ನಾನು ಕೂಡ ತಲೆಬುಡವಿಲ್ಲದ ಬೆಂಗಳೂರು ನಗರದ ವಿರೋಧಿಯೇ, ಏನಿವಾಗ?!: ಪತ್ರಕರ್ತ ರಾಜೀವ ಹೆಗಡೆ ಅಭಿಪ್ರಾಯ
ಬೆಂಗಳೂರು ಮಳೆ ಉತ್ತರ, ಪೂರ್ವ ಬೆಂಗಳೂರಿಗರನ್ನು ಹೈರಾಣಾಗಿಸಿತು. ಇನ್ನೂ ಕೆಲವು ತಗ್ಗು ಪ್ರದೇಶಗಳಲ್ಲಿ, ಚರಂಡಿ ಸೌಕರ್ಯ ಸರಿ ಇಲ್ಲದ ಕಡೆಗೆ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಆಗಿತ್ತು. ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿದರೆ, ಅಂಥವರನ್ನು ಬೆಂಗಳೂರು ವಿರೋಧಿ ಎಂದು ಚಿತ್ರಿಸಲಾಗುತ್ತಿರುವ ಬಗ್ಗೆ ಪತ್ರಕರ್ತ ರಾಜೀವ್ ಹೆಗಡೆ ಹಂಚಿಕೊಂಡ ಅಭಿಪ್ರಾಯ ಇಲ್ಲಿದೆ.
ಬೆಂಗಳೂರು ಮಳೆಯ ಅಬ್ಬರ ಕಡಿಮೆಯಾಗಿದೆ. ಸಮಸ್ಯೆಗಳು ಕಡಿಮೆ ಆಗಿಲ್ಲ. ಪರಿಹಾರ ಕಾರ್ಯಾಚರಣೆ, ಮೂಲಸೌಕರ್ಯ ಸರಿಪಡಿಸುವ ಕೆಲಸ ಮುಂದುವರಿದಿದೆ. ಈ ನಡುವೆ, ಬೆಂಗಳೂರಿನ ಮೂಲಸೌಕರ್ಯಗಳ ಬಗ್ಗೆ ಸೌಲಭ್ಯಗಳ ಕೊರತೆ ಬಗ್ಗೆ ಮಾತನಾಡುವವರನ್ನು ಬೆಂಗಳೂರು ವಿರೋಧಿ ಎಂದು ಬಿಂಬಿಸುವ, ಟೀಕಿಸುವ ಪ್ರವೃತ್ತಿಯೂ ಗಮನಸೆಳೆದಿದೆ. ಈ ಬೆಳವಣಿಗೆಗಳನ್ನು ಗಮನಿಸಿದ ಪತ್ರಕರ್ತ ರಾಜೀವ್ ಹೆಗಡೆ ಅವರು ಬೆಂಗಳೂರು ಸಮಸ್ಯೆಗಳ, ಮೂಲಸೌಕರ್ಯಗಳ ಕೊರತೆ ಕುರಿತು ಒಂದಷ್ಟು ಚಿಂತನೆಗೆ ಅವಕಾಶ ನೀಡುವ ಅಂಶಗಳನ್ನು ಹಂಚಿಕೊಂಡಿದ್ದಾರೆ. ಅದು ಹೀಗಿದೆ -
ನಾನು ಕೂಡ ತಲೆಬುಡವಿಲ್ಲದ ಬೆಂಗಳೂರು ನಗರದ ವಿರೋಧಿಯೇ..
