Dharwad News: ಸ್ತಬ್ಧಗೊಂಡ ಹೃದಯ ಮಸಣದಲ್ಲಿ ಮಿಡಿಯಿತು: ವೈದ್ಯರೇ ಘೋಷಿಸಿದ್ದರೂ ಬದುಕುಳಿದ ಮಗು
Boy from death bed ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ಚಿಕಿತ್ಸೆ ಪಡೆದಿದ್ದ ಒಂದೂವರೆ ವರ್ಷದ ಮಗು ಮೃತಪಟ್ಟಿದೆ ಎನ್ನುವುದನ್ನು ವೈದ್ಯರು ಘೋಷಿಸಿದ್ದರು. ಅಂತ್ಯಕ್ರಿಯೆ ವಿಧಿವಿಧಾನಗಳು ನಡೆದು ಇನ್ನೇನು ಮಣ್ಣು ಮಾಡಬೇಕು ಎನ್ನುವ ಐದು ನಿಮಿಷ ಮುಂಚೆ ಮಗು ಉಸಿರಾಡಿದೆ. ಇದನ್ನು ಕಂಡು ಪೋಷಕರಿಗೂ ಸಂತಸ. ಅಂತ್ಯಕ್ರಿಯೆಗೆ ಬಂದವರಿಗೂ ಅಚ್ಚರಿ.
ಹುಬ್ಬಳ್ಳಿ: ಹೃದಯ ಸಮಸ್ಯೆಯಿಂದ ಮೃತಪಟ್ಟಿದೆ ಎಂದು ವೈದ್ಯರೇ ಘೋಷಿಸಿದ ಮಗು ಅಂತ್ಯಕ್ರಿಯೆ ವೇಳೆ ಬದುಕುಳಿದಿದೆ. ಇನ್ನೈದು ನಿಮಿಷ ತಡವಾಗಿದ್ದರೆ ಆಗಿದ್ದರೆ ಆ ಮಗು ಮಣ್ಣಿನಲ್ಲಿ ಮಣ್ಣಾಗುತ್ತಿತ್ತು.
ಈ ಘಟನೆ ನಡೆದಿರುವುದು ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಬಸಾಪುರದಲ್ಲಿ. ಬಸಾಪೂರ ಗ್ರಾಮದ ಬಸವರಾಜ ಪೂಜಾರ ಎಂಬುವವರ ಒಂದೂವರೆ ವರ್ಷದ ಮಗು ಆಕಾಶ ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಗುರುವಾರ ಮಗುವಿನ ಅನಾರೋಗ್ಯದಲ್ಲಿ ತೀವ್ರ ಏರಿಳಿತವಾಗಿತ್ತು. ‘ಮಗುವಿನ ಹೃದಯ ಬಡಿತ ನಿಂತಿದೆ. ಮಗು ಬದುಕುಳಿದಿಲ್ಲ’ ಎಂದು ಹುಬ್ಬಳ್ಳಿ ಕಿಮ್ಸ್ ವೈದ್ಯರು ಕೈಚೆಲ್ಲಿದ್ದರು.
ಮಗು ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ ನಂತರ ಸಂಬಂಧಿಕರು ಬಸಾಪೂರ ಮಗುವಿನ ಅಂತ್ಯಕ್ರಿಯೆ ಮುಂದಾಗಿದ್ದರು. ಈ ವೇಳೆ ಸಂಪ್ರದಾಯದಂತೆ ಮಗುವಿನ ಬಾಯಿಗೆ ಹೆತ್ತವರು ನೀರು ಹಾಕುವಾಗ ಮಗು ತಕ್ಷಣವೇ ಉಸಿರಾಟ ಆರಂಭಿಸಿ, ಕೈಕಾಲು ಬಡಿದುಕೊಂಡಿದೆ. ಮಗು ಉಸಿರಾಡಿಸುತ್ತಿರುವುದು ಕಂಡ ಸಂಬಂಧಿಕರು ಹಾಗೂ ಪಾಲಕರಿಗೆ ಒಂದು ಕ್ಷಣ ಆಶ್ಚಕರವಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು. ಮಗು ಬದುಕಿರುವುದು ಖಾತ್ರಿಯೂ ಆಗಿತ್ತು!
