Mysore Muda Scam: ಮೈಸೂರು ಮುಡಾ ಪ್ರಕರಣ, ಮುಗಿದ ವಾದ ಪ್ರತಿವಾದ, ಇನ್ನೇನಿದ್ದರೂ ಆದೇಶ ಬಾಕಿ; ಸಿದ್ದರಾಮಯ್ಯಗೆ ತಪ್ಪದ ಸಂಕಷ್ಟ
ಮೈಸೂರು ಮುಡಾದಲ್ಲಿ ಪತ್ನಿ ಹೆಸರಿನಲ್ಲಿ ಪಡೆದಿರುವ ನಿವೇಶನದ ವಿಚಾರವಾಗಿ ವಿಚಾರಣೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಪ್ರಕರಣದ ವಾದ ಪ್ರತಿವಾದ ಪ್ರಕ್ರಿಯೆ ಹೈಕೋರ್ಟ್ ನಲ್ಲಿ ಮುಗಿದಿದ್ದು, ಇನ್ನು ಆದೇಶ ಬಾಕಿಯಿದೆ.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಮೈಸೂರು ಮುಡಾ ಪ್ರಕರಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿರುವ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಆಗಸ್ಟ್ 19 ರಂದು ನೀಡಿದ್ದ ಮಧ್ಯಂತರ ಆದೇಶ ತೀರ್ಪು ಪ್ರಕಟವಾಗುವವರೆಗೆ ಜಾರಿಯಲ್ಲಿರುತ್ತದೆ ಎಂದೂ ತಿಳಿಸಿದೆ. ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು 'ಆಲಿಸಲಾಗಿದೆ, ಕಾಯ್ದಿರಿಸಲಾಗಿದೆ ಮತ್ತು ಈ ಪ್ರಕರಣದ ತೀರ್ಪು ಪ್ರಕಟವಾಗುವವರೆಗೆ ಜಾರಿಯಲ್ಲಿರುತ್ತದೆ' ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ವಾದ ಮಂಡಿಸಿದ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ 2019ರ ಜುಲೈ ತಿಂಗಳಲ್ಲಿ ಅಧಿಕಾರಕ್ಕೆ ಬಂದಿದೆ.
ಪ್ರಧಾನ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ತೆಗೆದುಕೊಂಡ ನಿರ್ಧಾರ ಮತ್ತು ವಿವಿಧ ಸರ್ಕಾರಗಳ ಆದೇಶಗಳ ಅನ್ವಯ ಮುಡಾ ಶೇ. 50ರ ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿದೆ ಎಂದು ವಾದ ಮಂಡಿಸಿದರು. ಯಾವುದೇ ಹಂತದಲ್ಲೂ ಸಿದ್ದರಾಮಯ್ಯ ತಮ್ಮ ಪ್ರಭಾವ ಬೀರಿಲ್ಲ. ಕಾನೂನು ಪ್ರಕಾರ ಮುಡಾ ಪರಿಹಾರ ನೀಡಿದೆ ಎಂದರು.
ರಾಜ್ಯಪಾಲರ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯಪಾಲರು ಮೇಲ್ನೋಟಕ್ಕೆ ತನಿಖೆಗೆ ಅರ್ಹ ಎಂದು ಕಂಡು ಬಂದಿರುವುದರಿಂದ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದಾರೆ. ಅವರು ಸಚಿವ ಸಂಪುಟದ ಸಲಹೆಯನ್ನು ಪಾಲಿಸಬೇಕು ಎಂಬ ನಿಯಮವೇನೂ ಇಲ್ಲ ಎಂದರು. ಸಿಂಘ್ವಿ ಅವರು ಸಂಪುಟದ ನಿರ್ಣಯವನ್ನು ಪಾಲಿಸಬೇಕು ಎಂದು ಹೇಳಿದರು. ಆಗ ನ್ಯಾಯಮೂರ್ತಿ ನಾಗಪ್ರಸನ್ನ ಅವರು ತಮ್ಮ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಿ ಎಂದು ಯಾವ ಸಚಿವ ಸಂಪುಟ ರಾಜ್ಯಪಾಲರಿಗೆ ಸಲಹೆ ನೀಡುತ್ತದೆ ಹೇಳಿ ಎಂದು ಮರು ಪ್ರಶ್ನೆ ಹಾಕಿದರು.́
ಈ ಪ್ರಕರಣದಲ್ಲಿ ದೂರುದಾರರಾಗಿರುವ ಟಿ. ಜೆ. ಅಬ್ರಹಾಂ ಕ್ರಿಮಿನಲ್ ಹಿನ್ನೆಲೆ ಹೊಂದಿರುವುದನ್ನು ಸಿಂಘ್ವಿ ನ್ಯಾಯಾಲಯದ ಗಮನಕ್ಕೆ ತಂದಾಗ ನ್ಯಾಯಮೂರ್ತಿಗಳು ಕೆಲವು ವೇಳೆ ಹೋರಾಟಗಾರರು ಇಂತಹ ಆಪಾದನೆಗಳನ್ನು ಎದುರಿಸಬೇಕಾಗುತ್ತದೆ. ಆದರೂ ಹಿರಿಯ ವಕೀಲರ ಅಭಿಪ್ರಾಯವನ್ನು ಪರಿಗಣಿಸುವುದಾಗಿ ಹೇಳಿ ಆದೇಶವನ್ನು ಕಾಯ್ದಿರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬಳಸಿ ತಮ್ಮ ಪತ್ನಿ ಪಾರ್ವತಿ ಅವರಿಗೆ ಬೆಳೆ ಬಾಳುವ 14 ನಿವೇಶನಗಳನ್ನು ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಪ್ರಬಾವ ಬೀರಿದ್ದಾರೆ. ಆದ್ದರಿಂದ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕು ಎಂದು ಪ್ರದೀಪ್ ಕುಮಾರ್, ಟಿ.ಜೆ.ಅಬ್ರಹಾಂಮತ್ತು ಸ್ನೇಹಮಯಿ ಕೃಷ್ಣ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
1988ರ ಭ್ರಷ್ಟಾಚಾರ ನಿಗ್ರಹ ಕಾಯಿದೆ 17ಎ ಮತ್ತು ಭಾರತೀಯ ನ್ಯಾಯ ಸಂಹಿತೆ 2023ರ ಸೆ.218ರ ಅಡಿಯಲ್ಲಿ ರಾಜ್ಯಪಾಲರು ಆಗಸ್ಟ್ 16ರಂದು ಪ್ರಾಸಿಕ್ಯೂಷನ್ ಗೆ ಅನುಮತಿನೀಡಿದ್ದರು.
ಆಗಸ್ಟ್ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಮುಖ್ಯಮಂತ್ರಿಗಳು ತಮ್ಮ ಅರ್ಜಿಯಲ್ಲಿ ಭಾರತೀಯ ಸಂವಿಧಾನದ 163ನೇ ವಿಧಿಯಲ್ಲಿ ದತ್ತವಾಗಿರುವ ಅಧಿಕಾರ ಬಳಸಿ ಸಚಿವ ಸಂಪುಟ ನೀಡಿರುವ ಸಲಹೆಯನ್ನು ನಿರ್ಲಕ್ಷಿಸಿ ನಿಯಮಗಳನ್ನು ಉಲ್ಲಂಘಿಸಿ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ವರದಿ: ಎಚ್. ಮಾರುತಿ, ಬೆಂಗಳೂರು