ಬೆಂಗಳೂರಿನಲ್ಲಿ ಮತ್ತೆ ಮಳೆ ಆರಂಭ; ತಡ ರಾತ್ರಿ ಆರಂಭವಾದ ಮಳೆಗೆ ಸಿಲಿಕಾನ್ ಸಿಟಿ ತತ್ತರ, ಎಚ್ಚರ.. ಕಟ್ಟೆಚ್ಚರ..
ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು ವರುಣ ರಾಯಣಿಗೆ ಹಿಡಿ ಶಾಪ ಹಾಕುವಂತಾಗಿದೆ. ಇಂದೂ ಸಹ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ವರದಿ-ಎಚ್. ಮಾರುತಿ)
ಬೆಂಗಳೂರು: ಎರಡು ದಿನಗಳ ಬಿಡುವು ನೀಡಿದ್ಧ ಮಳೆ ಶನಿವಾರ ತಡರಾತ್ರಿ ಮತ್ತೆ ಆರಂಭವಾಗಿದೆ. ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬೆಂಗಳೂರು ತತ್ತರಿಸಿದೆ. ತಗ್ಗು ಪ್ರದೇಶಗಳು, ಹಲವಾರು ಬಡಾವಣೆಗಳು ಜಲಾವೃತವಾಗಿವೆ. ಸತತ 6-8 ವಂತೆ ಕಾಲ ಮಳೆ ಎಡಬಿಡದೆ ಸುರಿದಿದೆ. ಹಲವು ಕಡೆ ಗುಡುಗು ಸಹಿತ ಭಾರಿ ಮಳೆಯಾಗಿದ್ದು ವರುಣ ರಾಯಣಿಗೆ ಹಿಡಿ ಶಾಪ ಹಾಕುವಂತಾಗಿದೆ. ಇಂದೂ ಸಹ ಗುಡುಗು ಸಹಿತ ಭಾರಿ ಮಳೆಯಾಗಲಿದೆ.
ಶಾಂತಿನಗರ, ಜಯನಗರ, ತ್ಯಾಗರಾಜನಗರ, ರಾಜರಾಜೇಶ್ವರಿ ನಗರ, ಶ್ರೀನಗರ, ಕೆ.ಆರ್. ಮಾರ್ಕೆಟ್, ಟೌನ್‌ಹಾಲ್, ಕಾರ್ಪೊರೇಷನ್ ಸರ್ಕಲ್, ಮೈಸೂರು ರಸ್ತೆ, ವಿಜಯನಗರ, ಮಾಗಡಿ ರಸ್ತೆ, ರಾಜಾಜಿ ನಗರ, ಮಲ್ಲೇಶ್ವರಂ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ಹೆಬ್ಬಾಳ, ಯಲಹಂಕ ಸೇರಿದಂತೆ ಬಹುತೇಕ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಎಚ್ಎಎಲ್ನಲ್ಲಿ 12 ಎಂ ಎಂ ಮಳೆಯಾಗಿದೆ. ಸಾಯಿ ಲೇ ಔಟ್, ರಮಣಶ್ರೀ ಕ್ಯಾಲಿಫೋರ್ನಿಯ ಬಡಾವಣೆಗಳಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಈ ಬಡಾವಣೆಗಳು ಅಕ್ಷರಶಃ ದ್ವೀಪದಂತಾಗಿದ್ದು, ನಿವಾಸಿಗಳು ಮನೆಯಿಂದ ಹೊರಬರಲಾಗದೆ ಪರದಾಡುತ್ತಿದ್ದಾರೆ.
ಅಪಾರ್ಟ್ ಮೆಂಟ್ಗಳ ಒಳಗೆ ನೀರು
ಇನ್ನು ಮೈಸೂರು ರಸ್ತೆಯುದ್ದಕ್ಕೂ ಕಾರ್ ಶೋ ರೂಂಗಳಿವೆ. ರಾಜಕಾಲುವೆಗೆ ನೀರು ಹರಿಯಲಾಗದೆ ನೀರು ಕಾರ್ ಶೋ ರೂಂಗಳಿಗೆ ನುಗ್ಗಿ ನಷ್ಟ ಉಂಟಾಗಿದೆ. ಹೊಸ ಹೊಸ ಕಾರುಗಳ ಒಳಗೆ ನೀರು ತುಂಬಿಕೊಂಡಿದೆ. ರಾಜರಾಜೇಶ್ವರಿ ನಗರದ ಬೆಮೆಲ್ ಲೇ ಔಟ್, ಪಟ್ಟಣಗೆರೆ, ಗ್ಲೋಬಲ್ ಟೆಕ್ ಪಾರ್ಕ್ ಸುತ್ತಮುತ್ತ ನೀರು ನಿಂತಿದ್ದು ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಅಪಾರ್ಟ್ ಮೆಂಟ್ಗಳ ಒಳಗೆ ನೀರು ನುಗ್ಗಿ ಕಾರು ಪಾರ್ಕಿಂಗ್ ಜಾಗ ನೀರಿನಿಂದ ತುಂಬಿಕೊಂಡಿವೆ. ಕಾರುಗಳು ಮುಳುಗಡೆಯಾಗಿವೆ.
ಪರಪ್ಪನ ಅಗ್ರಹಾರ ಸರ್ಜಾಪುರ ರಸ್ತೆಯುದ್ದಕ್ಕೂ ನೀರು ಹರಿಯುತ್ತಿದೆ. ಚರಂಡಿ, ರಸ್ತೆ, ರಸ್ತೆ ಗುಂಡಿ ಯಾವುದೂ ಕಾಣಿಸಿಕೊಳ್ಳದೆ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಮುಂದೆ ಹೋಗಲಾಗದೆ ವಾಹನಗಳು ರಸ್ತೆಯಲ್ಲೇ ನಿಲ್ಲುವಂತಾಗಿದೆ. ಬೆಂಗಳೂರಿನ ಹಳೆಯ ಬಡಾವಣೆಗಳು, ಗಲ್ಲಿ ಗಲ್ಲಿಗಳಲ್ಲಿ ನೀರು ಮುಂದಕ್ಕೆ ಹರಿಯಲಾಗುತ್ತಿಲ್ಲ. ಇಂತಹ ಬಡಾವಣೆಗಳಲ್ಲಿ ಮನೆಗಳಿಗಿಂತ ರಸ್ತೆ ಮೇಲಿದ್ದು ರಸ್ತೆಯ ನೀರು ಮನೆಯೊಳಗೆ ಪ್ರವೇಶಿಸುತ್ತಿದೆ. ನಿವಾಸಿಗಳು ಸ್ಥಳೀಯ ಶಾಸಕರು, ಪಾಲಿಕೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಇನ್ನೂ 2 ದಿನ ಭಾರಿ ಮಳೆಯಾಗಲಿದ್ದು 13 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.