Santosh Lad: ಸಿದ್ದರಾಮಯ್ಯ ಆಪ್ತ ಸಂತೋಷ್ ಲಾಡ್ಗೆ ಧಾರವಾಡ ಪೇಡ; 2ನೇ ಬಾರಿ ಒಲಿದ ಸಚಿವ ಸ್ಥಾನ, ಕಲಘಟಗಿ ಶಾಸಕನ ರಾಜಕೀಯ ಹಾದಿ ಹೀಗಿದೆ
Karnataka Cabinet Expansion: ಧಾರವಾಡದ 7 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಧಾರವಾಡ ಗ್ರಾಮೀಣದಿಂದ ವಿನಯ ಕುಲಕರ್ಣಿ, ಕಲಘಟಗಿಯಿಂದ ಸಂತೋಷ್ ಲಾಡ್, ಹುಬ್ಬಳ್ಳಿ-ಧಾರವಾಡ ಪೂರ್ವದಿಂದ ಪ್ರಸಾದ್ ಅಬ್ಬಯ್ಯ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಸಂತೋಷ್ ಲಾಡ್ ಅವರಿಗೆ ಮಣೆ ಹಾಕಿದೆ.
ಹುಬ್ಬಳ್ಳಿ-ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಧಾರವಾಡ ಜಿಲ್ಲೆಯಲ್ಲಿ ಮೂವರು ಶಾಸಕರ ಮಧ್ಯೆ ಏರ್ಪಟ್ಟಿದ್ದ ಭಾರೀ ಪೈಪೋಟಿಯಲ್ಲಿ ಕಲಘಟಗಿ ಶಾಸಕ ಸಂತೋಷ್ ಎಸ್. ಲಾಡ್ಗೆ (Kalagatagi MLA Santosh Lad) ಕಾಂಗ್ರೆಸ್ ಹೈಕಮಾಂಡ್ ಧಾರವಾಡ ಪೇಡ (ಸಿಹಿ ಸುದ್ದಿ ಎಂಬರ್ಥ) ನೀಡಿದೆ.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಬಂದಿದ್ದರು. ಧಾರವಾಡ ಗ್ರಾಮೀಣ ಕ್ಷೇತ್ರದಿಂದ ವಿನಯ ಕುಲಕರ್ಣಿ, ಕಲಘಟಗಿ ಕ್ಷೇತ್ರದಿಂದ ಸಂತೋಷ್ ಲಾಡ್, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಿಂದ ಪ್ರಸಾದ್ ಅಬ್ಬಯ್ಯ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಸಂತೋಷ್ ಲಾಡ್ ಅವರಿಗೆ ಮಣೆ ಹಾಕಿದೆ.
ಲಾಡ್ ಸಿದ್ದು ಆಪ್ತ:
ನೂತನ ಸಚಿವರಾಗುತ್ತಿರುವ ಸಂತೋಷ್ ಲಾಡ್ ಅವರು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಸಚಿವ ಸಂಪುಟದಲ್ಲಿ ಸಂತೋಷ ಲಾಡ್ ಅವರನ್ನು ಸೇರಿಸಿಕೊಂಡು ಆಪ್ತನಿಗೆ ಜವಾಬ್ದಾರಿ ನೀಡಿದ್ದಾರೆ. ಕಲಘಟಗಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡುವ ಸಂದರ್ಭದಲ್ಲೂ ಸಿದ್ದರಾಮಯ್ಯ ಆಪ್ತನ ಪರ ನಿಂತು ಲಾಡ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.
