Karnataka Naxal Movement: ಕರ್ನಾಟಕದ ನಕ್ಸಲ್‌ ಚಳಿವಳಿಗೆ ಈಗ 25ರ ಹಾದಿ; ಬೆಳೆದುಬಂದು ಬಗೆ ಹೇಗಿದೆ, ಏನೆಲ್ಲಾ ಬದಲಾವಣೆಗಳಾದವು
ಕನ್ನಡ ಸುದ್ದಿ  /  ಕರ್ನಾಟಕ  /  Karnataka Naxal Movement: ಕರ್ನಾಟಕದ ನಕ್ಸಲ್‌ ಚಳಿವಳಿಗೆ ಈಗ 25ರ ಹಾದಿ; ಬೆಳೆದುಬಂದು ಬಗೆ ಹೇಗಿದೆ, ಏನೆಲ್ಲಾ ಬದಲಾವಣೆಗಳಾದವು

Karnataka Naxal Movement: ಕರ್ನಾಟಕದ ನಕ್ಸಲ್‌ ಚಳಿವಳಿಗೆ ಈಗ 25ರ ಹಾದಿ; ಬೆಳೆದುಬಂದು ಬಗೆ ಹೇಗಿದೆ, ಏನೆಲ್ಲಾ ಬದಲಾವಣೆಗಳಾದವು

Karnataka Naxal Movement: ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಮಲೆನಾಡು ಭಾಗದಲ್ಲಿ ನಕ್ಸಲ್‌ ಚಟುವಟಿಕೆ ರೂಪುಗೊಂಡ ಬಗೆ, ಏರಿಳಿತಗಳ ನಡುವೆ ಚಳವಳಿ ಈಗಿನ ಸ್ಥಿತಿಗತಿಗಳ ಒಳನೋಟ ಇಲ್ಲಿದೆ.

ಕರ್ನಾಟಕದಲ್ಲಿ ಸಾಮಾಜಿಕ ಹೋರಾಟಗಳೇ ಮುಂದೆ ನಕ್ಸಲ್‌ ರೂಪ ಪಡೆದು ಎರಡೂವರೆ ದಶಕದ ಅವಧಿಯನ್ನು ಕಂಡಿದೆ.
ಕರ್ನಾಟಕದಲ್ಲಿ ಸಾಮಾಜಿಕ ಹೋರಾಟಗಳೇ ಮುಂದೆ ನಕ್ಸಲ್‌ ರೂಪ ಪಡೆದು ಎರಡೂವರೆ ದಶಕದ ಅವಧಿಯನ್ನು ಕಂಡಿದೆ.

Karnataka Naxal Movement:ಕರ್ನಾಟಕದಲ್ಲಿ ನಕ್ಸಲ್‌ ಚಳವಳಿ ಹುಟ್ಟಿಕೊಂಡ ಪರಿಯೇ ಆಶ್ಚರ್ಯಕರವಾಗಿದ್ದು. ಅದಕ್ಕೀಗ ಬಹುತೇಕ ಇಪ್ಪತ್ತೈದು ವರ್ಷ ಕ್ರಮಿಸಿದ ಇತಿಹಾಸ. ಸಾಕಷ್ಟು ಏರಿಳಿತಗಳ ನಡುವೆಯೇ ಕರ್ನಾಟಕದ ನಕ್ಸಲ್‌ ಚಳಿವಳಿ ಒಂದು ರೀತಿ ಗಮನ ಸೆಳೆಯುವ ಮಾರ್ಗ ಎಂದೇ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಬರೋಬ್ಬರಿ ಎರಡು ದಶಕಗಳ ಕಾಲ ಮಲೆನಾಡು ಹಾಗೂ ಮಲೆನಾಡಿಗೆ ಹೊಂದಿಕೊಂಡ ಕರಾವಳಿ ಭಾಗದ ಜಿಲ್ಲೆಗಳಲ್ಲಿನ ಸಾಮಾಜಿಕ ಸಮಸ್ಯೆಗಳ ಹೋರಾಟದ ಹಾದಿ ಮುಂದೆ ಪಡೆದದ್ದೇ ನಕ್ಸಲ್‌ ರೂಪ. ಅದರಲ್ಲೂ ಶಿವಮೊಗ್ಗ, ಚಿಕ್ಕಮಗಳೂರು,ಈಗಿನ ಉಡುಪಿ ಜಿಲ್ಲೆಯೂ ಒಳಗೊಂಡಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಹೋರಾಟಗಳು 80 ರ ದಶಕದಲ್ಲಿ ಶುರುವಾಗಿ ನಂತರ ಸೂಕ್ತ ಪ್ರತಿಸ್ಪಂದನಾ ಸಿಗದೇ ಇದ್ದಾಗ ಅದು ನಕ್ಸಲ್‌ ರೂಪವನ್ನು ಪಡೆದಿದೆ. ಹೋರಾಟದ ಕೆಂಪು ಹಾದಿಯಲ್ಲಿ ಹಲವು ಮಂದಿ ಪ್ರಾಣ ತೆತ್ತಿದ್ದಾರೆ. ತಮ್ಮ ಬದುಕಿನ ಮಾರ್ಗವನ್ನೇ ಬದಲಿಸಿಕೊಂಡು ಈಗಲೂ ಸಮಾಜಮುಖಿ ಯೋಚನೆಗೆ ಹಿಂಸಾ ಮಾರ್ಗದ ಸ್ಪರ್ಶ ನೀಡಿ ತೊಂದರೆಗೂ ಸಿಲುಕಿದ್ದಾರೆ.