ಬೆಂಗಳೂರಿನಲ್ಲಿ ಮಳೆ ಶುರುವಾದಾಗಲೆಲ್ಲ ಟೀಕೆಗಳ ಸುರಿಮಳೆಯೂ ಆಗುತ್ತದೆ. ಅದಕ್ಕೆ ಪ್ರತಿಯಾಗಿ ಒಂದಿಷ್ಟು ಜನ ʼಬೆಂಗಳೂರು ಅಸ್ಮಿತೆʼ ಶುರು ಮಾಡಿಕೊಳ್ಳುತ್ತಾರೆ. ʼಟೀಕಿಸಿದವರು ನಮ್ಮವರಲ್ಲʼ ಎನ್ನುವ ದಾಟಿಯಲ್ಲಿ, ʼಹೊಟ್ಟೆಗೆ ಅನ್ನ ಹಾಕುತ್ತಿರುವ ನಮ್ಮ ನಗರವನ್ನು ಬೈಯ್ಯವುದರ ಬದಲಿಗೆ, ಗಂಟು ಮೂಟೆ ಕಟ್ಟಿಕೊಂಡು ನಿಮ್ಮೂರಿಗೆ ಹೋಗಿಬಿಡಿʼ ಎಂದು ಫರ್ಮಾನು ಹೊರಡಿಸುವವರೂ ಇದ್ದಾರೆ. ತೀರಾ ಭಾವನಾತ್ಮಕವಾಗಿ ಫತ್ವಾ ಹೊರಡಿಸುವ ಸಂದರ್ಭದಲ್ಲಿ ಒಂದಿಷ್ಟು ವಾಸ್ತವವನ್ನು ಮಾತ್ರ ನಾವು ಮರೆಯುತ್ತೇವೆ. ಆ ಭಾವನೆಗಳನ್ನು ದಾಳವಾಗಿಸಿಕೊಂಡು ರಾಜಕಾರಣಿಗಳು ತಿಂದು ತೇಗುತ್ತಿರುತ್ತಾರೆ. ನಾವು ಈ ಭ್ರಷ್ಟರ ದಾಳವಾಗುತ್ತಿದ್ದೇವೆ ಎಂದು ಗೊತ್ತಾಗುವಷ್ಟರಲ್ಲಿ ಬೆಂಗಳೂರು ನಗರವು ರಾಡಿಯೊಳಗೆ ಮಿಂದೆದ್ದು, ಹೊಸ ದಿನವನ್ನು ಶುರು ಮಾಡಿರುತ್ತದೆ.
ಬೆಂಗಳೂರು ನಗರದಲ್ಲಿ ಮೊನ್ನೆಯೆಂದರೆ ಅ.21ರಂದು ಎರಡೂವರೆ ದಶಕದಲ್ಲೇ ಅತ್ಯಧಿಕ ಮಳೆಯಾಗಿದೆ. ಬೆಂಗಳೂರು ನಗರದ ಜಿಕೆವಿಕೆ ವಲಯದಲ್ಲಿ ಒಂದೇ ದಿನ 186 ಮಿ.ಮೀ ಮಳೆಯಾಗಿದೆಯಂತೆ. ಅಂದ್ಹಾಗೆ ಅಕ್ಟೋಬರ್ ತಿಂಗಳಿನ ಮೊದಲ ಮೂರು ವಾರದಲ್ಲಿ 250 ಮಿ.ಮೀ ಆಸು ಪಾಸಿನ ಮಳೆ ಆಗಿದೆ ಎನ್ನುವುದು ಹವಾಮಾನ ಇಲಾಖೆಯ ವರದಿ. ಅಂದ್ಹಾಗೆ 2005ರಲ್ಲಿ ಇದು ಸುಮಾರು 600 ಮಿ.ಮೀ ದಾಟಿತ್ತು. ಹವಾಮಾನ ಇಲಾಖೆಯ ವರದಿ ಹೇಳುವಂತೆ ಇತ್ತೀಚಿನ ವರ್ಷಗಳಲ್ಲಿ ಇದು ಅರ್ಧಕ್ಕೆ ಕುಸಿದಿದೆ. ಇದನ್ನು ಹೊರತುಪಡಿಸಿ ಒಟ್ಟಾರೆ ನಗರದಲ್ಲಿ ಮಳೆಯು ಕಳೆದ ಹತ್ತು ದಿನಗಳಲ್ಲಿ 20ಮಿ.ಮೀನಿಂದ 70 ಮಿ.ಮೀವರೆಗೆ ಸರಾಸರಿ ಹೊಯ್ದಿದೆ.
