ಬೆಂಗಳೂರಲ್ಲೇ ಒಂದು ದುಬೈ ಇದೆ, ತುಂಬ ದೂರ ಏನೂ ಇಲ್ಲ ಎನ್ನುತ್ತ ವೈರಲ್ ವಿಡಿಯೋ ಶೇರ್ ಮಾಡಿದೆ ಸಿಟಿಜೆನ್ಸ್ ಮೂವ್‌ಮೆಂಟ್, ನೀವೂ ನೋಡಿ...
ಬೆಂಗಳೂರು ಮಳೆ, ಪ್ರವಾಹಕ್ಕೆ ಈಗಿರುವ ಪರಿಸ್ಥಿತಿಯನ್ನು ದುಬೈ ಪ್ರವಾಹದೊಂದಿಗೆ ಹೋಲಿಸಿದ್ದು ಬೆಂಗಳೂರಿಗರನ್ನು ಇನ್ನಷ್ಟು ಅಸಮಾಧಾನಗೊಳಿಸಿದೆ. ಹೀಗಾಗಿ, ಬೆಂಗಳೂರಲ್ಲೇ ಒಂದು ದುಬೈ ಇದೆ, ತುಂಬ ದೂರ ಏನೂ ಇಲ್ಲ ಎನ್ನುತ್ತ ಸಿಟಿಜೆನ್ಸ್ ಮೂವ್‌ಮೆಂಟ್ ವೈರಲ್ ವಿಡಿಯೋವನ್ನು ಶೇರ್ ಮಾಡಿದೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು: ಪ್ರತಿ ವರ್ಷ ಮಳೆ ಬರುತ್ತದೆ. ಹಾಗೆ ಮಳೆ ಬಂದಾಗೆಲ್ಲ ಕಳಪೆ ಕಾಮಗಾರಿಯ ಕಾರಣ ರಸ್ತೆ ಕಿತ್ತು ಹೋಗುತ್ತದೆ ಎಂಬುದು ಬೆಂಗಳೂರಿಗರಿಗೆ ಗೊತ್ತಿರುವ ವಿಷಯ. ರಸ್ತೆ ದುರಸ್ತಿ ಮಾಡಿಸಿ, ಕಳಪೆ ಕಾಮಗಾರಿಯಾಗದಂತೆ ನೋಡಿಕೊಳ್ಳಿ ಎಂದು ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಮನವಿ ಮಾಡಿದರೆ ಅದು ಅರಣ್ಯರೋದನ ಎಂಬುದೂ ಜನರಿಗೆ ಗೊತ್ತಿದೆ. ಆದರೂ, ಅವರ ಪ್ರಯತ್ನ ಅವರದ್ದು. ಬೆಂಗಳೂರು ಮಳೆಗೆ ಕಳೆದ ನಾಲ್ಕಾರು ದಿನಗಳಲ್ಲಿ ನೂರಾರು ಸಮಸ್ಯೆಗಳು ಭೂತಾಕಾರದಲ್ಲಿ ಒಮ್ಮೆಲೆ ಮೇಲೆದ್ದು ಕುಳಿತಿವೆ. ಅವುಗಳ ಪೈಕಿ ರಸ್ತೆ ಗುಂಡಿಗಳ ಸಮಸ್ಯೆ ಪ್ರಮುಖವಾದುದು. ಮೊದಲೇ ಕಳಪೆ ರಸ್ತೆ, ಅದರ ಮೇಲೆ ನೀರು ತುಂಬಿದರೆ ಕೇಳಬೇಕಾ, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕಾದ ಪರಿಸ್ಥಿತಿ. ಯಾವ ಗುಂಡಿ ಎಷ್ಟು ಆಳ ಅಗಲ ಇದೆಯೋ ಗೊತ್ತಿಲ್ಲದ ಸನ್ನಿವೇಶ. ಅನೇಕರು ಬಿದ್ದು ಗಾಯ ಮಾಡಿಕೊಂಡ ಘಟನೆಗಳು ವರದಿಯಾಗಿವೆ. ಇದೇ ವಿಚಾರವನ್ನು ಪತ್ರಿಕಾ ಮಾಧ್ಯಮ ಪ್ರತಿನಿಧಿಗಳು ಬೆಂಗಳೂರಿನ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವ ಕುಮಾರ್ ಅವರ ಬಳಿ ಪ್ರಸ್ತಾಪಿಸಿದ್ದರು. ಅದಕ್ಕೆ ಅವರು ಕೊಟ್ಟ ಪ್ರತಿಕ್ರಿಯೆ ಬೆಂಗಳೂರಿಗರ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿದೆ.
