ಚುನಾವಾಣಾ ಬಾಂಡ್‌ ಪ್ರಕರಣ; ನಿರ್ಮಲಾ ಸೀತಾರಾಮನ್‌ ನಿರಾಳ; ಕಟೀಲ್‌-ವಿಜಯೇಂದ್ರ ಭವಿಷ್ಯವೂ ಅಕ್ಟೋಬರ್ 22ಕ್ಕೆ ನಿರ್ಧಾರ
ಕನ್ನಡ ಸುದ್ದಿ  /  ಕರ್ನಾಟಕ  /  ಚುನಾವಾಣಾ ಬಾಂಡ್‌ ಪ್ರಕರಣ; ನಿರ್ಮಲಾ ಸೀತಾರಾಮನ್‌ ನಿರಾಳ; ಕಟೀಲ್‌-ವಿಜಯೇಂದ್ರ ಭವಿಷ್ಯವೂ ಅಕ್ಟೋಬರ್ 22ಕ್ಕೆ ನಿರ್ಧಾರ

ಚುನಾವಾಣಾ ಬಾಂಡ್‌ ಪ್ರಕರಣ; ನಿರ್ಮಲಾ ಸೀತಾರಾಮನ್‌ ನಿರಾಳ; ಕಟೀಲ್‌-ವಿಜಯೇಂದ್ರ ಭವಿಷ್ಯವೂ ಅಕ್ಟೋಬರ್ 22ಕ್ಕೆ ನಿರ್ಧಾರ

ಚುನಾವಾಣಾ ಬಾಂಡ್‌ ಅಕ್ರಮ ಪ್ರಕರಣ ಸಂಬಂಧ ಸಚಿವೆ ನಿರ್ಮಲಾ ಸೀತಾರಾಮನ್‌ ಮೇಲಿನ ಎಫ್ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಹೀಗಾಗಿ ಸಚಿವೆ ಜೊತೆಗೆ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಬಿವೈ ವಿಜಯೇಂದ್ರ ಕೂಡಾ ನಿರಾಳರಾಗಿದ್ದಾರೆ. ಅಕ್ಟೋಬರ್‌ 22ರಂದು ಪ್ರಕರಣದ ವಿಚಾರಣೆ ನಡೆಯಲಿದೆ. (ವರದಿ: ಎಚ್.ಮಾರುತಿ).

ಚುನಾವಾಣಾ ಬಾಂಡ್‌ ಪ್ರಕರಣ; ನಿರ್ಮಲಾ ಸೀತಾರಾಮನ್‌-ನಳಿನ್‌ ಕುಮಾರ್‌ ಕಟೀಲ್ ನಿರಾಳ; ಅಕ್ಟೋಬರ್ 22ಕ್ಕೆ ವಿಚಾರಣೆ
ಚುನಾವಾಣಾ ಬಾಂಡ್‌ ಪ್ರಕರಣ; ನಿರ್ಮಲಾ ಸೀತಾರಾಮನ್‌-ನಳಿನ್‌ ಕುಮಾರ್‌ ಕಟೀಲ್ ನಿರಾಳ; ಅಕ್ಟೋಬರ್ 22ಕ್ಕೆ ವಿಚಾರಣೆ

ಚುನಾವಣಾ ಬಾಂಡ್‌ಗಳನ್ನು ದುರ್ಬಳಕೆ ಮಾಡಿಕೊಂಡು ಸಾವಿರಾರು ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪ ಪ್ರಕರಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಇತರರ ಮೇಲೆ ದಾಖಲಾಗಿದ್ದ ಎಫ್‌ಐಆರ್‌ಗೆ ರಾಜ್ಯ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ಮಧ್ಯಂತರ ಆದೇಶ ಹೊರಡಿಸಿದ್ದಾರೆ. ಶಾಸಕರು-ಸಂಸದರ ವಿರುದ್ಧದ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಶನಿವಾರ ಬೆಂಗಳೂರಿನ ತಿಲಕ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸೆಪ್ಟೆಂಬರ್‌ 30ರ ಸೋಮವಾರ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದ್ದು, ಅಕ್ಟೋಬರ್‌ 22ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪ್ರಕರಣವನ್ನು ವಜಾಗೊಳಿಸುವಂತೆ ಕೋರ್ಟ್‌ ಮೆಟ್ಟಿಲೇರಿದ್ದರು. ದೂರುದಾರ ಅಯ್ಯರ್‌ ಪರವಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್‌ ವಾದ ಮಂಡಿಸಿ ಎಸ್‌ಐಟಿ ತಂಡವನ್ನು ರಚಿಸಿ ಈ ಪ್ರಕರಣವನ್ನು ತನಿಖೆ ನಡೆಸಬೇಕು. ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕರನ್ನು ಬೆದರಿಸಿ ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ವಾದಿಸಿದರು.