ಮುಂಬೈ, ಚೆನ್ನೈ ಹಾಗೂ ದೆಹಲಿಗೆ ಹೋಲಿಸಿ ನೋಡೋಣ
ಈಗ ನಮ್ಮ ಬೆಂಗಳೂರು ನಗರವನ್ನು ಮುಂಬೈ, ಚೆನ್ನೈ ಹಾಗೂ ದೆಹಲಿಗೆ ಹೋಲಿಸಿ ನೋಡೋಣ. ಈ ಮೂರು ನಗರದಲ್ಲಿ ಈ ಬಾರಿ ಸಂಭವಿಸಿದ ಪ್ರವಾಹದ ವೇಳೆಯಲ್ಲಿ ಒಂದು ದಿನದ ವರ್ಷಧಾರೆ ಪ್ರಮಾಣವು 300ಮಿ.ಮೀಗೂ ಅಧಿಕವಾಗಿತ್ತು. ಮುಂಬೈ ಹಾಗೂ ಚೆನ್ನೈನಲ್ಲಿ ವಾರಕ್ಕೂ ಅಧಿಕ ಅವಧಿಗೆ ಇದೇ ಪ್ರಮಾಣದ ಭಾರಿ ಮಳೆಯಾಗಿತ್ತು. ಇನ್ನೊಂದು ಅಂಶವನ್ನು ಗಮನಿಸಬೇಕಿರುವುದು ಏನೆಂದರೆ ಮುಂಬೈ ಹಾಗೂ ಚೆನ್ನೈ ನಗರಗಳು ಸಮುದ್ರದ ಪಕ್ಕದಲ್ಲಿಯೇ ಇವೆ. ಇನ್ನು ದೆಹಲಿಗೆ ಯಮುನಾ ನದಿಯ ಅಪಾಯವಿದೆ. ಹೀಗಾಗಿ ದೆಹಲಿ, ಮುಂಬೈ ಹಾಗೂ ಚೆನ್ನೈನ ಸುತ್ತಲು ಮಳೆ ಬಂದಾಗಲೂ ಈ ನಗರಗಳು ಪ್ರವಾಹದಲ್ಲಿ ಮುಳುಗುವುದು ಸಾಮಾನ್ಯ. ಇನ್ನು ಸಮುದ್ರ ತಟದ ನಗರಗಳ ಪರಿಸ್ಥಿತಿ ಇನ್ನಷ್ಟು ಭೀಕರವಾಗಿರುತ್ತದೆ.
ಆದರೆ ನಮ್ಮ ಬೆಂಗಳೂರಿನಲ್ಲಿ ಈ ವರ್ಷ ದೊಡ್ಡ ಮಳೆ ಬಂದಿದ್ದೇ ಅಕ್ಟೋಬರ್ ತಿಂಗಳಿನ ಕೊನೆಯ ಎರಡು ವಾರಗಳಲ್ಲಿ. ಆದರೆ ಎಂದಿಗೂ ಚೆನ್ನೈ, ದೆಹಲಿ, ಮುಂಬೈನಲ್ಲಿ ಬರುವಂತಹ ಭೀಕರ ಮಳೆಯನ್ನು ನಾವು ಕಂಡಿಲ್ಲ. ಒಂದೊಮ್ಮೆ ಆ ಮಳೆಯು ಬೆಂಗಳೂರಿನಲ್ಲಾದರೆ ಪರಿಸ್ಥಿತಿಯನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಅಂದ್ಹಾಗೆ ಬೆಂಗಳೂರು ನಗರವು ಸಮುದ್ರ ಮಟ್ಟದಿಂದ ಸಾಕಷ್ಟು ದೂರವಿದೆ. ಹಾಗೆಯೇ ಪ್ರವಾಹವನ್ನು ಸೃಷ್ಟಿಸುವ ಯಾವುದೇ ನದಿಗಳು ಇಲ್ಲಿಲ್ಲ. ಉಳಿದ ನಗರಗಳಂತೆ ಸಮುದ್ರ ಹಾಗೂ ನದಿಗಳಿಂದ ಬೆಂಗಳೂರಿನಲ್ಲಿ ಪ್ರವಾಹ ಆಗುತ್ತಿಲ್ಲ. ಕಳೆದ ವಾರ ಫ್ರಾನ್ಸ್ ರಾಜಧಾನಿ ಪ್ಯಾರೀಸ್‌ನ್ನು ಪ್ರವಾಹ ತೊಳೆದುಕೊಂಡು ಹೋಗಿದ್ದನ್ನು ನೀವು ನೋಡಿರಬಹುದು. ಅಂತಹ ಪರಿಸ್ಥಿತಿ ನಿರ್ಮಾಣವಾಗಲು ಯಾವುದೇ ನದಿಗಳು ಬೆಂಗಳೂರಿನಲ್ಲಿಲ್ಲ.