ಪ್ರಕೃತಿ ಮುಂದೆ ಏನೂ ಮಾಡೋಕಾಗಲ್ಲ, ದುಬೈನಲ್ಲಿ ಪ್ರವಾಹ ಬರಲಿಲ್ವ…
“ಪ್ರಕೃತಿ ಮುಂದೆ ಏನೂ ಮಾಡೋದಕ್ಕಾಗಲ್ಲ. ದುಬೈನಲ್ಲೂ.. ನೀವೆಲ್ಲ ಮಾಧ್ಯಮ ಗಮನಿಸಿರಬಹುದು. ನೀವೇ ಹೇಳ್ತಾ ಇದ್ರಿ. ದುಬೈನಲ್ಲಿ ಯಾವ ರೀತಿ ಆಗ್ತಾ ಇದೆ, ದಿಲ್ಲಿಯಲ್ಲಿ ಯಾವ ರೀತಿ ಆಗ್ತಾ ಇದೆ.. ದಿಲ್ಲೀಲಿ ಒಂದು ರೀತಿ ಪೊಲ್ಯೂಷನ್ ತೊಂದರೆ ಆಗ್ತಾ ಇದ್ರೆ, ದುಬೈನಲ್ಲಿ ನೀರು, ಬರಗಾಲದ ಪ್ರದೇಶದಲ್ಲೇ ಅತಿ ಹೆಚ್ಚು ನೀರು ಬಂದಿರುವುದನ್ನು ನೀವೆಲ್ಲ ನೋಡಿದ್ದೀರಿ. ಹಂಗೆ ರಾಷ್ಟ್ರದ ಅನೇಕ ರಾಷ್ಟ್ರಗಳಲ್ಲಿ ಈ ರೀತಿ ಪರಿಸ್ಥಿತಿ ಆಗ್ತಾ ಇದೆ. ನಾವು ಮ್ಯಾನೇಜ್ ಮಾಡ್ತಾ ಇದ್ದೇವೆ, ಪ್ರಕೃತಿಯನ್ನು ಯಾರೂ ನಿಲ್ಸೋಕೆ ಆಗಲ್ಲ. ನಾವು ಇದ್ದೇವೆ. ನಿನ್ನೆ ರಾತ್ರಿಯಿಂದ ನಾನು ಪ್ರತಿಯೊಂದು ಕಡೆಗೂ ಹೋಗಿದ್ದೇನೆ. ಎಲ್ಲ ಪರಿಸ್ಥಿತಿಗಳ ರಿವ್ಯೂ ಮಾಡಿದ್ಧೇನೆ. ಕೆಲವು ಕಡೆಗಳಿಂದ ಬರಬೇಕಾದ್ರೆ ನಾನೂ ತಗಲಾಕ್ಕೊಂಡಿದ್ದೇನೆ. ನೆಲಮಂಗಲ ರೋಡ್‌ನಲ್ಲಿ ಬರಬೇಕಾದ್ರೆ 2 ಅವರ್ ಬ್ರಿಜ್ ಮೇಲೇನೇ ತಗಲಾಕ್ಕೊಂಡಿದ್ದೆ. ನೀರು ತುಂಬ್ಕೊಂಡಿತ್ತು. ಸಮಸ್ಯೆ ಇದೆ. ಪರಿಹರಿಸ್ತೇವೆ.. ” ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದರು.
