ಬಂಟ್ವಾಳ: ಮದುವೆಯಾಗಿ ಎರಡೇ ದಿನಕ್ಕೆ ನವವಿವಾಹಿತೆ ಅಪಘಾತಕ್ಕೆ ಬಲಿ, ವರನ ಸ್ಥಿತಿ ಗಂಭೀರ
ಬಿಸಿ ರೋಡ್ ಸಮೀಪದ ತಲಪಾಡಿ ಬಳಿ ನಡೆದ ಕಾರು ಅಪಘಾತದಲ್ಲಿ ಕಾರು ಅಪ್ಪಚ್ಚಿಯಾಗಿ ನವವಿವಾಹಿತೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅತ್ತ ಪತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು.)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಆಗಸ್ಟ್ 7ರ ಶನಿವಾರ) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವವಿವಾಹಿತೆಯೊಬ್ಬರು ಸಾವನ್ನಪ್ಪಿದ್ದಾರೆ. ಇದೇ ವೇಳೆ ವರ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಜೀವನ್ಮರಣದ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ .
ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಗಳಾಗಿರುವ ಅನೀಶಕೃಷ್ಣ ಮತ್ತು ಮಾನಸ, ಸೆಪ್ಟೆಂಬರ್ 5ರಂದು ದೇಂತಡ್ಕದ ವನದುರ್ಗಾ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಇಬ್ಬರೂ ಶನಿವಾರ ಬೆಳಗ್ಗೆ ದೇಂತಡ್ಕ ದೇವಸ್ಥಾನಕ್ಕೆ ಆಗಮಿಸಿ, ಅಲ್ಲಿ ಮದುವೆಯ ಖರ್ಚುವೆಚ್ಚಗಳ ಕುರಿತು ದೇವಸ್ಥಾನದ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ದರು. ಬಳಿಕ ದೇವರ ದರ್ಶನ ಪಡೆದು ಸುಮಾರು 12 ಗಂಟೆಗೆ ಮಂಗಳೂರು ಕಡೆಗೆ ಹೊರಟಿದ್ದರು. ಈ ಸಂದರ್ಭ ಬಿಸಿ ರೋಡ್ ದಾಟಿ ಟೋಲ್ ಗೇಟ್ ಸಮೀಪ ತಲಪಾಡಿ ಎಂಬಲ್ಲಿ ತಲುಪಿದಾಗ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅಲ್ಲಿಂದ ಹಾರಿ ವಿರುದ್ಧ ದಿಕ್ಕಿನಲ್ಲಿ ಬಿಸಿ ರೋಡ್ ಕಡೆಗೆ ಆಗಮಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ, ಕಾರಿನ ಟಾಪ್ ಹಾರಿಹೋಗಿದ್ದು, ಕಾರು ಅಪ್ಪಚ್ಚಿಯಾಗಿ ಮದುಮಗಳು ಮಾನಸ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅತ್ತ ಅನೀಶಕೃಷ್ಣ ಜೀವನ್ಮರಣ ಸ್ಥಿತಿಯಲ್ಲಿ ಉಸಿರಾಡುತ್ತಿದ್ದರು.
ಘಟನೆ ನಡೆದ ಕೂಡಲೇ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದು, ಕಾರಿನಿಂದ ಇಬ್ಬರನ್ನೂ ಹೊರಗೆಳೆದು ಆಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ತುರ್ತುಚಿಕಿತ್ಸೆಗೆ ಕಳುಹಿಸಿದ್ದಾರೆ. ಅದಾಗಲೇ ಮಾನಸ ಸಾವನ್ನಪ್ಪಿರುವುದಾಗಿ ಗೊತ್ತಾಗಿದ್ದು, ಅನೀಶಕೃಷ್ಣ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿರುವ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಮದುವೆಯಾಗಿ ಎರಡೇ ದಿನಕ್ಕೆ ಅಪಘಾತ
ಮಂಗಳೂರಿನ ನರನ್ಸ್ ಕಂಪನಿಯಲ್ಲಿ ಉದ್ಯೋಗಿಯೊಬ್ಬರ ಪುತ್ರಿಯಾಗಿರುವ ಮಾನಸ, ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದರು. ಅಲ್ಲೇ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಹಾಗೆಯೇ ಪೆರ್ನೆ ಸಮೀಪ ವಡ್ಯಗ ಎಂಬಲ್ಲಿನ ನಿವಾಸಿಯಾಗಿರುವ ಅನೀಶಕೃಷ್ಣ ಅವರಿಗೆ ತಾಯಿ ಹಾಗೂ ಸಹೋದರಿ ಇದ್ದಾರೆ. ಅವರೂ ನರನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಇಬ್ಬರಿಗೂ ಸೆಪ್ಟೆಂಬರ್ 5ರಂದು ಮದುವೆ ಕಾರ್ಯಕ್ರಮ ನಡೆದಿದ್ದು; ನೆಂಟರಿಷ್ಟರು, ಕುಟುಂಬಸ್ಥರು ಹಾಗೂ ಸ್ನೇಹಿತವರ್ಗವೆಲ್ಲಾ ಆಗಮಿಸಿ ಶುಭ ಕೋರಿದ್ದರು.
ಸೆ.6ರಂದು ವರನ ಮನೆಯಲ್ಲಿ ವಧೂಗೃಹಪ್ರವೇಶಾಂಗ ಕಾರ್ಯಕ್ರಮಗಳು ನಡೆದಿದೆ. ಇಂದು (ಸೆ.7) ವಧುವಿನ ತವರು ಮನೆಯಲ್ಲಿ ಔತಣವನ್ನು ಇಡಲಾಗಿತ್ತು. ಮದುವೆಯಾಗಿ ಮೊದಲ ಬಾರಿ ತವರು ಮನೆಗೆ ಹೋಗಬೇಕಾಗಿದ್ದ ವಧು ಸಂತಸದಿಂದಲೇ ವರನೊಂದಿಗೆ ಹೊರಟಿದ್ದಾರೆ. ಆದರೆ, ವಿಧಿಯಾಟ ಮಾತ್ರ ಬೇರೆಯೇ ಆಗಿತ್ತು. ಇದೀಗ ಎರಡೂ ಕುಟುಂಬಗಳಲ್ಲಿ ದುಃಖ ಮುಗಿಲುಮುಟ್ಟಿದೆ.