ಅಂದರೆ ನಾವಿಂದು ಅನುಭವಿಸುತ್ತಿರುವ ಪ್ರವಾಹದ ಯಾವ ಹನಿ ನೀರಿಗೂ ಪ್ರಕೃತಿ ಕಾರಣವಲ್ಲ. ಮಾನವ ಹಾಗೂ ಸರ್ಕಾರ ನಿರ್ಮಿತ ಕೃತಕ ಪ್ರವಾಹವು ಬೆಂಗಳೂರಿನ ಸ್ಥಿತಿಗೆ ಕಾರಣವಾಗಿದೆ ಎನ್ನುವುದನ್ನು ಮರೆಯಕೂಡದು. ಚೆನ್ನೈ, ಮುಂಬೈ ಹಾಗೂ ದೆಹಲಿ ನಗರದಂತೆ ನಾವು ಪ್ರಕೃತಿಯನ್ನು ಧೂಷಿಸಿಕೊಂಡು ಕುಳಿತರೆ ನಮ್ಮಂಥ ಪೆದ್ದರು ಮತ್ತೊಬ್ಬರಿಲ್ಲ. ಅಷ್ಟಕ್ಕೂ ಆ ನಗರದಲ್ಲೂ ಮಾನವ ನಿರ್ಮಿತ ಸಮಸ್ಯೆಗಳು ಬೇಕಾದಷ್ಟಿವೆ. ಆದರೆ ಪ್ರಾಕೃತಿಕವಾಗಿ ಒಂದಿಷ್ಟು ಸಮಸ್ಯೆಗಳು ಕೂಡ ಇವೆ. ಆದರೆ ಬೆಂಗಳೂರು ನಗರದ ದುಃಸ್ಥಿತಿಗೆ ಬೆಂಗಳೂರನ್ನು ಹಾಳು ಮಾಡುತ್ತಿರುವ ʼಅಭಿವೃದ್ಧಿ ಸಚಿವʼರುಗಳೇ ಕಾರಣ. ಹಾಗೆಯೇ ಬೆಂಗಳೂರು ನಗರವು ಕೋಟಿ ಕೋಟಿ ಜನರನ್ನು ಸಹಿಸಿಕೊಳ್ಳುವ ಶಕ್ತಿ ಹೊಂದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ.
ಆದರೆ ಒಂದಿಷ್ಟು ಲಕ್ಷ ಜನರನ್ನು ಸಹಿಸಿಕೊಳ್ಳುವ ಹೊಸ ವೈಜ್ಞಾನಿಕ ನಗರ ನಿರ್ಮಿಸಿ. ಇಲ್ಲಿ ಹೊಸದಾಗಿ ಬೆಳೆಯುತ್ತಿರುವ ಪ್ರದೇಶವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿ ಎನ್ನುವ ಕಾರಣದಿಂದಲೇ ಬೆಂಗಳೂರು ನಗರಕ್ಕೆ ಓರ್ವ ನಗರಾಭಿವೃದ್ಧಿ ಸಚಿವ, ಉಸ್ತುವಾರಿ ಸಚಿವ, 20ಕ್ಕೂ ಅಧಿಕ ಶಾಸಕರು, ಮೂವರು ಸಂಸದರು ಹಾಗೂ ಬಿಬಿಎಂಪಿ ಎನ್ನುವ ವ್ಯವಸ್ಥೆಯನ್ನು ನಮ್ಮ ತೆರಿಗೆ ಹಣದಲ್ಲಿ ನಡೆಸಲಾಗುತ್ತಿದೆ. ಮಳೆ ಪ್ರಶ್ನಾತೀತವೇ ಹೊರತು, ಈ ಬೇಜವಾಬ್ದಾರಿ ವ್ಯವಸ್ಥೆಯು ಪ್ರಶ್ನಾತೀತವಲ್ಲ.