ಸಾಮಾಜಿಕ ಹೋರಾಟಗಳ ಕಾಲ

ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ, ದಕ್ಷಿಣ ಕನ್ನಡದ ಮಲೆನಾಡು ಭಾಗದ ಉಡುಪಿ, ಬೆಳ್ತಂಗಡಿ, ಕಾರ್ಕಳ, ಕುಂದಾಪುರ ಸಹಿತ ಹಲವು ಭಾಗಗಳ ಜನ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಅದು ಅರಣ್ಯಕ್ಕೆ ಸಂಬಂಧಿಸಿದ ವಿಚಾರಗಳು. ಮತ್ತೊಂದು ಕಡೆ ಅಭಿವೃದ್ದಿ ನೆಪದಲ್ಲಿ ಸ್ಥಳೀಯರನ್ನು, ಅದರಲ್ಲೂ ಗಿರಿಜನ ಸಮುದಾಯದವರನ್ನು ಒಕ್ಕಲೆಬ್ಬಿಸಿದ್ದು ಆಕ್ರೋಶಕ್ಕೆ ದಾರಿ ಮಾಡಿಕೊಡುತ್ತಲೇ ಇತ್ತು.

ಚಿಕ್ಕಮಗಳೂರು ಉಡುಪಿ ಭಾಗದ ಕುದುರೆಮುಖ, ಶೃಂಗೇರಿ, ತೀರ್ಥಹಳ್ಳಿ ಭಾಗದ ನದಿ ಮೂಲಗಳಲ್ಲಿ ಗಣಿಗಾರಿಕೆ, ಸಾಗರ ಭಾಗದಲ್ಲಿ ಜಲಾಶಯ ನಿರ್ಮಾಣದಿಂದ ಭೂಮಿ ಕಳೆದುಕೊಂಡವರು.. ಹೀಗೆ ಹಲವು ರೂಪಗಳಲ್ಲಿ ಜನರ ಸಮಸ್ಯೆಗಳು 80 ರ ದಶಕದಲ್ಲಿ ಟಿಸಿಲೊಡೆದಿದ್ದವು.

ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಜನ ಹೋರಾಟದ ಮಾರ್ಗವನ್ನ ಕಂಡುಕೊಂಡರು. ಇದರಿಂದ ಮಲೆನಾಡು ಭಾಗದಲ್ಲಿ ಕರ್ನಾಟಕ ವಿಕಾಸ ರಂಗ( ಕವಿರಂ), ಮಹಿಳಾ ಜಾಗೃತಿ, ಪ್ರಗತಿಪರ ವಿದ್ಯಾರ್ಥಿಕೇಂದ್ರದಂತಹ ಎಡಪಂಥೀಯ ಚಿಂತನೆಗಳ ಹೋರಾಟಗಳು ರೂಪುಗೊಂಡವು.

