ಹಾಸನ ಲೈಂಗಿಕ ಹಗರಣ; ಬೆಂಗಳೂರಿಗೆ ತಡರಾತ್ರಿ ಬಂದಿಳಿದ ಪ್ರಜ್ವಲ್ ರೇವಣ್ಣ ಬಂಧನ, ಸಿಐಡಿ ಕಚೇರೀಲಿ ಎಸ್‌ಐಟಿ ವಿಚಾರಣೆ, 5 ವಿದ್ಯಮಾನಗಳಿವು
ಹಾಸನ ಲೈಂಗಿಕ ಹಗರಣದ ತನಿಖೆ ನಡೆಸುತ್ತಿರುವ ಕರ್ನಾಟಕ ಎಸ್ಐಟಿ ತಂಡಕ್ಕೆ ಬಹುದೊಡ್ಡ ನಿರಾಳತೆ ಸಿಕ್ಕಿದೆ. ಹೌದು 34 ದಿನಗಳಿಂದ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಬೆಂಗಳೂರಿಗೆ ತಡರಾತ್ರಿ ಬಂದಿಳಿದ ಪ್ರಜ್ವಲ್ ರೇವಣ್ಣ ಬಂಧನವಾಗಿದೆ. ಸಿಐಡಿ ಕಚೇರೀಲಿ ಎಸ್‌ಐಟಿ ವಿಚಾರಣೆ ಶುರುಮಾಡಿದೆ. ಇದಕ್ಕೆ ಸಂಬಂಧಿಸಿದ 5 ವಿದ್ಯಮಾನಗಳಿವು.
ಬೆಂಗಳೂರು: ಹಾಸನ ಲೈಂಗಿಕ ಹಗರಣದ (Hassan Sex Scandal) ಭಾಗವಾಗಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಕೇಸ್‌ನ ಪ್ರಮುಖ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) 34 ದಿನಗಳ ಬಳಿಕ ಬೆಂಗಳೂರಿಗೆ ವಾಪಸಾಗಿದ್ದಾರೆ. ಕರ್ನಾಟಕ ಎಸ್‌ಐಟಿ (Karnataka SIT) ಅಧಿಕಾರಿಗಳ ತಂಡ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಪ್ರಜ್ವಲ್ ರೇವಣ್ಣ ಬಂದಿಳಿಯುತ್ತಲೇ ಅವರನ್ನು ಬಂಧಿಸಿದೆ.
ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲುಕ್ ಔಟ್ ನೋಟಿಸ್ ಹಾಗೂ ಬಂಧನ ವಾರಂಟ್ ಜಾರಿಯಲ್ಲಿರುವ ಕಾರಣ ಅವರನ್ನು ಸ್ವದೇಶಕ್ಕೆ ಆಗಮಿಸಿದ ಕೂಡಲೇ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇದರೊಂದಿಗೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಕೇಸ್‌ನ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ 34 ದಿನಗಳ ಅಜ್ಞಾತವಾಸಕ್ಕೆ ಗುರುವಾರ ತಡರಾತ್ರಿ ಅಂತಿಮ ತೆರೆ ಬಿದ್ದಿದೆ.
ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಬಂಧನಕ್ಕೆ ಸಂಬಂಧಿಸಿದ 5 ಮುಖ್ಯ ವಿದ್ಯಮಾನಗಳಿವು
1) ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಮ್ಯೂನಿಕ್ ನಗರದಿಂದ ಗುರುವಾರ ಅಪರಾಹ್ನ 3.30ಕ್ಕೆ ಬೆಂಗಳೂರಿಗೆ ಲುಫ್ತಾನ್ಸಾ ಏರ್‌ವೇಸ್‌ನ ವಿಮಾನದಲ್ಲಿ ಹೊರಟರು. ಈ ವಿಮಾನ ನಿನ್ನೆ ತಡರಾತ್ರಿ (ಮೇ 31) ನಸುಕಿನ 12.50ರ ಸುಮಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಬಂದಿಳಿಯಿತು.
2) ಲುಕ್‌ಔಟ್ ನೋಟಿಸ್ ಮತ್ತು ಬ್ಲೂಕಾರ್ನರ್ ನೋಟಿಸ್ ಜಾರಿಯಲ್ಲಿದ್ದ ಕಾರಣ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳು ಪ್ರಜ್ವಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬೋರ್ಡಿಂಗ್ ಪ್ರಕ್ರಿಯೆಗಳನ್ನು ಮುಗಿಸಿ ನಸುಕಿನ 2 ಗಂಟೆಗೆ ಹೊರಗೆ ಬಂದರು.