ಎರಡನೇ ಬಾರಿಗೆ ಒಲಿದ ಸಚಿವ ಸ್ಥಾನ:
ಈ ಹಿಂದೆ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲೂ ಸ್ಥಾನ ಪಡೆದಿದ್ದ ಸಂತೋಷ್ ಲಾಡ್, ಈಗ ಮತ್ತೊಮ್ಮೆ ಸಚಿವರಾಗಿ ಆಯ್ಕೆ ಆಗಿದ್ದಾರೆ. ಸಂಡೂರು ಕ್ಷೇತ್ರದಿಂದ ಒಂದು ಬಾರಿ ಹಾಗೂ ಕಲಘಟಗಿ ಕ್ಷೇತ್ರದಿಂದ ಮೂರು ಬಾರಿ ಗೆದ್ದಿರುವ ಸಂತೋಷ್ ಲಾಡ್ ಅವರಿಗೆ ಸಹಜವಾಗಿಯೇ ಸಚಿವ ಸ್ಥಾನ ದಕ್ಕಿದೆ. ಈ ಹಿಂದೆ ಮಾಹಿತಿ ಮತ್ತು ಮೂಲಸೌಕರ್ಯ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ. ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿ ರಾಜ್ಯದ ಜನರನ್ನು ರಕ್ಷಿಸಿದ ಶ್ರೇಯಸ್ಸು ಸಂತೋಷ್ ಲಾಡ್ ಅವರಿಗಿದೆ.
ವಿನಯ-ಅಬ್ಬಯ್ಯಗೆ ಒಲಿಯಲಿಲ್ಲ ಅದೃಷ್ಟ:
ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ್ದ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರ ಹೆಸರು ಸರ್ಕಾರ ಅಸ್ತಿತ್ವಕ್ಕೆ ಬಂದಾಗಿದ್ದಲೂ ಮುಂಚೂಣಿಯಲ್ಲಿತ್ತು. ಲಿಂಗಾಯತ ಕೋಟಾ ಹಾಗೂ ಹಿರಿತನ ಆಧಾರದ ಮೇಲೆ ತಮಗೆ ಸಚಿವ ಸ್ಥಾನ ಸಿಗುತ್ತೆ ಎಂಬ ಭರವಸೆಯಲ್ಲಿದ್ದ ವಿನಯ ಕುಲಕರ್ಣಿಗೆ ನಿರಾಸೆ ಆಗಿದೆ. ಕ್ಷೇತ್ರದ ಹೊರಗಿದ್ದೇ ಗೆಲುವು ಸಾಧಿಸಿದ್ದ ಅವರು ರಾಜ್ಯದಲ್ಲೇ ಹೆಸರಾಗಿದ್ದರು. ಸ್ವಂತ ಜಿಲ್ಲೆ ಪ್ರವೇಶಿಸಲು ಅನುಮತಿ ಇಲ್ಲದಿರುವುದು ಹಾಗೂ ಅವರ ಮೇಲಿರುವ ಕೊಲೆ ಆರೋಪ ಅವರಿಗೆ ಸಚಿವರಾಗಲು ತಾಂತ್ರಿಕ ಸಮಸ್ಯೆ ಎದುರಾಗಿತು ಎನ್ನಲಾಗಿದೆ.
ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನಕ್ಕೆ ಒಲಿಯಲಿದೆ ಎಂಬ ಮಾತುಗಳು ಜೋರಾಗಿಯೇ ಕೇಳಿಬರುತ್ತಿದ್ದವು. ಧಾರವಾಡ ಜಿಲ್ಲೆಯ ಪ್ರಾತಿನಿಧ್ಯ ಹಾಗೂ ಎಸ್.ಸಿ. ಕೋಟಾದಲ್ಲಿ ಸಚಿವರಾಗಲು ಲಾಬಿ ನಡೆಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಎಸ್.ಸಿ. ಕೋಟಾದಡಿ ದೊಡ್ಡ ಮಟ್ಟದ ನಾಯಕರ ದಂಡೇ ಇದ್ದಿದ್ದು ಹಾಗೂ ಧಾರವಾಡ ಜಿಲ್ಲೆಯವರೇ ಆದ ಸಂತೋಷ ಲಾಡ್ ಅವರ ಹೆಸರನ್ನು ನೂತನ ಸಚಿವರ ಪಟ್ಟಿಯಲ್ಲಿ ಸೇರಿದ್ದರಿಂದ ಪ್ರಥಮಬಾರಿಗೆ ಸಚಿವರಾಗುವ ಕನಸು ಕಂಡಿದ್ದ ಪ್ರಸಾದ ಅಬ್ಬಯ್ಯ ಅವರಿಗೂ ಹೈಕಮಾಂಡ್ ಜವಾಬ್ದಾರಿ ನೀಡಿಲ್ಲ.