ಮಗುವಿನ ದೇಹ ಹಸ್ತಾಂತರ
ಮಗು ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು. ಮೊದಲು ಗದಗ-ಬೆಟಗೇರಿ ನಗರದ ಜರ್ಮನ್ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಾರದ ಹಿನ್ನೆಲೆ ಪಾಲಕರು ನಂತರ ಧಾರವಾಡ ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲಿಸಿದ್ದರು. ಬಡತನ ಕುಟುಂಬದ ಬಸವರಾಜ ಪೂಜಾರ ಮಗುವಿನ ಆರೈಕೆ ಹಾಗೂ ಆರೋಗ್ಯ ಸುಧಾರಣೆಗೆ ಅಧಿಕ ವೆಚ್ಚ ಖರ್ಚಾಗುವ ಕಾರಣಕ್ಕೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಾಲ್ಕೈದು ದಿನಗಳಿಂದ ವೈದ್ಯರು ಮಗುವಿನ ಆರೈಕೆ ಮಾಡಿದ್ದರು. ಗುರುವಾರ ಸಂಜೆ ನಿಮ್ಮ ಮಗುವಿನ ಹೃದಯ ಬಡಿತ ಕಡಿಮೆ ಪ್ರಮಾಣದಲ್ಲಿದೆ, ಮಗು ಆಕ್ಸಿಜನ್ ಮೇಲೆ ಬದುಕಿಳಿದೆ. ಆಕ್ಸಿಜನ್ ತೆಗೆದರೆ ಜೀವ ಉಳಿಯುವುದಿಲ್ಲ ಎಂದು ಪಾಲಕರಿಗೆ ವೈದ್ಯರು ತಿಳಿಸಿದ್ದರು. ಅಲ್ಲದೇ ಗುರುವಾರ ಸಂಜೆ 7.3೦ರ ವೇಳೆಗೆ ಮಗು ಮೃತಪಟ್ಟಿದೆ ಎಂದು ಹೇಳಿ ಪಾಲಕರಿಂದ ಸಹಿ ಪಡೆದು ಮಗುವಿನ ದೇಹವನ್ನುಹಸ್ತಾಂತರ ಮಾಡಿದ್ದರು.
ಮಸಣದಲ್ಲಿ ಉಸಿರಾಟ
ಮಗು ಮೃತಪಟ್ಟಿರುವ ಬಗ್ಗೆ ವೂದ್ಯರು ತಿಳಿಸಿದ ಬಳಿಕ ಪಾಲಕರು ಹಾಗೂ ಸಂಬಂಧಿಗಳು ಗ್ರಾಮದಲ್ಲಿ ಮಗುವಿನ ಅಂತ್ಯಕ್ರಿಯೆಗೆ ಮುಂದಾಗಿದ್ದರು. ಎಲ್ಲ ವಿಧಿವಿಧಾನಗಳು ಮುಗಿದ್ದಿದ್ದವು. ಅಂತ್ಯಕ್ರಿಯೆ ಕೊನೆಯ ಸಂಪ್ರದಾಯವಾದ ನೀರು ಬೀಡುವ ವೇಳೆ ಮಗು ಉಸಿರಾಟ ಆರಂಭಿಸಿದೆ. ಅಲ್ಲದೇ ಕೈಕಾಲು ಹೊರಳಾಡಿಸಿದೆ. ಮಗು ಮೃತಪಟ್ಟಿಲ್ಲ, ಇನ್ನೂ ಜೀವಂತವಾಗಿದೆ ಎಂಬ ಮನವರಿಕೆ ಜನರಿಗೆ ಆಗಿದೆ. ತಕ್ಷಣ ನವಲಗುಂದ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.
ಮಗು ಮೃತಪಟ್ಟಿಲ್ಲ, ಮಗುವಿನ ಹೃದಯ ಬಡಿತ ಚೆನ್ನಾಗಿದೆ. ಮಗು ಜೀವಂತವಾಗಿದೆ ಎಂದು ನವಲಗುಂದ ತಾಲೂಕಾ ಸರಕಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ನಂತರ ಮಗುವಿನ ಹೆಚ್ಚಿನ ಆರೈಕೆ ಹಾಗೂ ಚಿಕಿತ್ಸೆಗಾಗಿ ಧಾರವಾಡ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗುವಿನ ಅನಾರೋಗ್ಯದ ಕಾರಣ ಹಲವು ಕಡೆ ಚಿಕಿತ್ಸೆ ಕೊಡಿಸಿದೆವು. ಮಗು ಮೃತಪಟ್ಟಿದೆ ಎಂದು ವೈದ್ಯರೇ ಹೇಳಿ ಬರೆಸಿಕೊಂಡಿದ್ದರು. ಅಂತ್ಯಕ್ರಿಯೆ ಮುಗಿಯುವ ಹೊತ್ತಿಗೆ ನೀರು ಹಾಕಿದಾಗ ಮಗು ಬದುಕುಳಿದಿರುವುದು ಗೊತ್ತಾಯಿತು. ಮತ್ತೆ ಚಿಕಿತ್ಸೆ ಆರಂಭಿಸಿದ್ದೇವೆ. ಬದುಕುಳಿದ ಮಗ ಆರಾಮಾದರೆ ಸಾಕು ಎಂದು ಕುಟುಂಬದವರು ಹೇಳಿದರು.