ಮೂಡುಬಿದಿರೆ ಮೋಹನ ಆಳ್ವ ಬಳಿ ವಿಶ್ವದ ನಾನಾ ಕಡೆಗಳ 3 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳ ಕಲೆಕ್ಷನ್-dakshina kannada moodabidri mohan alva has collection of more than 3 thousand ganesha idols from different countries hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮೂಡುಬಿದಿರೆ ಮೋಹನ ಆಳ್ವ ಬಳಿ ವಿಶ್ವದ ನಾನಾ ಕಡೆಗಳ 3 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳ ಕಲೆಕ್ಷನ್

ಮೂಡುಬಿದಿರೆ ಮೋಹನ ಆಳ್ವ ಬಳಿ ವಿಶ್ವದ ನಾನಾ ಕಡೆಗಳ 3 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳ ಕಲೆಕ್ಷನ್

ಡಾ.ಮೋಹನ ಆಳ್ವ ಬಳಿ ಒಂದು ಸೆಂಟಿ ಮೀಟರ್ ಗಾತ್ರದಿಂದ ಹಿಡಿದು ಐದು ಅಡಿ ಎತ್ತರದ ಗಣೇಶನ ವಿಗ್ರಹಗಳು ಇವೆ. ಒಂದಕ್ಕಿಂದ ಒಂದು ವಿಭಿನ್ನವಾಗಿರುವ ಗಣಪನ ಮೂರ್ತಿಗಳು ಅವರಲ್ಲಿವೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು.)

ಮೂಡುಬಿದಿರೆ ಮೋಹನ ಆಳ್ವ ಬಳಿ 3 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳ ಕಲೆಕ್ಷನ್
ಮೂಡುಬಿದಿರೆ ಮೋಹನ ಆಳ್ವ ಬಳಿ 3 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳ ಕಲೆಕ್ಷನ್

ಮಂಗಳೂರು: ಆಳ್ವಾಸ್ ವಿರಾಸತ್, ಆಳ್ವಾಸ್ ನುಡಿಸಿರಿ ಮೂಲಕ ರಾಜ್ಯದಾದ್ಯಂತ ಸಾಹಿತ್ಯ, ಸಾಂಸ್ಕೃತಿಕ ಪ್ರಿಯರ ಮನದಲ್ಲಿ ಉಳಿದಿರುವ ಮೂಡುಬಿದಿರೆಯ ಡಾ.ಮೋಹನ ಆಳ್ವ ಅವರು ವೃತ್ತಿಯಲ್ಲಿ ವೈದ್ಯರಾದರೂ ತನ್ನ ಅಭಿರುಚಿ ಮೂಲಕ ಹಲವು ಕ್ಷೇತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಪ್ರಪಂಚದ ಹಲವು ದೇಶಗಳ ಅತ್ಯಂತ ವಿಶಿಷ್ಠವಾದ ಗಣೇಶನ ಮೂರ್ತಿಗಳ ಅಪೂರ್ವ ಸಂಗ್ರಹ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವರ ಸಂಗ್ರಹದಲ್ಲಿದೆ.

ಕೇವಲ ಒಂದು ಸೆಂಟಿ ಮೀಟರ್ ಗಾತ್ರದಿಂದ ಆರಂಭಗೊಂಡು ಐದು ಅಡಿ ಎತ್ತರದ ತನಕದ ಅತ್ಯಂತ ಅನರ್ಘ್ಯ ಗಣೇಶ ವಿಗ್ರಹಗಳು ಆಳ್ವರ ಬಳಿಯಿದೆ. ಒಂದರಿಂದೊಂದು ವಿಭಿನ್ನವಾಗಿ, ವಿಶೇಷವಾಗಿರುವ ಈ ಬಹುಮಾಧ್ಯಮ ಗಣಪತಿಗಳು ಗಣಪತಿಯ ಬಹುರೂಪಗಳಿಗೆ ಸಾಕ್ಷಿಯಾಗುವಂತಿದೆ.

ಮಹಾಗಣಪತಿಯೆಂದರೆ ಮೋಹನ ಆಳ್ವರಿಗೆ ಪ್ರೀತಿ. ಗಣೇಶ ವಿಘ್ನ ನಿವಾರಕ. ತಮ್ಮ ಅಗಾಧ ವ್ಯಾಪ್ತಿ ವಿಸ್ತಾರದ ಕೆಲಸ ಕಾರ್ಯಗಳು ಸುಲಲಿತವಾಗಿ ಸಾಗಬೇಕೆಂಬ ದೃಷ್ಟಿ ಹಾಗೂ ನಿರ್ವಿಘ್ನವಾಗಿ ಕಾರ್ಯಗಳು ಸಂಪನ್ನವಾಗಲಿ ಎಂಬ ಸದಾಶಯದೊಂದಿಗೆ ವಿಘ್ನ ನಿವಾರಕ ವಿಘ್ನೇಶ್ವರನನ್ನು ಮೋಹನ ಆಳ್ವರು ಅತಿಯಾಗಿ ಪ್ರೀತಿಸುತ್ತಾರೆ, ಆರಾಧಿಸುತ್ತಾರೆ.

