Bidar News: ಬೀದರ್‌ಗೂ ವಂದೇ ಭಾರತ್ ರೈಲು ಕೊಡಿ, ಬೀದರ್ ಯಶವಂತಪುರ ಸೇವೆ ಪುನರಾರಂಭಿಸಿ: ಕೇಂದ್ರ ಸಚಿವರಿಗೆ ಸಂಸದ ಸಾಗರ್ ಖಂಡ್ರೆ ಬೇಡಿಕೆ
ಕರ್ನಾಟಕದ ತುತ್ತ ತುದಿಯ ಜಿಲ್ಲೆ ಬೀದರ್‌ಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕ ಸೇರಿದಂತೆ ಹಲವು ಬೇಡಿಕೆಗಳನ್ನು ಕೇಂದ್ರ ರೈಲ್ವೆ ಸಚಿವರಿಗೆ ಸಲ್ಲಿಸಲಾಗಿದೆ.
ಬೀದರ್: ಕರ್ನಾಟಕದ ಕಟ್ಟ ಕಡೆಯ ಜಿಲ್ಲೆಯಾದ, ಪ್ರವಾಸೋದ್ಯಮ ಮಹತ್ವ ಪಡೆದಿರುವ ಬೀದರ್ ಜಿಲ್ಲೆಯನ್ನು ದಯಮಾಡಿ ಕಡೆಗಣಿಸಬೇಡಿ. ರಾಜಧಾನಿ ಬೆಂಗಳೂರು ಸಹಿತ ನಾನಾ ಭಾಗಗಳಿಂದ ಬೀದರ್‌ಗೆ ರೈಲು ಸೇವೆ ಕೊಡಿ. ಅದರಲ್ಲೂ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಬೀದರ್‌ಗೂ ಬೇಕು. ಬೆಂಗಳೂರಿನಿಂದ ಬೀದರ್‌ಗೆ ವಂದೇ ಭಾರತ್ ರೈಲು ಆರಂಭಿಸಿ. ಈಗಾಗಲೇ ಸೇವೆಯಲ್ಲಿದ್ದ ಬೀದರ್ ಯಶವಂತಪುರ ರೈಲನ್ನು ಸ್ಥಗಿತಗೊಳಿಸಲಾಗಿದ್ದು, ಅದನ್ನು ಪುನರಾರಂಭಿಸಿ.ಇದರಿಂದ ಬೀದರ್‌ನ ವಹಿವಾಟು ಸಹಿತ ಎಲ್ಲಾ ರೀತಿಯ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ. ಇದು ಬೀದರ್ ನೂತನ ಸಂಸದ ಸಾಗರ್ ಖಂಡ್ರೆ ಅವರ ಮನವಿ. ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ಖಂಡ್ರೆ ದೊಡ್ಡ ಬೇಡಿಕೆಯ ಪಟ್ಟಿಯನ್ನೇ ಸಚಿವರಿಗೆ ಸಲ್ಲಿಸಿದರು. ಸಚಿವರಿಂದಲೂ ಪೂರಕ ಸ್ಪಂದನೆ ದೊರೆಯಿತು.
ಈಗಾಗಲೇ ಬೀದರ್‌ನಿಂದ ಚಾಮರಾಜನಗರಕ್ಕೂ ಸಂಪರ್ಕ ಕಲ್ಪಿಸುವ ಬೇಡಿಕೆ ಇದೆಯಾದರೂ ಅದು ಕೂಡ ಜಾರಿಯಾಗಿಲ್ಲ. ಅಲ್ಲದೇ ಬೀದರ್‌ನಿಂದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಉತ್ತರ ಭಾರತಕ್ಕೆ ರೈಲ್ವೆ ಜಾಲ ವಿಸ್ತರಣೆಗೆ ಹಿಂದೆಯೇ ಮನವಿಗಳನ್ನು ಸಲ್ಲಿಸಿದ್ದರೂ ಅದು ಜಾರಿಗೊಂಡಿಲ್ಲ. ಹೊಸದಾಗಿ ಸಂಸದರಾಗಿ ಏಳು ತಿಂಗಳ ಹಿಂದೆ ಆಯ್ಕೆಯಾದ ಸಾಗರ್ ಖಂಡ್ರೆ ಅವರು ಖುದ್ದು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.ಕರ್ನಾಟಕದವರೇ ಆಗಿರುವ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೂ ಸಾಗರ್ ಖಂಡ್ರೆ ಮನವಿ ಸಲ್ಲಿಸಿದ್ದರು.
