ಹುಬ್ಬಳ್ಳಿ ಪೊಲೀಸರ ಭರ್ಜರಿ ಬೇಟೆ; ಬಡವರ ರಕ್ತ ಹೀರುತ್ತಿದ್ದ 23 ಮೀಟರ್ ಬಡ್ಡಿ ದಂಧೆಕೋರರ ಅರೆಸ್ಟ್, ಬಂಧಿತರ ಸಂಖ್ಯೆ 48ಕ್ಕೇರಿಕೆ
hubballi News: ಸಾರ್ವಜನಿಕರಿಗೆ ಬಡ್ಡಿ ಕಿರುಕುಳ ನೀಡುತ್ತಿದ್ದ ಮೀಟರ್ ಬಡ್ಡಿ ದಂಧೆಕೋರರನ್ನು ಹುಬ್ಬಳಿಯ 13 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 23 ಮಂದಿಯನ್ನು ಬಂಧಿಸಲಾಗಿದೆ.
ಹುಬ್ಬಳ್ಳಿ: ಬಡ್ಡಿ ಕಿರುಕುಳ ನೀಡಿದ ಆರೋಪದ ಮೇಲೆ 13 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 16 ಪ್ರಕರಣ ದಾಖಲಿಸಿ 23 ಮಂದಿಯನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 4 ಲಕ್ಷ ಮೌಲ್ಯದ ಕಾರು, ಬೈಕ್, ಮೊಬೈಲ್ ಮತ್ತು ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ 25 ಮಂದಿಯನ್ನು ಬಂಧಿಸಲಾಗಿತ್ತು. ಹೀಗಾಗಿ ಒಟ್ಟು 48 ಮಂದಿ ಸೆರೆಯಾಗಿದ್ದಾರೆ.
ಬಂಧಿತರ ಪಟ್ಟಿ ಹೀಗಿದೆ
- ರಾಜೇಶ ಮೆಹರವಾಡೆ, ಮೋಹಿತ ಮೆಹರವಾಡೆ, ಅನೀತಾ ಹಬೀಬ, ದೀಪಾ ಶಲವಡಿ - ಹುಬ್ಬಳ್ಳಿ ಉಪನಗರ ಠಾಣಾ ವ್ಯಾಪ್ತಿ
- ಸತೀಶ ದೊಡ್ಡಮನಿ - ಅಶೋಕ ಠಾಣಾ ವ್ಯಾಪ್ತಿ
- ನವೀನ ಭಾಂಡಗೆ, ದತ್ತೂ ಪಟ್ಟನ್, ಕಮರಿಪೇಟ್ ಠಾಣಾ ವ್ಯಾಪ್ತಿಯ ಧನಲಕ್ಷ್ಮೀ ಮದ್ರಾಸಿ - ವಿದ್ಯಾನಗರ ಠಾಣಾ ವ್ಯಾಪ್ತಿ
- ಸೋಲೋಮನ್ ಬಬ್ಬಾ, ಆನಂದ ರಾಯಚೂರ - ಗೋಕುಲ ರೋಡ ಠಾಣಾ ವ್ಯಾಪ್ತಿ
- ಶೇಖವ್ವ ದಾಸನೂರ - ಎಪಿಎಂಸಿ ಠಾಣಾ ವ್ಯಾಪ್ತಿ
- ಸ್ಟೀಫನ್ ಕ್ಷೀರಸಾಗರ - ಕೇಶ್ವಾಪೂರ ಠಾಣಾ ವ್ಯಾಪ್ತಿ
- ಗಿರಿಯಪ್ಪ ಬಳ್ಳಾರಿ, ಬಾಳು ಬಳ್ಳಾರಿ, ಅಭಿಲೇಖಾ ತೋಖಾ - ಬೆಂಡಿಗೇರಿ ಠಾಣಾ ವ್ಯಾಪ್ತಿ
- ತನ್ವೀರ ಜಂಗ್ಲಿವಾಲೆ - ಕಸಬಾಪೇಟ್ ಠಾಣಾ ವ್ಯಾಪ್ತಿ
- ನಾರಾಯಣ ಕಾಟಿಗಾರ - ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿ
- ಸಮೀರ, ಸೈಯದಲಿ, ಬಿಕೆ ಬಾಯಿ, ಹ್ಯಾರಿಸ ಪಠಾಣ - ಧಾರವಾಡ ವಿದ್ಯಾಗಿರಿ ಠಾಣಾ ವ್ಯಾಪ್ತಿ
- ಜಾವೇದ ಘೋಡೆಸವಾರ - ಉಪನಗರ ಠಾಣಾ ವ್ಯಾಪ್ತಿ
- ಶಾಕೀರ ಕರಡಿಗುಡ್ಡ - ಶಹರ ಠಾಣಾ ವ್ಯಾಪ್ತಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
ಈ ಹಿಂದೆಯೂ ಮೀಟರ್ ಬಡ್ಡಿ ಕಿರುಕುಳ ಆರೋಪದಲ್ಲಿ 7 ಪ್ರಕರಣದಲ್ಲಿ 25 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಮುಂದುವರೆದು 23 ಮಂದಿಯನ್ನು ಬಂಧಿಸಲಾಗಿದೆ. ಬಡ್ಡಿ ವಿಚಾರದಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡಿದರೆ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಶಿಕುಮಾರ್ ಎಚ್ಚರಿಸಿದ್ದಾರೆ.
ಈ ಕಾರ್ಯಾಚರಣೆ ಮುಂದುವರೆಸಲಾಗುತ್ತಿದ್ದು, ಬಡ್ಡಿ ಕುಳಗಳ ಮೇಲೆ ನೊಂದವರು ದೂರು ನೀಡಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ವೇಳೆ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿಆರ್, ಎಸಿಪಿಗಳಾದ ಶಿವಪ್ರಕಾಶ ನಾಯಕ್, ಉಮೇಶ ಚಿಕ್ಕಮಠ ಸೇರಿ ಸಿಪಿಐಗಳು ಪತ್ರಿಕಾಗೋಷ್ಠಿಯಲ್ಲಿದ್ದರು.
ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆ
ಇಲ್ಲಿನ ಬೆಂಗೇರಿಯ ಚೇತನಾ ಕಾಲೊನಿಯಲ್ಲಿ ಮೀಟರ್ ಬಡ್ಡಿ ವ್ಯವಹಾರದಲ್ಲಿ ಸಾಲಗಾರರ ಕಿರುಕುಳ ತಾಳಲಾರದೆ ನೊಂದು ಸುಜಿತ್ ಎಂಬಾತ ಆತ್ಮಹತ್ಯೆಗೆ ಶರಣಾಗಿರುವುದಾಗಿ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಕಾರಣದಿಂದ ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಬೇಟೆ ಶುರುವಾಗಿದೆ.