ಸಂಸ್ಥೆಯ ಎಲ್ಲ ಕಡೆಗಳಲ್ಲಿವೆ ಗಣೇಶ ವಿಗ್ರಹ

ತಮ್ಮ ಕಚೇರಿ, ಗೃಹ ಕಚೇರಿ, ಶಿಕ್ಷಣ ಸಂಸ್ಥೆಗಳಲ್ಲಿರುವ ಕಚೇರಿಗಳಲ್ಲೂ ಗಣೇಶನ ಹಲವು ವಿಗ್ರಹಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಮನೆ, ಕೊಠಡಿ, ಶಿಕ್ಷಣ ಸಂಸ್ಥೆಗಳಲ್ಲೂ ಗಣಪತಿಯ ವಿಗ್ರಹ ಕಾಣಸಿಗುತ್ತವೆ. ವಿದ್ಯಾಗಿರಿಯ ಶೈಕ್ಷಣಿಕ ಆವರಣದಲ್ಲಿ ನೃತ್ಯ ಭಂಗಿಯ ಬೃಹತ್ ಗಣಪತಿ ಮೂರ್ತಿಯಿದೆ. ಶಾಲೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಯಕ್ಷಗಾನೀಯ ಶೈಲಿಯ ಗಣಪತಿಯ ಮೂರ್ತಿ ಆಕರ್ಷಕವಾಗಿ ವಿದ್ಯಾರ್ಥಿಗಳನ್ನು ಹರಸುವಂತೆ ಭಾಸವಾಗುತ್ತಿದೆ.

ಮೋಹನ ಆಳ್ವರಲ್ಲಿ ಪ್ರಾಚ್ಯವಸ್ತು ಸಂಗ್ರಹವೇ ಬೃಹತ್ ಪ್ರಮಾಣದಲ್ಲಿದೆ. ಅವುಗಳಲ್ಲಿ ಗಣೇಶನ ಮೂರು ಸಾವಿರಕ್ಕೂ ಅಧಿಕ ವಿವಿಧ ಆಕಾರ, ಗಾತ್ರ, ಶೈಲಿಯ ಸಂಗ್ರಹವಿದೆ.

ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಸಂಘಟನೆ, ಧಾರ್ಮಿಕ, ಆರೋಗ್ಯ ಹೀಗೆ ಹಲವು ಕ್ಷೇತ್ರಗಳ ಬಗ್ಗೆ ನಿರಂತರ ಕೆಲಸ ಮಾಡುವವರು ಆಳ್ವರು. ಒಂದು ಕಾರ್ಯಕ್ಕೆ ಕೈಯಿಕ್ಕಿದರೆ ಅದು ಪೂರ್ಣವಾಗುವ ತನಕ ವಿರಮಿಸದೆ, ಅದರ ಸಾಕಾರಕ್ಕೆ ಶ್ರಮ ಪಡುವವರು. ಹೀಗಿರುವಾಗ ತಾನು ಮಾಡುವ ಕಾರ್ಯಗಳಲ್ಲಿ ವಿಘ್ನ ಬರಲೇ ಬಾರದೆಂಬ ಇಚ್ಛಾಶಕ್ತಿ ಹೊಂದಿರುತ್ತಾರೆ. ಗಣಪತಿ ವಿಘ್ನ ನಿವಾರಕ. ಈ ಕಾರಣಕ್ಕಾಗಿಯೇ ವಿಘ್ನ ನಿವಾರಕನೆಂದರೆ ಡಾ ಆಳ್ವರಿಗೆ ಅಚ್ಚುಮೆಚ್ಚು.

ಸಂಗೀತಪ್ರಿಯ, ಕಲಾಪ್ರಿಯ ಗಣಪತಿ

ಮಹಾಗಣಪತಿ ಸಂಗೀತ ಪ್ರಿಯ, ಕಲಾ ಪ್ರಿಯ, ನಾಟ್ಯ ಪ್ರಿಯ, ಸಾಹಿತ್ಯ ಪ್ರಿಯ. ಮೋಹನ ಆಳ್ವರಿಗೂ ಸಂಗೀತ, ಕಲೆ, ಸಾಹಿತ್ಯ, ನಾಟ್ಯವೆಂದರೆ ಅಚ್ಚುಮೆಚ್ಚು. “ಇವೆಲ್ಲಾ ಕಾರಣಕ್ಕೆ ಗಣಪತಿ ನನಗೆ ಸ್ಫೂರ್ತಿಯಾಗಿದ್ದಾನೆ. ಮಹಾಗಣಪತಿಯ ಮೇಲೆ ವಿಶೇಷವಾದ ಭಕ್ತಿ, ಅಭಿಮಾನ, ಗೌರವಭಾವ ಮೂಡುತ್ತದೆ” ಎನ್ನುತ್ತಾರೆ ಆಳ್ವರು.

