ರಸ್ತೆ ಅಪಘಾತದಿಂದ ಕರ್ನಾಟಕದಲ್ಲಿ ಗಂಟೆಗೊಬ್ಬರು ಸಾವು; ಒಂದೇ ವರ್ಷ 39762 ಅಪಘಾತ ಪ್ರಕರಣ ವರದಿ
ಕನ್ನಡ ಸುದ್ದಿ  /  ಕರ್ನಾಟಕ  /  ರಸ್ತೆ ಅಪಘಾತದಿಂದ ಕರ್ನಾಟಕದಲ್ಲಿ ಗಂಟೆಗೊಬ್ಬರು ಸಾವು; ಒಂದೇ ವರ್ಷ 39762 ಅಪಘಾತ ಪ್ರಕರಣ ವರದಿ

ರಸ್ತೆ ಅಪಘಾತದಿಂದ ಕರ್ನಾಟಕದಲ್ಲಿ ಗಂಟೆಗೊಬ್ಬರು ಸಾವು; ಒಂದೇ ವರ್ಷ 39762 ಅಪಘಾತ ಪ್ರಕರಣ ವರದಿ

ಕರ್ನಾಟಕದಲ್ಲಿ ಒಂದೇ ವರ್ಷ ಒಟ್ಟು 39,762 ರಸ್ತೆ ಅಪಘಾತ ಪ್ರಕಾರಣ ವರದಿಯಾಗಿವೆ. ಇದೇ ವೇಳೆ ಒಟ್ಟು 11,702 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದು ಭಾರತದಲ್ಲಿಯೇ ಐದನೇ ಅತಿ ಹೆಚ್ಚು ಪ್ರಮಾಣ.

ರಸ್ತೆ ಅಪಘಾತದಿಂದ ಕರ್ನಾಟಕದಲ್ಲಿ ಗಂಟೆಗೊಬ್ಬರು ಸಾವು; ಒಂದೇ ವರ್ಷ 39762 ಅಪಘಾತ ಪ್ರಕರಣ ವರದಿ
ರಸ್ತೆ ಅಪಘಾತದಿಂದ ಕರ್ನಾಟಕದಲ್ಲಿ ಗಂಟೆಗೊಬ್ಬರು ಸಾವು; ಒಂದೇ ವರ್ಷ 39762 ಅಪಘಾತ ಪ್ರಕರಣ ವರದಿ

ಪ್ರತಿನಿತ್ಯ ಅಲ್ಲೊಂದು ಇಲ್ಲೊಂದರಂತೆ ಹತ್ತಾರು ಅಪಘಾತ ಪ್ರಕರಣಗಳ ಸುದ್ದಿ ಬರುತ್ತಿರುತ್ತವೆ. ಭಾರತದಲ್ಲಿ ರಸ್ತೆ ಅಪಘಾತದ ಪ್ರಮಾಣ ತುಸು ಹೆಚ್ಚು ಎಂಬುದು ಗೊತ್ತಿರುವ ವಿಚಾರ. ಅದರಲ್ಲೂ ಕರ್ನಾಟಕದಲ್ಲಿ ಪ್ರತಿನಿತ್ಯ ಎಷ್ಟು ಅಪಘಾತಗಳು ಸಂಭವಿಸುತ್ತವೆ ಎಂಬ ಅಂಕಿ-ಅಂಶ ಕೇಳಿದರೆ ನಿಮಗೂ ಅಚ್ಚರಿಯಾದೀತು. ರಾಜ್ಯದಲ್ಲಿ ಪ್ರತಿ ಎರಡು ಗಂಟೆಗಳಿಗೆ 9 ರಸ್ತೆ ಅಪಘಾತಗಳು ಸಂಭವಿಸುತ್ತವೆ. ಪ್ರತಿ ಗಂಟೆಗೆ ಒಂದಕ್ಕಿಂತ ಹೆಚ್ಚು ಮಂದಿ ಅಪಘಾತಗಳಿಂದಾಗಿ ಸಾವನ್ನಪ್ಪುತ್ತಾರೆ. ಅಪಘಾತಗಳ ಪ್ರಮಾಣವನ್ನು ಲೆಕ್ಕ ಹಾಕಿದರೆ, ರಾಜ್ಯದಲ್ಲಿ ಪ್ರತಿ ಗಂಟೆಗೆ 4.54ರಷ್ಟು ಅಪಘಾತಗಳು ಸಂಭವಿಸುತ್ತವೆ. ಅಪಘಾತಗಳ ಪ್ರಮಾಣದಲ್ಲಿ ಕರ್ನಾಟಕ ರಾಜ್ಯವು ಭಾರತದಲ್ಲೇ ಐದನೇ ಸ್ಥಾನದಲ್ಲಿದೆ.