ಪ್ರಾಕೃತಿಕ ನಿಯಮದಂತೆ ಎತ್ತರದಲ್ಲಿರುವ ಬೆಂಗಳೂರು ನಗರದಿಂದ ನೀರು ಸುಲಭವಾಗಿ ಹರಿದು ವೃಷಭಾವತಿ, ಕಾವೇರಿ ನದಿಯನ್ನು ಸೇರಬೇಕು. ಒಂದೊಮ್ಮೆ ಬೆಂಗಳೂರಿನಲ್ಲಿ ಮಳೆಯಾದರೆ ಅಕ್ಕಪಕ್ಕದ ಜಿಲ್ಲೆಗಳು ಪ್ರವಾಹದ ಅಪಾಯ ಎದುರಿಸಬೇಕು. ಆದರೆ ಬೆಂಗಳೂರಿನಲ್ಲಿ ಬೀಳುತ್ತಿರುವ ಅಲ್ಪ ಸ್ವಲ್ಪ ಮಳೆ ನೀರು ಹರಿಯುತ್ತಲೇ ಇಲ್ಲ. ಕೆರೆ, ರಾಜಾಕಾಲುವೆಗಳನ್ನು ಮುಚ್ಚಿ ಅಪಾರ್ಟ್‌ಮೆಂಟ್, ಎಸ್‌ಇಝಡ್ ಮಾಡಿ ಅಪಾಯವನ್ನು ಆಹ್ವಾನಿಸಿದ್ದು ಇದೇ ರಾಜಕಾರಣಿಗಳ ಬೇನಾಮಿ ರೀಯಲ್ ಎಸ್ಟೇಟ್ ಹಾಗೂ ಅದರ ಪೋಷಕ ಸಂಸ್ಥೆಯಾಗಿರುವ ಬಿಬಿಎಂಪಿ. ಬಿದ್ದ ನೀರು ಹರಿಯದಂತೆ, ಇಂಗದಂತೆ ಅವ್ಯವಸ್ಥೆಯನ್ನು ಸೃಷ್ಟಿಸಿದ್ದು ಇದೇ ಬ್ರಾಂಡ್ ಬೆಂಗಳೂರು ಹೆಸರಲ್ಲಿ ಲೂಟಿ ಮಾಡುತ್ತಿರುವ ಜನಪ್ರತಿನಿಧಿಗಳು.
ಅಷ್ಟಕ್ಕೂ ನಮ್ಮ ಬೆಂಗಳೂರನ್ನು ನಾವ್ಯಾರು ಟೀಕಿಸುತ್ತಿಲ್ಲ, ಮಳೆಯನ್ನೂ ಶಪಿಸುತ್ತಿಲ್ಲ. ಬೆಂಗಳೂರಿನ ಅಂದ, ಚೆಂದ ಹಾಗೂ ಹೆಗ್ಗಳಿಕೆಗಳ ಬಗ್ಗೆ ಇವರೆಲ್ಲರಿಗಿಂತ ಹೆಚ್ಚು ಪ್ರೀತಿಯ ಜತೆಗೆ ಕೃತಜ್ಞತೆಯಿದೆ. ಆದರೆ ನಮ್ಮ ಹಸಿವನ್ನು ತಣಿಸುತ್ತಿರುವ ನಗರವನ್ನು ಹಾಳು ಮಾಡುತ್ತಿರುವರ ಬಗ್ಗೆ ಟೀಕಿಸಿದ್ದನ್ನು ʼಬೆಂಗಳೂರಿಗೆ ಹಾಕುವ ಶಾಪʼ ಎಂದು ತಿಳಿದುಕೊಂಡರೆ ಅದು ಲೂಟಿಕೋರರಿಗೆ ಮಾಡುವ ದೊಡ್ಡ ಸಹಾಯವಾಗುತ್ತದೆ.
