ಗೂಗಲ್ ಟ್ರಾನ್ಸ್‌ಲೇಟ್ ಬಳಸಿ ಕನ್ನಡ ಬರೆದು ಪೌರಕಾರ್ಮಿಕರಿಗೆ ನೆರವಾದ ಉತ್ತರಾಖಂಡ ವ್ಯಕ್ತಿ; ಕನ್ನಡಿಗರಿಂದ ವ್ಯಾಪಕ ಪ್ರಶಂಸೆ
ಉತ್ತರಾಖಂಡದ ಮೂಲದ ಬೆಂಗಳೂರು ನಿವಾಸಿಯೊಬ್ಬರು ಪೌರ ಕಾರ್ಮಿಕರಿಗೆ ಸುರಕ್ಷತಾ ಸೂಚನೆಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಮೂಲಕ ಕನ್ನಡಿಗರಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕದಲ್ಲಿ ಹಿಂದಿ ಹೇರಿಕೆ ಹಾಗೂ ಕನ್ನಡ ಬಳಕೆ ಕುರಿತ ಚರ್ಚೆ ಹೊಸದೇನಲ್ಲ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಪರ ಹೋರಾಟಗಳು ಹೆಚ್ಚು ನಡೆಯುತ್ತಿರುತ್ತವೆ. ಉತ್ತರ ಭಾರತದಿಂದ ಶಿಕ್ಷಣ ಅಥವಾ ಉದ್ಯೋಗ ಅರಸಿ ಉದ್ಯಾನ ನಗರಿಗೆ ಬರುವವರು, ಕನ್ನಡ ಮಾತನಾಡಲು ಹಿಂದೇಟು ಹಾಕುತ್ತಿರುವುದು ಹಲವು ಬಾರಿ ಚರ್ಚೆಯ ವಿಷಯವಾಗಿದೆ. ಕನ್ನಡಿಗರಿಗೆ ಹಿಂದಿ ಹೇರಿಕೆ ಮಾಡಲಾಗುತ್ತದೆ ಎಂಬುದು ವರ್ಷಗಳಿಂದ ಮುನ್ನೆಲೆಯಲ್ಲಿರುವ ಚರ್ಚೆ. ಇದೀಗ ಇದಕ್ಕೆ ವ್ಯತಿರಿಕ್ತವಾಗಿ ಉತ್ತರ ಭಾರತದ ವ್ಯಕ್ತಿಯೊಬ್ಬರು ಕನ್ನಡ ಬಳಕೆ ಮಾಡಿರುವ ಪ್ರಯತ್ನವೊಂದು ನೆಟ್ಟಿಗರ ಗಮನ ಸೆಳೆದಿದೆ.
ಉತ್ತರಾಖಂಡ ಮೂಲದ ವ್ಯಕ್ತಿಯೊಬ್ಬರು ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರ ಮಾತೃಭಾಷೆ ಕನ್ನಡ ಅಲ್ಲ. ಆದರೆ, ಕನ್ನಡ ಬಳಕೆಗೆ ಅವರು ಹಿಂದೇಟು ಹಾಕಿಲ್ಲ. ಒಡೆದ ಗಾಜಿನ ಚೂರುಗಳನ್ನು ಇವರು ಪೌರಕಾರ್ಮಿಕರಿಗೆ ಒಪ್ಪಿಸಿದ ರೀತಿಗೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಾಜಿನ ಚೂರುಗಳು ಕೈಗೆ ತರಚದಂತೆ ಪ್ಯಾಕ್ ಮಾಡಿ, ಅದರ ಮೇಲೆ ಇಂಗ್ಲೀಷ್ ಮಾತ್ರವಲ್ಲದೆ ಕನ್ನಡದಲ್ಲೂ ಬರೆದಿದ್ದಾರೆ. ಇಂಗ್ಲೀಷ್‌ನಲ್ಲಿ ಬ್ರೋಕನ್ ಗ್ಲಾಸ್ ಎಂದು ಬರೆದು, ಕನ್ನಡದಲ್ಲಿ ಒಡೆದ ಗಾಜು ಎಂದು ಬರೆಯುವ ಬದಲಿಗೆ ಮುರಿದ ಗಾಜು ಎಂಬುದಾಗಿ ಬರೆದಿದ್ದಾರೆ. ಗೂಗಲ್ ಟ್ರಾನ್ಸ್‌ಲೇಟರ್ ಬಳಸಿಕೊಂಡು ಸುರಕ್ಷತಾ ಸೂಚನೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಳಕೆ ತಪ್ಪಾಗಿದ್ದರು, ಕನ್ನಡ ಬಳಸಲು ಅವರು ಮಾಡಿರುವ ಪ್ರಯತ್ನ ಜನರ ಮೆಚ್ಚುಗೆಗೆ ಕಾರಣವಾಗಿದೆ.