ಈ ವಿಡಿಯೋ ಶೇರ್ ಮಾಡಿದ ಸಿಟಿಜೆನ್ಸ್ ಮೂವ್‌ಮೆಂಟ್ ಈಸ್ಟ್ ಬೆಂಗಳೂರು, “ದುಬೈನಲ್ಲೂ ಪ್ರವಾಹ ಬರ್ತದೆ. ಹಾಗಾದ್ರೆ ಬೆಂಗಳೂರು ಯಾಕೆ ದುಬೈ ತರ ರಿಕವರ್ ಆಗಲ್ಲ, ಅಂಥದ್ದೇ ಮೂಲ ಸೌಕರ್ಯ ಯಾಕೆ ಅಭಿವೃದ್ಧಿ ಪಡಿಸೋದಕ್ಕೆ ಆಗಲ್ಲ?” ಎಂದು ಪ್ರಶ್ನಿಸಿದೆ. ಈ ಟ್ವೀಟ್‌ಗೆ 130 ಕ್ಕೂ ಹೆಚ್ಚು ಪ್ರತಿಕ್ರಿಯೆಗಳಿವೆ. 50 ಸಾವಿರದ ಆಸುಪಾಸಿನಲ್ಲಿ ವೀಕ್ಷಣೆಯೂ ಆಗಿದೆ. ಈಗ ಬೆಂಗಳೂರಿನ ದುಬೈ ವಿಚಾರ ನೋಡೋಣ.
ದುಬೈ ಎಲ್ಲಿದೆ ಅಂತ ಕೇಳ್ಬೇಡಿ, ಬೆಂಗಳೂರಲ್ಲೇ ಒಂದು ದುಬೈ ಇದೆ ನೋಡಿ
ಬೆಂಗಳೂರಿನೊಳಗೇ ಇರುವ ಒಂದು ದುಬೈಯನ್ನು ನಾವು ನಿಮಗೆ ತೋರಿಸಿದ್ರೆ ನೀವು ನಂಬ್ತೀರಿ ಅಲ್ವ, ದುಬೈ ತುಂಬ ದೂರ ಏನೂ ಇಲ್ಲ, ವಿಪ್ರೋದಿಂದ 2 ಕಿ.ಮೀ. ಅಷ್ಟೆ.. ! ಎಂದು ರಾಜೇಶ್ ಎಂಬುವವರು ಶೇರ್ ಮಾಡಿದ್ದ ವಿಡಿಯೋ ಟ್ವೀಟ್ ಅನ್ನು ಸಿಜಿಜೆನ್ಸ್ ಮೂವ್‌ಮೆಂಟ್ ರೀಶೇರ್ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಅಧಿಕಾರಿಯ ಎಕ್ಸ್ ಹ್ಯಾಂಡರ್ ಟ್ಯಾಗ್ ಮಾಡಿರುವ ರಾಜೇಶ್ ಅವರು, ನೀವಾದರೂ ಈ ಬಗ್ಗೆ ಗಮನಿಸುವಿರಾ, ಈಗಾಗಲೇ ಈ ಸ್ಥಳದ ವಿವರ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅದರಿಂದ ಏನೂ ಬದಲಾಗಿಲ್ಲ. ಇದುವರೆಗೆ ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಈ ರಸ್ತೆಯಲ್ಲಿ ನಿತ್ಯವೂ ಹತ್ತಾರು ಶಾಲಾ ಬಸ್‌ಗಳು ಸಂಚರಿಸುತ್ತವೆ. ಇದನ್ನು ದುರಸ್ತಿ ಮಾಡಿಕೊಡಿ ಎಂದು ಹಲವು ಸಲ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಎಂಬ ಅಸಮಾಧಾನ ಆಕ್ರೋಶ ಕಾಮೆಂಟ್‌ಗಳಲ್ಲಿ ಕಾಣುತ್ತಿದೆ.