3) ವಿಮಾನ ನಿಲ್ದಾಣದ ಬೋರ್ಡಿಂಗ್ ಪ್ರಕ್ರಿಯೆ ಮುಗಿಸಿ ಹೊರಗೆ ಬಂದ ಪ್ರಜ್ವಲ್ ರೇವಣ್ಣ ಅವರನ್ನು ಕರ್ನಾಟಕ ಎಸ್‌ಐಟಿ ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡು, ಈಗಾಗಲೇ ಲುಕ್‌ಔಟ್ ನೋಟಿಸ್ ಮತ್ತು ಬಂಧನದ ವಾರೆಂಟ್ ಜಾರಿಯಲ್ಲಿರುವ ಕಾರಣ ಅವರ ಬಂಧನ ದಾಖಲಿಸಿತು.
4) ಇದಕ್ಕೂ ಮುನ್ನ, ಎಸ್‌ಐಟಿಯ 8 ಪೊಲೀಸರ ತಂಡ ನಿನ್ನೆ (ಮೇ 30) ಸಂಜೆಯೇ ಬೆಂಗಳೂರು ವಿಮಾಣ ನಿಲ್ದಾಣಕ್ಕೆ ತಲುಪಿತ್ತು. ಇವರಲ್ಲಿ ನಾಲ್ವರು ಟರ್ಮಿನಲ್ 2 ಪಾಸ್ ಪಡೆದು, ಒಳಗೆ ಹೋಗಿ ವಲಸೆ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಜ್ವಲ್ ರೇವಣ್ಣ ವಿಚಾರ ಮನವರಿಕೆ ಮಾಡಿಕೊಟ್ಟಿದ್ದರು.
5) ಎಸ್‌ಐಟಿ ಪೊಲೀಸರ ತಂಡ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ ಬಳಿಕ ಅವರನ್ನು ಸಿಐಡಿ ಕಚೇರಿಗೆ ಕರೆದೊಯ್ದಿದೆ. ಅಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿದ್ದು, ಇಂದು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ಬಳಿಕ ಕೋರ್ಟ್‌ಗೆ ಹಾಜರುಪಡಿಸಲಿದೆ.
ಬೆಂಗಳೂರು ವಿಮಾನ ನಿಲ್ಧಾಣದಲ್ಲಿ ಏನು ನಡೆಯಿತು- ಇಲ್ಲಿದೆ ವಿಡಿಯೋ
ಪ್ರಜ್ವಲ್ ರೇವಣ್ಣ ವಿಮಾನ ನಿಲ್ದಾಣದಿಂದ ಹೊರಬಂದ ನಂತರದ ವಿಡಿಯೋಗಳು ಬಹಿರಂಗವಾಗಿವೆ. ಎಎನ್‌ಐ, ಪಿಟಿಐ ಸುದ್ದಿ ಸಂಸ್ಥೆಗಳು ಈ ವಿಡಿಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿವೆ.
ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರ ಬಳಿ ಇದ್ದ ಎರಡು ಸೂಟ್‌ಕೇಸ್‌ಗಳನ್ನು ವಶ ಪಡಿಸಿಕೊಂಡ ದೃಶ್ಯದ ವಿಡಿಯೋ ಮೇಲಿರುವಂಥದ್ದು ಎಂದು ಎಎನ್‌ಐ ವರದಿ ಮಾಡಿದೆ.
ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದ ಸಂದರ್ಭದ ವಿಡಿಯೋ ಗ್ರ್ಯಾಬ್ ಇಮೇಜ್‌ಗಳನ್ನು ಕೂಡ ಎಎನ್‌ಐ ಶೇರ್ ಮಾಡಿದೆ.
ಎಸ್‌ಐಟಿ ತಂಡ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಬೆಂಗಳೂರಿನ ಸಿಐಡಿ ಕಚೇರಿಗೆ ಕಚೇರಿಗೆ ಕರೆದೊಯ್ಯುತ್ತಿದ್ದ ದೃಶ್ಯದ ವಿಡಿಯೋವನ್ನೂ ಎಎನ್ಐ ಶೇರ್ ಮಾಡಿದೆ.
ಕರ್ನಾಟಕದ ಮತ್ತಷ್ಟುತಾಜಾ ಸುದ್ದಿ,ಕ್ರೈಮ್ ಸುದ್ದಿ,ಬೆಂಗಳೂರು ನಗರ ಸುದ್ದಿ,ರಾಜಕೀಯ ವಿಶ್ಲೇಷಣೆ ಓದಿ.