ಇದೇ ಮಂಗಳವಾರ ಕಾಫಿ ಕುಡೀಬೇಕಾದರೆ ರೇಟ್ ಕೇಳ್ಕೊಳ್ಳಿ!; ಕಾಫಿ ಪುಡಿ ದರ 100 ರೂಪಾಯಿ ಹೆಚ್ಚಾಗುತ್ತೆ
ಕಾಫಿ ಪ್ರಿಯರಿಗೆ ಸ್ವಲ್ಪ ಆಘಾತ ನೀಡುವ ವಿಚಾರ ಇದು. ಕಾಫಿ ಪುಡಿ ಬೆಲೆ ಕಿಲೋಗೆ 100 ರೂಪಾಯಿ ಹೆಚ್ಚಾಗಲಿದೆ. ಅಕ್ಟೋಬರ್ 15 ರಿಂದ ಇದು ಜಾರಿಗೆ ಬರಲಿದ್ದು, ಹೋಟೆಲ್, ರೆಸ್ಟೋರೆಂಟ್‌ಗೆ ಹೋಗಿ ಕಾಫಿ ಕುಡಿಯುವ ಮೊದಲೇ ರೇಟ್ ಕೇಳುವುದು ಒಳ್ಳೆಯದು. ಬೆಲೆ ಏರಿಕೆಗೆ ಕಾರಣವೇನು- ಇಲ್ಲಿದೆ ಆ ವಿವರ.
ಬೆಂಗಳೂರು: ಇದೇ ಮಂಗಳವಾರ ನೀವೇನಾದ್ರೂ ಹೋಟೆಲ್, ರೆಸ್ಟೋರೆಂಟ್‌ಗೆ ಹೋಗಿ ಕಾಫಿ ಕುಡೀತೀರಿ ಅಂದ್ರೆ ಮೊದಲು ರೇಟ್ ಕೇಳ್ಕೊಳ್ಳಿ, ಕುಡಿದ ನಂತರ ಬಿಲ್ ಕೊಡುವಾಗ ಹೌಹಾರೋದು ತಪ್ಪುತ್ತೆ! ಹೌದು, ಅಕ್ಟೋಬರ್ 15 ರಿಂದ ಒಂದು ಕಿಲೋ ಕಾಫಿ ಪುಡಿ ಬೆಲೆ 100 ರೂಪಾಯಿ ಹೆಚ್ಚಳವಾಗಲಿದೆ. ಹವಾಮಾನ ವೈಪರೀತ್ಯ, ಗುಣಮಟ್ಟದ ಬೆಳೆ ಕಡಿಮೆಯಾಗಿ, ಇಳುವರಿ ಕುಸಿತವಾಗಿರುವುದು ಈ ಬೆಲೆ ಏರಿಕೆ ಕಾರಣ ಎಂದು ಹೇಳಲಾಗುತ್ತಿದೆ. ಇಂಡಿಯನ್ ಕಾಫಿ ಟ್ರೇಡ್ ಅಸೋಸಿಯೇಷನ್ ಈ ವಿಚಾರ ಖಾತರಿ ಪಡಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕಾಫಿ ಪುಡಿ ಬೆಲೆ ಏರಿಕೆಯಾದರೆ ಸಹಜವಾಗಿಯೇ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಕಾಫಿ ರೇಟ್ ಕೂಡ ಹೆಚ್ಚಾಗಲಿದೆ.
ಗುಣಮಟ್ಟದ ಕಾಫಿ ಬೀಜದ ಕೊರತೆ, ಉತ್ಪಾದನಾ ವೆಚ್ಚ ಹೆಚ್ಚಳ
ಇಂಡಿಯನ್ ಕಾಫಿ ಟ್ರೇಡ್ ಅಸೋಸಿಯೇಷನ್ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಈ ಕುರಿತು ಹೇಳಿಕೆ ನೀಡಿದ್ದು, “ಅರೇಬಿಕಾ ಮತ್ತು ರೋಬಸ್ಟಾ ಕಾಫಿ ಬೀಜಗಳ ಬೆಲೆ ಏರಿಕೆಯಾಗಿದೆ. ಜಾಗತಿಕವಾಗಿ ಕಾಫಿ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ. ಕಾಫಿ ಪುಡಿಯ ಬೆಲೆ ಹೆಚ್ಚಳ ಮಾಡದೇ ಒಟ್ಟು ವೆಚ್ಚವನ್ನು ಸರಿದೂಗಿಸುವುದಕ್ಕೆ ಬೇರೆ ದಾರಿ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ, ಕಾಫಿ ಬೀಜ ಉತ್ಪಾದನೆ ವಿವಿಧ ಕಾರಣಕ್ಕೆ ಕಡಿಮೆಯಾಗಿದೆ. ಭಾರತದ ಕಾಫಿಗೆ ಬಹಳ ಬೇಡಿಕೆ ಇದೆ. ಆದರೆ ಆ ಬೇಡಿಕೆ ಪೂರೈಸುವುದಕ್ಕೆ ಆಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಕಾಫಿ ಬೀಜದ ಬೆಲೆಯೇ 200 ರೂಪಾಯಿಯಿಂದ 280 ರೂಪಾಯಿ ಹೆಚ್ಚಳವಾಗಿದೆ ಎಂದು ಅವರು ವಿವರಿಸಿದರು.
ವರ್ಷಕ್ಕೆ 3.5 ಲಕ್ಷ ಟನ್ ಕಾಫಿ ಉತ್ಪಾದನೆ
ಇಂಡಿಯನ್ ಕಾಫಿ ಟ್ರೇಡ್ ಅಸೋಸಿಯೇಷನ್ ಮಾಹಿತಿ ಪ್ರಕಾರ ಭಾರತದಲ್ಲಿ ಪ್ರತಿ ವತ್ಷ 3.5 ಲಕ್ಷಕ್ಕೂ ಹೆಚ್ಚು ಕಾಫಿ ಉತ್ಪಾದನೆಯಾಗುತ್ತದೆ. ಇದರಲ್ಲಿ ಶೇಕಡ 70 ರೋಬಸ್ಟಾ. ಇದರಲ್ಲಿ ಒಂದು ಲಕ್ಷ ಟನ್ ಕಾಫಿಯನ್ನು ದೇಶೀಯವಾಗಿಯೇ ಬಳಸಲಾಗುತ್ತಿದೆ. ಹವಾಮಾನ ವೈಪರೀತ್ಯದ ಕಾರಣ ಕಾಫಿ ಉತ್ಪಾದನೆ ಪ್ರಮಾಣ ಶೇಕಡ 20 ಇಳಿಕೆಯಾಗಿದೆ.
ಕಾಫಿ ದರ ಜನವರಿ ತಿಂಗಳಿಂದೀಚೆಗೆ ನಿಧಾನವಾಗಿ ಏರುತ್ತಲೇ ಇದೆ. ರೋಬಸ್ಟಾ ಕಾಫಿ ಬೆಲೆ ಕಿಲೋಗೆ 200 ರೂಪಾಯಿಯಿಂದ 420 ರೂಪಾಯಿಗೆ ಏರಿದೆ. ಅರೇಬಿಕಾ ಕಾಫಿ ಬೆಲೆ 290 ರೂಪಾಯಿಯಿಂದ 465 ರೂಪಾಯಿ ತನಕ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಪುಡಿ ಬೆಲೆ ಏರಿಕೆಯಾದಂತೆ ಭಾರತದಲ್ಲಿ ದೇಶೀಯ ಮಾರುಕಟ್ಟೆಯಲ್ಲೂ ಕಾಫಿ ಪುಡಿ ಬೆಲೆ ಹೆಚ್ಚಳವಾಗುತ್ತದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಹಸಿ ಕಾಫಿ ಬೀಜದ ಬೆಲೆ ಶೇಕಡ 40 ರಿಂದ ಶೇಕಡ 50 ಏರಿದೆ. ಕಾಫಿ ಉತ್ಪಾದನೆ ಹೆಚ್ಚಾದರೆ ಕಾಫಿ ಬೆಲೆ ಇಳಿಕೆಯಾಗಬಹುದು.
ಕಾಫಿ- ಚಿಕೋರಿ ಮಿಕ್ಸ್: ಭಾರತದಲ್ಲಿ ಕಾಫಿ ಪುಡಿ ಮಾಡುವಾಗ ಅದಕ್ಕೆ ಶೇಕಡ 49 ಚಿಕೋರಿ ಸೇರಿಸಲು ಅವಕಾಶ ಇದೆ. ಆದಾಗ್ಯೂ, ಕಾಫಿ ಪುಡಿ ಉತ್ಪಾದಕರು ಶೇಕಡ 20ಕ್ಕಿಂತ ಹೆಚ್ಚು ಚಿಕೋರಿ ಬಳಸುತ್ತಿಲ್ಲ. ಅದಕ್ಕಿಂತ ಹೆಚ್ಚು ಬಳಸಿದರೆ ಕಾಫಿಯ ಮೂಲ ರುಚಿ ಹೋಗುತ್ತದೆ ಎಂಬ ಕಾರಣಕ್ಕೆ ಯಾರೂ ಅದನ್ನು ಪ್ರಯತ್ನಿಸಿಲ್ಲ. ದಕ್ಷಿಣ ಬಾರತದಲ್ಲಿ ಚಿಕೋರಿ ಮಿಶ್ರಣ ಶೇಕಡ 20ಕ್ಕಿಂತ ತುಂಬಾ ಕಡಿಮೆ ಇದೆ. ಬೆಲೆ ಏರಿಕೆಯಾದಂತೆ ಚಿಕೋರಿ ಮಿಕ್ಸ್ ಮಾಡುವ ಪ್ರಮಾಣ ಹೆಚ್ಚಾಗಬಹುದು ಎಂಬ ಕಳವಳವೂ ವ್ಯಕ್ತವಾಗಿದೆ. ಕರ್ನಾಟಕದಲ್ಲಿ 300 ನೋಂದಾಯಿತ ಕಾಫಿ ರೋಸ್ಟರ್‌ಗಳಿದ್ದಾರೆ. ದಕ್ಷಿಣ ಭಾರತದಲ್ಲಿ ಇವರ ಸಂಖ್ಯೆ 500 ಇದೆ. ಇದಲ್ಲದೆ 3000 ಕಾಫಿ ಟ್ರೇಡಿಂಗ್ ಯೂನಿಟ್‌ಗಳಿವೆ.