ಕಬಡ್ಡಿ ಆಡುತ್ತಿದ್ದಾಗ 26 ವರ್ಷದ ಯುವಕ ಹೃದಯಾಘಾತದಿಂದ ಸಾವು; ಭಯ ಬೇಡ, ಕಾಳಜಿ ವಹಿಸಿದರೆ ನಿಮ್ಮ ಹೃದಯ ಸೇಫ್
ಕನ್ನಡ ಸುದ್ದಿ  /  ಕ್ರೀಡೆ  /  ಕಬಡ್ಡಿ ಆಡುತ್ತಿದ್ದಾಗ 26 ವರ್ಷದ ಯುವಕ ಹೃದಯಾಘಾತದಿಂದ ಸಾವು; ಭಯ ಬೇಡ, ಕಾಳಜಿ ವಹಿಸಿದರೆ ನಿಮ್ಮ ಹೃದಯ ಸೇಫ್

ಕಬಡ್ಡಿ ಆಡುತ್ತಿದ್ದಾಗ 26 ವರ್ಷದ ಯುವಕ ಹೃದಯಾಘಾತದಿಂದ ಸಾವು; ಭಯ ಬೇಡ, ಕಾಳಜಿ ವಹಿಸಿದರೆ ನಿಮ್ಮ ಹೃದಯ ಸೇಫ್

ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕೆಲವೊಂದು ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಯುವಕರಲ್ಲಿ ಇಂಥಾ ಸಮಸ್ಯೆಗಳು ವರದಿಯಾಗುತ್ತಿದ್ದು, ವೈದ್ಯರ ಸಲಹೆಯಂತೆ ಕಾಳಜಿ ವಹಿಸಬೇಕಾದ ಅಗತ್ಯವಿದೆ. ನಿಮಗಾಗಿ ಸಲಹೆಗಳು ಇಲ್ಲಿವೆ.

ಕಬಡ್ಡಿ ಆಡುತ್ತಿದ್ದ ಯುವಕ ಹೃದಯಾಘಾತದಿಂದ ಸಾವು; ಭಯ ಬೇಡ, ಕಾಳಜಿ ವಹಿಸಿದರೆ ನಿಮ್ಮ ಹೃದಯ ಸೇಫ್ (ಸಾಂದರ್ಭಿಕ ಚಿತ್ರ)
ಕಬಡ್ಡಿ ಆಡುತ್ತಿದ್ದ ಯುವಕ ಹೃದಯಾಘಾತದಿಂದ ಸಾವು; ಭಯ ಬೇಡ, ಕಾಳಜಿ ವಹಿಸಿದರೆ ನಿಮ್ಮ ಹೃದಯ ಸೇಫ್ (ಸಾಂದರ್ಭಿಕ ಚಿತ್ರ) (Pexel)

ರಾಜ್ಯಮಟ್ಟದ ಕಬಡ್ಡಿ ಆಟಗಾರ ಕಬಡ್ಡಿ ಆಡುತ್ತಿದ್ದಾಗಲೇ ಸಾವನ್ನಪ್ಪಿರುವ ದುರ್ಘಟನೆ ಇತ್ತೀಚೆಗೆ ಮಂಡ್ಯದಲ್ಲಿ ನಡೆದಿದೆ. ಯುವಕರಲ್ಲಿ ಹೃದಯಾಘಾತದ ಸಮಸ್ಯೆ ಇತ್ತೀಚೆಗೆ ಹೆಚ್ಚು ವರದಿಯಾಗುತ್ತಿದ್ದು, ಕ್ರೀಡಾಪಟುಗಳು ಕೂಡಾ ಬಲಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಪುಣೆಯಲ್ಲಿ ಕ್ರಿಕೆಟ್‌ ಆಡುತ್ತಿದ್ದ ಕ್ರಿಕೆಟಿಗನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅದಾಗ ಕೆಲವೇ ವಾರಗಳಲ್ಲಿ ಇದೀಗ ಕಬಡ್ಡಿ ಆಟಗಾರ ಬಲಿಯಾಗಿದ್ದಾರೆ. ಕಾರ್ಕಳದ ಮುಟ್ಲುಪಾಡಿಯ‌ ನಡುಮನೆ ನಿವಾಸಿಯಾಗಿರುವ 26 ವರ್ಷದ ಯುವಕ ಪ್ರೀತಂ ಶೆಟ್ಟಿ, ಸಾವನ್ನಪ್ಪಿರುವ ಯುವಕ. ಡಿಸೆಂಬರ್‌ 13ರ ಶುಕ್ರವಾರ ರಾತ್ರಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕಬಡ್ಡಿ ಆಡುತ್ತಿದ್ದಾಗ ಘಟನೆ ನಡೆದಿದೆ.