ನದಿ ಮೂಲ ಉಳಿಸಿ, ಕಾಡು ಉಳಿಸಿ, ಮೂಲ ನಿವಾಸಿಗಳಿಗೆ ತೊಂದರೆ ಕೊಡಬೇಡಿ, ಅರಣ್ಯಮೂಲದ ಸಮಸ್ಯೆಗಳಿಗೆ ಪರಿಹಾರ ಕೊಡಿ ಎನ್ನುವ ಆಶಯದೊಂದಿಗೆ ಹೋರಾಟ ಪ್ರಬಲಗೊಂಡವು ಕೂಡ. ಜಮೀನ್ದಾರಿ ಪದ್ದತಿ ವಿರುದ್ದವೂ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಸುಮಾರು ಎರಡು ದಶಕದ ಕಾಲ ಈ ಹೋರಾಟಗಳು ಮಲೆನಾಡು ಭಾಗದಲ್ಲಿ ಜಾಗೃತಿಯನ್ನಂತೂ ಮೂಡಿಸಿದವು.

ನಕ್ಸಲ್‌ ರೂಪ

ಈ ಚಳವಳಿಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನವಾದರೂ ಪರಿಹಾರ ಮಾತ್ರ ನಿರೀಕ್ಷೆಯಂತೆ ಬದಲಾವಣೆ ಏನೂ ಕಾಣಲಿಲ್ಲ. ಸಮಸ್ಯೆಗಳು ಹಾಗೆ ಉಳಿದರೆ ಜನರ ಸಂಕಷ್ಟಕ್ಕೆ ಪರಿಹಾರ ಪಡೆಯುವುದು ಯಾವ ರೂಪದಲ್ಲಿ ಎಂದು ಯೋಚಿಸುವಾಗ ಶುರುವಾಗಿದ್ದು ನಕ್ಸಲ್‌ ಚಳವಳಿ.

ಇದಕ್ಕಾಗಿ ಆಗ ಪ್ರವೇಶಿಸಿದವರು ಸಿರಿಮನೆ ನಾಗರಾಜ್‌, ನೂರ್‌ ಶ್ರೀಧರ್‌, ಸಾಕೇತ್‌ ರಾಜನ್‌, ಬಿ.ಜಿ.ಕೃಷ್ಣಮೂರ್ತಿ, ಪಾರ್ವತಿ, ಹಾಜಿಮಾ ಉಮೇಶ್‌ ಬಣಕಲ್‌ ಸಹಿತ ಹಲವರು ಈ ಹೋರಾಟದಲ್ಲಿ ಭಾಗಿಯಾದರು. ಇವರೆಲ್ಲಾ ಒಂದಿಲ್ಲೊಂದು ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರೇ. ಅದು 1999-2000ರ ಅವಧಿ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಭಾಗದಲ್ಲಿ ಹೋರಾಟ ಕೆಂಪು ಹಾದಿ ಹಿಡಿಯಿತು. ನಿಧಾನವಾಗಿ ನಾಲ್ಕು ಜಿಲ್ಲೆಗಳ ಕಾಡಂಚಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವುದು. ಪೋಸ್ಟರ್‌ ಅಂಟಿಸುವ ಮೂಲಕ ನಕ್ಸಲ್‌ ರೂಪವನ್ನು ನೀಡಲಾಯಿತು. ಅದೂ ಪಶ್ಚಿಮಬಂಗಾಲ ಸಹಿತ ಹಲವು ರಾಜ್ಯಗಳಲ್ಲಿನ ಉಗ್ರ ಹೋರಾಟದ ರೂಪ ಇಲ್ಲಿಗೂ ಬಂದಿತು. ಸಿಪಿಐ ಎನ್ನುವ ಸಂಘಟನೆ ಭಿನ್ನ ರೂಪದೊಂದಿಗೆ ಬದಲಾಗುತ್ತಾ ಹೋಯಿತು.