ಅಷ್ಟಕ್ಕೂ ಬೆಂಗಳೂರಿನ ಅವ್ಯವಸ್ಥೆ ಬಗ್ಗೆ ಟೀಕೆ, ಟ್ರೋಲ್ ಬರುತ್ತಿರುವುದು ಕೇವಲ ಮೂರು ವಿಚಾರಕ್ಕೆ ಎನ್ನುವುದನ್ನು ಮರೆಯಕೂಡದು. ಅವಧಿಗೆ ಸರಿಯಾಗಿ ಕೆಲಸ ಮುಗಿಸದಿರುವುದು, ಸರಾಗವಾಗಿ ನೀರು ಹರಿಯಲು ಅವಕಾಶ ಮಾಡಕೊಡದಿರುವುದು ಹಾಗೂ ಇವೆರಡರಿಂದ ಆಗುತ್ತಿರುವ ಸಂಚಾರ ದಟ್ಟಣೆ. ಒಂದಿಷ್ಟು ಜನರನ್ನು ಬಿಟ್ಟು ಇಂತಹ ಟೀಕೆಗೆ ಪ್ರಮುಖ ಕಾರಣ ಕೂಡ ಬೆಂಗಳೂರು ನಗರದ ಮೇಲಿನ ಪ್ರೀತಿಯೇ ಆಗಿದೆ.
ನಾಲ್ಕು ವರ್ಷದ ಹಿಂದೆ ಮುಗಿಯಬೇಕಿದ್ದ ಮೆಟ್ರೋ ಕಾಮಗಾರಿಗಳು ನಡೆಯುತ್ತಲೇ ಇವೆ. ಪಿಇಎಸ್ ಕಾಲೇಜಿನ ಬಳಿ ಕಟ್ಟುತ್ತಿರುವ ಫ್ಲೈ ಓವರ್ ನಾಲ್ಕೈದು ವರ್ಷ ಕಳೆದರೂ ಮುಗಿಯುವ ಲಕ್ಷಣವೇ ಇಲ್ಲ. ಕನಕಪುರ ರಸ್ತೆಯ ನೈಸ್ ಜಂಕ್ಷನ್ ಬಳಿ ಕಳೆದೊಂದು ವರ್ಷದಿಂದ ರಸ್ತೆಯನ್ನು ಮುಚ್ಚಿ, ತೆರೆಯುವುದನ್ನೇ ಮರೆತಿದ್ದಾರೆ. ಮಳೆ ಬಂದು ಪ್ರವಾಹ ಸೃಷ್ಟಿಯಾದರೂ ನಗರದ ಒಂದೇ ಒಂದು ಅಂಡರ್‌ಪಾಸ್‌ನ್ನು ಸ್ವಚ್ಛಗೊಳಿಸಿ ನೀರು ಹೋಗುವ ಹಾಗೆ ಮಾಡುವುದಿಲ್ಲ. ಅಷ್ಟಕ್ಕೂ ಬೆಂಗಳೂರಿನಲ್ಲಿ ತಿಂಗಳುಗಟ್ಟಲೇ ಮಳೆ ಕೂಡ ಬರುವುದಿಲ್ಲ. ಆದರೆ ನಮ್ಮ ಸರ್ಕಾರ ಮಾಡುವ ಕೆಲಸವೇನೆಂದರೆ, ತೊಳೆದುಕೊಂಡ ಹೋದ್ಮೇಲೆ ತುರ್ತು ಕಾಮಗಾರಿಯೆಂದು ಮಾಡಿ ಅಲ್ಲಿಯೂ ಲೂಟಿ ಮಾಡುತ್ತಾರೆ.
ಇದರ ಬದಲಿಗೆ ಮಳೆಯ ಮುನ್ಸೂಚನೆಗೆ ತಕ್ಕಂತೆ ಪೂರ್ವ ತಯಾರಿಗಳನ್ನು ಮಾಡಿಕೊಂಡು, ಕಾಮಗಾರಿಗಳನ್ನು ಅವಧಿಗೆ ಸರಿಯಾಗಿ ಮುಗಿಸಿದರೆ ಇದ್ಯಾವುದೇ ಸಮಸ್ಯೆ ಇರುವುದಿಲ್ಲ. ಕಳೆದೊಂದು ವಾರದಲ್ಲಿ ಜನರು ಬೈಯ್ಯುವ ಮಟ್ಟಿಗೆ ಪ್ರವಾಹ, ಸಂಚಾರ ದಟ್ಟಣೆ ಆಗಿರುವುದಕ್ಕೆಲ್ಲ ಅರೆಬರೆ ಕಾಮಗಾರಿಗಳೇ ಕಾರಣ.
ಬಿಟ್ಟು ಹೋಗಿ ಎನ್ನುವುದು ಸುಲಭ!
