ಬೆಲೆ ಏರಿಕೆ ಪರಿಣಾಮ ತಗ್ಗಿಸಲು ಬೆಂಗಳೂರಿಗೆ ಭಾರತ್ ಅಕ್ಕಿ, ಬೇಳೆ ಪೂರೈಕೆ, ದರ ವಿವರ ಹೀಗಿದೆ ನೋಡಿ
ಬಡ ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆ ಬಿಸಿ ವ್ಯಾಪಕವಾಗಿ ತಟ್ಟಿದೆ. ಕೇಂದ್ರ ಸರ್ಕಾರ, ಈ ಬೆಲೆ ಏರಿಕೆ ಪರಿಣಾಮ ತಗ್ಗಿಸಲು ಬೆಂಗಳೂರಿಗೆ ಭಾರತ್ ಅಕ್ಕಿ, ಬೇಳೆ ಪೂರೈಕೆ ಶುರುಮಾಡಿದೆ. ಭಾರತ್ ಬ್ರಾಂಡ್‌ನ ಭಾರತ್ ಅಕ್ಕಿ ಬೇಳೆಗಳ ದರ ವಿವರ ಹೀಗಿದೆ.
ಬೆಂಗಳೂರು: ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಅಕ್ಕಿ, ಬೇಳೆಗಳನ್ನು ಒದಗಿಸುವುದಕ್ಕಾಗಿ ಕೇಂದ್ರ ಸರ್ಕಾರ ಪರಿಚಯಿಸಿರುವ ಭಾರತ್ ಅಕ್ಕಿ, ಭಾರತ್ ಕಡ್ಲೆ ಬೇಳೆ, ಭಾರತ್ ಮಸೂರ ಬೇಳೆ ಸೇರಿ ಧಾನ್ಯಗಳು ಈಗ ಬೆಂಗಳೂರನಲ್ಲಿ ಲಭ್ಯವಿದೆ. ರಿಲಯನ್ಸ್ ಸ್ಮಾರ್ಟ್ ಮತ್ತು ಆಯ್ದ ಸ್ಥಳಗಳಲ್ಲಿ ಇವು ಲಭ್ಯ ಇರುವಂತೆ ನೋಡಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ. ಬೆಲೆ ಏರಿಕೆಯ ಸವಾಲನ್ನು ಎದುರಿಸುವುದಕ್ಕಾಗಿ ಗ್ರಾಹಕರನ್ನು ಸಬಲಗೊಳಿಸಲು ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣಾ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಸಿಸಿಎಫ್) ಬೆಂಗಳೂರಿನಲ್ಲಿ ಕೈಗೆಟುಕುವ ಬೆಲೆಯಲ್ಲಿ ಅಗತ್ಯ ಆಹಾರ ಧಾನ್ಯಗಳ ವಿತರಣೆಯನ್ನು ಪ್ರಾರಂಭಿಸಿರುವುದಾಗಿ ವರದಿ ವಿವರಿಸಿದೆ.