ಕೇಂದ್ರ ಸರ್ಕಾರರ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ತಮಿಳುನಾಡಿನಲ್ಲಿ ಸಂಭವಿಸುವ ಅಪಘಾತಗಳ ಪ್ರಮಾಣ ಹೆಚ್ಚು. ತಮಿಳುನಾಡಿನಲ್ಲಿ ಪ್ರತಿ ಗಂಟೆಗೆ 7.32ರಷ್ಟು ಅಪಘಾತಗಳು ಸಂಭವಿಸಿದರೆ, ಮಧ್ಯಪ್ರದೇಶದಲ್ಲಿ 6.21 ರಷ್ಟು ಅಪಘಾತಗಳು ಸಂಭವಿಸುತ್ತವೆ. 5.01 ಪ್ರಮಾಣದೊಂದಿಗೆ ಕೇರಳ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ 4.76 ರಷ್ಟು ಅಪಘಾತಗಳು ಸಂಭವಿಸಿವೆ ಎಂದು ಕೇಂದ್ರ ಸರ್ಕಾರದ ಮಾಹಿತಿ ತಿಳಿಸಿದೆ. ಇದು 2022ರ ಅಂಕಿ-ಅಂಶವಾಗಿದೆ.

ಕರ್ನಾಟಕದಲ್ಲಿ 2022ರಲ್ಲಿ ಒಟ್ಟು 39,762 ರಸ್ತೆ ಅಪಘಾತಗಳು ಸಂಭವಿಸಿವೆ. ರಸ್ತೆ ಅಪಘಾತಗಳಿಂದಾಗಿ ಒಟ್ಟು 11,702 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದು ದೇಶದಲ್ಲಿ ಐದನೇ ಅತಿ ಹೆಚ್ಚು. ದೇಶದಲ್ಲೇ ಅಗ್ರಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 64,105 ಅಪಘಾತಗಳು ಸಂಭವಿಸಿದರೆ, 17,884 ಜನ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ 54,432 ಅಪಘಾತ ಮತ್ತು 13,427 ಸಾವು, ಉತ್ತರ ಪ್ರದೇಶದಲ್ಲಿ 41,746 ಅಪಘಾತ ಹಾಗೂ 22,595 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಸಾವು

ರಾಜ್ಯದಲ್ಲಿ ರಸ್ತೆ ಸುರಕ್ಷತಾ ನಿಯಮಗಳು ಉತ್ತಮವಾಗಿದ್ದರೂ, ಅಪಘಾತಗಳ ಪ್ರಮಾಣ ಹೆಚ್ಚುತ್ತಿರುವುದು ಖೇದಕರವಾಗಿದೆ. ಹೆಚ್ಚಿನ ಸಂಖ್ಯೆಯ ಸಾವುಗಳು ವರದಿಯಾಗುತ್ತಿರುವುದು ರಾಜ್ಯದ ರಸ್ತೆ ಅಪಘಾತಗಳ ತೀವ್ರತೆಯನ್ನು ತೋರಿಸುತ್ತಿವೆ. ಪ್ರತಿ ಗಂಟೆಗೆ ಸಾವಿನ ಪ್ರಮಾಣ 1.33ರಷ್ಟಿದೆ. ಈ ಪ್ರಮಾಣ ದೇಶದಲ್ಲೇ ಐದನೇ ಹೆಚ್ಚು. ಉತ್ತರ ಪ್ರದೇಶದಲ್ಲಿ ಪ್ರತಿ ಗಂಟೆಗೆ 2.58 ಸಾವು ಸಂಭವಿಸುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಪ್ರಮಾಣವಿದೆ. ತಮಿಳುನಾಡಿನಲ್ಲಿ 2.04, ಮಹಾರಾಷ್ಟ್ರದಲ್ಲಿ 1.749 ಮತ್ತು ಮಧ್ಯಪ್ರದೇಶದಲ್ಲಿ 1.53 ಇದೆ.

ರಸ್ತೆ ನಿಯಮಗಳ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ, ಅಪಘಾತ ತಡೆಗಟ್ಟಲು ವಾಹನ ಸವಾರರು ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸುವಂತೆ ಮಾಡಿದರೂ, ಅಪಘಾತಗಳಿಂದಾಗಿ ಪ್ರಾಣ ಹಾನಿ ಪ್ರಮಾಣ ಹೆಚ್ಚುತ್ತಿವೆ. ಮುಂದೆ ರಾಜ್ಯದಲ್ಲಿ ಮತ್ತಷ್ಟು ಪರಿಣಾಮಕಾರಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ದಕ್ಷಿಣ ಭಾರತದ ಮೂರು ರಾಜ್ಯಗಳು ಅಗ್ರ ಐದರಲ್ಲಿ ಸ್ಥಾನ ಪಡೆದಿವೆ. ಹೀಗಾಗಿ ಎಲ್ಲೆಡೆ ಇನ್ನಷ್ಟು ಜಾಗೃತಿ ಬೇಕಿದೆ.

Whats_app_banner