ನಾನು ಉತ್ತರ ಕನ್ನಡದಿಂದ ಬೆಂಗಳೂರಿಗೆ ಬಂದಿದ್ದೇನೆ. ಹಾಗೆಯೇ ಇನ್ನೊಂದಿಷ್ಟು ಲಕ್ಷ ಜನರು ಬೇರೆ ಬೇರೆ ಜಿಲ್ಲೆ, ರಾಜ್ಯದಿಂದ ಇಲ್ಲಿಗೆ ವಲಸೆ ಬಂದಿರಬಹುದು. ಬೆಂಗಳೂರು ನಗರದ ಮೇಲೆ ಪ್ರೀತಿ, ಗೌರವವಿದೆ ನಿಜ. ಆದರೆ ಈ ನಗರದ ಮೇಲಿನ ವ್ಯಾಮೋಹದಿಂದ ನಾವಿಲ್ಲಿಗೆ ವಲಸೆ ಬಂದಿಲ್ಲ. ನಮ್ಮೂರಿನಲ್ಲಿ ಅಗತ್ಯ ಉದ್ಯೋಗವಕಾಶಗಳು ಇಲ್ಲದ ಕಾರಣದಿಂದ ಏಷ್ಯಾದ ಸಿಲಿಕಾನ್ ಸಿಟಿಗೆ ನಾವೂ ಬರಬೇಕಾಯಿತು. ರಾಜಕಾರಣಿಗಳ ರೀಯಲ್ ಎಸ್ಟೇಟ್ ದಾಹಕ್ಕೆ ಬೆಂಗಳೂರು ನಗರವನ್ನು ಮಾತ್ರ ಅಭಿವೃದ್ಧಿ ಪಡಿಸುವ ಹಠಕ್ಕೆ ಬೀಳದಿದ್ದರೆ ನಗರಕ್ಕೆ ಹಾಗೂ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ. ಇವರ ದುರಾಸೆ, ದಾಹ ಯಾವ ಮಟ್ಟಿಗೆ ಇದೆಯೆಂದರೆ, ಬೆಂಗಳೂರು ಉದ್ದಾರ ಮಾಡಲಾಗದವರೆಲ್ಲ ಅಕ್ಕ ಪಕ್ಕದ ಜಿಲ್ಲೆಗೂ ಬೆಂಗಳೂರು ಎಂದು ನಾಮಕರಣ ಮಾಡುತ್ತಿದ್ದಾರೆ. ಒಂದೊಮ್ಮೆ ಇದುವೇ ಅಭಿವೃದ್ಧಿಕೋರರ ತರ್ಕವಾಗಿದ್ದರೆ, ನಮ್ಮೂರಿಗೂ ಬೆಂಗಳೂರು ಎಂದು ಹೆಸರಿಟ್ಟು ಉದ್ಯೋಗ ಸೃಷ್ಟಿಸಿ. ಆಗ ಬೆಂಗಳೂರಿಗೆ ವಲಸೆ ಬರುವುದು ತಪ್ಪುತ್ತದೆ. ಅದರ ಬದಲಾಗಿ, ಮಳೆ ಬಂದಾಗ ಟೀಕಿಸಿದವರನ್ನು ಜರಿದು ಎಲ್ಲವೂ ಸರಿಯಾಗಿದೆ ಎನ್ನುವ ಭಾವನೆ ಮೂಡಿಸುವ ಪ್ರಯತ್ನ ಮಾಡಬೇಡಿ. ಮಳೆ ನಿಂತ ಬಳಿಕ ಕಂಬಳ, ರಗ್ಗು ಹೊದ್ದು ಮಲಗಿಕೊಂಡು ಲೂಟಿ ಮಾಡುವುದನ್ನು ಬಿಟ್ಟು, ರಾಜ್ಯದ ಬೇರೆ ನಗರಗಳಲ್ಲಿ ಉದ್ಯೋಗ ಸೃಷ್ಟಿಸಿ. ಬೆಂಗಳೂರನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ. ಅಂದ್ಹಾಗೆ ಇದೇ ರೀತಿಯ ʼಬ್ರಾಂಡ್ ಬೆಂಗಳೂರುʼ ಅಭಿವೃದ್ಧಿ ಪಡಿಸಿದರೆ ಭವಿಷ್ಯದ ಸುರಂಗ ಮಾರ್ಗವು ಮಳೆ ಬಂದಾಗ ನೀರು ಶೇಖರಣೆ ಜಾಗವಾಗಬಹುದು.