ಆಟವಾಡುತ್ತಿರುವಾಗ‌ಲೇ ಪ್ರೀತಂ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಗ್ಯಾಸ್ಟಿಕ್‌ನಿಂದ ಎದೆಯುರಿ ಸಮಸ್ಯೆ ಆಗಿರಬಹುದೆಂದು ಅವರು ನಿರ್ಲಕ್ಷ್ಯ ಮಾಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಪ್ರೀತಂ ಅವರು ಡಿಫೆಂಡರ್‌ ಆಗಿ ಆಡುತ್ತಿದ್ದ ಪ್ರತಿಭಾವಂತ ಆಟಗಾರ. ಮೈದಾನದಲ್ಲಿ ಬಾಹುಬಲಿಯಂತೆ ಅಬ್ಬರಿಸುತ್ತಿದ್ದರು. ಕಬಡ್ಡಿಯಲ್ಲಿ ರಾಜ್ಯದ ಪ್ರತಿಭಾವಂತ ಆಟಗಾರನಾಗಿದ್ದ ಪ್ರೀತಂ, ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಗೂ ಹೋಗಿ ಆಡುತ್ತಿದ್ದರು. ಅಲ್ಲದೆ ಅರಬ್‌ ರಾಷ್ಟ್ರಗಳಲ್ಲೂ ಹೋಗಿ ಆಡಿದ್ದರು. ಪ್ರತಿಭಾವಂತ ಆಟಗಾರನೊಬ್ಬನನ್ನು ನಾವು ಕಳೆದುಕೊಂಡಿದ್ದೇವೆ ಎಂದು ಅವರು ಪ್ರತಿನಿಧಿಸುತ್ತಿದ್ದ ಉಡುಪಿ ತಂಡದ ಸದಸ್ಯರು ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ಮೊದಲಲ್ಲ

ಇತ್ತೀಚೆಗೆ ಕ್ರಿಕೆಟ್‌ ಆಡುತ್ತಿದ್ದ ಯುವಕೊನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿತ್ತು. ನವೆಂಬರ್‌ 28ರಂದು ಪುಣೆ ನಗರದ ಗರ್ವಾರೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದ 35 ವರ್ಷದ ಕ್ರಿಕೆಟಿಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆರಂಭಿಕ ಆಟಗಾರನಾಗಿ ಬ್ಯಾಟಿಂಗ್‌ ನಡೆಸಲು ಮೈದಾನಕ್ಕೆ ಬಂದಿದ್ದ ಇಮ್ರಾನ್ ಪಟೇಲ್, ಪಿಚ್‌ನಲ್ಲಿ ಇರುವಾಗ ದಿಢೀರನೆ ಎದೆನೋವು ಎಂದು ಹೇಳಿದ್ದಾರೆ. ಮೈದಾನದ ಅಂಪೈರ್‌ಗಳಿಗೆ ತಮಗಾಗುತ್ತಿರುವ ಎದೆ ಹಾಗೂ ತೋಳಿನ ಭಾಗದ ನೋವಿನ ವಿಷಯ ತಿಳಿಸಿ, ಮೈದಾನದಿಂದ ಹೊರಹೋಗಲು ಅನುಮತಿ ಪಡೆದರು. ಆದರೆ, ಪೆವಿಲಿಯನ್ ಕಡೆಗೆ ಹಿಂತಿರುಗುವಾಗ ಇಮ್ರಾನ್ ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿದ್ದರು.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಸಾಮಾನ್ಯವಾಗುತ್ತಿದೆ. ಗಟ್ಟಿ ಮುಟ್ಟಾಗಿರುವ ಯುವಕರು ಕೂಡಾ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜೀವನಶೈಲಿಯಲ್ಲಿ ಕೆಲವೊಂದು ನಿರ್ಲಕ್ಷ್ಯ ವಹಿಸುವುದು ಇದಕ್ಕೆ ಪ್ರಮುಖ ಕಾರಣವಾಗುತ್ತಿದೆ.

