಹೇಗೆ ಎಂಬ ಬಗ್ಗೆ ಕೌಸ್ತುಭಾ ಭಾರತೀಪುರಂ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಅವರ ಬರಹವನ್ನು ನೀವೂ ಓದಿ, ವೈರಲ್ ಜ್ವರದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ.
ಕೌಸ್ತುಭಾ ಭಾರತೀಪುರಂ ಬರಹ
ಇದೊಂತರಾ ವಿಚಿತ್ರವಾದ ವೈರಲ್ ಫೀವರ್ ಸಮಾಜವನ್ನ ಆವರಿಸಿಕೊಳ್ತಿದೆ. ಒಂದೈದು ದಿನ ಚಳಿ ಜ್ವರ ಇದ್ದ ಹಾಗಿದ್ದು, ಒಂದು ಕೋರ್ಸ್ ಆ್ಯಂಟಿಬಯೋಟಿಕ್ ಮಾತ್ರಗಳ ನಂತರ ಚೂರು ಬಿಟ್ಟಂಗಿದ್ದು ಶುರುವಾಗತ್ತೆ ನೋಡಿ post viral arthritis..post viral arthralgia..post viral fatigue..post viral cough...post viral bronchitis.... ತಿಂಗಳುಗಳಗಟ್ಟಲೆ ನಮ್ಮನ್ನ ಇನ್ನಿಲ್ಲದಂತೆ ಇಟ್ಟಾಡಿಸತ್ತೆ 😔
ನಾವು ಒಂದಿಷ್ಟು ಎಚ್ಚರ ವಹಿಸ್ಲೇಬೇಕು..
* ಅಸಾಧ್ಯ ತಲೆಭಾರ, ತಲೆನೋವು, ಕೆಮ್ಮು, ಗಂಟಲು ಕಿರಿಕಿರಿ, ಮೈ ಕೈನೋವು, ಚಳಿ ಜ್ವರ ಇದ್ರೆ ಅದು ಡೋಲೋ 650 ಗೆ ಬಗ್ಗಲ್ಲ .. ಸ್ವಯಂ ವೈದ್ಯ ಬಿಟ್ಟು ಡಾಕ್ಟರ್ ಅನ್ನು ಸಂಪರ್ಕಿಸಿ.
* ನೀರು ಕುಡಿಯಲು ಮನಸಾಗದಿದ್ರೂ ಬಿಸಿ ಬಿಸಿ ನೀರನ್ನು ಕುಡಿಯುತಲೇ ಇರ್ಬೇಕು. ಇಲ್ಲದಿದ್ರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನೂರೆಂಟು ಬೇರೆ ಕಾಯಿಲೆಗಳಿಗೆ ಜಾಗವಾಗತ್ತೆ.
* ಫ್ರಿಜ್‌ನಲ್ಲಿಟ್ಟ ಆಹಾರವನ್ನ ತೆಗೆದು ಬಳಸುವ ಅಥವಾ ಬಿಸಿ ಮಾಡೋ ಬದ್ಲು ಆಯಾ ಹೊತ್ತಿನ ಕೂಳನ್ನ ಫ್ರೆಷ್ ಆಗಿ ತಯಾರಿಸಿ.
* ನೀವು ಆರಾಮಾಗೇ ಇದ್ರೂ ಬಿಸಿನೀರು ಕುಡಿಯೋದನ್ನ ರೂಢಿಸಿಕೊಳ್ಳಿ, ಬೆಚ್ಚಗಿರೋ ಬಟ್ಟೆಗಳನ್ನ ಧರಿಸಿ.
* ತುಳಸಿ, ಶುಂಠಿ, ಲವಂಗ, ಮೆಣಸುಕಾಳು, ಜೀರಿಗೆ, ಚೂರೇ ಉಪ್ಪು ಹಾಕಿ ಕೊತ ಕೊತ ಕುದಿಸಿ, ಶೋಧಿಸಿ ಕುಡಿಯುತ್ತಿರಿ.