ಭಾರತ್ ಅಕ್ಕಿ, ಬೇಳೆಗಳು ಬೆಂಗಳೂರಲ್ಲಿ ಲಭ್ಯ; ಎರಡನೇ ಹಂತದ ಉಪಕ್ರಮ
ಭಾರತ್ ಬ್ರಾಂಡ್ ಅಕ್ಕಿ ಬೇಳೆಗಳ ಎರಡನೇ ಹಂತದ ಪೂರೈಕೆ ಶುರುವಾಗಿದ್ದು, ಬೆಂಗಳೂರಿನಲ್ಲಿ ಭಾರತ್ ಅಕ್ಕಿ, ಭಾರತ್ ಬೇಳೆಗಳು ಲಭ್ಯ ಇವೆ ಎಂದು ಎನ್‌ಸಿಸಿಎಫ್ ಹೇಳಿದೆ ಈ ಉಪಕ್ರಮದ ಮೂಲಕ ಉತ್ತಮ ಗುಣಮಟ್ಟದ ದಾನ್ಯಗಳನ್ನು ಕೈಗೆಟಕುವ ಬೆಲೆಗೆ ಬೆಂಗಳೂರಿಗರಿಗೆ ಸಿಗುವಂತೆ ಮಾಡಲಾಗುತ್ತಿದೆ ಎಂದು ಅದು ವಿವರಿಸಿದ್ದಾಗಿ ವರದಿ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವರಾದ ನಿಮುಬೆನ್ ಜಯಂತಿಭಾಯ್ ಬಂಬಾನಿಯಾ ಮತ್ತು ಬಿ ಎಲ್ ವರ್ಮಾ ಅವರ ನಿರ್ದೇಶನದಂತೆ ಈ ಯೋಜನೆಯನ್ನು ಅಕ್ಟೋಬರ್ 30 ರಂದು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗಿದೆ. ದೆಹಲಿಯಲ್ಲೂ ದೀಪಾವಳಿಗೆ ಮೊದಲೇ ಈ ಯೋಜನೆ ಶುರುವಾಗಿದೆ. ಅಲ್ಲೂ ಇದೇ ದರ ಚಾಲ್ತಿಯಲ್ಲಿದೆ.
"ಈ ಯೋಜನೆಯ ಹಿಂದಿನ ಕಲ್ಪನೆಯು ಜನರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಧಾನ್ಯಗಳನ್ನು ಪಡೆಯುತ್ತದೆ ಎಂದು ಖಚಿತಪಡಿಸುತ್ತದೆ. ಇದು ಜನರ ಕಲ್ಯಾಣಕ್ಕಾಗಿ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಭಾರತ್ ಅಕ್ಕಿ, ಭಾರತ್ ಬೇಳೆ ದರ ಎಷ್ಟು
ಭಾರತ್ ಅಕ್ಕಿ 34 ರೂ.ಗೆ ಮಾರಾಟವಾಗುತ್ತಿದ್ದರೆ, ಭಾರತ್ ಗೋಧಿ ಹಿಟ್ಟು 30 ರೂ., ಭಾರತ್ ಕಡ್ಲೆ ಬೇಳೆ (ಚನ ದಾಲ್) ರೂ. 70 ಮತ್ತು ಭಾರತ್ ಹೆಸರು ಬೇಳೆ (ಮೂಂಗ್ ದಾಲ್) ಕೇವಲ 107 ರೂ.ಗೆ ಮಾರಾಟವಾಗುತ್ತಿದೆ. ಇದೇ ಉತ್ಪನ್ನಗಳ ಮಾರುಕಟ್ಟೆ ದರ ಅಕ್ಕಿ 55-60 ರೂ., ಗೋಧಿ ಹಿಟ್ಟು ರೂ. 45-50, ಬೇಳೆ 90-100 ಮತ್ತು ಹೆಸರು ಬೇಳೆ 120-130 ರೂಪಾಯಿಗೆ ಮಾರಾಟವಾಗುತ್ತಿದೆ.
ಕೇಂದ್ರ ಸರ್ಕಾರವು ಕಳೆದ ಫೆಬ್ರವರಿಯಲ್ಲಿ ಭಾರತ್ ರೈಸ್ (ಭಾರತ್ ಅಕ್ಕಿ) ಅನ್ನು 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ಕೆಜಿಗೆ 29 ರೂನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿತು. 2023ರ ನವೆಂಬರ್‌ನಲ್ಲಿ 10 ಕಿಲೋ ಪ್ಯಾಕ್‌ನ ಭಾರತ್ ಗೋಧಿ ಹಿಟ್ಟು ಅಥವಾ ಭಾರತ್ ಅಟ್ಟಾವನ್ನು 275 ರೂಪಾಯಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಶುರುಮಾಡಿತ್ತು.