CM Ibrahim: ಸೋಲಿನ ನೈತಿಕ ಹೊಣೆ ಹೊತ್ತ ಸಿಎಂ ಇಬ್ರಾಹಿಂ; ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ಕನ್ನಡ ಸುದ್ದಿ  /  ಕರ್ನಾಟಕ  /  Cm Ibrahim: ಸೋಲಿನ ನೈತಿಕ ಹೊಣೆ ಹೊತ್ತ ಸಿಎಂ ಇಬ್ರಾಹಿಂ; ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

CM Ibrahim: ಸೋಲಿನ ನೈತಿಕ ಹೊಣೆ ಹೊತ್ತ ಸಿಎಂ ಇಬ್ರಾಹಿಂ; ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

CM Ibrahim resigns as JDS state president: ರಾಜೀನಾಮೆ ಸಲ್ಲಿಸಿ ಬಳಿಕ ದೇವೇಗೌಡರ ನಿವಾಸದ ಮುಂದೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ, ಚುನಾವಣೆಯಲ್ಲಿ ಜೆಡಿಎಸ್​ ಸೋಲಿನ ನೈತಿಕ ಹೊಣೆಯನ್ನು ನಾನೇ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ‌ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸಿಎಂ ಇಬ್ರಾಹಿಂ
ಸಿಎಂ ಇಬ್ರಾಹಿಂ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ ಸೋಲಿನ ನೈತಿಕ ಹೊಣೆ ಹೊತ್ತು ಸಿ.ಎಂ. ಇಬ್ರಾಹಿಂ (C.M. Ibrahim ) ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಂದು ( ಮೇ 24, ಬುಧವಾರ) ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ಪತ್ರವನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಇಬ್ರಾಹಿಂ ಸಲ್ಲಿಸಿದ್ದಾರೆ. ಆದರೆ, ರಾಜೀನಾಮೆ ಪತ್ರವನ್ನು ದೇವೇಗೌಡರು ಇನ್ನೂ ಅಂಗೀಕರಿಸಿಲ್ಲ ಎಂದು ವರದಿಯಾಗಿದೆ.

ರಾಜೀನಾಮೆ ಸಲ್ಲಿಸಿ ಬಳಿಕ ದೇವೇಗೌಡರ ನಿವಾಸದ ಮುಂದೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ, ಚುನಾವಣೆಯಲ್ಲಿ ಜೆಡಿಎಸ್​ ಸೋಲಿನ ನೈತಿಕ ಹೊಣೆಯನ್ನು ನಾನೇ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ‌ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ಬಿಜೆಪಿ ವಿರೋಧಿ ಅಲೆ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೂ ನಾವು ರಾಜ್ಯದಲ್ಲಿ 60 ಲಕ್ಷ ಮತಗಳನ್ನು ಪಡೆದಿದ್ದೇವೆ. ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತೇವೆ ಎಂದರು.

ಕಾಂಗ್ರೆಸ್‌ನಲ್ಲಿದ್ದರೆ ಸಚಿವ ಸ್ಥಾನ ಸಿಗುತ್ತಿತ್ತು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ಗೌರವ ಇಲ್ಲದ ಕಡೆ ಸ್ಥಾನಕ್ಕೆ ಹೋಗಲ್ಲ, ಮಾನಕ್ಕೆ ಹೋಗುತ್ತೇವೆ ಎಂದು ಹೇಳಿದರು. ಹೊಸ ಸರ್ಕಾರ ರಚನೆಯಾಗಿದೆ, ಶುಭವಾಗಲಿ. ನೂತನ ಮುಖ್ಯಮಂತ್ರಿಗೆ ಒಳ್ಳೆಯದಾಗಲಿ, ಅವರು ಕೊಟ್ಟ ಭರವಸೆ ಈಡೇರಿಸಲಿ ಎಂದರು.

ಕಳೆದ ವರ್ಷ ಕಾಂಗ್ರೆಸ್​ ತೊರೆದು ಜೆಡಿಎಸ್​ ಸೇರಿದ್ದ ಸಿಎಂ ಇಬ್ರಾಹಿಂ ಅವರಿಗೆ ದೊಡ್ಡ ಜವಾಬ್ದಾರಿ ನೀಡಲಾಗಿತ್ತು. ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಮಾಡಿ ನೇಮಿಸಲಾಗಿತ್ತು.

ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ ಪಕ್ಷ ಕೇವಲ 19 ಸ್ಥಾನಗಳಿಗೆ ತೃಪ್ತಿಪಡೆದುಕೊಳ್ಳಬೇಕಾಯಿತು. ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ವಿಧಾನಸೌಧದ ಮೂರನೇ ಮಹಡಿಯ ಕನಸು ಕಾಣುತ್ತಿದ್ದ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಕನಸು ನುಚ್ಚು ನೂರಾಯಿತು.

ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಕಳೆದ ವಿಧಾನಸಭೆ ಅವಧಿಯಲ್ಲೂ ಕುಮಾರಸ್ವಾಮಿ ಅವರೇ ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕರಾಗಿ ಸದನದಲ್ಲಿ ಪಕ್ಷವನ್ನು ಮುನ್ನಡೆಸಿದ್ದರು.

ವಿಧಾನಸಭೆ ಸಭಾಧ್ಯಕ್ಷರ ಕಚೇರಿಯಲ್ಲಿ ಹಂಗಾಮಿ ಸ್ಪೀಕರ್ ಆರ್ ವಿ ದೇಶಪಾಂಡೆ ಅವರಿಂದ ಚನ್ನಪಟ್ಟಣದ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಮ್ಮನ್ನು ಗೆಲ್ಲಿಸಿದ ಚನ್ನಪಟ್ಟಣ ಕ್ಷೇತ್ರದ ಜನತೆಗೆ ಧನ್ಯವಾದ ಅರ್ಪಸಿದರು. ಬಳಿಕ ಹೆಚ್​ಡಿಕೆ ತಮ್ಮ ಅಧ್ಯಕ್ಷತೆಯಲ್ಲಿ ಈ ಅವಧಿಯ ಮೊದಲ ಶಾಸಕಾಂಗ ಪಕ್ಷದ ಸಭೆ ನಡೆಸಿದರು.

Whats_app_banner