Indian Railways: ಮೈಸೂರು ದಸರಾ ಪ್ರಯಾಣಿಕರ ರಶ್; ಬೆಳಗಾವಿ ಎಕ್ಸ್‌ಪ್ರೆಸ್ ರೈಲು 6 ಕಡೆ ತಾತ್ಕಾಲಿಕ ನಿಲುಗಡೆಗೆ ವ್ಯವಸ್ಥೆ
ದಸರಾ ವೇಳೆ ಪ್ರವಾಸಿಗರು ಮೈಸೂರಿಗೆ ಬಂದು ಹೋಗಲು ಮೈಸೂರು- ಬೆಳಗಾವಿ ಎಕ್ಸ್‌ಪ್ರೆಸ್ ರೈಲು 6 ಕಡೆ ತಾತ್ಕಾಲಿಕವಾಗಿ ನಿಲುಗಡೆಯಾಗಲಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಮಯದಲ್ಲಿ ಹಲವು ಭಾಗಗಳಿಂದ ಆಗಮಿಸುವ ಪ್ರಯಾಣಿಕರ ನಿರೀಕ್ಷಿತ ದಟ್ಟಣೆಯನ್ನು ತೆರವುಗೊಳಿಸಲು, ಹಾಗೂ ಸುಸೂತ್ರವಾಗಿ ಪ್ರಯಾಣ ಮಾಡಲು ಅಕ್ಟೋಬರ್ 9 ರಿಂದ ಐದು ದಿನಗಳ ಕಾಲ ರೈಲು ಸಂಖ್ಯೆ 17301/17302 ಮೈಸೂರು-ಬೆಳಗಾವಿ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲುಗಳಿಗೆ ಆರು ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ನೀಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು ದಸರಾ ವೇಳೆ ಮಾತ್ರ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ.
ದಸರಾ ಉತ್ಸವದಲ್ಲಿ ಭಾಗವಹಿಸುವ ಪ್ರಯಾಣಿಕರಿಗೆ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಈ ಹೆಚ್ಚುವರಿ ನಿಲುಗಡೆಗಳನ್ನು ಒದಗಿಸಲಾಗಿದ್ದು ಪ್ರಯಾಣಿಕರು ಬಳಕೆ ಮಾಡಿಕೊಳ್ಳಬೇಕು ಎಂದು ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.
ತಾತ್ಕಾಲಿಕ ನಿಲುಗಡೆಗಳ ವಿವರ
ಅಕ್ಟೋಬರ್ 9 ರಿಂದ ಅಕ್ಟೋಬರ್ 13, 2024 ರವರೆಗೆ ಮೈಸೂರಿನಿಂದ ಪ್ರಾರಂಭವಾಗುವ, ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಡೈಲಿ ಎಕ್ಸ್ ಪ್ರೆಸ್ ರೈಲು ಬೆಳಗುಳ (9:43/9:44 PM), ಸಾಗರಕಟ್ಟೆ (9:56/9:57 PM) , ಹೊಸ ಅಗ್ರಹಾರ (10:29/10:30 PM), ಅಕ್ಕಿಹೆಬ್ಬಾಳು (10:37/10:38 PM), ಬೀರಹಳ್ಳಿ ಹಾಲ್ಟ್ (10:43/10:44 PM) ಮತ್ತು ಮಾವಿನಕೆರೆ (11:09/11:10 PM) ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಯನ್ನು ಹೊಂದಿರಲಿದೆ.
ಅಕ್ಟೋಬರ್ 11, 2024 ರಂದು ಬೆಳಗಾವಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಮಾವಿನಕೆರೆ (3:22/3:23 AM), ಬೀರಹಳ್ಳಿ ಹಾಲ್ಟ್ (4:02/4:03 AM), ಅಕ್ಕಿಹೆಬ್ಬಾಳು (4:09/4:10 AM), ಹೊಸ ಅಗ್ರಹಾರ (4:18/4:19 AM), ಸಾಗರಕಟ್ಟೆ (4:45/4:46 AM) ಮತ್ತು ಬೆಳಗುಳ (4:59/5:00 AM) ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಯನ್ನು ಹೊಂದಿರಲಿದೆ.
ಹೆಚ್ಚುವರಿ ರೈಲು
ಈ ವರ್ಷ ಅಕ್ಟೋಬರ್ 1 ರಿಂದ ಆರಂಭಗೊಂಡಂತೆ ನವೆಂಬರ್ 30 ರವರೆಗೆ ದುರ್ಗಾ ಪೂಜೆ, ದೀಪಾವಳಿ ಮತ್ತು ಛತ್ ಪೂಜೆಯ ಸಮಯದಲ್ಲಿ ಪ್ರಯಾಣಿಕರಿಗೆ 6556 ವಿಶೇಷ ರೈಲುಗಳನ್ನುರಂತೆ ನಿರ್ವಹಿಸಲು ಭಾರತೀಯ ರೈಲ್ವೇ ಸಜ್ಜಾಗಿದೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಪ್ರತಿ ವರ್ಷ ಹಬ್ಬಗಳ ಸಂದರ್ಭದಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಮತ್ತು ಈ ವರ್ಷ, ಪ್ರಯಾಣಿಕರ ಹೆಚ್ಚಳಕ್ಕೆ ಅನುಗುಣವಾಗಿ ರೈಲುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.
ನೈಋತ್ಯ ರೈಲ್ವೆಯು 52 ಟ್ರಿಪ್‌ಗಳೊಂದಿಗೆ 24 ವಿಶೇಷ ರೈಲುಗಳನ್ನು ನಿರ್ವಹಿಸುತ್ತಿದೆ, ಮೂರು ರೈಲುಗಳಿಗೆ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಿದೆ.
ದಸರಾ ಹಬ್ಬದ ಸಮಯದಲ್ಲಿ ಹೆಚ್ಚಿದ ಪ್ರಯಾಣಿಕರ ಬೇಡಿಕೆಯನ್ನು ಸರಿಹೊಂದಿಸಲು 34 ರೈಲುಗಳಿಗೆ ತಾತ್ಕಾಲಿಕವಾಗಿ ಕೋಚ್‌ಗಳನ್ನು ಹೆಚ್ಚಿಸಿದೆ. ಹೆಚ್ಚುವರಿಯಾಗಿ, ದೀಪಾವಳಿ ಹಬ್ಬಕ್ಕಾಗಿ ನೈರುತ್ಯ ರೈಲ್ವೆಯು ಕರ್ನಾಟಕದಾದ್ಯಂತ ವಿವಿಧ ಸ್ಥಳಗಳಿಂದ 8 ಟ್ರಿಪ್‌ಗಳೊಂದಿಗೆ 06 ವಿಶೇಷ ರೈಲುಗಳನ್ನು ನಿರ್ವಹಿಸಲಿದೆ. 264 ಟ್ರಿಪ್‌ಗಳೊಂದಿಗೆ 22 ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಇತರ ವಲಯ ರೈಲ್ವೆಗಳು ಕೈಗೊಳ್ಳಲು ಮುಂದಾಗಿವೆ.