ಕೊನೆಯದಾಗಿ: ಒಂದು ದಿನದ ಮಳೆಯನ್ನು ಸಹಿಸಿಕೊಳ್ಳದ ʼಬ್ರಾಂಡ್ ಬೆಂಗಳೂರುʼ ನಿರ್ಮಾಣವನ್ನು ನಮ್ಮ ಸರ್ಕಾರಗಳು ಮಾಡಿವೆಯೆಂದರೆ, ಅವರ ಲಿಟ್ಮಸ್ ಪರೀಕ್ಷೆ ಆಗಲೇಬೇಕು. ಜನರಿಗೆ ನರಕ ದರ್ಶನ ಮಾಡಿಸುತ್ತಿರುವ ಲೂಟಿಕೋರ ಸಚಿವರು ಹಾಗೂ ಬೇಜವಾಬ್ದಾರಿ ಸರ್ಕಾರದ ವಿರುದ್ಧ ಧ್ವನಿ ಎತ್ತಲೇಬೇಕು. ಅಷ್ಟಕ್ಕೂ ಬೆಂಗಳೂರು ನಗರವು ನಿಜವಾದ ಪ್ರವಾಹವನ್ನು ನೋಡಿಯೇ ಇಲ್ಲ. ಪ್ರವಾಹವೇನೆಂದರೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಅಥವಾ ಕೇರಳದ ಜನರನ್ನು ಕೇಳಿನೋಡಿ. ರಾಜಕೀಯದ ಪ್ರವಾಹದಲ್ಲಿ ಒದ್ದೆಯಾಗಿ ಲೂಟಿ ಮಾಡುತ್ತಿರುವವರು, ಸಣ್ಣ ಮಳೆಗೂ ತಡೆಯದಂತ ಬೆಂಗಳೂರನ್ನು ಕಟ್ಟುತ್ತಿದ್ದಾರೆ. ನಿಜಾರ್ಥದಲ್ಲಿ ಸಿಲಿಕಾನ್ ಸಿಟಿ ಆಗಬೇಕು ಎನ್ನುವ ಮಹದಾಸೆಯಿದ್ದರೆ, ಇಂತಹ ಹತ್ತಾರು ಸವಾಲು ಎದುರಿಸುವ ಮೂಲ ಸೌಕರ್ಯ ನಿರ್ಮಾಣ ಆಗಬೇಕು. 50-60 ಮಿ.ಮೀ ಮಳೆಗೆ ಹೈರಾಣಾಗುವಂತಿದ್ದರೆ ರಚನಾತ್ಮಕವಾಗಿ ಪ್ರಶ್ನಿಸಲೇಬೇಕು, ಟೀಕಿಸಲೇಬೇಕು. ಬಹುತೇಕ ಟೀಕೆಗಳ ಹಿಂದೆ ಕಾಳಜಿಯಿದೆ. ಟೀಕಿಸುವ ರಿಂದ ನಮ್ಮ ಬೆಂಗಳೂರಿನ ಮರ್ಯಾದೆ ಹರಾಜಾಗುತ್ತಿಲ್ಲ. ನಿಮ್ಮ ಭಾವನೆಗಳ ನಡುವೆ ಆಟವಾಡಿಕೊಂಡು ಲೂಟಿ ಮಾಡುತ್ತಿರುವರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಬ್ರಾಂಡ್ ಹಾಳಾಗುತ್ತಿದೆ. ಇಂತಹ ಲಜ್ಜೆಗೆಟ್ಟತನವನ್ನು ಟೀಕಿಸುವುದು ಬೆಂಗಳೂರು ವಿರೋಧಿ ನಿಲುವು ಎಂದಾದರೆ, ನಾನು ಕೂಡ ಇಂತಹ ತೆಲಬುಡವಿಲ್ಲದ ಬೆಂಗಳೂರು ನಗರದ ವಿರೋಧಿಯೇ.
- ಲೇಖನ - ರಾಜೀವ ಹೆಗಡೆ, ಬೆಂಗಳೂರು