ಕನ್ನಡದಲ್ಲಿ ಬರೆಯುವ ಮೂಲಕ ತ್ಯಾಜ್ಯ ನಿರ್ವಹಣೆ ಮಾಡುವ ಪೌರಕಾರ್ಮಿಕರಿಗೆ ಅದನ್ನು ಓದಲು ಸುಲಭ. ಅದನ್ನು ಓದುವ ಮೂಲಕ ಕಸದ ರಾಶಿಯ ನಡುವೆ ಆ ಪ್ಯಾಕ್‌ನಲ್ಲಿ ಏನಿದೆ ಎಂಬುದು ಸುಲಭವಾಗಿ ತಿಳಿಯುತ್ತದೆ. ಯಾವುದೇ ರೀತಿಯಲ್ಲೂ ಗಾಯ ಮಾಡಿಕೊಳ್ಳದೆ ಕಸವನ್ನು ವಿಲೇವಾರಿ ಮಾಡಬಹುದು.
ಕನ್ನಡಿಗರ ಮೆಚ್ಚುಗೆ
ಈ ಘಟನೆ ಕುರಿತಾಗಿ ಕನ್ನಡೇತರ ಭಾಷೆಯ ವ್ಯಕ್ತಿಯ ಸ್ನೇಹಿತರೊಬ್ಬರು ಎಕ್ಸ್ (ಟ್ವಿಟರ್)ನಲ್ಲಿ ಹೇಳಿಕೊಂಡಿದ್ದಾರೆ. ಇದು ಕರ್ನಾಟಕದಲ್ಲಿ ಕನ್ನಡ ಭಾಷೆಯ ಪ್ರಾಮುಖ್ಯತೆ ಕುರಿತಾಗಿ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿತು.
“ಹಿಂದಿಯೇತರ ಭಾಷೆಗಳನ್ನು ಮಾತನಾಡುವ ರಾಜ್ಯಗಳ ಜನರು ಬಯಸುವುದು ಇದನ್ನೇ ಎಂದು ನಾನು ಭಾವಿಸುತ್ತೇನೆ. ನಮ್ಮ ಭಾಷೆಯನ್ನು ಗೌರವಿಸಿ ಮತ್ತು ಅದನ್ನು ನಿಮ್ಮ ಭಾಷೆಯಂತೆಯೇ ಸಮಾನವಾಗಿ ಪರಿಗಣಿಸಿ. ಹಿಂದಿ ಮಾತನಾಡದ ರಾಜ್ಯಗಳಿಗೆ ಹಿಂದಿ ಭಾಷಿಕರು ಬಂದಾಗ, ಕೆಲಸ ಮಾಡುವಾಗ, ವಾಸಿಸುವಾಗ ನೀವು ಕನ್ನಡ, ತೆಲುಗು, ತಮಿಳು, ಮರಾಠಿ, ಬಂಗಾಳಿ ಮಾತನಾಡಬೇಕೆಂದು ಹಿಂದಿಯೇತರ ಭಾಷಿಕರು ನಿರೀಕ್ಷಿಸುವುದಿಲ್ಲ” ಎಂದು ಬಳಕೆದಾರರು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ ಎಕ್ಸ್ ಬಳಕೆದಾರರಿಂದ ಬಗೆಬಗೆಯ ಪ್ರತಿಕ್ರಿಯೆಗಳು ಹರಿದು ಬಂದಿವೆ. ಹಲವಾರು ಕನ್ನಡಿಗರು ಕಾಮೆಂಟ್ ಮಾಡಿದ್ದು, ಕನ್ನಡೇತರರಿಂದ ಕನ್ನಡಿಗರು ನಿರೀಕ್ಷಿಸುವುದು ಇದನ್ನೇ ಎಂದು ಹೇಳಿದ್ದಾರೆ. ಅಲ್ಲದೆ ಇದನ್ನು ಅಳವಡಿಸಿಕೊಳ್ಳುವುದು ಕಷ್ಟವಂತೂ ಅಲ್ಲ ಎಂದು ಹೇಳಿದ್ದಾರೆ.
ಇನ್ನೊಬ್ಬ ವ್ಯಕ್ತಿ ಪ್ರತಿಕ್ರಿಯೆ ನೀಡಿ "ದಯವಿಟ್ಟು ಹಿಂದಿ ವಿರುದ್ಧದ ಈ ಕೀಳರಿಮೆಯನ್ನು ನಿಲ್ಲಿಸಿ. ಇದು ಕೇವಲ ಒಂದು ಭಾಷೆ ಅಷ್ಟೇ. ಕನ್ನಡ, ತಮಿಳು ಅಥವಾ ಮರಾಠಿಗೆ ಯಾರೂ ಅಗೌರವ ತೋರುವುದಿಲ್ಲ. ಇದು ನಿಮ್ಮ ಕಲ್ಪನೆ ಅಷ್ಟೇ," ಎಂದು ಬರೆದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಕರ್ನಾಟಕವೋ ಪಾಕಿಸ್ತಾನವೋ: ಡೆಲಿವರಿ ಏಜೆಂಟ್ಗೆ ಕನ್ನಡ ಗೊತ್ತಿಲ್ಲ ಎಂದು ಸ್ವಿಗ್ಗಿ ವಿರುದ್ಧ ಸಿಡಿದೆದ್ದ ಬೆಂಗಳೂರು ಮಹಿಳೆ