ವಲಸಿಗರಿಗೂ ಇಲ್ಲ ಸಚಿವ ಸ್ಥಾನ
ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಬಿಜೆಪಿ-ಜೆಡಿಎಸ್ ತೊರೆದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಎನ್.ಎಚ್. ಕೋನರಡ್ಡಿ ಕಾಂಗ್ರೆಸ್ ಸೇರಿ ಸ್ಪರ್ಧಿಸಿದ್ದರು. ಜಗದೀಶ್ ಶೆಟ್ಟರ್ ಸೋಲು ಕಂಡರೆ, ಕೋನರಡ್ಡಿ ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ಸೋತಿದ್ದರೂ ಶೆಟ್ಟರ್ ಅವರ ಹಿರಿತನ ಹಾಗೂ ಮುಂದಿನ ಲೋಕಸಭಾ ಚುನಾವಣೆ ಗಮನದಲ್ಲಿ ಇರಿಸಿಕೊಂಡು ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಸಚಿವ ಸ್ಥಾನ ನೀಡುತ್ತದೆ ಎಂಬ ಲೆಕ್ಕಾಚಾರಗಳಿದ್ದವು. ಸದ್ಯ ಅವರನ್ನು ಸಚಿವರನ್ನಾಗಿಸದೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಜವಾಬ್ದಾರಿ ನೀಡಲಾಗಿದೆ ಎನ್ನಲಾಗಿದೆ. ಮಹದಾಯಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಅವರಿಗೆ ಸಚಿವ ಸ್ಥಾನ ಸಿಕ್ಕರೂ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದವು. ಸದ್ಯಕ್ಕೆ ಹೈಕಮಾಂಡ್ ಈ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ ಎಂಬುದು ಪ್ರಸ್ತುತ ವಿಚಾರ.
ಸಂತೋಷ್ ಲಾಡ್ ರಾಜಕೀಯ ಹಾದಿ ಹೀಗಿದೆ..
2002 - ಕೌನ್ಸಿಲರ್, ಸಂಡೂರು ಪಟ್ಟಣ ಪಂಚಾಯಿತಿ
2004 - ಸಂಡೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರು, ಬಳ್ಳಾರಿ ಜಿಲ್ಲೆ (2004-2008)
2008 - ಕಲಘಟಗಿ ವಿಧಾನಸಭಾ ಕ್ಷೇತ್ರದ ಶಾಸಕ, ಧಾರವಾಡ ಜಿಲ್ಲೆ.( 2008-2013)
2010 - ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
2011 - ಕೆಪಿಸಿಸಿಯಿಂದ ರಾಯಚೂರು ಜಿಲ್ಲಾ ಉಸ್ತುವಾರಿಯಾಗಿ ನೇಮಕ
2013 - ಕಲಘಟಗಿ ವಿಧಾನಸಭಾ ಕ್ಷೇತ್ರದ ಶಾಸಕ, ಧಾರವಾಡ ಜಿಲ್ಲೆ.( 2013-2018).
ಮಾಹಿತಿ ಮತ್ತು ಮೂಲಸೌಕರ್ಯ ರಾಜ್ಯ ಸಚಿವರಾಗಿ ಸೇವೆ
(ಮೇ 2013-ನವೆಂಬರ್ 2013) ಕರ್ನಾಟಕ ಸರ್ಕಾರ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು
2016 - ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿಗೆ ಗೌರವಾನ್ವಿತ ಸಚಿವರಾಗಿ ಸೇವೆ
(ಜೂನ್ 2016-ಮೇ 2018) ಕರ್ನಾಟಕ ರಾಜ್ಯ ಸರ್ಕಾರ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು
2018 - ಕಲಘಟಗಿ ಕ್ಷೇತ್ರದಿಂದ ಸೋಲು
2022 - ಕೆಪಿಸಿಸಿ ಉಪಾಧ್ಯಕ್ಷರಾಗಿ ನೇಮಕ
2023 - ಕರ್ನಾಟಕದ ಪ್ರಚಾರ ಸಮಿತಿಯಲ್ಲಿ ಸಹ-ಅಧ್ಯಕ್ಷರಾಗಿ ನೇಮಕ
2023-24 ನೇ ಬಾರಿ ಕಲಘಟಗಿ ಕ್ಷೇತ್ರದಿಂದ ಆಯ್ಕೆ.