ಪ್ರಮುಖ ಬೇಡಿಕೆಗಳು:
1. ಯಶವಂತಪುರ-ಬೀದರ-ಯಶವಂತಪುರ ಎಕ್ಸ್‌ಪ್ರೆಸ್ (ಟ್ರೇನ್ ನಂ. 16578/77):
ಪ್ರಸ್ತುತ ಸ್ಥಗಿತಗೊಂಡಿರುವ ಈ ರೈಲು ಸೇವೆಯನ್ನು ಪುನಃ ಆರಂಭಿಸಿ, ಅದನ್ನು ದೈನಂದಿನ ಸೇವೆಯಾಗಿ ಪರಿವರ್ತಿಸಲು ಒತ್ತಾಯಿಸಿದೆನು. ಇದರಿಂದ ಬೀದರ ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನ ನಡುವಿನ ಸಂಪರ್ಕ ಸುಧಾರಣೆ ಆಗುತ್ತದೆ.
2. ವಂದೇ ಭಾರತ್ ರೈಲು: ಬೀದರ ಮತ್ತು ಬೆಂಗಳೂರಿನ ನಡುವೆ ವಂದೇ ಭಾರತ್ ರೈಲು ಪ್ರಾರಂಭಿಸಲು ಮನವಿ ಮಾಡಿದೆನು, ಇದರಿಂದ ಪ್ರಯಾಣ ಸಮಯ ಕಡಿಮೆಯಾಗಿ, ಜನರ ಅನುಕೂಲತೆ ಹೆಚ್ಚುತ್ತದೆ.
3. ತಾಂಡೂರು-ಜಹೀರಾಬಾದ್ ಹೊಸ ರೈಲು ಮಾರ್ಗ:
2023ರಲ್ಲಿ ಅನುಮೋದನೆ ಪಡೆದ ಈ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಯನ್ನು ನಮ್ಮ ಬೀದರ ಲೋಕಸಭಾ ಕ್ಷೇತ್ರದ ಚಿಂಚೋಳಿ ತಾಲೂಕು ಮೂಲಕ ಮರುಸಮೀಕ್ಷೆ ಮಾಡುವಂತೆ ವಿನಂತಿಸಿದೆನು, ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ಈ ಭಾಗದ ಅಭಿವೃದ್ಧಿಗೆ ನೆರವಾಗುತ್ತದೆ.
4. ಸಿಎಸ್ಎಂಟಿ-ಬೀದರ ಎಕ್ಸ್‌ಪ್ರೆಸ್ (ಟ್ರೇನ್ ನಂ. 22143/44):
ವಾರದಲ್ಲಿ ಮೂರು ದಿನ ಮಾತ್ರ ಲಭ್ಯವಿರುವ ಈ ರೈಲು ಸೇವೆಯನ್ನು ದೈನಂದಿನ ಸೇವೆಯಾಗಿ ಪರಿವರ್ತನೆ ಮಾಡುವಂತೆ ಕೋರಿದೆನು, ಇದರಿಂದ ಬೀದರ, ಪುಣೆ, ಮತ್ತು ಮುಂಬೈನ ನಡುವಿನ ವ್ಯಾಪಾರ ಮತ್ತು ಉದ್ಯೋಗಾವಕಾಶಗಳು ಸುಧಾರಿಸುತ್ತವೆ.
5. ಬೀದರ-ದಿಲ್ಲಿ ನೇರ ರೈಲು ಸಂಪರ್ಕ:
ದಕ್ಷಿಣ ಎಕ್ಸ್‌ಪ್ರೆಸ್ (ಟ್ರೇನ್ ನಂ. 12721/22) ಅನ್ನು ಬೀದರವರೆಗೆ ವಿಸ್ತರಿಸಲು ಮನವಿ ಮಾಡಿದೆನು, ಇದರಿಂದ ಬೀದರ ಜನತೆಗೆ ದೇಶದ ರಾಜಧಾನಿಯೊಂದಿಗೆ ನೇರ ಸಂಪರ್ಕ ಸಾಧಿಸಲು ಅನುಕೂಲವಾಗುತ್ತದೆ.
6. ಬೀದರ-ಪಂಡರಪೂರ್ ರೈಲು:
ಪಂಡರಪೂರ್ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೀದರ ಮತ್ತು ಪಂಡರಪೂರ್ ನಡುವಿನ ನೇರ ರೈಲು ಸೇವೆ ಪ್ರಾರಂಭಿಸಿದರೆ ಧಾರ್ಮಿಕ ಸಂಪರ್ಕಕ್ಕೆ ಸಹಕಾರಿಯಾಗಲಿದೆ.
7. ಬೀದರ-ನಾಂದೇಡ್ ಹೊಸ ರೈಲು ಮಾರ್ಗ (157 ಕಿ.ಮೀ):
2018-19ರ ಬಜೆಟ್‌ನಲ್ಲಿ ಅನುಮೋದನೆಗೊಂಡ ಈ ಹೊಸ ಮಾರ್ಗವನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರುವಂತೆ ಕೋರಿಕೆ ಸಲ್ಲಿಸಲಾಯಿತು.
ವಿಭಾಗ