ಸಾಕೇತ್‌ ರಾಜನ್‌ ಪ್ರವೇಶ

ಒಂದೆರಡು ವರ್ಷದಲ್ಲೇ ಮೈಸೂರು ಮೂಲದ ಯುವ ಚಿಂತಕ, ಕಮ್ಯುನಿಸ್ಟ್‌ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಸಾಕೇತ್‌ ರಾಜನ್‌ ಆಗ ಕಮಾಂಡರ್‌ ಆಗಿ ಬಂದ ನಂತರ ಚಳವಳಿ, ಹೋರಾಟಕ್ಕೆ ಬಲ ತಂದು ಇನ್ನಷ್ಟು ವಿಸ್ತರಣೆಯಾಯಿತು. ಹಲವಾರು ಸಮಾಜಪರ ನಾಯಕರು, ಹೋರಾಟಗಾರರು, ರಾಜಕೀಯ ನೇತಾರರ ಬೆಂಬಲವೂ ದೊರೆಯಿತು. ಆನಂತರ ಹೋರಾಟದ ರೂಪ ಇನ್ನಷ್ಟು ಭಿನ್ನ ಮಾರ್ಗವನ್ನೇ ತುಳಿಯಿತು. ಅಹಿಂಸೆಯಿಂದ ಹಿಂಸೆಯ ಮಾರ್ಗ. ಅರಣ್ಯ ಅಧಿಕಾರಿಗಳ ಮೇಲೆ ದಾಳಿ, ಕಚೇರಿ ಧ್ವಂಸ, ವಾಹನಗಳನ್ನು ಗುರಿಯಾಗಿಸಿ ದಾಳಿ ಮಾಡುವ ಪ್ರಯತ್ನಗಳು ಆದವು. ಅವರ ಕೈಯಲ್ಲಿ ಬಂದೂಕುಗಳು ಬಂದಿದ್ದವು. ಹಿಂಸೆಯಿಂದಲೇ ಎಲ್ಲವನ್ನೂ ಪಡೆಯಬೇಕು. ಇಲ್ಲದೇ ಇದ್ದರೆ ಸಾಮಾಜಿಕ ಸಮಸ್ಯೆಗಳಿಗೆ ಕೊನೆಯೇ ಇಲ್ಲ ಎನ್ನುವ ಚಿಂತನೆಯೊಂದಿಗೆ ಎಲ್ಲೆಡೆ ಟಿಸಿಲೊಡೆಯಿತು.

ಕೆಲವರ ವಿರುದ್ದ ಪ್ರಕರಣ ದಾಖಲಾದವು. ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ ಕಟ್ಟೆಚ್ಚರ ವಹಿಸಿದ ನಂತರ ಇದು ಇನ್ನಷ್ಟು ಉಗ್ರ ಮಾರ್ಗಕ್ಕೆ ತಿರುಗಿತು. ಎನ್‌ಕೌಂಟರ್‌ ಕೂಡ ಆಗಿದ್ದು ಇನ್ನಷ್ಟು ಪ್ರಬಲವಾಗಿ ಬೆಳೆಯಲು ದಾರಿ ಮಾಡಿಕೊಟ್ಟಿತು.

ಎಎನ್‌ಎಫ್‌ ರಚನೆ

ನಕ್ಸಲ್‌ ಚಳವಳಿ ತೀವ್ರಗೊಳ್ಳುತ್ತಿರುವ ಮಾಹಿತಿ ಆಧರಿಸಿ ಕೇಂದ್ರ ಸರ್ಕಾರವೂ ವಿಶೇಷವಾಗಿ ಗಮನ ನೀಡುವಂತೆ ದಕ್ಷಿಣದ ರಾಜ್ಯಗಳಿಗೆ ಸೂಚಿಸಿತು. ಇದರಿಂದ ಕರ್ನಾಟಕದಲ್ಲಿ ಆಯಾ ಜಿಲ್ಲೆಗಳ ಪೊಲೀಸರೇ ಉಸ್ತುವಾರಿ ವಹಿಸಿದ್ದ ಈ ಕಾರ್ಯಾಚರಣೆಗೆ ಪ್ರತ್ಯೇಕ ರೂಪ ನೀಡಲಾಯಿತು. 2005ರಲ್ಲಿ ನಕ್ಸಲ್‌ ನಿಗ್ರಹ ದಳವನ್ನು ಕಾರ್ಕಳದಲ್ಲಿ ಸ್ಥಾಪಿಸಲಾಯಿತು. ಎರಡು ದಶಕದಿಂದಲೂ ಇದು ಸಕ್ರಿಯವಾಗಿದ್ದು, ಈಗ ಮಲ್ಪೆಯಲ್ಲಿ ಕೇಂದ್ರ ಸ್ಥಾನವನ್ನು ಹೊಂದಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಸಹಿತ ಏಳೆಂಟು ಜಿಲ್ಲೆಗಳಲ್ಲಿ ಇದರ ಕ್ರ್ಯವ್ಯಾಪ್ತಿಯಿದೆ.