ಕಟೀಲ್‌ ಪರ ವಾದಿಸಿದ ರಾಘವನ್‌, ಇಲ್ಲಿ ಸುಲಿಗೆ ವಿಚಾರವೇ ಉದ್ಭವಿಸುವುದಿಲ್ಲ. ಯಾವುದೇ ಒಳಸಂಚು ನಡೆದಿಲ್ಲ ಎಂದು ವಾದ ಮಂಡಿಸಿ ಪ್ರಕರಣವನ್ನು ವಜಾಗೊಳಿಸುವಂತೆ ಮನವಿ ಮಾಡಿಕೊಂಡರು. ಜನಾಧಿಕಾರ ಸಂಘರ್ಷ ಪರಿಷತ್‌ ಸಹ ಅಧ್ಯಕ್ಷ ಆದರ್ಶ್‌ ಆರ್ ಐಯ್ಯರ್‌ ಅವರು, ಏಪ್ರಿಲ್‌ನಲ್ಲಿ ಚುನಾವಣಾ ಬಾಂಡ್‌ ಸಂಬಂಧ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಕಚೇರಿ ಮತ್ತು ಜಾರಿ ನಿರ್ದೇಶನಾಲಯದ ವಿರುದ್ಧ ದೂರು ದಾಖಲಿಸಿದ್ದರು. 2019ರ ಏಪ್ರಿಲ್‌ನಿಂದ 2022ರ ಆಗಸ್ಟ್‌ವರೆಗೆ ಉದ್ಯಮಿ ಅನಿಲ್‌ ಅಗರ್‌ ವಾಲ್‌ ಅವರ ಸಂಸ್ಥೆಯಿಂದ 230 ಕೋಟಿ ರೂಪಾಯಿ ಮತ್ತು ಅರಬಿಂದೊ ಫಾರ್ಮಸಿಯಿಂದ 49 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ ಎಂದು ಆರೋಪಿಸಿದ್ದರು.

8000 ಕೋಟಿ ರೂ. ಸುಲಿಗೆ ಆರೋಪ

ಸೆಪ್ಟೆಂಬರ್‌ 27ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ನಿರ್ದೇಶನದ ಅನ್ವಯ ಬೆಂಗಳೂರು ಪೊಲೀಸರು ಸೆ.28ರಂದು ಎಫ್‌ಐಆರ್‌ ದಾಖಲಿಸಿದ್ದರು. ಅಯ್ಯರ್‌ ಅವರು ತಮ್ಮ ದೂರಿನಲ್ಲಿ ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಆರೋಪಿಯು ಚುನಾವಣಾ ಬಾಂಡ್‌ ಹೆಸರಿನಲ್ಲಿ ಸುಮಾರು 8000 ಕೋಟಿ ರೂ. ಸುಲಿಗೆ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.

ರಾಜೀನಾಮೆಗೆ ಕಾಂಗ್ರೆಸ್‌ ಒತ್ತಾಯ

ಈ ಮಧ್ಯೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ದಾಖಲಾಗಿದ್ದ ಚುನಾವಣಾ ಬಾಂಡ್‌ ಪ್ರಕರಣವನ್ನು ಸಿಐಡಿಗೆ ವಹಿಸಲು ಪೊಲೀಸರು ಚಿಂತನೆ ನಡೆಸಿದ್ದರು. ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವ ಸಂಬಂಧ ನ್ಯಾಯಾಲಯದ ಅನುಮತಿ ಪಡೆಯಲು ಪೊಲೀಸರು ಭಾನುವಾರ ಸಭೆ ನಡೆಸಿದ್ದರು ಎಂದು ತಿಳಿದು ಬಂದಿದೆ. ಸಾಮಾನ್ಯವಾಗಿ 3 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸಲಾಗುತ್ತದೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌, ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿತ್ತು.

ಎಫ್‌ಐಆರ್‌ ದಾಖಲಾಗಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕು. ಈ ಯೋಜನೆ ಕುರಿತು ಸುಪ್ರೀಂ ಕೋರ್ಟ್‌ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದ್ದೇವೆ. ಈಗಲೂ ಇದೇ ಆಗ್ರಹವನ್ನು ಮುಂದಿಡುತ್ತೇವೆ ಎಂದು ಪಕ್ಷದ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ತಿಳಿಸಿದ್ದಾರೆ.

 

Whats_app_banner