ಇನ್ನೂ... ಏನೇನೋ ತೋಚತ್ತೋ ಅದೆಲ್ಲಾ ಎಚ್ಚರವನ್ನೂ ಮಾಡ್ಕೊಳಿ. ಅವ ಇಟ್ಟಂಗಿರ್ತೀನಿ ಅಂತಿರಿ ಪರ್ವಾಗಿಲ್ಲ. ಅವ್ನೇ ಕೊಟ್ಟಿರೋ ಬುದ್ಧಿಯನ್ನೂ ಬಳಸಿಕೊಳ್ಳಿ. ನೆನಪಿರ್ಲಿ. ನಾವು ಕುಗ್ಗಿದ್ರೆ ನಮ್ಮ ಸುತ್ತಲ ಇಡೀ ವಾತಾವರಣ ಕುಗ್ಗತ್ತೆ. ದೇಹವನ್ನ ಸದೃಢವಾಗಿಟ್ಕೊಳೋದೂ ನಮ್ಮದೇ ಜವಾಬ್ದಾರಿ.
ಕೌಸ್ತುಭ ಅವರು ಸೆಪ್ಟೆಂಬರ್ 12 ರಂದು ಈ ಪೋಸ್ಟ್ ಹಂಚಿಕೊಂಡಿದ್ದರು.ಇವರ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿದ್ದಾರೆ ತಮ್ಮ ತಮ್ಮ ವೈರಲ್ ಜ್ವರ ಅನುಭವ ಹಂಚಿಕೊಂಡಿದ್ದಾರೆ.
ಕೌಸ್ತುಭ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ
‘ಕಳೆದ ಮೂರು ದಿನದಿಂದ ಅನುಭವಿಸುತ್ತಿದ್ದೇನೆ. ಆಂಟಿಬಯಟಿಕ್‌ನಲ್ಲಿದ್ದೇನೆ. ಆಮೇಲಿನ ಕಥೆ ಕೇಳಿ ಭಯ ಆಗುತ್ತಿದೆ ‘ ಎಂದು ರಂಗಸ್ವಾಮಿ ಮೂಕನಹಳ್ಳಿ ಕಾಮೆಂಟ್ ಮಾಡಿದ್ದಾರೆ.
‘ಮತ್ತೆ ಕೋವಿಡ್ ಸಮಯದಂತೆ ಅಮೃತಬಳ್ಳಿ ಕಷಾಯ ಅಥವಾ ಜ್ವರದ ಲಕ್ಷಣ ಕಂಡ ತಕ್ಷಣ ಸಮ ಪ್ರಮಾಣದ ನೀರಿದ ಜೊತೆ ಅಮೃತಾರಿಷ್ಟ ದಿನಕ್ಕೆ ಮೂರು ಸಲ ಆಹಾರದ ನಂತರ ಬಹಳ ಸಹಾಯವಾಗಬಹುದು‘ ಎಂದು ಲತಿಕಾ ಭಟ್ ಎನ್ನುವವರು ಕಾಮೆಂಟ್ ಮೂಲಕ ತಿಳಿಸಿದ್ದಾರೆ.
ಶಾಂತಲ ಕೆ. ಆರ್ ಅವರ ಕಾಮೆಂಟ್ ಹೀಗಿದೆ ‘ಜ್ವರದ ಜೊತೆ ಗಂಟಲು ನೋವು, ಅಂಗೈ ಅಂಗಾಲು, ಮುಖದ ಮೇಲೆಲ್ಲ ರ್ಯಾಷಸ್. ವೈದ್ಯರಿಗೇ ಏನೂಂತ ತಿಳಿಯಲಿಲ್ಲ. ಒಟ್ಟಿನಲ್ಲಿ ಆರೋಗ್ಯ ಕಾಪಾಡಿಕೊಳ್ಳೋದೇ ಇಂದು ಸವಾಲಾಗಿದೆ‘
‘ಕೀಲು ನೋವು..ಜ್ವರ ಬಿಟ್ಟು ಹೋಗಿ ವಾರವಾದರೂ ಕೈಕಾಲು ಪ್ರಾಣ ಹೋಗುವಷ್ಟು ನೋವು ನೀಡುತ್ತದೆ..(ರಕ್ತನಾಳಗಳು ಎಲ್ಲೆಲ್ಲಿ ಹೋಗಿದೆಯೋ ಅಲ್ಲೆಲ್ಲಾ ನೋವು..ವಿಚಿತ್ರ ಖಾಯಿಲೆ)‘ ಗಿರೀಶ್ ಎವಿ ಕಾಮೆಂಟ್ ಮಾಡುವ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ವಿಭಾಗ