ಎಎನ್‌ಎಫ್‌ ಕಾರ್ಯಾಚರಣೆ ನಂತರ ಎನ್‌ಕೌಂಟರ್‌ಗೂ ತಿರುಗಿತು. ನಾಲ್ಕೈದು ಬಾರಿ ಎನ್‌ಕೌಂಟರ್‌ ಗಳು ನಡೆದು ಪ್ರಮುಖ ನಾಯಕರನ್ನು ಗುಂಡಿಕ್ಕಿ ಕೊಂದದ್ದು ದಾಖಲಾಗಿದೆ. ಸಾಕೇತ್‌ ರಾಜನ್‌ ಸಹಿತ ಹಲವರು ಇದರಲ್ಲಿ ಸೇರಿದ್ದಾರೆ.

ಪ್ಯಾಕೇಜ್‌ ಪರಿಣಾಮದ ಏರಿಳಿತ

ಸಂಘರ್ಷದ ಸನ್ನಿವೇಶವಿದ್ದಾಗ ದಶಕದ ಹಿಂದೆಯೇ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಗೌರಿಲಂಕೇಶ್‌, ಶ್ರೀಧರ್‌, ಗೋವಿಂದರಾವ್‌ ಸಹಿತ ಹಲವರ ಪ್ರಯತ್ನದಿಂದ ನಕ್ಸಲ್‌ ಚಟುವಟಿಕೆ ನಿಲ್ಲಿಸಿ ಎಲ್ಲರನ್ನೂ ಮುಖ್ಯವಾಹಿನಿಗೆ ತರುವ ಪ್ರಯತ್ನವಾಯಿತು. ಇದಕ್ಕಾಗಿ ಪ್ಯಾಕೇಜ್‌ ಘೋಷಣೆಯಾಗಿ ಸಿರಿಮನೆ ನಾಗರಾಜ್‌, ನೂರ್‌ ಶ್ರೀಧರ್‌, ಬಿ.ಜಿ.ಕೃಷ್ಣಮೂರ್ತಿ ಸಹಿತ ಹಲವರು ಹೊರಕ್ಕೆ ಬಂದರು.ಕೆಲವರು ಇದನ್ನು ಒಪ್ಪದೇ ಅಲ್ಲಿಯೇ ಉಳಿದರು. ಇದಾದ ನಂತರ ನಕ್ಸಲ್‌ ಚಳವಳಿ ಎರಡು ಗುಂಪುಗಳಾಗಿ ಕೆಲವರು ಅಲ್ಲಿಯೇ ಉಳಿದರು. ಅವರಲ್ಲಿ ವಿಕ್ರಂಗೌಡ, ಮಂಡಗಾರು ಲತಾ ಸಹಿತ ಹಲವರು ಇದ್ದಾರೆ.

ಆರೇಳು ವರ್ಷದಿಂದ ನಕ್ಸಲ್‌ ಚಟುವಟಿಕೆ ಕರ್ನಾಟಕದಲ್ಲಿ ಜಿಲ್ಲೆಗಳ ವ್ಯಾಪ್ತಿ ವಿಸ್ತರಿಸಿಕೊಂಡರೂ ಪ್ರಭಾವಳಿ ತಗ್ಗಿತ್ತು. ವಿಕ್ರಂಗೌಡ ಮತ್ತಿತರರ ತಂಡ ಕೇರಳದ ಕಡೆ ವಲಸೆ ಹೋಗಿತ್ತು. ಕೇರಳದಲ್ಲೂ ಪ್ರಕರಣಗಳು ದಾಖಲಾಗಿ ಕಾರ್ಯಾಚರಣೆ ಬಿಗಿಗೊಂಡಿದ್ದರಿಂದ ಮತ್ತೆ ಒಂದು ತಂಡ ವಾಪಾಸಾಗಿ ಮೂರ್ನಾಲ್ಕು ತಿಂಗಳಿನಿಂದ ಸಕ್ರಿಯವಾಗಿತ್ತು. ಈಗ ಮತ್ತೊಂದು ಎನ್‌ಕೌಂಟರ್‌ನೊಂದಿಗೆ ಚಳವಳಿ ಮಗ್ಗಲು ಬದಲಿಸಿದೆ. ಹೋರಾಟ ತಗ್ಗುವ ಸೂಚನೆಗಳಂತೂ ಇಲ್ಲ.

Whats_app_banner