ಈ ಅಭ್ಯಾಸಗಳಿಂದ ದೂರವಿರಿ

ಆಟಗಾರರು ದುಶ್ಚಟಗಳಿಂದ ದೂರವಿದ್ದರೆ ಒಳ್ಳೆಯದು. ಮಾದಕ ವಸ್ತುಗಳ ಸೇವನೆ, ದುರಾಭ್ಯಾಸಗಳು ಪ್ರಾಣಕ್ಕೆ ಕಂಠಕವಾಗಬಹುದು. ಆಡುವ ಹುಮ್ಮಸ್ಸಿನಲ್ಲಿ ಪೈನ್ ಕಿಲ್ಲರ್, ನೋವಿನಿಂದ ದಿಢೀರ್‌ ಮುಕ್ತಿ ಪಡೆಯಲು ನೋವು ನಿವಾರಕ ಮಾತ್ರೆಗಳ ಸೇವನೆ ಒಳ್ಳೆಯದಲ್ಲ. ಎನರ್ಜಿ ಡ್ರಿಂಕ್ಸ್‌ ಹೆಸರಲ್ಲಿ ಸೇವಿಸುವ ಕೆಲವು ಪಾನೀಯಗಳು ಆರೋಗ್ಯಕ್ಕೆ ಮಾರಕವಾಗಬಹುದು. ಹೀಗಾಗಿ ವೈದ್ಯರ ಸಲಹೆಯೊಂದಿಗೆ ಆರೋಗ್ಯಕರ ಪಾನೀಯ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಆಗಾಗ ಆರೋಗ್ಯ ತಪಾಸಣೆ ನಡೆಸುತ್ತಿರಬೇಕು. ಹೃದಯ ಸಮಂಧಿ ಸಮಸ್ಯೆಗಳಿದ್ದರೆ ವೈದ್ಯರ ಸಲಹೆಯಂತೆ ಔಷಧಿ ಹಾಗೂ ಆಹಾರ ಕ್ರಮ ಪಾಲಿಸಬೇಕು.

ನಿರಂತರವಾಗಿ ಜಿಮ್‌ಗೆ ಹೋಗುವವರಲ್ಲಿಯೂ ಹೃದಯಾಘಾತದ ನಿದರ್ಶನಗಳು ವರದಿಯಾಗುತ್ತಿವೆ. ವೈದ್ಯರ ಪ್ರಕಾರ, ನಿಯಮಿತ ವ್ಯಾಯಾಮವು ದೇಹಕ್ಕೆ ಒಳ್ಳೆಯದಾಗಿದ್ದರೂ ಅದರಿಂದ ಕೆಲವೊಂದು ಅಪಾಯಗಳೂ ಇವೆ. ಕಿಮ್ಸ್‌ನ ಹೃದ್ರೋಗ ತಜ್ಞರಾದ ಡಾ. ಬಿನಯಾನಂದ ಪಧೀ ಅವರು ಜಿಮ್‌ಗೆ ಹೋಗುವವರು ವೈಯಕ್ತಿಕ ಆರೋಗ್ಯದ ಮೌಲ್ಯಮಾಪನ ಮಾಡಿಸಿಕೊಳ್ಳಬೇಕು ಎಂಬುದಾಗಿ ಸುದ್ದಿಸಂಸ್ಥೆ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ.

“ಒಬ್ಬೊಬ್ಬರ ದೇಹವು ಒಂದೊಂದು ರೀತಿಯಲ್ಲಿ ವ್ಯಾಯಾಮಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಹೀಗಾಗಿ ಜಿಮ್‌ಗೆ ಹೋಗುವ ದಿನಚರಿ ಆರಂಭಿಸುವ ಮುನ್ನ ಸಂಪೂರ್ಣ ಆರೋಗ್ಯ ತಪಾಸಣೆಗೆ ಒಳಗಾಗುವುದು ಒಳ್ಳೆಯದು. ಆಗ ವೈದ್ಯಕೀಯ ಪರಿಸ್ಥಿತಿಗಳನ್ನು ಗುರುತಿಸಬಹುದು. ರೋಗನಿರ್ಣಯ ಮಾಡದ ಅಥವಾ ಆರೋಗ್ಯ ಸಮಸ್ಯೆ ಹೊಂದಿರುವವರು ಹೃದಯಾಘಾತ ಎದುರಿಸುವ ಅಪಾಯ ತುಸು ಹೆಚ್ಚು” ಎಂದು ವೈದ್ಯರು ಹೇಳುತ್ತಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.