ಮಹಾಗಣಪತಿಯನ್ನು ವಿಶಾಲ ಮನೋಧರ್ಮ ಉಳ್ಳ ದೇವನೆಂದು ಹೇಳಲಾಗುತ್ತದೆ. ಈ ವಿಶಾಲ ಮನೋಧರ್ಮ ನನಗೂ ಇಷ್ಟ. ಹೀಗಾಗಿಯೇ ಗಣಪತಿ ನನಗೆ ಹೆಚ್ಚು ಆಪ್ತವಾಗಲು ಕಾರಣ” ಎಂದು ಹೇಳುತ್ತಾರೆ. ಮೋಹನ ಆಳ್ವ. ಗಣಪತಿಯ ರೂಪವೇ ಒಂದು ಅಂದ-ಚೆಂದ. ವಿವಿಧ ಆಕಾರಗಳು ಭಂಗಿಗಳು ಅತ್ಯದ್ಭುತ. ಗಣಪನ ಭಕ್ತರು ನಮ್ಮ ದೇಶಕ್ಕಷ್ಟೇ ಸೀಮಿತವಾಗಿಲ್ಲ. ಪ್ರಪಂಚದಾದ್ಯಂತ ಗಣೇಶನ ಭಕ್ತರಿದ್ದಾರೆ, ಕಲಾವಿದರಿದ್ದಾರೆ. ವೈವಿಧ್ಯಮಯ ರೂಪಗಳಲ್ಲಿ ಗಣೇಶನ ಆಕಾರಗಳನ್ನು ಕೆತ್ತುವ ಕಾರ್ಯ ಮಾಡಿದ್ದಾರೆ ಎನ್ನುತ್ತಾರೆ ಮೋಹನ ಆಳ್ವರು.

ಇದೊಂದು ಮಾದರಿ ಸಂಗ್ರಹ, ಗಣಪನ ವಿಶ್ವರೂಪ ದರ್ಶನ!

ಆಳ್ವರ ಸಂಗ್ರಹದಲ್ಲಿ ಕಂಚು, ಕಬ್ಬಿಣ, ತಾಮ್ರ, ಪಂಚಲೋಹ, ಮರ, ಆವೆಮಣ್ಣು, ಪೋರ್ಸಲಿನ್, ಸ್ಟೀಲ್, ಗ್ಲಾಸ್, ಶಿಲೆ, ಅಮೃತ ಶಿಲೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೆತ್ತಲ್ಪಟ್ಟ, ರಚಿಸಲ್ಪಟ್ಟ ಗಣಪನ ವಿಗ್ರಹಗಳಿವೆ. ಪೆನ್ಸಿಲ್, ಬಹುವರ್ಣ, ಆಕ್ರಲಿಕ್, ಡಿಜಿಟಲ್, ವಾಟರ್‌ಕಲರ್, ಆಯಿಲ್ ಕಲರ್, ಕ್ಯಾನ್ವಾಸ್‌ಆರ್ಟ್ ಹೀಗೆ ಚಿತ್ರಕಲಾವಿದರ ಕುಂಚದಲ್ಲರಳಿದ ಗಣಪನ ಚಿತ್ತಾರಗಳಿವೆ. ನಮ್ಮ ದೇಶದ, ವಿವಿಧ ರಾಜ್ಯಗಳ ಶಿಲ್ಪಿಗಳಿಂದ ತಯಾರಾದ ವಿಗ್ರಹಗಳಿವೆ. ಸೂಕ್ಷಾತಿಸೂಕ್ಷ್ಮ ಮಹಾಗಣಪನ ಮೂರ್ತಿಗಳಿವೆ. ಲಕ್ಷಾಂತರ ರೂಪಾಯಿ ವೆಚ್ಚಮಾಡಿ ವಿದೇಶಗಳಿಂದ ತರಿಸಿಕೊಂಡ ಅತ್ಯದ್ಭುತ ಗಣೇಶ ಪ್ರತಿಮೆಗಳಿವೆ. ಆಳ್ವರ ಗಣೇಶನ ಸಂಗ್ರಹಕ್ಕೆ ಬೆಲೆ ಕಟ್ಟಲು ಅಸಾಧ್ಯ. ಅದೊಂದು ಅನರ್ಘ್ಯ. ಕೆಲವೇ ರುಪಾಯಿಗಳಿಂದ ತೊಡಗಿ ಲಕ್ಷಾಂತರ ರುಪಾಯಿ ಖರ್ಚುಮಾಡಿ ಗಣೇಶನ ರೂಪಗಳನ್ನು ಖರೀದಿಸಿದ್ದಾರೆ ಮೋಹನ ಆಳ್ವರು. ಚೌತಿಯ ಶುಭ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ವಿಶೇಷ ಪ್ರದರ್ಶನವನ್ನೂ ಅನೇಕ ಬಾರಿ ಆಯೋಜಿಸಿದ್ದರು.

mysore-dasara_Entry_Point